ಅಪ್ಪಮಾದ ವಗ್ಗ
ಜಾಗರೂಕರು ಸಾಯುವುದಿಲ್ಲ, ಎಚ್ಚರಹೀನ ಸತ್ತಂತೆ
ಎಚ್ಚರಿಕೆಯಿಂದಿರುವಿಕೆ
ಅಮರತ್ವದ ಪಥ, ಎಚ್ಚರಿಕೆಯಿಲ್ಲದಿರುವಿಕೆ
ಮೃತ್ಯುವಿನ ಪಥ, ಎಚ್ಚರಿಕೆ ಇರುವವ
ಸಾಯುವುದಿಲ್ಲ, ಎಚ್ಚರಿಕೆ
ಇಲ್ಲದವರು ಮೃತ್ಯು ಹೊಂದಿದಂತೆ ಇರುತ್ತಾರೆ. (21)
ಈ ವಿಶೇಷತೆ ಅರಿತ
ಪಂಡಿತರು (ಜ್ಞಾನಿಗಳು) ಎಚ್ಚರಿಕೆಯಲ್ಲೇ ಆನಂದಿಸುತ್ತಾರೆ ಮತ್ತು ಆರ್ಯರ (ಅರಹಂತರ)
ಕ್ಷೇತ್ರದಲ್ಲೇ ರತರಾಗುತ್ತಾರೆ. (22)
ಸದಾ ಧ್ಯಾನಶೀಲರಾಗಿ
ಸತತ ಪ್ರಯತ್ನಶೀಲರಾದ ಧೀರರು ಮಾತ್ರ ನಿಬ್ಬಾಣದಂತಹ, ಬಂಧವಿಮುಕ್ತ ಅನುತ್ತರವಾದ ಕ್ಷೇಮವನ್ನು ಅನುಭವಿಸುತ್ತಾರೆ. (23)
ಗಾಥ ಪ್ರಸಂಗ 2:1
ಸಾಮಾವತಿಯ ಮೈತ್ರಿಯ ಶಕ್ತಿ
ರಾಣಿ ಸಾಮಾವತಿಗೆ ಅನೇಕ ಸೇವಕಿಯರಿದ್ದರು. ಅವರಲ್ಲಿ
ಖುಜ್ಜುತ್ತರಾಳ ಕಾರ್ಯವೇನೆಂದರೆ ಸುಮನ ಹೂಗಾರನಿಂದ ಹೂಗಳನ್ನು ಪ್ರತಿದಿನ ಕೊಂಡುತರುವುದು.
ಒಂದುದಿನ ಖುಜ್ಜುತ್ತರಳು ಸುಮನನ ಮನೆಯಲ್ಲಿ ಬುದ್ಧೋಪದೇಶ ಕೇಳಿದಳು, ಆಕೆಯ ಹಿಂದಿನ ಜನ್ಮದ ಪುಣ್ಯದ ಫಲದಿಂದಾಗಿ ಆಕೆಯು ಸೋತಪತ್ತಿ ಫಲವನ್ನು
ಪಡೆದಳು. ಆಕೆಯು ಅರಮನೆಗೆ ಹಿಂತಿರುಗಿದ ನಂತರ ಸಾಮಾವತಿ ಮತ್ತು ಆಕೆಯ ಸಖಿಯರಿಗೆ ಉಪದೇಶ
ನೀಡಿದಳು. ಆಗ ಅದರ ಪರಿಣಾಮವಾಗಿ ಅವರು ಸಹಾ ಧಮ್ಮವನ್ನು ಅರಿತರು. ಆ ದಿನದಿಂದ ಆಕೆಗೆ ಬೇರ್ಯಾವ
ದೊಡ್ಡ ಕಾರ್ಯ ನೀಡುತ್ತಿರಲಿಲ್ಲ. ಆಕೆಯನ್ನು ಸಾಮಾವತಿಯು ತಾಯಿಯಂತೆ ಮತ್ತು ಗುರುವಿನಂತೆ
ಕಾಣುತ್ತಿದ್ದಳು. ಖುಜ್ಜುತ್ತರಳು ಅತ್ಯಂತ ಪ್ರಜ್ಞಾವಂತಳಾಗಿದ್ದಳು. ಆಕೆ ತಾನು ಕೇಳಿದ ಪ್ರತಿ
ಬುದ್ಧವಚನವನ್ನು ಸಾಮಾವತಿ ಮತ್ತು ಆಕೆಯ ಸಖಿಯರಿಗೆ ತಿಳಿಸುತ್ತಿದ್ದಳು. ಸ್ವಲ್ಪ ಕಾಲದಲ್ಲೇ
ಆಕೆಯು ಧಮ್ಮ ಪ್ರವೀಣೆಯಾದಳು.
