Thursday, 29 January 2015

dhammapada/cittavagga/3.9/surayya

ಸಮ್ಮಾ ಮಾರ್ಗದಶರ್ಿತ ಮನಸ್ಸಿನಿಂದ ಮಹಾ ಶ್ರೇಯಸ್ಸು ಲಭಿಸುತ್ತದೆ
ಯಾವುದನ್ನು ಮಾತೆ ಆಗಲಿ ಅಥವಾ ಪಿತ ಆಗಲಿ ಅಥವಾ ಯಾವುದೇ ಬಂಧುವಾಗಲಿ (ಹಿತವನ್ನು) ಮಾಡಬಲ್ಲರೋ, ಅವೆಲ್ಲಕ್ಕಿಂತ ಹೆಚ್ಚಿನ ಶ್ರೇಯಸ್ಸನ್ನು ಯೋಗ್ಯ ಹಾದಿಯಲ್ಲಿ ಹೋಗುತ್ತಿರುವ ಚಿತ್ತವು ಮಾಡುತ್ತದೆ. ಅದನ್ನು ಪರರು ಮಾಡಲಾರರು.  (43)
ಗಾಥ ಪ್ರಸಂಗ 3:9
ಲಿಂಗ ಪರಿವರ್ತನೆ ಸಾಧ್ಯ !
                ಸೂರಯ್ಯನು ಶ್ರೀಮಂತನ ಮಗನಾಗಿದ್ದನು. ಒಮ್ಮೆ ಆತನು ತನ್ನ ಮಿತ್ರರು ಮತ್ತು ಸೇವಕರೊಡನೆ ಸ್ನಾನಕ್ಕಾಗಿ ಹೊರಟಿದ್ದನು. ಆ ವೇಳೆಯಲ್ಲಿ ಪೂಜ್ಯ ಮಹಾಕಚ್ಚಾಯನರು ಆಹಾರಕ್ಕಾಗಿ ಹೋಗುವಾಗ ತಮ್ಮ ಚೀವರವನ್ನು ಸರಿಪಡಿಸಿಕೊಂಡು ಹೋಗುವಾಗ ಅವರ ಹೊಂಬಣ್ಣದ ಕಾಂತಿಯುತ ಚರ್ಮ ಕಾಣಿಸಿತು. ಆ ವರ್ಣವನ್ನು ಕಂಡ ಸೂರಯ್ಯ ಈ ರೀತಿ ಚಿಂತಿಸಿದನು.
                ಓಹ್! ಎಂಥ ವರ್ಣ, ಆ ಭಿಕ್ಷು ನನ್ನ ಪತ್ನಿಯಾಗಿದ್ದರೆ ಅಥವಾ ನನ್ನ ಪತ್ನಿಯ ಮೈಬಣ್ಣ ಆ ರೀತಿಯಿದ್ದರೆ ಎಷ್ಟು ಚೆನ್ನಾ ಎಂದು ಯೋಚಿಸಿದನು. ತಕ್ಷಣ ಆತನಿಗೆ ಕರ್ಮಫಲ ವಿಪಾಕ ನೀಡಿ ಆತನು ಸ್ತ್ರೀಯಾದನು. ಆತನಿಗೆ ವಿಪರೀತ ನಾಚಿಕೆಯಾಯಿತು. ಆತನು ಪಲ್ಲಕ್ಕಿಯಿಂದ ಇಳಿದು ಓಡಿಹೋದನು. ಆತನು ತಕ್ಷಶಿಲ ಕಡೆಗೆ ಹೊರಟನು. ಆತನ ಸಂಗಾತಿಗಳು ಆತನಿಗೆ ಹುಡುಕಿದರು, ಆದರೆ ವ್ಯರ್ಥವಾಯಿತು.
                ಸ್ತ್ರೀಯಾಗಿದ್ದ ಸೂರಯ್ಯ ಪ್ರಯಾಣಿಕರೊಂದಿಗೆ ತಕ್ಷಶಿಲೆಗೆ ಹೊರಟಳು. ಅಲ್ಲಿನ ಶ್ರೀಮಂತನೊಬ್ಬನು ಸ್ತ್ರೀ ಸೂರಯ್ಯಳನ್ನು ಮೆಚ್ಚಿ ಮದುವೆಯಾದನು. ಅಲ್ಲಿ ಆಕೆಗೆ ಎರಡು ಮಕ್ಕಳು ಜನಿಸಿದರು. ಹಿಂದೆ ಸೂರಯ್ಯ ಪುರುಷನಾಗಿರುವಾಗಲೂ ಸಹ ಎರಡು ಮಕ್ಕಳಿದ್ದವು.
                ಒಂದುದಿನ ಸೂರಯ್ಯನ ಮಿತ್ರನೊಬ್ಬನು ತನ್ನ 500 ಬಂಡಿಗಳೊಂದಿಗೆ ತಕ್ಷಶಿಲಕ್ಕೆ ಬಂದಿದ್ದನು. ಆತನನ್ನು ಗುರುತಿಸಿದ ಸೂರಯ್ಯ ಆತನಿಗೆ ಮನೆಗೆ ಆಹ್ವಾನಿಸಿದಳು. ಗಲಿಬಿಲಿಗೊಂಡ ಆತನಿಗೆ ತನ್ನ ವೃತ್ತಾಂತವನ್ನು ತಿಳಿಸಿದಳು. ಆಗ ಆತನಿಗೆ ತನ್ನ ಮಿತ್ರ ಸೂರಯ್ಯ ಸ್ತ್ರೀಯಾಗಿರುವುದು ತಿಳಿಯಿತು. ಆತನು ಸೂರಯ್ಯಗೆ ಮಹಾಕಚ್ಚಾಯನರೊಂದಿಗೆ ಕ್ಷಮೆಯಾಚಿಸಲು ಸಲಹೆ ನೀಡಿದನು. ಅದರಂತೆಯೇ ಮಹಾ ಕಚ್ಚಾಯನರನ್ನು ಔತಣಕ್ಕೆ ಆಹ್ವಾನಿಸಲಾಯಿತು. ಆಹಾರ ಸೇವನೆಯ ನಂತರ ಸೂರಯ್ಯ ತನ್ನ ವೃತ್ತಾಂತ ತಿಳಿಸಿ ಕ್ಷಮೆಯಾಚಿಸಿದಳು.
                ಆಗ ಪೂಜ್ಯ ಕಚ್ಚಾಯರವರು ಎದ್ದೇಳು ನಾನು ಕ್ಷಮಿಸಿರುವೆ ಎಂದರು. ತಕ್ಷಣ ಆಕೆ ಪುರುಷಳಾದಳು. ಈ ರೀತಿ ಒಂದೇ ಜನ್ಮದಲ್ಲಿ ಎರಡು ಬಾರಿ ಲಿಂಗ ಪರಿವರ್ತನೆಯಾಯಿತು. ಇದರಿಂದ ಆತನಿಗೆ ವೈರಾಗ್ಯ ಉಂಟಾಗಿ ಆತನು ಭಿಕ್ಷುವಾದನು.
                ಆತನು ಪುರುಷನಾಗಿರುವಾಗ ಎರಡು ಮಕ್ಕಳು, ಸ್ತ್ರೀಯಾಗಿದ್ದಾಗ ಎರಡು ಮಕ್ಕಳು ಇದ್ದವು. ಆದರೆ ಅತನು ಯಾರಿಗೆ ಹೆಚ್ಚು ಪ್ರೀತಿಸುತ್ತಿದ್ದ? ಎಂದು ಕೆಲವೊಮ್ಮೆ ಆತನಿಗೆ ಯಾರಾದರೂ ಪ್ರಶ್ನಿಸಿದಾಗ ಆತನು ಸ್ತ್ರೀಯಾಗಿದ್ದಾಗ ಹುಟ್ಟಿದ ಮಕ್ಕಳಲ್ಲಿ ಹೆಚ್ಚು ವಾತ್ಸಲ್ಯವಿತ್ತು ಎಂದು ಆತನು ಉತ್ತರಿಸುತ್ತಿದ್ದನು. ಇದು ಭಿಕ್ಷುಗಳಲ್ಲಿ ಹಾಸ್ಯ ಸಂಗತಿಯಾಗಿತ್ತು. ಇದರಿಂದಾಗಿ ನಾಚಿಕೆಗೊಂಡ ಸೂರಯ್ಯ ನಿಬ್ಬಾಣ ಸಾಕ್ಷಾತ್ಕಾರಕ್ಕೆ ಅಪಾರ ಶ್ರಮಿಸುತ್ತಿದ್ದನು. ನಂತರ ಅತನು ಅರಹಂತತ್ವ ಪ್ರಾಪ್ತಿಮಾಡಿದನು.
                ಈಗ ಆತನಿಗೆ ಕೆಲವು ಭಿಕ್ಷುಗಳು ಮತ್ತೆ ಅದೇ ಹಿಂದಿನ ಪ್ರಶ್ನೆ ಕೇಳಿದರು ಯಾರಿಗೆ ನೀನು ಹೆಚ್ಚು ಪ್ರೀತಿಸುತ್ತಿ, ನೀನು ತಂದೆಯಾಗಿರುವಾಗ ಜನಿಸಿದ ಮಕ್ಕಳಿಗೋ ಅಥವಾ ತಾಯಿಯಾದಾಗಿನ ಮಕ್ಕಳಿಗೋ?
                ನನಗೆ ಯಾರ ಮೇಲು ಯಾವುದೇ ಅಂಟುವಿಕೆಯಿಲ್ಲ.
                ಆದರೆ ಭಿಕ್ಷುಗಳನ್ನು ಇದನ್ನು ನಂಬಲಿಲ್ಲ. ಅವರು ಈ ಸಂಗತಿ ಭಗವಾನರ ಬಳಿಗೆ ತಂದರು. ಸೂರಯ್ಯ ಸುಳ್ಳು ಹೇಳುತ್ತಿದ್ದಾನೆ ಎಂದರು.

                ಆಗ ಭಗವಾನರು ನನ್ನ ಮಗ ಸುಳ್ಳು ಹೇಳುತ್ತಿಲ್ಲ, ಆತ ನಿಜವನ್ನೇ ನುಡಿಯುತ್ತಿದ್ದಾನೆ, ಆತನೀಗ ಅರಹಂತನಾಗಿದ್ದಾನೆ ಎಂದು ಹೇಳಿ ಮೇಲಿನ ಗಾಥೆಯನ್ನು ನುಡಿದರು.

