Thursday, 29 January 2015

dhammapada/cittavagga/3.4/sangharakkitha

ಚಿತ್ತವನ್ನು ನಿಯಂತ್ರಿಸಿದವರು ಮುಕ್ತರಾಗುತ್ತಾರೆ
ದೂರದವರೆಗೂ ಏಕಾಂಗಿಯಾಗಿ ಚಲಿಸುವಂತಹುದು ಅಶರೀರಿಯು, ಗವಿಯಲ್ಲಿ ಮಲಗಿರುವಂತಹ ಚಿತ್ತವನ್ನು ದಮಿಸಿದವರು ಮಾರನ ಬಂಧನದಿಂದ ಮುಕ್ತರಾಗುತ್ತಾರೆ.  (37)
ಗಾಥ ಪ್ರಸಂಗ 3:4
ಸಂಘರಕ್ಖಿತನ ಚಿತ್ತದ ಅಲೆದಾಟ

                ಶ್ರಾವಸ್ತಿಯಲ್ಲಿ ಸಂಘರಕ್ಖಿತನೆಂಬ ಹಿರಿಯ ಭಿಕ್ಷುಗಳಿದ್ದರು. ಅವರ ತಂಗಿಗೂ ಒಬ್ಬ ಮಗ ಹುಟ್ಟಿದಾಗ ಆತನ ಹೆಸರು ಸಂಘರಕ್ಖಿತ ಭಗಿನೆಯ್ಯನೆಂದು ಇಟ್ಟರು. ಕಾಲನಂತರ ಸಂಘರಕ್ಖಿತ ಭಗಿನೆಯ್ಯ ಸಹಾ ಸಂಘಕ್ಕೆ ಸೇರಿದನು. ಒಮ್ಮೆ ಈ ಕಿರಿಯ ಭಿಕ್ಷುವಿಗೆ ಎರಡು ಚೀವರಗಳನ್ನು ಯಾರೋ ದಾನ ಮಾಡಿದರು. ಆಗ ಆತನು ಒಂದನ್ನು ತನ್ನ ಸೋದರಮಾವನಿಗೆ ನೀಡಲು ಇಚ್ಛಿಸಿದನು. ವಷರ್ಾವಾಸದ ಕೊನೆಯಲ್ಲಿ ಆತನು ತನ್ನ ಸೋದರಮಾವನನ್ನು ಭೇಟಿಮಾಡಿ ಚೀವರವನ್ನು ನೀಡಲು ಹೋದಾಗ ಅವರು ತನ್ನಲ್ಲಿದೆ ಎಂದು ಹೇಳಿ ನಿರಾಕರಿಸಿದರು. ಆಗ ಕಿರಿಯ ಭಿಕ್ಷುವಿಗೆ ನಿರಾಸೆಯಾಗಿ ಸಂಘ ತ್ಯಜಿಸಿ ಗೃಹಸ್ಥನಾಗಲು ಯೋಚನೆಗಳು ಪ್ರಚೋದಿಸಿದವು.
                ಆತ ಹಾಗೇ ಯೋಚಿಸಲಾರಂಭಿಸಿದನು. ಚೀವರವನ್ನು ಮಾರಿ ಒಂದು ಮೇಕೆ ಕೊಳ್ಳುವುದು, ಅದು ಸ್ವಲ್ಪ ಕಾಲದಲ್ಲಿ ಮರಿ ಹಾಕುವುದು. ಅದರಿಂದ ಹೇರಳ ಹಣ ಸಿಗುವುದು, ನಂತರ ವಿವಾಹವಾಗುವುದು. ಕಾಲನಂತರ ತನಗೆ ಒಂದು ಮಗುವು ಆಗುತ್ತದೆ. ಆಗ ತಾನು ಪತ್ನಿ ಪುತ್ರರೊಂದಿಗೆ ವಿಹಾರದಲ್ಲಿರುವ ತನ್ನ ಮಾವನನ್ನು ನೋಡಲು ಬರುತ್ತೇನೆ. ದಾರಿಯಲ್ಲಿ ಆತನು ಮಗುವನ್ನು ಎತ್ತಿಕೊಂಡಾಗ, ಆತನ ಪತ್ನಿಯು ಮಗುವಿನ ಬಗ್ಗೆ ಚಿಂತಿಸಬೇಡ, ಬಂಡಿಯನ್ನು ಓಡಿಸು ಎನ್ನುತ್ತಾಳೆ. ಆದರೆ ಪ್ರತಿರೋಧ ವ್ಯಕ್ತಪಡಿಸಿ ಮಗುವನ್ನು ಕಿತ್ತುಕೊಳ್ಳಲು ಹೋಗುತ್ತಾನೆ. ಇವರಿಬ್ಬರ ಕಿತ್ತಾಟದಿಂದ ಮಗುವು ಬಂಡಿಯಿಂದ ಕೆಳಗೆ ಬಿದ್ದು, ಚಕ್ರವು ಅದರ ಮೇಲೆ ಹರಿಯುತ್ತದೆ. ಆಗ ಆತನು ಕ್ರೋಧಿತನಾಗಿ ಚಾಟಿಯಿಂದ ಪತ್ನಿಗೆ ಹೊಡೆಯುತ್ತಾನೆ. ಹೀಗೆ ಆತನು ಹಗಲು ಕನಸು ಕಾಣುತ್ತಿರುವ ವೇಳೆ ತನ್ನ ಸೋದರಮಾವನಿಗೆ ಬೀಸಣಿಗೆ ಬೀಸುತ್ತಿದ್ದನು. ಆದರೆ ಕಲ್ಪನೆಯ ಹೆಂಡತಿಗೆ ಹೊಡೆಯುವ ಬದಲು, ತನ್ನ ಸೋದರಮವನಿಗೆ ಬೀಸಣಿಗೆಯಿಂದ ಹೊಡೆದಿದ್ದ. ಸೋದರಮಾವನು ಬೆಚ್ಚಿಬಿದ್ದು ಆತನ ಮನಸ್ಸನ್ನು ಓದಿದನು. ನಂತರ ಹೀಗೆ ಹೇಳಿದನು.
                ನಿನ್ನ ಹೆಂಡತಿಗೆ ಹೊಡೆಯಲು ಅಸಮರ್ಥನಾಗಿದ್ದೀಯೆ, ಆದರೆ ವೃದ್ಧ ಭಿಕ್ಷುವಿಗೇಕೆ ಹೊಡೆಯುವೆ?

                ಇದನ್ನು ಆಲಿಸಿದ ಕಿರಿಯ ಭಿಕ್ಷುವು ಭಯಾಶ್ಚರ್ಯದಿಂದ ಕೂಡಿ ಅಲ್ಲಿಂದ ಪರಾರಿಯಾದನು. ಇತರ ಕಿರಿಯ ಭಿಕ್ಷುಗಳು ಆತನನ್ನು ಹಿಡಿದು ಭಗವಾನರ ಬಳಿ ನಿಲ್ಲಿಸಿದರು. ಆಗ ಭಗವಾನರು ಮನಸ್ಸಿನ ಸ್ವರೂಪ ವಿವರಿಸಿ ಈ ಮೇಲಿನ ಗಾಥೆ ನುಡಿದರು. ಆಗ ಆತನು ಸೋತಪನ್ನನಾಗುತ್ತಾನೆ.

No comments:

Post a Comment