ಇದರಿಂದಾಗಿ ಸಾಮಾವತಿಗೆ ಮತ್ತು ಆಕೆಯ ಸಖಿಯರಿಗೆ
ಬುದ್ಧರ ಮೇಲೆ ಭಕ್ತಿ-ಶ್ರದ್ಧೆಗಳು ಹೆಚ್ಚಾದವು. ಅವರು ಬುದ್ಧರಿಗೆ ಪೂಜಿಸಲು, ದಶರ್ಿಸಲು ಇಚ್ಛಿಸಿದರು. ಆದರೆ ರಾಜನು ನಿರಾಕರಿಸಬಹುದು
ಎಂದು ಭಯವಿತ್ತು. ಆದ್ದರಿಂದಾಗಿ ಅವರು ಅರಮನೆಯ ಗೋಡೆಗಳ ರಂಧ್ರಗಳ ಮೂಲಕ ಬುದ್ಧರನ್ನು
ನೋಡುತ್ತಿದ್ದರು. ಅಲ್ಲಿಂದಲೇ ಗೌರವಪೂರ್ವಕ ವಂದನೆಗಳನ್ನು ಸಲ್ಲಿಸುತ್ತಿದ್ದರು.
ಅದೇ ಸಮಯದಲ್ಲಿ ರಾಜನು ಇನ್ನೊಂದು ಸ್ತ್ರೀಗೆ
ವಿವಾಹವಾಗಿ ಆಕೆಯನ್ನು ತನ್ನ ರಾಣಿಯನ್ನಾಗಿಸಿದ್ದನು. ಆಕೆಯೇ ಮಾಗಂಡಿಯ, ಮಾಗಂಡಿಯಳು ಬ್ರಾಹ್ಮಣ ದಂಪತಿಯ ಮಗಳಾಗಿದ್ದಳು. ಆಕೆ ಅತಿರೂಪ
ಸುಂದರಿಯಾಗಿದ್ದಳು. ಆ ಬ್ರಾಹ್ಮಣ ದಂಪತಿಗಳು ಆಕೆಗೆ ತಕ್ಕ ವರ ಬುದ್ಧರೇ ಎಂದು ತೀಮರ್ಾನಿಸಿದರು.
ಅವರು ಬುದ್ಧರಲ್ಲಿಗೆ ಬಂದು ಈ ವಿಷಯ ತಿಳಿಸಿದರು. ಆಗ ಬುದ್ಧರು ಇಂತೆಂದರು:
ಮಾರನ ಕುಮಾರಿಯರಾದ ತನ್ಹಾ, ಅರತಿ ಮತ್ತು ರಾಗ ಇವರು ಅತ್ಯಂತ ಸ್ಫುರದ್ರೂಪಿಗಳು, ಅವರನ್ನು ಕಂಡಾಗಲು ನನ್ನಲ್ಲಿ ಯಾವುದೇ ಆಸೆ ಉಂಟಾಗಲಿಲ್ಲ.