dhammapada/cittavagga/3.8/nandagopalaka

ಮಿಥ್ಯಾ ಮಾರ್ಗದಶರ್ಿತ ಮನಸ್ಸಿನಿಂದ ಮಹಾ ಹಾನಿಯಾಗುತ್ತದೆ
ಯಾವರೀತಿಯ ಹಾನಿಯನ್ನು ವೈರಿಯು ವೈರಿಗೆ ಮಾಡಬಹುದೋ ಅಥವಾ ದ್ವೇಷಿಯು ದ್ವೇಷಿಗೆ ಮಾಡಬಹುದೋ, ಅದೆಲ್ಲಕ್ಕಿಂತ ಹೆಚ್ಚಿನ ಹಾನಿಯು ಒಬ್ಬನಿಗೆ ಮಿಥ್ಯಾಮಾರ್ಗದಶರ್ಿತ ಮನಸ್ಸಿನಿಂದ ಆಗುತ್ತದೆ.          (42)
ಗಾಥ ಪ್ರಸಂಗ 3:8
ಕರ್ಮಫಲದಿಂದಾಗುವ ಮೃತ್ಯುವನ್ನು ತಡೆಯಲಾಗದು
                ನಂದನೆಂಬ ಗೋಪಾಲಕನು ಅನಾಥಪಿಂಡಿಕನ ಮನೆಯಲ್ಲಿನ ಹಸುಗಳನ್ನು ನೋಡಿಕೊಳ್ಳುತ್ತಿದ್ದನು. ಆತನು ದನಕಾಯುವವನಾದರೂ ಆತನಲ್ಲೂ ತನ್ನದೆನ್ನುವ ಆಸ್ತಿಯಿತ್ತು. ಆತನು ಆಗಾಗ್ಗೆ ಅನಾಥಪಿಂಡಿಕನ ಮನೆಗೆ ಹೋಗುತ್ತಿದ್ದನು ಮತ್ತು ಅಲ್ಲಿ ಆತನು ಬುದ್ಧರ ಪ್ರವಚನಗಳನ್ನು ಕೇಳುತ್ತಿದ್ದನು. ನಂದನು ಒಮ್ಮೆ ಭಗವಾನರಲ್ಲಿಗೆ ಬಂದು ಆತನ ಆತಿಥ್ಯ ಸ್ವೀಕರಿಸುವಂತೆ ಕೇಳಿಕೊಂಡನು. ಆದರೆ ಆತನ ಭವಿಷ್ಯ ಅರಿತಿದ್ದ ಭಗವಾನರು ಈಗ ಬೇಡ, ಅದಕ್ಕೆ ಇನ್ನೂ ಕಾಲ ಬಂದಿಲ್ಲ ಎಂದರು.
                ಸ್ವಲ್ಪದಿನಗಳ ನಂತರ ಭಗವಾನರು ತಮ್ಮ ಹಿಂಬಾಲಕರೊಂದಿಗೆ ನಂದನ ಮನೆಗೆ ಬಂದರು. ನಂದ ಗೌರವದಿಂದ ಬುದ್ಧರನ್ನು ಮತ್ತು ಸಂಘವನ್ನು ಬರಮಾಡಿಕೊಂಡನು. ನಂತರ ಆತನು ಹಾಲಿನಿಂದ ತಯಾರಾದ ವಿವಿಧರೀತಿಯ ತಿಂಡಿಗಳಿಂದ ಅವರಿಗೆ ಏಳು ದಿನಗಳ ಕಾಲ ಆತಿಥ್ಯ ನೀಡಿದನು. ಕೊನೆಯ ದಿನದಂದು ಭಗವಾನರ ಬೋಧನೆ ಆಲಿಸಿ ಆತನು ಸೋತಪನ್ನನಾದನು. ನಂತರ ಭಗವಾನರು ಹೊರಡಲು ಸಿದ್ಧರಾದಾಗ ಅವರನ್ನು ಹಿಂಬಾಲಿಸಿ ಅವರ ಪಿಂಡಪಾತ್ರೆಯನ್ನು ಅವರಿಗೆ ನೀಡಿ ಗೌರವ ಅರ್ಪಣೆ ಮಾಡಿ ಹಿಂತಿರುಗಿದನು.

                ಆದರೆ ಅದೇ ವೇಳೆಯಲ್ಲಿ ಬೇಟೆಗಾರನ ಬಾಣದಿಂದ ಚುಚ್ಚಲ್ಪಟ್ಟು ಆತನು ಸತ್ತನು. ಅದನ್ನು ಕಂಡ ಭಿಕ್ಷುಗಳು ಈ ವಿಷಯವನ್ನು ಭಗವಾನರಿಗೆ ತಿಳಿಸಿ ಹೀಗೆಂದರು ಭಗವಾನ್ ತಾವು ಇಲ್ಲಿ ಬಂದಿದ್ದರಿಂದಲೇ ಆತನು ಆತಿಥ್ಯ ನೀಡಿದ ಮತ್ತು ಹಿಂದಿರುಗುವಾಗ ಆತನು ಕೊಲ್ಲಲ್ಪಟ್ಟಿದ್ದಾನೆ. ಆಗ ಭಗವಾನರು ನುಡಿದರು ಭಿಕ್ಷುಗಳೇ, ನಾನು ಇಲ್ಲಿಗೆ ಬರಲಿ ಅಥವಾ ಬಾರದೆ ಇರಲಿ, ಮರಣದಿಂದ ಪಾರಾಗಲು ಸಾಧ್ಯವಿಲ್ಲ. ಏಕೆಂದರೆ ಆತನ ಹಿಂದಿನ ಕರ್ಮಫಲ ಹಾಗಿತ್ತು ಎಂದು ನುಡಿದು ಈ ಮೇಲಿನ ಗಾಥೆ ನುಡಿದರು.

dhammapada/cittavagga/3.7/tissa&buddha

ದೇಹಕ್ಕೆ ಅಂಟದಿರಿ
ಬಹುಬೇಗನೆ ಈ ಶರೀರ ವಿಞ್ಞಾನ (ಅರಿವು) ವಿಲ್ಲದೆ, ಈ ನೆಲದ ಮೇಲೆ ವ್ಯರ್ಥವಾದ ಒಣಗಿದ ಮರದಂತೆ ಬಿದ್ದಿರುತ್ತದೆ.       (41)
ಗಾಥ ಪ್ರಸಂಗ 3:7
ಬುದ್ಧ ಭಗವಾನರಿಂದ ರೋಗಿಯ ಆರೈಕೆ



                ತಿಸ್ಸನೆಂಬ ಭಿಕ್ಷುವು ಬುದ್ಧರಿಂದ ಧ್ಯಾನ ವಿಷಯ ತೆಗೆದುಕೊಂಡು ನಿಷ್ಠೆಯಿಂದ ಧ್ಯಾನ ಮಾಡತೊಡಗಿದನು. ಆದರೆ ಕಾಲನಂತರ ಆತನಿಗೆ ರೋಗ ಬಂದಿತು. ಸಣ್ಣ ಸಣ್ಣ ಗುಳ್ಳೆಗಳು ಆತನ ಶರೀರದಲ್ಲೆಲ್ಲಾ ಕಾಣಿಸಿಕೊಂಡಿತು ಅವು ನಂತರ ದೊಡ್ಡ ಗುಳ್ಳೆಗಳಾಗಿ ಬೆಳೆದವು. ಹಾಗೆಯೇ ಅವು ಒಡೆದು ರಕ್ತ, ಕೀವುಗಳೆಲ್ಲಾ ಬಟ್ಟೆಗಳಿಗೆ ಅಂಟಿದವು. ಆ ಬಟ್ಟೆಗಳೆಲ್ಲಾ ಒದ್ದೆಯಾಗಿ ದುವರ್ಾಸನೆ ಬೀರಲಾರಂಭಿಸಿತು. ಅಂದಿನಿಂದ ಆತನಿಗೆ ಪುಟಿಗಟ್ಟ ತಿಸ್ಸನೆಂದು ಕರೆಯಲ್ಪಟ್ಟನು (ದುವರ್ಾಸನೆಯ ತಿಸ್ಸ).
                ಬುದ್ಧ ಭಗವಾನರು ಪ್ರತಿದಿನ ಎರಡುಬಾರಿ ಜಗತ್ತಿನಲ್ಲಿ ಯಾರ್ಯಾರು ದುಃಖದಲ್ಲಿದ್ದಾರೆ ಎಂದು ವೀಕ್ಷಿಸಿ ಅವರಿಗೆ ಸಹಾಯ ಮಾಡುತ್ತಿದ್ದರು. ಬುದ್ಧರು ಮಹಾ ಕರುಣಿಕ ಸಮಾಪತ್ತಿಯಲ್ಲಿ ವೀಕ್ಷಿಸುವಾಗ ಅವರಿಗೆ ಯಾವ ಭಿಕ್ಷುವು ಸಹಾಯ ಮಾಡದ ತಿಸ್ಸ ಕಾಣಿಸಿದನು. ಆಗ ಭಗವಾನರು ಹೀಗೆ ಯೋಚಿಸಿದರು ಈ ಭಿಕ್ಷುವು ತನ್ನ ಸಹಚರರಿಂದ ತ್ಯಜಿಸಲ್ಪಟ್ಟಿದ್ದಾನೆ. ಈಗ ಈತನಿಗೆ ನನ್ನ ವಿನಃ ಬೇರಾರು ಆಶ್ರಯದಾತರಿಲ್ಲ. ನಂತರ ಭಗವಾನರು ಗಂಧಕುಟಿಯಿಂದ ಹೊರಟು, ವಿಹಾರದ ವೀಕ್ಷಣೆ ಮಾಡುವವರಂತೆ ಬೆಂಕಿಯಿರುವ ಕೋಣೆಗೆ ಹೊರಟರು. ಅಲ್ಲಿ ಅವರು ಕಡಾಯಿ ತೊಳೆದರು. ನಂತರ ನೀರು ತುಂಬಿ ಒಲೆಯ ಮೇಲಿಟ್ಟರು. ಅದು ಬಿಸಿಯಾದ ನಂತರ, ಅದನ್ನು ಎತ್ತಿಕೊಂಡು ತಿಸ್ಸನ ಬಳಿಗೆ ಬಂದರು.
                ಆಗ ಭಿಕ್ಷುಗಳು ಭಗವಾನರಿಗೆ ಹೀಗೆ ಹೇಳಿದರು : ಭಗವಾನ್ ದಯವಿಟ್ಟು ಸರಿಯಿರಿ. ನಾವು ನಿಮಗಾಗಿ ಆತನನ್ನು ಎತ್ತುವೆವು ಎಂದು ಹೇಳಿ ತಿಸ್ಸನ ಸಮೇತ ಮಂಚವನ್ನು ಎತ್ತಿಕೊಂಡು ಬೆಂಕಿಯ ಕೋಣೆಗೆ ಬಂದರು. ನಂತರ ತಿಸ್ಸನ ಮೇಲ್ಭಾಗದ ಬಟ್ಟೆ ತೆಗೆಯಲಾಯಿತು. ಆ ಬಟ್ಟೆಯನ್ನು ಬಿಸಿನೀರಲ್ಲಿ ತೊಳೆದು ಸೂರ್ಯನ ಬೆಳಕಿನಲ್ಲಿ ಒಣಗಿಸಲಾಯಿತು. ಆ ಬಟ್ಟೆಯು ಒಣಗಿತ್ತು. ಅದನ್ನು ತೊಡಿಸಿ ಉಳಿದ ಬಟ್ಟೆಯನ್ನೂ ಹಾಗೆಯೇ ಬಿಸಿನೀರಲ್ಲಿ ತೊಳೆದು ಸೂರ್ಯನ ಎದುರಲ್ಲಿ ಒಣಗಿಸಲಾಯಿತು. ನಂತರ ಆತನಿಗೆ ಪೂರ್ಣವಾಗಿ ಬಿಸಿನೀರಿನಲ್ಲಿ ಸ್ನಾನ ಮಾಡಿಸಿ ಬಟ್ಟೆ ತೊಡಿಸಿದರು.
                ಈಗ ತಿಸ್ಸನ ಶರೀರವು ಪುನಃಚೇತನ ಪಡೆಯಿತು, ಉಲ್ಲಾಸಿತವಾಯಿತು, ಪ್ರಶಾಂತವಾಯಿತು. ಹಾಗೆಯೇ ತಿಸ್ಸನು ಸಮಾಧಿ ಸ್ಥಿತಿ ಪ್ರಾಪ್ತಿಮಾಡಿದನು. ಆಗ ಭಗವಾನರು ಆತನ ತಲೆಯ ಬಳಿ ನಿಂತು ಈ ಶರೀರವು ಬಹುಬೇಗನೆ ವಿನ್ಯಾನದಿಂದ ಬೇರ್ಪಟ್ಟು ವ್ಯರ್ಥ ಮರದ ತುಂಡಿನಂತೆ ನೆಲದಲ್ಲಿರುವುದು ಎಂದು ಮೇಲಿನ ಗಾಥೆಯನ್ನು ಹೇಳಿದರು. ನಂತರದ ಬೋಧನೆಯಲ್ಲಿ ಆತನು ಅರಹಂತನಾಗುತ್ತಾನೆ. ಹಾಗೆಯೇ ಪರಿನಿಬ್ಬಾಣವನ್ನು ಪ್ರಾಪ್ತಿ ಮಾಡುತ್ತಾನೆ. ನಂತರ ಬುದ್ಧರು ಭಿಕ್ಷುಗಳಿಗೆ ತಿಸ್ಸನ ಶರೀರಕ್ಕೆ ಸ್ತೂಪ ನಿಮರ್ಿಸುವಂತೆ ನಿದರ್ೆಶಿಸುತ್ತಾರೆ.
                ನಂತರ ಭಿಕ್ಷುಗಳು ಭಗವಾನರಲ್ಲಿ ತಿಸ್ಸನ ಈ ಅವಸ್ಥೆಗೆ ಕಾರಣವನ್ನು ಕೇಳುತ್ತಾರೆ. ಆಗ ಭಗವಾನರು ತಿಸ್ಸನು ಹಿಂದಿನ ಜನ್ಮದಲ್ಲಿ ಕ್ರೂರ ಹಕ್ಕಿ ಬೇಟೆಗಾರನಾಗಿದ್ದನು. ಆತ ಆಗ ಪಕ್ಷಿಗಳನ್ನು ಹಿಡಿದು ಅವುಗಳು ಹಾರದಂತೆ, ಓಡದಂತೆ ಅವುಗಳ ಕಾಲುಗಳ ಮತ್ತು ರೆಕ್ಕೆಗಳ ಮೂಳೆಗಳನ್ನು ಮುರಿಯುತ್ತಿದ್ದನು. ಇದರ ಪರಿಣಾಮವಾಗಿ ಈ ಜನ್ಮದಲ್ಲಿ ಈ ದುರ್ಗತಿ ಬಂದಿತ್ತು.

                ನಂತರ ಭಗವಾನರು ಭಿಕ್ಷುಗಳಿಗೆ ಈ ರೀತಿ ಹೇಳಿದರು ಭಿಕ್ಷುಗಳೇ, ನಿಮಗೆ ಸಲಹಲು ತಂದೆಯಾಗಲಿ, ತಾಯಿಯಾಗಲಿ ಇಲ್ಲ. ನೀವು ಪರಸ್ಪರ ಸಲಹಿಕೊಳ್ಳದಿದ್ದರೆ ನಿಮ್ಮನ್ನು ಯಾರು ಸಲಹುತ್ತಾರೆ? ನೆನಪಿಡಿ, ರೋಗಿಯ ಸೇವೆ ಮಾಡುವುದು, ನನಗೆ ಸೇವೆ ಮಾಡಿದಂತೆ ಎಂದರು. 

dhammapada/cittavagga/3.6/metta

ನಿಮ್ಮ ಮನಸ್ಸನ್ನು ಭದ್ರಪಡಿಸಿ ಯಾವುದಕ್ಕೂ ಅಂಟಬೇಡಿ
ಈ ಶರೀರವು ಒಡೆಯಲ್ಪಡುವ ಮಡಿಕೆ (ಕುಂಭ) ಎಂದು ಅರಿತು ನಗರಕ್ಕೆ ಕೋಟೆಯಿಂದ ರಕ್ಷಿಸುವಂತೆ ಚಿತ್ತವನ್ನು ಭದ್ರಪಡಿಸಿ, ಪ್ರಜ್ಞಾಯುಧದಿಂದ ಮಾರನನ್ನು ಎದುರಿಸಿ ಜಯಿಸು, ಜಯವನ್ನು ರಕ್ಷಿಸಿಕೋ ಆದರೆ ಅಂಟಿಕೊಳ್ಳಬೇಡ.            (40)
ಗಾಥ ಪ್ರಸಂಗ 3:6
ಮೈತ್ರಿಯ ಆಯುಧ

                ಶ್ರಾವಸ್ತಿಯ 500 ಭಿಕ್ಷುಗಳು ಬುದ್ಧ ಭಗವಾನರಿಂದ ಧ್ಯಾನದ ವಿಷಯವನ್ನು ಸ್ವೀಕರಿಸಿ ಅಲ್ಲಿಂದ ನೂರು ಯೋಜನ ದೂರವಿರುವ ವಿಶಾಲ ಅರಣ್ಯಕ್ಕೆ ಬಂದರು. ಅವರಿಗೆ ಅದು ಧ್ಯಾನಕ್ಕೆ ಯೋಗ್ಯ ಪ್ರದೇಶವೆನಿಸಿತು. ಆದರೆ ಅಲ್ಲಿ ವೃಕ್ಷಗಳಲ್ಲಿ ನೆಲೆಸಿದ್ದ ದೇವತೆಗಳಿಗೆ ಭಿಕ್ಷುಗಳೊಡನೆ ವಾಸಿಸುವುದು ಯೋಗ್ಯವೆನಿಸಲಿಲ್ಲ. ಆದರೂ ಅವು ಭಿಕ್ಷುಗಳು ಕೆಲದಿನಗಳ ನಂತರ ಹೋಗಬಹುದು ಎಂದು ಭಾವಿಸಿದವು. ಆದರೆ ಅವರು ಆಗಲೂ ಹೊರಡದಿದ್ದಾಗ ಅವು ಹೆದರಿಸಲು ನಿರ್ಧರಿಸಿದವು. ಅವು ಭೀಕರ ಆಕೃತಿ ತೋರಿಸಿ ಹೆದರಿಸಿದವು. ಭೀಕರ ಶಬ್ದವನ್ನುಂಟು ಮಾಡಿದವು. ಶರೀರವಿಲ್ಲದ ಭಯಾನಕ ರುಂಡಗಳು ಹಾಗೆಯೇ ರುಂಡವಿಲ್ಲದ ಭೀಕರ ಮುಂಡವನ್ನು ತೋರಿಸಿದವು. ಇದರಿಂದ ಭೀತರಾದ ಭಿಕ್ಷುಗಳು ಆ ಸ್ಥಳವನ್ನು ಬಿಟ್ಟು ಬುದ್ಧರಲ್ಲಿಗೆ ಬಂದು ವಿಷಯವನ್ನೆಲ್ಲಾ ತಿಳಿಸಿದರು. ಆಗ ಭಗವಾನರು ಹೀಗೆ ಹೇಳಿದರು ನೀವು ಹಿಂದೆ ಯಾವುದೇ ರಕ್ಷಣೆಯಿಲ್ಲದೆ ಹೋಗಿದ್ದೀರಿ. ಆದರೆ ಈ ಬಾರಿ ಯೋಗ್ಯ ರಕ್ಷಣೆ ಮತ್ತು ಆಯುಧದೊಂದಿಗೆ ಅಲ್ಲೇ ಹೋಗಿ ಧ್ಯಾನಿಸಿರಿ, ನೀವು ಅರಹಂತರಾಗುವುದು ಅದೇ ಸ್ಥಳದಲ್ಲಿಯೇ ಎಂದರು. ನಂತರ ಮೆತ್ತ ಸುತ್ತವನ್ನು ಪ್ರವಚನ ಮಾಡಿದರು. ಅದೇ ಅವರ ಆಯುಧವಾಗಿತ್ತು.
                ನಂತರ ಭಿಕ್ಷುಗಳು ಆ ಅರಣ್ಯಕ್ಕೆ ಹೋಗಿ ಮೆತ್ತಸುತ್ತದ ಪಠಣ ಮಾಡಿ ಮೆತ್ತಾ ಧ್ಯಾನ ಮಾಡಿದರು. ಸರ್ವಜೀವಿಗಳು ಸುಖಿಯಾಗಿ ಮತ್ತು ಕ್ಷೇಮವಾಗಿ ಇರಲಿ, ಎಲ್ಲರ ಮನಸ್ಸು ಸುಖದಿಂದ ಕೂಡಿರಲಿ ಎಂದು ಧ್ಯಾನಿಸಿದರು.
                ಆಗ ವೃಕ್ಷ ದೇವತೆಗಳು ಮೈತ್ರಿಯನ್ನು ಸ್ವೀಕರಿಸಿ ಭಿಕ್ಷುಗಳೊಡನೆ ಅವು ಸಹಾ ಮೈತ್ರಿ ತೋರಿದವು ಹೊರತು ಹಾನಿ ಮಾಡಲಿಲ್ಲ. ಈಗ ಅವು ಯಾವುದೇ ರೀತಿಯಲ್ಲಿ ಹೆದರಿಸಲಿಲ್ಲ. ಈಗ ಭಿಕ್ಷುಗಳು ನಿರಾತಂಕವಾಗಿ ಧ್ಯಾನಿಸಿದರು.

                ಆಗ ಆ ಭಿಕ್ಷುಗಳು ದೇಹವನ್ನು ಒಡೆದುಹೋಗುವ ಮಡಿಕೆಯಂತೆ ಕ್ಷಣಿಕವಾದುದು ಎಂದು ಧ್ಯಾನಿಸಿದರು. ಆಗ ಬುದ್ಧರಿಗೆ ಇದು ಅರಿವಾಗಿ ಅವರು ಜೇತವನದಿಂದ ತಮ್ಮ ಪ್ರತಿಬಿಂಬಾಕೃತಿಯನ್ನು ಕಿರಣದ ಮೂಲಕ ಸೃಷ್ಟಿಮಾಡಿ ಅವರ ಮುಂದೆ ಪ್ರತ್ಯಕ್ಷ ಮಾಡಿದರು ಮತ್ತು ಮೇಲಿನ ಗಾಥೆಯನ್ನು ನುಡಿದರು. ನಂತರ ಅವರೆಲ್ಲರೂ ಅರಹಂತರಾದರು.

dhammapada/cittavagga/3.5/cittahatta

ಜಾಗೃತನಿಗೆ ಭಯವಿಲ್ಲ
ಯಾರ ಚಿತ್ತವು ಸ್ಥಿರವಲ್ಲವೋ, ಯಾರು ಸದ್ಧಮ್ಮವನ್ನು ಅರಿಯದವನೊ ಮತ್ತು ಯಾರ ಶ್ರದ್ಧೆಯು ಅಲುಗಾಡುವುದೋ, ಅಂತಹವರ ಪ್ರಜ್ಞೆಯು ಪರಿಪೂರ್ಣ ವಾದುದಲ್ಲ.        (38)
ಯಾರ ಚಿತ್ತವು (ರಾಗದಿಂದ) ನೆನೆಯದೋ, ಯಾರು (ದ್ವೇಷದಿಂದ) ದುಃಖಿತವಾಗುವುದಿಲ್ಲವೋ, ಯಾರು ಪಾಪ ಪುಣ್ಯಗಳಿಂದ ದಾಟಿ ನಿಂತಿರುವವರೋ, ಅಂತಹ ಜಾಗೃತನಿಗೆ ಭಯವೆಂಬುದಿಲ್ಲ.            (39)
ಗಾಥ ಪ್ರಸಂಗ 3:5
ಚಂಚಲಚಿತ್ತವುಳ್ಳ ಚಿತ್ತಹಟ್ಟನ ನಿರಂತರ ಸಾಹಸ