ಇನ್ನೂ ಕೇವಲ ಕಶ್ಮಲಗಳಿಂದ ಕೂಡಿದ ಈ ದೇಹವನ್ನು ನಾನು ಇಚ್ಛಿಸುವೆನೇ? ಬುದ್ಧರು ಹಾಗೆ ಹೇಳುವುದಕ್ಕೆ ಕಾರಣವಿತ್ತು. ಆ ಬ್ರಾಹ್ಮಣ
ದಂಪತಿಗಳಿಗೆ ಅನಾಗಾಮಿ ಪ್ರಾಪ್ತಿಯಾಗಬೇಕಾದರೆ ಅವರಿಗೆ ಪ್ರಾಥಮಿಕವಾಗಿ ದೇಹದ ಅಶುಭಾ ಜ್ಞಾನ
ಅರಿವಾಗಬೇಕಿತ್ತು. ಅವರಿಗೆ ನಂತರದ ಬೋಧನೆಯಿಂದ ಅನಾಗಾಮಿ ಪ್ರಾಪ್ತಿಯಾಯಿತು.
ಆದರೆ ಮಾಗಂಡಿಯಳು ಮಾತ್ರ ತನ್ನ ರೂಪ ಅಹಂಭಾವದಿಂದ ತನಗೆ
ಅವಮಾನವಾದಂತೆ ಭಾವಿಸಿದಳು. ಇದಕ್ಕಾಗಿ ಪ್ರತಿಕಾರ ಸಂಕಲ್ಪವನ್ನು ಮಾಡಿದ್ದಳು. ಈಗ ಆಕೆಯು ರಾಜ
ಉದೇನನ ಪತ್ನಿಯಾದಮೇಲೆ ಆಕೆಗೆ ಸಾಮಾವತಿಯ ಮೇಲೂ ಅಸೂಯೆ ಉಂಟಾಯಿತು. ಸಾಮಾವತಿಯು ರಂಧ್ರದ ಮೂಲಕ
ಬುದ್ಧರನ್ನು ವೀಕ್ಷಿಸಿ ವಂದಿಸುವುದನ್ನು ಕಂಡ ಮಾಗಂಡಿಯಳು ಇಬ್ಬರ ಮೇಲೂ ಸೇಡು ತೀರಿಸಲು ತಕ್ಕಕಾಲ
ಎಂದು ಭಾವಿಸಿ ಆಕೆಯು ರಾಜನಿಗೆ ಸಾಮಾವತಿಯು ನಂಬಿಕೆಗೆ ಅರ್ಹಳಲ್ಲ ಎಂದು ಹೇಳಿ ಸಾಮಾವತಿಯು
ರಂಧ್ರಗಳಲ್ಲಿ ವೀಕ್ಷಿಸುವುದನ್ನು ಹೇಳಿದಳು. ಆದರೆ ರಾಜನಿಗೆ ಸಾಮಾವತಿಯು ವಿವರವಾಗಿ ತಿಳಿಸಿದಾಗ
ಆತನಿಗೆ ಕೋಪ ಉಂಟಾಗಲಿಲ್ಲ.
ಆದರೆ ಮಾಗಂಡಿಯಳು ಮಾತ್ರ ರಾಜನಿಗೆ ಪದೇ ಪದೇ ಸಾಮಾವತಿಯ
ಮೇಲೆ ಸಂಶಯ ಉಂಟಾಗುವಂತೆ ಹೇಳಿಕೆಗಳನ್ನು ನೀಡುತ್ತಾ ಆಕೆಯು ಉದೇನನ್ನು ಕೊಲ್ಲಲು ಸಹಾ
ಹವಣಿಸುತ್ತಾಳೆ ಎಂದು ಸುಳ್ಳು ಹೇಳಿದಳು. ಅದಕ್ಕಾಗಿ ಒಂದು ಕುಟಿಲೋಪಾಯವನ್ನು ಸಹಾ