                ಶ್ರಾವಸ್ತಿಯ ಒಬ್ಬ ಮನುಷ್ಯ ಕಾಡಿನಲ್ಲಿ ತನ್ನ ಎತ್ತನ್ನು ಹುಡುಕುತ್ತಿದ್ದನು. ಆತನಿಗೆ ಹಸಿವು ಆಯಿತು ಮತ್ತು ಆತನು ಹಳ್ಳಿಯಲ್ಲಿನ ವಿಹಾರಕ್ಕೆ ಹೊರಟನು. ಅಲ್ಲಿ ಆತನಿಗೆ ತಿನ್ನಲು ಸ್ವಲ್ಪ ಆಹಾರವನ್ನು ನೀಡಲಾಯಿತು. ಅಲ್ಲಿ ಆತನು ಆಹಾರ ತಿನ್ನುತ್ತಿರುವಾಗ ಆತನಿಗೆ ಒಂದು ಯೋಚನೆ ಹೊಳೆಯಿತು. ಅದು ಏನೆಂದರೆ ಆತ ಕಷ್ಟಪಟ್ಟು ದುಡಿದು ಸಹ ಇಂತಹ ಆಹಾರವನ್ನು ಸೇವಿಸಿರಲಿಲ್ಲ. ಆದ್ದರಿಂದ ಭಿಕ್ಷುವಾಗುವುದೇ ಉತ್ತಮ ಉಪಾಯ ಎಂದು ಯೋಚಿಸಿದನು.
                ಆದ್ದರಿಂದ ಅತನು ಭಿಕ್ಷುಗಳಿಗೆ ತನ್ನನ್ನು ಸಂಘಕ್ಕೆ ಸೇರಿಸಿಕೊಳ್ಳಿ ಎಂದು ಕೇಳಿಕೊಂಡನು. ವಿಹಾರದಲ್ಲಿ ಸೇರಿಕೊಂಡ ಮೇಲೆ ಆತನಿಗೆ ತಿನ್ನಲು ಆಹಾರ ದೊರೆತು ಸ್ವಲ್ಪ ಕಾಲದಲ್ಲೇ ಆತನ ತೂಕ ಹೆಚ್ಚಿತು. ಕೆಲದಿನಗಳ ನಂತರ ಆತನಿಗೆ ಭಿಕ್ಷಾಟನೆಯಲ್ಲಿ ಆಸಕ್ತಿ ಕುಗ್ಗಿ ಆತನು ಗೃಹಸ್ಥನಾದನು. ಕೆಲದಿನಗಳ ನಂತರ ಆತನಿಗೆ ಗೃಹಸ್ಥ ಜೀವನ ದುಷ್ಕರವೆನಿಸಿ ಆತ ಮತ್ತೆ ಕೇಳಿಕೊಂಡು ಭಿಕ್ಷುವಾದನು. ಕೆಲದಿನಗಳ ನಂತರ ಮತ್ತೆ ಆತನಿಗೆ ಗೃಹಸ್ಥ ಜೀವನ ಪ್ರಿಯವೆನಿಸಿ ಮತ್ತೆ ಗೃಹಸ್ಥನಾದನು. ಇದೇರೀತಿ ಆತನು ಆರುಬಾರಿ ಭಿಕ್ಷುವಾಗಿ ಆರುಬಾರಿ ಗೃಹಸ್ಥನಾದನು. ಆತನು ಈ ರೀತಿ ವತರ್ಿಸಿದ್ದು ಏಕೆಂದರೆ ಸಾಮಾಜಿಕ ಪರಿಸ್ಥಿತಿಯ ಚಾಟಿಯ (ಹಟ್ಟ) ತರಹ ಪ್ರತಿಕೂಲತೆಯಿಂದ. ಆದ್ದರಿಂದ ಆತನು ಹೆಸರು ಚಿತ್ತಹಟ್ಟನೆಂದು ಕರೆಯಲ್ಪಟ್ಟನು. ಆತನ ಈ ರಿತಿಯ ವರ್ತನೆಯಿಂದ ಆತನ ಪತ್ನಿಯು ಗಭರ್ಿಣಿಯಾದಳು. ಆತನಲ್ಲಿ ನಿಜಕ್ಕೂ ವೈರಾಗ್ಯ ಉಂಟಾಗಿರಲಿಲ್ಲ. ಆದರೆ ತನ್ನ ಸ್ವಲಾಭಕ್ಕಾಗಿ ಆತನು ಈ ರೀತಿ ಮಾಡುತ್ತಿದ್ದನು. ಇದರ ಪರಿಣಾಮವಾಗಿ ಆತನು ಗೃಹಸ್ಥನಾಗಿ ಅಥವಾ ಭಿಕ್ಷುವಾಗಿಯು ಸುಖಿಯಾಗಿರುತ್ತಿರಲಿಲ್ಲ.
                ಒಂದುದಿನ ಆತನು ತನ್ನ ಮನೆಯಲ್ಲಿ ಆತನ ಪತ್ನಿಯು ನಿದ್ರಿಸುತ್ತಿರುವಾಗ ಕೋಣೆಯೊಳಕ್ಕೆ ಹೋದನು. ಆಕೆಯು ಶಬ್ದ ಬರುವಂತೆ ಗೊರಕೆ ಹೊಡೆಯುತ್ತಿದ್ದಳು. ಆಕೆಯ ಬಾಯಿಂದ ಜೊಲ್ಲು ಸೋರತೊಡಗಿತ್ತು, ಆಕೆಯ ಬಾಯಿ ತೆರೆದಿತ್ತು. ಆಗ ಅತನಿಗೆ ಶರೀರದ ಕುರೂಪ ಜ್ಞಾನ ಉಂಟಾಯಿತು (ಅಶುಭಾ ಜ್ಞಾನ) ಮತ್ತು ಆತನು ಈ ರೀತಿ ಚಿಂತಿಸಿದನು. ನಾನು ಅನೇಕಬಾರಿ ಭಿಕ್ಷುವಾದರೂ ಅನೇಕಬಾರಿ ಗೃಹಸ್ಥನಾದದ್ದು ಈ ಸ್ತ್ರೀಯ ಆಕರ್ಷಣೆಯಿಂದಲೇ ಅಲ್ಲವೇ? ಈಬಾರಿ ವೈರಾಗ್ಯದಿಂದ ಆತನು ಮತ್ತೆ 7ನೆಯ ಬಾರಿ ಭಿಕ್ಷುವಾಗಲು ಹೊರಟನು. ಆತನ ಪದೇಪದೇ ಅಶುಭಾ, ಅನಿತ್ಯ, ಅತೃಪ್ತಿಕರ, ದುಃಖಕರ ಎಂದು ಹೇಳಿಕೊಳ್ಳುತ್ತಾ ವಿಹಾರ ತಲುಪುವ ಮುನ್ನ ಸೋತಪನ್ನನಾದನು.

                ಆತನು ವಿಹಾರಕ್ಕೆ ಬಂದು ಭಿಕ್ಷುವಾಗಲು ಅಪ್ಪಣೆ ಕೇಳಿದನು. ಆದರೆ ಅವರು ನಿರಾಕರಿಸಿದರು. ಆದರೆ ನಿರಂತರ ಒತ್ತಾಯ ಮಾಡಿದಾಗ ಅವರು ಭಿಕ್ಷುವಾಗಿ ಸೇರಿಸಿಕೊಂಡರು. ಅದಾದ ಸ್ವಲ್ಪಕಾಲದಲ್ಲೇ ಆತನು ಅರಹಂತನಾದನು. ಬೇರೆ ಭಿಕ್ಷುಗಳಿಗೆ ಆಶ್ಚರ್ಯವಾಗಿ ಕಾರಣ ಕೇಳಿದರು. ನಾನು ಗೃಹಕ್ಕೆ ತೆರಳುತ್ತಿದ್ದಾಗ ನನ್ನಲ್ಲಿ ಅಂಟುವಿಕೆಯಿತ್ತು. ಆದರೆ ಈಗ ಅಂಟುವಿಕೆ ಕತ್ತರಿಸಲ್ಪಟ್ಟಿದೆ. ಭಿಕ್ಷುಗಳು ಈ ವಿಷಯವನ್ನು ಭಗವಾನರಿಗೆ ತಿಳಿಸಿದರು. ಆಗ ಭಗವಾನರು ಹೀಗೆ ನುಡಿದರು. ಚಿತ್ತಹಟ್ಟನ ಚಿತ್ತವು ಹಿಂದೆ ಸ್ಥಿರವಾಗಿರಲಿಲ್ಲ ಮತ್ತು ಆತನು ಧಮ್ಮವನ್ನು ಅಷ್ಟಾಗಿ ತಿಳಿದಿರಲಿಲ್ಲ. ಆದರೆ ಈಗ ಅರಹಂತನಾಗಿ ಎಲ್ಲಾ ಬಗೆಯ ಅಂಟುವಿಕೆಯನ್ನು ತ್ಯಜಿಸಿದ್ದಾನೆ. ಆಗ ಭಗವಾನರು ಮೇಲಿನ ಗಾಥೆಗಳನ್ನು ನುಡಿದರು. 

dhammapada/cittavagga/3.4/sangharakkitha

ಚಿತ್ತವನ್ನು ನಿಯಂತ್ರಿಸಿದವರು ಮುಕ್ತರಾಗುತ್ತಾರೆ
ದೂರದವರೆಗೂ ಏಕಾಂಗಿಯಾಗಿ ಚಲಿಸುವಂತಹುದು ಅಶರೀರಿಯು, ಗವಿಯಲ್ಲಿ ಮಲಗಿರುವಂತಹ ಚಿತ್ತವನ್ನು ದಮಿಸಿದವರು ಮಾರನ ಬಂಧನದಿಂದ ಮುಕ್ತರಾಗುತ್ತಾರೆ.  (37)
ಗಾಥ ಪ್ರಸಂಗ 3:4
ಸಂಘರಕ್ಖಿತನ ಚಿತ್ತದ ಅಲೆದಾಟ

                ಶ್ರಾವಸ್ತಿಯಲ್ಲಿ ಸಂಘರಕ್ಖಿತನೆಂಬ ಹಿರಿಯ ಭಿಕ್ಷುಗಳಿದ್ದರು. ಅವರ ತಂಗಿಗೂ ಒಬ್ಬ ಮಗ ಹುಟ್ಟಿದಾಗ ಆತನ ಹೆಸರು ಸಂಘರಕ್ಖಿತ ಭಗಿನೆಯ್ಯನೆಂದು ಇಟ್ಟರು. ಕಾಲನಂತರ ಸಂಘರಕ್ಖಿತ ಭಗಿನೆಯ್ಯ ಸಹಾ ಸಂಘಕ್ಕೆ ಸೇರಿದನು. ಒಮ್ಮೆ ಈ ಕಿರಿಯ ಭಿಕ್ಷುವಿಗೆ ಎರಡು ಚೀವರಗಳನ್ನು ಯಾರೋ ದಾನ ಮಾಡಿದರು. ಆಗ ಆತನು ಒಂದನ್ನು ತನ್ನ ಸೋದರಮಾವನಿಗೆ ನೀಡಲು ಇಚ್ಛಿಸಿದನು. ವಷರ್ಾವಾಸದ ಕೊನೆಯಲ್ಲಿ ಆತನು ತನ್ನ ಸೋದರಮಾವನನ್ನು ಭೇಟಿಮಾಡಿ ಚೀವರವನ್ನು ನೀಡಲು ಹೋದಾಗ ಅವರು ತನ್ನಲ್ಲಿದೆ ಎಂದು ಹೇಳಿ ನಿರಾಕರಿಸಿದರು. ಆಗ ಕಿರಿಯ ಭಿಕ್ಷುವಿಗೆ ನಿರಾಸೆಯಾಗಿ ಸಂಘ ತ್ಯಜಿಸಿ ಗೃಹಸ್ಥನಾಗಲು ಯೋಚನೆಗಳು ಪ್ರಚೋದಿಸಿದವು.
                ಆತ ಹಾಗೇ ಯೋಚಿಸಲಾರಂಭಿಸಿದನು. ಚೀವರವನ್ನು ಮಾರಿ ಒಂದು ಮೇಕೆ ಕೊಳ್ಳುವುದು, ಅದು ಸ್ವಲ್ಪ ಕಾಲದಲ್ಲಿ ಮರಿ ಹಾಕುವುದು. ಅದರಿಂದ ಹೇರಳ ಹಣ ಸಿಗುವುದು, ನಂತರ ವಿವಾಹವಾಗುವುದು. ಕಾಲನಂತರ ತನಗೆ ಒಂದು ಮಗುವು ಆಗುತ್ತದೆ. ಆಗ ತಾನು ಪತ್ನಿ ಪುತ್ರರೊಂದಿಗೆ ವಿಹಾರದಲ್ಲಿರುವ ತನ್ನ ಮಾವನನ್ನು ನೋಡಲು ಬರುತ್ತೇನೆ. ದಾರಿಯಲ್ಲಿ ಆತನು ಮಗುವನ್ನು ಎತ್ತಿಕೊಂಡಾಗ, ಆತನ ಪತ್ನಿಯು ಮಗುವಿನ ಬಗ್ಗೆ ಚಿಂತಿಸಬೇಡ, ಬಂಡಿಯನ್ನು ಓಡಿಸು ಎನ್ನುತ್ತಾಳೆ. ಆದರೆ ಪ್ರತಿರೋಧ ವ್ಯಕ್ತಪಡಿಸಿ ಮಗುವನ್ನು ಕಿತ್ತುಕೊಳ್ಳಲು ಹೋಗುತ್ತಾನೆ. ಇವರಿಬ್ಬರ ಕಿತ್ತಾಟದಿಂದ ಮಗುವು ಬಂಡಿಯಿಂದ ಕೆಳಗೆ ಬಿದ್ದು, ಚಕ್ರವು ಅದರ ಮೇಲೆ ಹರಿಯುತ್ತದೆ. ಆಗ ಆತನು ಕ್ರೋಧಿತನಾಗಿ ಚಾಟಿಯಿಂದ ಪತ್ನಿಗೆ ಹೊಡೆಯುತ್ತಾನೆ. ಹೀಗೆ ಆತನು ಹಗಲು ಕನಸು ಕಾಣುತ್ತಿರುವ ವೇಳೆ ತನ್ನ ಸೋದರಮಾವನಿಗೆ ಬೀಸಣಿಗೆ ಬೀಸುತ್ತಿದ್ದನು. ಆದರೆ ಕಲ್ಪನೆಯ ಹೆಂಡತಿಗೆ ಹೊಡೆಯುವ ಬದಲು, ತನ್ನ ಸೋದರಮವನಿಗೆ ಬೀಸಣಿಗೆಯಿಂದ ಹೊಡೆದಿದ್ದ. ಸೋದರಮಾವನು ಬೆಚ್ಚಿಬಿದ್ದು ಆತನ ಮನಸ್ಸನ್ನು ಓದಿದನು. ನಂತರ ಹೀಗೆ ಹೇಳಿದನು.
                ನಿನ್ನ ಹೆಂಡತಿಗೆ ಹೊಡೆಯಲು ಅಸಮರ್ಥನಾಗಿದ್ದೀಯೆ, ಆದರೆ ವೃದ್ಧ ಭಿಕ್ಷುವಿಗೇಕೆ ಹೊಡೆಯುವೆ?

                ಇದನ್ನು ಆಲಿಸಿದ ಕಿರಿಯ ಭಿಕ್ಷುವು ಭಯಾಶ್ಚರ್ಯದಿಂದ ಕೂಡಿ ಅಲ್ಲಿಂದ ಪರಾರಿಯಾದನು. ಇತರ ಕಿರಿಯ ಭಿಕ್ಷುಗಳು ಆತನನ್ನು ಹಿಡಿದು ಭಗವಾನರ ಬಳಿ ನಿಲ್ಲಿಸಿದರು. ಆಗ ಭಗವಾನರು ಮನಸ್ಸಿನ ಸ್ವರೂಪ ವಿವರಿಸಿ ಈ ಮೇಲಿನ ಗಾಥೆ ನುಡಿದರು. ಆಗ ಆತನು ಸೋತಪನ್ನನಾಗುತ್ತಾನೆ.

dhammapada/cittavagga/3.3/gahapathi

ಕೇವಲ ನಿಮ್ಮ ಯೋಚನೆಗಳನ್ನು ರಕ್ಷಿಸಿ
ಮನಸ್ಸನ್ನು ಗ್ರಹಿಸುವುದು ಅತಿಕಷ್ಟಕರ. ಅದು ಅತ್ಯಂತ ಕೋಮಲವೂ ಮತ್ತು ಅತಿಸೂಕ್ಷ್ಮವೂ ಆಗಿದೆ. ಅದು ಇಷ್ಟವಾದುದೆಡೆ ಚಲಿಸುವುದು ಮತ್ತು ನೆಲೆಸುವುದು. ಆದರೆ ಮೇಧಾವಿಯು ಚಿತ್ತದ ರಕ್ಷಣೆ ಮಾಡುತ್ತಾನೆ. ರಕ್ಷಿತ ಚಿತ್ತವು ಸುಖಕಾರಿಯಾಗಿದೆ. (36)
ಗಾಥ ಪ್ರಸಂಗ 3:3
ಜ್ಞಾನಿಯು ತನ್ನ ಯೋಚನೆಗಳನ್ನು ರಕ್ಷಿಸುತ್ತಾನೆ


                ಶ್ರಾವಸ್ತಿಯಲ್ಲಿ ಒಬ್ಬ ಗೃಹಪತಿ ಪುತ್ರನಿದ್ದನು. ಆ ಯುವಕನು ಧಮರ್ಾಚಾರಿ ಯಾಗಿದ್ದನು. ಭಿಕ್ಷುಗಳಿಗೆ ದಾನ ನೀಡುತ್ತಾ, ಶೀಲ ಪಾಲಿಸುತ್ತಾ ಸದ್ಗೃಹಸ್ಥನಾಗಿದ್ದನು. ಒಮ್ಮೆ ಭಿಕ್ಷುವಿನ ವಚನದಂತೆ ಆತ ತನ್ನ ಐಶ್ವರ್ಯವನ್ನು 3 ಭಾಗ ಮಾಡಿ 1 ಭಾಗವನ್ನು ಉದ್ಯಮದಲ್ಲಿ ಹೂಡಿದನು. ಮತ್ತೊಂದು ಭಾಗವನ್ನು ಕುಟುಂಬ ಪಾಲನೆಗೆ ಮೀಸಲಿಟ್ಟನು. ಮತ್ತು 3ನೆಯ ಭಾಗವನ್ನು ದಾನಕ್ಕೆ ಮೀಸಲಿಟ್ಟು ದಾನಿಯಾದನು. ಇದೇರೀತಿ ದಾನ, ಶೀಲ ಪಾಲಿಸುತ್ತಾ ಆತನಿಗೆ ಆನಂದ ಉಂಟಾಗಿ ಮುಂದೆ ನಾನು ಏನನ್ನು ಮಾಡಬೇಕೆಂದು ಆತ ಕೇಳಿದಾಗ, ತ್ರಿಶರಣು ಪಡೆ ಎಂದು ಭಿಕ್ಷುಗಳು ನುಡಿದರು. ಹಾಗೆಯೇ ಆತನು ತ್ರಿಶರಣು ಪಡೆದು ಮುಂದೆ ಹಾಗೆಯೇ ಪಂಚಶೀಲ ಪಾಲಿಸುತ್ತಾ ಹಾಗೆಯೇ ದಶಶೀಲ ಪಾಲಿಸಲು ಆರಂಭಿಸಿದನು. ನಂತರ ಆತನು ಪ್ರಾಪಂಚಿಕತೆಯಿಂದ ಮುಕ್ತನಾಗಿ ಭಿಕ್ಷುವಾದನು.
                ಆತನು ಭಿಕ್ಷುವಾದಾಗ ಆತನಿಗೆ ಅಭಿಧಮ್ಮವನ್ನು ಒಬ್ಬ ಭಿಕ್ಷು ಉಪದೇಶಿಸಿದರು. ಹಾಗೆಯೇ ವಿನಯದ ಗುರುಗಳು ಆತನಿಗೆ ಭಿಕ್ಷುಗಳ ನಿಯಮಗಳನ್ನು ತಿಳಿಸಿ ಅದನ್ನು ನೆನಪಿಡಲು ಮತ್ತು ಪಾಲಿಸಲು ತಿಳಿಸಿದರು. ಆತನು ಚಿಂತಾಕ್ರಾಂತನಾದನು. ಏಕೆಂದರೆ ಶೀಲದ ನಿಯಮಗಳು 227 ಇದ್ದವು. ಜೊತೆಗೆ ಧ್ಯಾನದ ವಿಷಯಗಳು, ಜೊತೆಗೆ ಬೌದ್ಧ ಮನಶಾಸ್ತ್ರ (ಅಭಿಧಮ್ಮದ) ವಿಸ್ತಾರ ವಿಶ್ಲೇಷಣೆ ಬೇರೆ. ಸುತ್ತಗಳ ನೆನಪು ಬೇರೆ ಇಡಬೇಕಿತ್ತು. ಆತನಿಗೆ ಇದಕ್ಕಿಂತ ಗೃಹಸ್ಥ ಜೀವನ ಸ್ವತಂತ್ರ ಎನಿಸಿತು. ಆತನು ಮತ್ತೆ ಗೃಹಸ್ಥನಾಗಲು ಸಿದ್ಧನಾದನು. ಆದರೆ ಅದು ಬಿಡಲಾರದೆ ಇದು ಹಿಡಿಯಲಾರದೆ ಆತನು ತನ್ನ ಮಾನಸಿಕ ಹೊರೆಯಿಂದ ಕುಗ್ಗಿದನು, ಅತೃಪ್ತನಾದನು, ಸಂದೇಹದಿಂದ ಕೂಡಿದನು. ಅಸಂತುಷ್ಟನಾದನು, ಅಸುಖಿಯಾಗಿ ದುರ್ಬಲನಾದನು. ಆತನ ಈ ಚಿಂತೆ, ದುಃಖ ಬುದ್ಧರಿಗೆ ಅರಿವಾಗಿ ಆತನಿಗೆ ಈ ರೀತಿ ಉಪದೇಶ ನೀಡಿದರು.
                ನೀನು ಕೇವಲ ಮನಸ್ಸನ್ನು ನಿಯಂತ್ರಿಸಿದರೆ ಅಷ್ಟೇ ಸಾಕು, ನೀನು ಮತ್ತೆ ಏನನ್ನೂ ನಿಯಂತ್ರಿಸುವುದು ಬೇಡ. ಆದ್ದರಿಂದ ಕೇವಲ ನಿನ್ನ ಮನಸ್ಸನ್ನು ಅಕುಶಲಗಳಿಂದ ರಕ್ಷಿಸಿಕೋ.
                ನಂತರ ಆ ಯುವ ಭಿಕ್ಷುವು ಅದರಂತೆಯೇ ಸಾಧಿಸಿ ಅರಹಂತನಾಗುತ್ತಾನೆ.
                ಹೀಗೆ ಚಿತ್ತದ ರಕ್ಷಣೆ ಅಥವಾ ಯೋಚನೆಗಳ ರಕ್ಷಣೆ ಮಾಡಿದಾಗ ಮಾತ್ರ ನಾವು ಧ್ಯಾನದಲ್ಲಿ ಯಶಸ್ವಿಯಾಗುತ್ತೇವೆ.
                ಬುದ್ಧರು ತಮ್ಮ ಬೋಧಿ ಪ್ರಾಪ್ತಿಯ ಮುನ್ನ ಮಾಡಿದ ಮಹಾ ಸಂಕಲ್ಪ ನೆನಪಿಸಿಕೊಳ್ಳಿ.
                ನನ್ನ ಚರ್ಮ, ಮಾಂಸ, ಮೂಳೆ ಮತ್ತು ರಕ್ತಗಳೆಲ್ಲವೂ ಒಣಗಿಹೋದರೂ ಸರಿಯೆ, ಸಂಬೋಧಿಪ್ರಾಪ್ತಿಯ ವಿನಃ ನಾನು ಈ ಪದ್ಮಾಸನ ಭಂಗಿಸಲಾರೆ. ಈ ಸ್ಥಳದಿಂದ ಅಲುಗಾಡಲಾರೆ. ಅದರಂತೆಯೇ ಅವರು ಸಹಸ್ರ ವಿಘ್ನಗಳು ಬಾಧಿಸಿದರೂ ಅಲುಗಾಡದೆ ಸಮ್ಮಾ ಸಂಬೋಧಿ ಪ್ರಾಪ್ತಿ ಮಾಡಿದರು.