ಸಿದ್ಧಮಾಡಿದಳು. ರಾಜನು ಸಾಮಾವತಿಯ ಅಂತಃಪುರಕ್ಕೆ ಹೋಗುವ ಮುನ್ನ ಆತನ ಕೊಳಲಲ್ಲಿ ಚಿಕ್ಕ
ವಿಷಸರ್ಪವನ್ನು ಅಡಗಿಸಿ ರಂಧ್ರವನ್ನು ಹೂವಿನಿಂದ ಮುಚ್ಚಿದಳು. ಆತನು ಸಾಮಾವತಿಯ ಬಳಿಗೆ ಹೋಗುವಾಗ
ಆಕೆ ಹೋಗದಂತೆ ತಡೆದಳು. ಆತನಿಗೆ ಅಭದ್ರತೆಯಿರಬಹುದು ಎಂದು ಹೇಳಿ ನಟಿಸಿದಳು. ಆದರೆ ಉದೇನನು
ಇವೆಲ್ಲವನ್ನು ಲಕ್ಷಿಸದೆ ಸಾಮವತಿಯ ಬಳಿಗೆ ಬಂದನು. ಅದೇ ವೇಳೆಯಲ್ಲಿ ಆ ಹಾವು ಹೊರಬಂದು
ಹಾಸಿಗೆಯಲ್ಲಿ ಕಾಣಿಸಿತು. ಇದನ್ನು ಕಂಡ ರಾಜನಿಗೆ ಮಾಗಂಡಿಯಾಳ ಮಾತು ನಿಜವಿರಬಹುದೆಂದು ಮುಗ್ದೆ
ಸಾಮಾವತಿಯ ಮೇಲೆ ಸಂಶಯಪಟ್ಟನು. ಹಾಗು ಕ್ರೋಧಗೊಂಡು ಸಾಮಾವತಿ ಮತ್ತು ಆಕೆಯ ಸಖಿಯರಿಗೆ ಎಲ್ಲರೂ
ಒಂದು ಸಾಲಿನಲ್ಲಿ ಸಾಮವತಿಯ ಹಿಂದೆ ನಿಲ್ಲಲು ಹೇಳಿದನು. ನಂತರ ಆತನು ಬಿಲ್ಲನ್ನು ಕೈಯಲ್ಲಿ
ಹಿಡಿದು ಬಾಣವನ್ನು ವಿಷದಲ್ಲಿ ಅದ್ದಿದನು. ಆತನು ಗುರಿಯಿಡುವುದರಲ್ಲಿ ಪ್ರವೀಣನಾಗಿದ್ದನು. ಆ
ಸಮಯದಲ್ಲಿ ಸಾಮವತಿ ಮತ್ತು ಆಕೆಯ ಸಖಿಯರು ರಾಜನ ಮೇಲೆ ಕೋಪ ತಾಳಲಿಲ್ಲ. ಬದಲಾಗಿ ಮೈತ್ರಿಭಾವನೆ
ಪ್ರಸರಿಸಿದರು. ಆಗ ಮೈತ್ರಿಯ ಪ್ರಚಂಡಶಕ್ತಿಯಿಂದಾಗಿ ರಾಜನು ಬಾಣವನ್ನು ಬಿಟ್ಟರೂ ಅದು
ಗುರಿತಪ್ಪತೊಡಗಿತು. ಇದು ರಾಜನಿಗೆ ಅತ್ಯಂತ ಆಶ್ಚರ್ಯವನ್ನುಂಟು ಮಾಡಿ ಅವರ ಮುಗ್ದತೆ ಮತ್ತು
ನಿರ್ಮಲತೆ ಅರಿವಾಗಿ ಸಾಮಾವತಿಗೆ ಬುದ್ಧರನ್ನು ಮತ್ತು ಸಂಘವನ್ನು ಅರಮನೆಗೆ ಆಹ್ವಾನಿಸಿ ಔತಣ ನೀಡಲು
ಮತ್ತು ಧಮ್ಮಪ್ರವಚನ ಕೇಳಲು ಸ್ವಾತಂತ್ರ್ಯ ನೀಡಿದನು.