                ನಾವು ಸಹ ಹಾಗೆಯೇ ನಮ್ಮ ಯೋಚನೆಗಳನ್ನು ಗೆಲ್ಲಬೇಕಾಗಿದೆ. ಧ್ಯಾನಸಿದ್ಧಿಗೊಳಿಸ ಬೇಕಾಗಿದೆ. ವಿಶುದ್ಧಿ ಪ್ರಾಪ್ತಿಗೊಳಿಸಬೇಕಾಗಿದೆ. ವಿಮುಕ್ತರಾಗಬೇಕಾಗಿದೆ. ನಿಬ್ಬಾಣ ಪಡೆಯಬೇಕಾಗಿದೆ.

dhammapada/cittavagga/3.2/mathikamata

ನಿಮ್ಮ ಮನಸ್ಸನ್ನು ನಿಯಂತ್ರಿಸಿ
ಮನಸ್ಸನ್ನು ನಿಯಂತ್ರಿಸುವುದು ಕಷ್ಟಕರ, ವೇಗವಾಗಿ ಚಲಿಸುವಂತಹುದು, ಇಷ್ಟವಿರುವ ಕಡೆಗೆ ಚಲಿಸುವಂತಹುದು. ಅದನ್ನು ಪಳಗಿಸುವುದು ಒಳ್ಳೆಯದು ಪಳಗಿಸಲ್ಪಟ್ಟ ಮನಸ್ಸು ಸುಖಕಾರಿ.       (35)

ಗಾಥ ಪ್ರಸಂಗ 3:2
ಮನಸ್ಸನ್ನು ಓದುವ ಮಾತಿಕಾ ಮಾತಾ
                ಆರು ಭಿಕ್ಷುಗಳು ಬುದ್ಧರಿಂದ ಧ್ಯಾನದ ವಸ್ತು ಸ್ವೀಕರಿಸಿ ಪರ್ವತದ ಬುಡದ ಬಳಿಯಲ್ಲಿದ್ದ ಹಳ್ಳಿಗೆ ಧ್ಯಾನಿಸಲು ಹೊರಟರು. ಅಲ್ಲಿ ಮಾತಿಕಮಾತೆ ಎಂಬುವಳು ಹಳ್ಳಿಗೆ ಮುಖ್ಯಸ್ಥರಾಗಿದ್ದಳು. ಆಕೆ ಭಿಕ್ಷುಗಳಿಗಾಗಿ ಅವರ ಮಳೆಗಾಲದ ಆಶ್ರಯಕ್ಕಾಗಿ ನೆಲೆ ಮಾಡಿಕೊಟ್ಟಳು. ಭಿಕ್ಷುಗಳು ಅಲ್ಲೇ ಧ್ಯಾನಿಸಿ ವಾಸಿಸತೊಡಗಿದರು.
                ಒಮ್ಮೆ ಆಕೆಯು ಭಿಕ್ಷುಗಳಿಂದ ಧ್ಯಾನ ಕಲಿಯಲು ಇಚ್ಛಿಸಿದಳು. ಅವರು ಅಕೆಗೆ 32 ದೇಹ ಭಾಗಗಳನ್ನು ಧ್ಯಾನಿಸುವಂತಹ ಕಾಯಾಗತಸತಿ ಕಲಿಸಿದರು. ಆಕೆಯು ಶ್ರದ್ಧೆಯಿಂದ, ಪ್ರಯತ್ನದಿಂದ ಮತ್ತು ಪ್ರಜ್ಞಾದಿಂದ ದೇಹದ ಅನಿತ್ಯತೆ ಗಮನಿಸಿ ಅನಾಗಾಮಿತ್ವವನ್ನು ಪಡೆದಳು ಮತ್ತು ಅಷ್ಟೇ ಅಲ್ಲ, ಆಕೆ ಅಭಿಜ್ಞಾಶಕ್ತಿಯನ್ನು ಪಡೆದು ದಿವ್ಯಚಕ್ಷುವನ್ನು ಸಂಪಾದಿಸಿದಳು. ಅಂತಹುದನ್ನು ಇನ್ನೂ ಆ ಭಿಕ್ಷುಗಳೇ ಸಂಪಾದಿಸಿರಲಿಲ್ಲ.
                ಆಕೆ ತನ್ನ ದಿವ್ಯಚಕ್ಷುವಿನ ಸಹಾಯದಿಂದ ಭಿಕ್ಷುಗಳು ಇನ್ನೂ ಅರಹಂತರಾಗಿಲ್ಲ ಎಂದು ಅರಿತಳು. ಆಕೆಗೆ ಭಿಕ್ಷುಗಳು ಶಾರೀರಿಕವಾಗಿ ದುರ್ಬಲರಾಗಿದ್ದು, ಆದ್ದರಿಂದಲೆ ಅವರ ಮನಸ್ಸಿಗೆ ಶಾಂತಿ ಸಿಕ್ಕಿಲ್ಲ ಎಂದು ಅರಿತು ಆಕೆಯು ಅವರಿಗಾಗಿ ಪುಷ್ಟಿಯುತ ಸ್ವಾದಿಷ್ಟಕರ ಆಹಾರ ಮಾಡಿ ಬಡಿಸಲಾರಂಭಿಸಿದಳು. ಇದರಿಂದಾಗಿ ಭಿಕ್ಷುಗಳು ಶ್ರೇಷ್ಠವಾಗಿ ಅರಹಂತತ್ವ ಪ್ರಾಪ್ತಿ ಮಾಡಿದರು.
                ವಷರ್ಾವಾಸ ಮುಗಿದ ನಂತರ ಅವರು ಭಗವಾನರ ಬಳಿಗೆ ಬಂದು ಎಲ್ಲ ವಿಷಯವನ್ನು ಹೇಳಿದರು. ಒಬ್ಬ ಭಿಕ್ಷುವು ಈ ವಿಷಯ ತಿಳಿದು ಅತನು ಅಲ್ಲೇ ಧ್ಯಾನ ವಿಮುಕ್ತಿ ಸಾಧಿಸಲು ಭಗವಾನರಿಂದ ಧ್ಯಾನವಸ್ತು ಪಡೆದು ಆಕೆಯ ಮನೆಯಲ್ಲಿದ್ದು ಧ್ಯಾನವನ್ನು ಆರಂಭಿಸಿದನು. ಆತನಿಗೆ ಇಷ್ಟವಾದ ತಿಂಡಿಗಳೇ ಆಹಾರಗಳೇ ಆಕೆ ಬಡಿಸಿದಾಗ ಆತನಿಗೆ ಆಶ್ಚರ್ಯವಾಯಿತು. ಆತ ಆಕೆಗೆ ವಿಚಾರಿಸಿದಾಗ ಆಕೆ ಆತನ ಮನಸ್ಸು ಓದಿ ಸಿದ್ಧಪಡಿಸಿರುವುದಾಗಿ ಒಪ್ಪಿದಳು.

                ಆಗ ಆ ಭಿಕ್ಷುವು ಈ ರೀತಿ ಯೋಚಿಸಿದನು. ನಾನಿನ್ನೂ ಪ್ರಾಪಂಚಿಕನಾಗಿದ್ದೇನೆ, ನನ್ನಲ್ಲಿ ಇನ್ನೂ ಕಶ್ಮಲಗಳಿಂದ ಕೂಡಿದ ಪಾಪಯುತ ಯೋಚನೆಗಳೇ ಉದಯಿಸುತ್ತಿರುತ್ತವೆ. ಆಕೆಯೇನಾದರೂ ಅದನ್ನು ಓದಿದರೆ ನನ್ನ ಬಗ್ಗೆ ಕೆಟ್ಟದಾಗಿ ಯೋಚಿಸುವಳು ಹೀಗೆ ಯೋಚಿಸಿ ಭೀತನಾಗಿ ಆತನು ಜೇತವನಕ್ಕೆ ಹಿಂದಿರುಗಿದನು ಮತ್ತು ಬುದ್ಧರಿಗೆ ಎಲ್ಲಾ ವಿಷಯವನ್ನು ತಿಳಿಸಿದನು. ಆಗ ಬುದ್ಧರು ಆತನಿಗೆ ನಿನ್ನ ಮನಸ್ಸನ್ನು ನಿಯಂತ್ರಿಸು, ಧ್ಯಾನ ವಿಷಯವಲ್ಲದೆ ಮತ್ತೇನೂ ಯೋಚಿಸಬೇಡ ಎಂದು ತಿಳಿಸಿ ಕಳಿಸಿಕೊಟ್ಟರು. ಆತನು ಮನಸ್ಸನ್ನು ನಿಯಂತ್ರಿಸಿದ್ದರಿಂದಾಗಿ ಪ್ರಶಾಂತವಾಗಿ ಧ್ಯಾನಿಸಲಾರಂಭಿಸಿದನು. ಆತನು ಸ್ವಲ್ಪ ಕಾಲದಲ್ಲೇ ಚಿತ್ತಶುದ್ಧಿ ಪಡೆದು ಅರಹಂತನಾದನು.

dhammapada/cittavagga/3.1/meghiya

ಚಿತ್ತವಗ್ಗ

ಜ್ಞಾನಿಯು ಚಿತ್ತವನ್ನು ಬಲಿಷ್ಠಗೊಳಿಸುತ್ತಾನೆ
ಚಿತ್ತವು ಚಂಚಲವೂ, ಚಪಲವೂ ಆಗಿದೆ. ರಕ್ಷಿಸಲು ದುಷ್ಕರವು, ನಿಯಂತ್ರಿಸಲು ಕಷ್ಟಕರವೂ ಆಗಿದೆ. ಆದರೆ ಮೇಧಾವಿಗಳು ಬಿಲ್ಲುಗಾರನು ಬಾಣವನ್ನು ನೇರವಾಗಿಸುವಂತೆ ಚಿತ್ತವನ್ನು ನೇರವಾಗಿಟ್ಟುಕೊಳ್ಳುತ್ತಾನೆ.  (33)
ಹೇಗೆ ನೀರಿನಿಂದ ಮೀನನ್ನು ಎತ್ತಿ ನೆಲದಲ್ಲಿ ಬಿಟ್ಟಾಗ ಹೇಗೆ ಚಡಪಟಿಸುವುದೋ ಹಾಗೆಯೇ ಚಿತ್ತವೂ ತಲ್ಲಣಗೊಳ್ಳುತ್ತದೆ. ಆದ್ದರಿಂದ ಮಾರನ ಇಂದ್ರೀಯ ಕ್ಷೇತ್ರವನ್ನು ವಜರ್ಿಸಬೇಕು.            (34)

ಗಾಥ ಪ್ರಸಂಗ 3:1
ಮೇಘಿಯನ ಅನಿಯಂತ್ರಣ ಸ್ಥಿತಿ
                ಒಮ್ಮೆ ಮೇಘಿಯ ಭಿಕ್ಷುವು ಆಹಾರದ ಸ್ವೀಕಾರದ ನಂತರ ಸುಂದರ ಮತ್ತು ಹಿತಕರವಾದ ಮಾವಿನ ತೋಪನ್ನು ನೋಡಿದನು. ಆತನು ಅಲ್ಲಿ ಧ್ಯಾನಿಸಲು ಇಚ್ಛಿಸಿದನು. ಆತನು ಭಗವಾನರಲ್ಲಿಗೆ ಬಂದು ಅಲ್ಲಿ ಹೋಗುವ ಅಪ್ಪಣೆ ಕೇಳಿದನು. ಭಗವಾನರು ಕಾಯುವಂತೆ ಹೇಳಿದರು. ಆದರೆ ಆತನು ಅತಿ ಆತುರ ವ್ಯಕ್ತಪಡಿಸಿದಾಗ ಆತನಿಗೆ ಕಳುಹಿಸಿಕೊಟ್ಟರು.
                ನಂತರ ಮೇಘೀಯ ಧ್ಯಾನಿಸಲು ಆರಂಭಿಸಿದನು. ಅಲ್ಲಿ ಇಡೀದಿನ ಕಳೆದನು. ಆದರೆ ಆತನ ಮನಸ್ಸು ರಾಗ, ದ್ವೇಷ ಮತ್ತು ಭೋಗದಲ್ಲಿ ಬಿದ್ದುದರಿಂದಾಗಿ ಆತನು ಯಶಸ್ವಿಯಾಗಲಿಲ್ಲ. ಆತ ಸಂಜೆ ಭಗವಾನರ ಬಳಿಗೆ ಮರಳಿ ವಿಷಯ ತಿಳಿಸಿದನು. ತನಗೆ ಆಗುವ ಚದುರುವಿಕೆ, ಕ್ಷೊಭೆ ತಿಳಿಸಿದನು.
                ಆಗ ಭಗವಾನರು ಹೀಗೆ ಹೇಳಿದರು ಮೇಘಿಯ, ನೀನು ದೊಡ್ಡ ತಪ್ಪು ಮಾಡಿರುವೆ. ನಾನು ಕಾಯಲು ಹೇಳಿದರೂ ಸಹಾ ನೀನು ಹೊರಟೆ, ಒಬ್ಬ ಭಿಕ್ಷುವು ಹೀಗೆ ಮಾಡಬಾರದಿತ್ತು. ಈ ರೀತಿಯಾಗಿ ಅವಿಧೇಯತೆ ಇದ್ದಲ್ಲಿ ಆತ ಎಂದಿಗೂ ತನ್ನ ಮನಸ್ಸನ್ನು ನಿಯಂತ್ರಿಸಲಾರ. ಏಕೆಂದರೆ ಚಿತ್ತವು ಚಂಚಲವಾಗಿದೆ ಮತ್ತು ಜ್ಞಾನಿಯು ಸದಾ ನಿಯಂತ್ರಿಸುತ್ತಾನೆ ಎಂದು ಹೇಳಿ ಮೇಲಿನ ಗಾಥೆಗಳನ್ನು ಹೇಳಿದರು. ಆಗ ಮೇಘಿಯನು ಸೋತಪನ್ನನಾದನು ಮತ್ತು ಇತರರು ಸಕದಾಗಾಮಿ ಮತ್ತು ಅನಾಗಾಮಿಯಾದರು

Thursday, 15 January 2015

dhammapada/appamada/2.9/tissa

ಜಾಗೃತನು ನಿಬ್ಬಾಣಕ್ಕೆ ಸಮೀಪ
ಯಾವ ಭಿಕ್ಷು ಎಚ್ಚರಿಕೆಯಲ್ಲಿ ಆನಂದಿಸುತ್ತಾನೋ ಮತ್ತು ಅಲಕ್ಷದಲ್ಲಿ ಭಯಪಡುತ್ತಾನೋ ಆತನು ಕೆಳಗೆ ಬೀಳುವುದಿಲ್ಲ. ಆತನು ನಿಬ್ಬಾಣಕ್ಕೆ ಸಮೀಪವಾಗಿರುತ್ತಾನೆ.        (32)

ಗಾಥ ಪ್ರಸಂಗ 2:9
ತಿಸ್ಸನ ಸಂತೃಪ್ತಿ ವಿಕಾಸ
                ನಿಗಮವಾಸಿ ತಿಸ್ಸ ಶ್ರಾವಸ್ತಿಯಲ್ಲಿ ಹುಟ್ಟಿ ಬೆಳೆದಂತಹವ, ಆದರೆ ಭಿಕ್ಷುವಾದ ನಂತರ ಆತನು ಅತಿ ಸರಳ ಜೀವನ ನಡೆಸುತ್ತಿದ್ದನು. ಆಹಾರಕ್ಕಾಗಿ ಆತನು ಹತ್ತಿರ ಹಳ್ಳಿಗೆ ಹೋಗುತ್ತಿದ್ದನು. ಅಲ್ಲಿ ಸಂಬಂಧಿಕರ ಮನೆಯಲ್ಲಿ ಕೊಟ್ಟ ಆಹಾರವನ್ನು ಸ್ವೀಕರಿಸಿ ಜೀವಿಸುತ್ತಿದ್ದನು. ಆತನು ದೊಡ್ಡ ಸಮಾರಂಭಗಳಿಗೆ, ಸಂಭ್ರಮಗಳಿಗೆ ತಡೆಹಾಕುತ್ತಿದ್ದನು. ಅನಾಥಪಿಂಡಿಕನಂತ ದೊಡ್ಡ ಶ್ರೀಮಂತ ಮತ್ತು ರಾಜ ಪಸೇನದಿಯಂತಹವರು ಆಹಾರಕ್ಕಾಗಿ ಆಹ್ವಾನ ನೀಡಿದ್ದರೂ ಸಹಾ ಆತನು ಹೋಗುತ್ತಿರಲಿಲ್ಲ.
                ಕೆಲವು ಭಿಕ್ಷುಗಳು ಆತನ ಬಗ್ಗೆ ಮಾತುಗಳನ್ನು ಆಡಲಾರಂಭಿಸಿದರು. ಅವರು ತಿಸ್ಸ ಬಂಧುಗಳಿಗೆ ಅಂಟಿದ್ದಾನೆ, ಆದ್ದರಿಂದಲೇ ಆತನು ಅನಾಥಪಿಂಡಿಕ ಮತ್ತು ಕೋಶಲಾಧೀಶ ಪಸೇನದಿಯ ಬಳಿಗೆ ಹೋಗುತ್ತಿಲ್ಲ. ವಿಷಯವು ಬುದ್ಧರ ಬಳಿಗೂ ಬಂದಿತು. ಭಗವಾನರು ಆತನನ್ನು ಕರೆಸಿದರು ಹಾಗು ಕೇಳಿದರು ಭಿಕ್ಷು ಈ ಸುದ್ದಿ ನಿಜವೇ? ನೀನು ಹಾಗೆ ಸಂಬಂಧಿಕರ ನಡುವೆ ಬಾಂಧವ್ಯದ ಬಂಧನದಲ್ಲಿರುವೆಯಾ?
                ಭಗವಾನ್ ಇದು ನಿಜವಲ್ಲ. ನಾನು ಯಾರಿಗೂ ಅಂಟಿಲ್ಲ, ಹತ್ತಿರದಲ್ಲಿ ನನಗೆ ಸಿಗುವ ಅಲ್ಪ ಆಹಾರ ಅದು ಸ್ವಾದಿಷ್ಟವಾಗಿರಲಿ ಅಥವಾ ಚೆನ್ನಾಗಿಲ್ಲದಿರಬಹುದು ಅಷ್ಟರಲ್ಲೇ ತೃಪ್ತಿಹೊಂದಿ ನಾನು ಏಕಾಂತಕ್ಕೆ ತೆರಳಿ ಸಾಧನೆಯಲ್ಲಿ ತಲ್ಲೀನನಾಗುತ್ತೇನೆ.
                ಸಾಧು ಭಿಕ್ಷು ಸಾಧು ಎಂದು ಭಗವಾನರು ಹೀಗೆ ಹೇಳಿದರು ಇದರಲ್ಲಿ ಆಶ್ಚರ್ಯವಿಲ್ಲ, ಭಿಕ್ಷುಗಳೇ ಸಂತೃಪ್ತಿಯು ಸದಾ ಪ್ರಶಂಸನೀಯ, ಅಲ್ಪೇಚ್ಛೆಯುಳ್ಳ ಭಿಕ್ಷು ಸಹಾ ಸದಾ ಪ್ರಶಂಸನೀಯ. ಈಗ ನನ್ನ ಶಾಸನದಲ್ಲಿದ್ದು ಸಂತೃಪ್ತರಾಗಿರುವುದು ಸಹಜ. ಹಿಂದೆ ಪಂಡಿತರು ಬುದ್ಧಶಾಸನವಿಲ್ಲದಿದ್ದರೂ ಸಂತೃಪ್ತಿ ಸಾಧಿಸಿದ್ದಾರೆ.
                ಆಗ ಭಿಕ್ಷುಗಳು ವಿನಂತಿಸಿಕೊಂಡಾಗ ಭಗವಾನರು ಹಿಂದಿನ ಜಾತಕ ತಿಳಿಸಿದರು.
                ಬಹಳ ವರ್ಷಗಳ ಹಿಂದೆ ಹಿಮಾಲಯದ ಪ್ರಾಂತ್ಯದಲ್ಲಿ ಗಂಗಾ ತೀರದಲ್ಲಿ ಸಾವಿರಾರು ಗಿಳಿಗಳು ವಾಸವಾಗಿದ್ದವು. ಅವುಗಳಲ್ಲಿ ರಾಜಗಿಳಿಯು ಇತ್ತು. ರಾಜಗಿಳಿಯು ಆ ಮರಗಳ ಗುಂಪಿನಲ್ಲೇ ಆಶ್ರಯ ಪಡೆದಿತ್ತು. ಆ ಮರದಲ್ಲೇ ಸಿಗುವ ಹಣ್ಣುಗಳಿಂದ ತೃಪ್ತವಾಗಿತ್ತು. ಹಣ್ಣುಗಳು ಇಲ್ಲದ ವೇಳೆ ಎಲೆಗಳು ಮತ್ತು ನೀರು ಕುಡಿದು ಸಂತೃಪ್ತವಾಗಿತ್ತೇ ವಿನಃ ಅದು ಬೇರೊಂದು ಪ್ರದೇಶಕ್ಕೆ ಹೋಗಲಿಲ್ಲ. ಅದು ಇದ್ದಲ್ಲಿಯೇ ಇತ್ತು. ಅದು ಸಂತೃಪ್ತವಾಗಿ ಸಂತೋಷವಾಗಿ ಇತ್ತು. ಅದರ ಸಂತೃಪ್ತಿಗೆ ಇಂದ್ರನ ಸ್ಥಳವು ಕಂಪಿಸಿತು. ಸಕ್ಕನು ಅದರ ಸಂತೃಪ್ತಿ ಕಂಡು ಇಡೀ ಅರಣ್ಯವನ್ನು ಹಸಿರಿನಿಂದ ಮತ್ತು ಫಲಭರಿತವನ್ನಾಗಿಸಿದನು.