ಇದರಿಂದಾಗಿ ಮಾಗಂಡಿಯಳು ಮತ್ತಷ್ಟು ಕ್ರುದ್ಧಳಾಗಿ ಸೋಲೇ
ಉಂಟಾಗದಂತಹ ಕ್ರೂರ ಉಪಾಯವನ್ನು ಮಾಡಿದಳು. ಅದೆಂದರೆ ಆಕೆಯ ಸಂಬಂಧಿಯೊಬ್ಬನನ್ನು ಕರೆಯಿಸಿ
ಸಾಮಾವತಿ ಮತ್ತು ಆಕೆಯ ಸಖಿಯರು ಅರಮನೆಯ ಒಳಗೆ ಇದ್ದಂತೆಯೇ ಅವರನ್ನು ಜೀವಂತ ಸುಡಲು ಸಾಮಾವತಿಯ
ಅರಮನೆಗೆ ಬೆಂಕಿ ಇಡಿಸಿದಳು. ಆದರೆ ಅರಮನೆಯು ಹೊರಗಡೆಯಿಂದ ಉರಿಯುತ್ತಿದ್ದಂತೆ ಸಾಮವತಿ ಮತ್ತು
ಆಕೆಯ ಸಖಿಯರು ಧ್ಯಾನಿಸಲು ಆರಂಭಿಸಿದರು. ಅವರಲ್ಲಿ ಕೆಲವರು ಸಕದಾಗಾಮಿ ಸ್ಥಿತಿ ತಲುಪಿದರು ಮತ್ತು
ಮಿಕ್ಕವರು ಸಹಾ ಲಾಭ ಪಡೆದರು. ಆದರೆ ಆ ಹೊತ್ತಿಗಾಗಲೇ ಇಡೀ ಅರಮನೆಯು ಉರಿದು ಹೋಯಿತು.
ಈ ಸುದ್ದಿಯು ಹಬ್ಬುತ್ತಿದ್ದಂತೆ ರಾಜನು ಸ್ಥಳಕ್ಕೆ
ಧಾವಿಸಿದನು. ಆದರೆ ತುಂಬ ತಡವಾಗಿ ಹೋಗಿತ್ತು. ರಾಜನಿಗೆ ಇದು ಮಾಗಂಡಿಯಾಳ ಕೃತ್ಯವಿರಬಹುದೆಂದು
ಸಂಶಯವಾಯಿತು. ಆದರೆ ಆತ ಅದನ್ನು ತೋರ್ಪಡಿಸಲಿಲ್ಲ. ಬದಲಾಗಿ ಆತ ಹೀಗೆ ಹೇಳಿದನು. ಯಾವಾಗ
ಸಾಮಾವತಿಯು ಜೀವಂತವಾಗಿದ್ದಳಲ್ಲ ಆಗ ನನಗೆ ಸದಾ ಜೀವಭಯ ಕಾಡುತ್ತಿತ್ತು. ಈಗ ನನಗೆ ಮನಸ್ಸು
ಶಾಂತವಾಗಿದೆ. ಇದನ್ನು ಯಾರು ಮಾಡಿರಬಹುದು? ನನ್ನನ್ನು ಅತಿಯಾಗಿ ಪ್ರೀತಿಸಿದವರು ಮಾತ್ರ ಇದನ್ನು ಮಾಡಿರಬಹುದು ಎಂದಾಗ ಇದನ್ನು ಕೇಳಿದ
ದಡ್ಡಿ ಮಾಗಂಡಿಯಾ ಇದನ್ನು ನಾನೇ ಮಾಡಿಸಿದೆ ಎಂದಳು. ಇದನ್ನು ಕೇಳಿದ ರಾಜ ಆಕೆಗೆ ದೊಡ್ಡ ಬಹುಮಾನ
ನೀಡುವುದಾಗಿ ಹೇಳಿ, ಅದಕ್ಕೆ ಸಂಬಂಧಿಸಿದ
ಆಕೆಯ ಸಂಬಂಧಿಕರನು ಕರೆಸಿದನು. ನಂತರ ಎಲ್ಲರನ್ನೂ ಬಂಧಿಸಿ ಅರಮನೆಯ ಆವರಣದಲ್ಲಿ ಕೊಲ್ಲಿಸಿದನು. ಈ
ರೀತಿಯಾಗಿ ಆಕೆಗೆ ತನ್ನ ಹೀನ ಪಾಪಕ್ಕಾಗಿ ಶಿಕ್ಷೆಯಾಯಿತು.
ಭಗವಾನರಿಗೆ ಈ ಎರಡು ಘಟನೆಗಳು ತಿಳಿಸಲ್ಪಟ್ಟಾಗ ಅವರು ಈ ಮೇಲಿನ
ಗಾಥೆಗಳನ್ನು ತಿಳಿಸಿದರು