                ಹೀಗೆ ಭಗವಾನರು ತಮ್ಮ ಹಿಂದಿನ ಜನ್ಮದಲ್ಲಿಯೂ ಸಂತುಷ್ಟರಾಗಿದ್ದರು. ಈ ಶುಭ ಸಂದರ್ಭದಲ್ಲಿ ಭಗವಾನರು ಈ ಗಾಥೆಯನ್ನು ನುಡಿದರು.

dhammapada/appamadavagga/2.8/mindful

ಜಾಗೃತನು ಉನ್ನತಿಗೇರುತ್ತಾನೆ
ಎಚ್ಚರಿಕೆಯಲ್ಲಿ ಆನಂದಿಸುವ ಭಿಕ್ಷುವು ಎಚ್ಚರಿಕೆಯಿಲ್ಲದಿರುವಿಕೆಯಲ್ಲಿ ಭಯಪಡುತ್ತಾನೆ. ಆತನು ಅಗ್ನಿಯಂತೆ ಎಲ್ಲಾ ಸಣ್ಣ ದೊಡ್ಡ ಸಂಕೋಲೆಗಳನ್ನು ಸುಡುತ್ತಾ ಮುಂದುವರೆಯುತ್ತಾನೆ.        (31)

ಗಾಥ ಪ್ರಸಂಗ 2:8
ಕಾಡಾಗ್ನಿಯಂತೆ ದಹಿಸು ನೀ ಎಲ್ಲಾ ಬಂಧನಗಳನ್ನು
                ಒಮ್ಮೆ ಒಬ್ಬ ಭಿಕ್ಷು ಬುದ್ಧರಿಂದ ಧ್ಯಾನದ ವಿಷಯವನ್ನು ಪಡೆದು ಅರಣ್ಯದಲ್ಲಿ ಧ್ಯಾನ ಮಾಡತೊಡಗಿದನು. ಆತನು ಕಠಿಣವಾಗಿಯೆ ಪರಿಶ್ರಮಿಸಿ ಧ್ಯಾನಿಸಿದನು. ಆದರೂ ಧ್ಯಾನದಲ್ಲಿ ಅತ್ಯಲ್ಪ ಲಾಭವನ್ನು ಗಳಿಸಿದನು. ಪರಿಣಾಮವಾಗಿ ಕುಗ್ಗಿದ ಆತನು ನಿರಾಶನಾದನು. ಆತನು ಬುದ್ಧರಿಂದ ಮತ್ತಷ್ಟು ಮಾಹಿತಿ ಪಡೆಯುವ ಉದ್ದೇಶದಿಂದ ಜೇತವನ ವಿಹಾರಕ್ಕೆ ಬರತೊಡಗಿದನು. ದಾರಿಯಲ್ಲಿ ದೊಡ್ಡ ಕಾಡ್ಗಿಚ್ಚು ಹಬ್ಬಿತ್ತು. ಆತನು ಒಂದು ದೊಡ್ಡ ಬೆಟ್ಟವೇರಿದನು. ಅಲ್ಲಿಂದ ಬೆಂಕಿಯನ್ನು ವೀಕ್ಷಿಸಿದನು. ಆ ಬೆಂಕಿಯು ಸಣ್ಣದನ್ನು, ದೊಡ್ಡದನ್ನು, ಯಾವುದನ್ನೂ ಬಿಡದೆ ದಹಿಸುತ್ತಿತ್ತು. ಇದನ್ನು ಕಂಡ ಆತನು ಚಿಂತನೆಗೆ ಜಾರಿದನು. ಹೇಗೆ ಬೆಂಕಿಯು ಎಲ್ಲವನ್ನು ದಹಿಸುತ್ತಿದೆಯೋ ಹಾಗೆಯೇ ನಾನು ಸಹಾ ನನ್ನ ಪ್ರಜ್ಞಾಶಕ್ತಿಯಿಂದ, ವೀರ್ಯಬಲದಿಂದ ಸಣ್ಣ ಮತ್ತು ದೊಡ್ಡ ಬಂಧನಗಳನ್ನೆಲ್ಲಾ ಸುಟ್ಟು ಹಾಕಿದರೆ ಹೇಗೆ?
                ಆ ಕ್ಷಣದಲ್ಲೇ ಆತನ ಉದಾತ್ತ ಯೋಚನೆಯು ಬುದ್ಧರಿಗೆ ಗೊತ್ತಾಯಿತು. ಅವರು ತಕ್ಷಣ ತೇಜೋಸ್ವರೂಪಿಯಾಗಿ ಆತನ ಮುಂದೆ ಪ್ರತ್ಯಕ್ಷರಾದರು ಮತ್ತು ಹೀಗೆ ಹೇಳಿದರು: ನೀನು ನಿಜವಾಗಿಯೂ ಯೋಗ್ಯವಾದ ಹಾದಿಯಲ್ಲೇ ಇದ್ದೀಯೆ. ಅದೇರೀತಿ ಚಿಂತಿಸು, ಮುಂದುವರೆಸು, ಹಾಗೇ ಮಾಡು. ಹೇಗೆ ಬೆಂಕಿಯು ಚಿಕ್ಕ ಮತ್ತು ದೊಡ್ಡದೆನ್ನದೆ ಎಲ್ಲವನ್ನು ಸುಟ್ಟು ಹಾಕುವುದೋ ಹಾಗೆಯೇ ಓ ಭಿಕ್ಷು ನೀನು ಹಾಗೇ ಮಾಡು. ಜಾಗರೂಕತೆಯಲ್ಲಿ ಭಯಪಡುವ ಭಿಕ್ಷುವು ಎಲ್ಲಾ ಬಂಧನಗಳನ್ನು ಸುಟ್ಟುಹಾಕುತ್ತಾನೆ.

                ಆ ಭಿಕ್ಷು ಸ್ಫೂತರ್ಿ ಹೊಂದಿ, ಧ್ಯಾನಿಸಿ, ಜ್ಞಾನೋದಯ ಹೊಂದಿ ಅರಹಂತತ್ವ ಪಡೆದನು. ಆಗ ಬುದ್ಧರು ಹೇಳುವ ಗಾಥೆಯಿದು.

dhammapada/appamadavagga/2.7/sakka

ಎಚ್ಚರಿಕೆಯಿಂದ ಇಂದ್ರನಾಗುತ್ತಾನೆ
ಎಚ್ಚರಿಕೆಯಿಂದಲೇ ಮಾಘವನು (ಇಂದ್ರ) ದೇವತೆಗಳಲ್ಲಿ ಶ್ರೇಷ್ಠನಾದನು, ಎಚ್ಚರಿಕೆಯು ಸದಾ ಪ್ರಶಂಸನೀಯ, ಎಚ್ಚರಿಕೆಹೀನತೆಯು ಸದಾ ನಿಂದನೀಯ.        (30)

ಗಾಥ ಪ್ರಸಂಗ 2:7
ಮೇಘ ಸಕ್ಕನಾದುದು
                ಒಂದುದಿನ ಲಿಚ್ಚವಿ ರಾಜಕುಮಾರನಾದ ಮಹಾಲಿಯು ಬುದ್ಧರಿಂದ ಧಮ್ಮೋಪದೇಶವನ್ನು ಕೇಳಿದನು. ಆ ಸುತ್ತವೇ ಸಕ್ಕಪನ್ಹಾಸುತ್ತ. ಅದರಲ್ಲಿ ಬುದ್ಧರು ಶಕ್ರನ (ದೇವೇಂದ್ರ) ಯಶಸ್ಸಿನ ಬಗ್ಗೆ ಹೇಳಿದರು. ಆಗ ಮಹಾಲಿಯು ಬುದ್ಧರು ಖಂಡಿತವಾಗಿ ಇಂದ್ರನನ್ನು ನೋಡಿದ್ದಾರೆ ಎಂದು ಚಿಂತಿಸಿದನು. ಅದನ್ನು ದೃಢಪಡಿಸಿ ಕೊಳ್ಳಲು ಆತನು ಬುದ್ಧರಿಗೆ ಭಗವಾನ್ ತಾವು ಸಕ್ಕನನ್ನು ಕಂಡಿದ್ದೀರಿ ಅಲ್ಲವೇ? ಎಂದು ಪ್ರಶ್ನಿಸಿದನು. ಅದಕ್ಕೆ ಭಗವಾನರು ಹೌದು ಮಹಾಲಿ, ನಾನು ಕಂಡಿದ್ದೇನೆ, ಅಷ್ಟೇ ಅಲ್ಲ, ಸಕ್ಕನಾಗಲು ಬೇಕಾದ ಗುಣಗಳನ್ನು ಬಲ್ಲೆ. ಅವರನ್ನು ಪೂರ್ಣಗೊಳಿಸಿದಾಗಲೇ ಸಕ್ಕ ಸ್ಥಿತಿ ಪ್ರಾಪ್ತಿಯಾಗುತ್ತದೆ. ಮಹಾಲಿ, ಸಕ್ಕನು ಹಿಂದಿನ ಜನ್ಮದಲ್ಲಿ ಮೇಘ ಎಂಬ ಹೆಸರನ್ನು ಹೊಂದಿದ್ದನು. ಆದ್ದರಿಂದಲೇ ಆತನಿಗೆ ಮಾಘವ ಎನ್ನುತ್ತಾರೆ. ಆತ ಆಗ ದಾನಿಯಾಗಿದ್ದರಿಂದ ಆತನಿಗೆ ಪುರಿಂದದ ಎನ್ನುತ್ತಾರೆ. ಆತ ಹಿಂದೆ ಆಹಾರ ದಾನ ನೀಡಿದ್ದರಿಂದ ಸಕ್ಕ ಎನ್ನುತ್ತಾರೆ. ಆತ ಹಿಂದೆ ವಾಸಸ್ಥಳವನ್ನು ದಾನ ನೀಡಿದ್ದರಿಂದ ಆತನನ್ನು ವಾಸವಾ ಎನ್ನುತ್ತಾರೆ. ಆತ ಕ್ಷಣದಲ್ಲಿ ಸಹಸ್ರ ವಿಷಯ ಯೋಚಿಸಬಲ್ಲ ನಾದುದ್ದರಿಂದ ಆತನಿಗೆ ಸಹಸ್ರಾಕ್ಷ ಎನ್ನುತ್ತಾರೆ. ಆತನು 33 ದೇವತೆಗಳಿಗೆ ನಾಯಕನಾದ್ದರಿಂದ ಆತನಿಗೆ ದೇವೇಂದ್ರ ಎನ್ನುತ್ತಾರೆ. ಆತ ಹಿಂದಿನ ಜನ್ಮದಲ್ಲಿ 7 ಶೀಲಗಳನ್ನು ಪಾಲಿಸುತ್ತಿದ್ದನು. ಅದೆಂದರೆ: ಮಾತಾಪಿತರನ್ನು ಸಲಹುವಿಕೆ, ವೃದ್ಧರಿಗೆ ಗೌರವಿಸುವಿಕೆ, ಯೋಗ್ಯ ಸಂಭಾಷಣೆ, ಚಾಡಿ ಇಲ್ಲದಿರುವಿಕೆ, ಸ್ವಾರ್ಥವಿಲ್ಲದಿರುವಿಕೆ ದಾನಿಯಾಗಿರುವಿಕೆ, ಸದಾ ಸತ್ಯವಚನ ನುಡಿಯುವಿಕೆ, ಕೋಪವಿಲ್ಲದಿರುವಿಕೆ ಹೀಗೆ ಆತನು ಸದ್ಗುಣ ಸಂಪನ್ನನಾಗಿದ್ದರಿಂದ ಆತನು ಇಂದ್ರನಾದನು. ಆದ್ದರಿಂದ ಕುಶಲಸ್ಥಿತಿಗಳಲ್ಲಿ ಜಾಗರೂಕನಾಗು ಎಂದು ಹೇಳಿ ಮೇಲಿನ ಗಾಥೆ ನುಡಿದರು