Thursday, 29 January 2015

dhammapada/cittavagga/3.2/mathikamata

ನಿಮ್ಮ ಮನಸ್ಸನ್ನು ನಿಯಂತ್ರಿಸಿ
ಮನಸ್ಸನ್ನು ನಿಯಂತ್ರಿಸುವುದು ಕಷ್ಟಕರ, ವೇಗವಾಗಿ ಚಲಿಸುವಂತಹುದು, ಇಷ್ಟವಿರುವ ಕಡೆಗೆ ಚಲಿಸುವಂತಹುದು. ಅದನ್ನು ಪಳಗಿಸುವುದು ಒಳ್ಳೆಯದು ಪಳಗಿಸಲ್ಪಟ್ಟ ಮನಸ್ಸು ಸುಖಕಾರಿ.       (35)

ಗಾಥ ಪ್ರಸಂಗ 3:2
ಮನಸ್ಸನ್ನು ಓದುವ ಮಾತಿಕಾ ಮಾತಾ
                ಆರು ಭಿಕ್ಷುಗಳು ಬುದ್ಧರಿಂದ ಧ್ಯಾನದ ವಸ್ತು ಸ್ವೀಕರಿಸಿ ಪರ್ವತದ ಬುಡದ ಬಳಿಯಲ್ಲಿದ್ದ ಹಳ್ಳಿಗೆ ಧ್ಯಾನಿಸಲು ಹೊರಟರು. ಅಲ್ಲಿ ಮಾತಿಕಮಾತೆ ಎಂಬುವಳು ಹಳ್ಳಿಗೆ ಮುಖ್ಯಸ್ಥರಾಗಿದ್ದಳು. ಆಕೆ ಭಿಕ್ಷುಗಳಿಗಾಗಿ ಅವರ ಮಳೆಗಾಲದ ಆಶ್ರಯಕ್ಕಾಗಿ ನೆಲೆ ಮಾಡಿಕೊಟ್ಟಳು. ಭಿಕ್ಷುಗಳು ಅಲ್ಲೇ ಧ್ಯಾನಿಸಿ ವಾಸಿಸತೊಡಗಿದರು.
                ಒಮ್ಮೆ ಆಕೆಯು ಭಿಕ್ಷುಗಳಿಂದ ಧ್ಯಾನ ಕಲಿಯಲು ಇಚ್ಛಿಸಿದಳು. ಅವರು ಅಕೆಗೆ 32 ದೇಹ ಭಾಗಗಳನ್ನು ಧ್ಯಾನಿಸುವಂತಹ ಕಾಯಾಗತಸತಿ ಕಲಿಸಿದರು. ಆಕೆಯು ಶ್ರದ್ಧೆಯಿಂದ, ಪ್ರಯತ್ನದಿಂದ ಮತ್ತು ಪ್ರಜ್ಞಾದಿಂದ ದೇಹದ ಅನಿತ್ಯತೆ ಗಮನಿಸಿ ಅನಾಗಾಮಿತ್ವವನ್ನು ಪಡೆದಳು ಮತ್ತು ಅಷ್ಟೇ ಅಲ್ಲ, ಆಕೆ ಅಭಿಜ್ಞಾಶಕ್ತಿಯನ್ನು ಪಡೆದು ದಿವ್ಯಚಕ್ಷುವನ್ನು ಸಂಪಾದಿಸಿದಳು. ಅಂತಹುದನ್ನು ಇನ್ನೂ ಆ ಭಿಕ್ಷುಗಳೇ ಸಂಪಾದಿಸಿರಲಿಲ್ಲ.
                ಆಕೆ ತನ್ನ ದಿವ್ಯಚಕ್ಷುವಿನ ಸಹಾಯದಿಂದ ಭಿಕ್ಷುಗಳು ಇನ್ನೂ ಅರಹಂತರಾಗಿಲ್ಲ ಎಂದು ಅರಿತಳು. ಆಕೆಗೆ ಭಿಕ್ಷುಗಳು ಶಾರೀರಿಕವಾಗಿ ದುರ್ಬಲರಾಗಿದ್ದು, ಆದ್ದರಿಂದಲೆ ಅವರ ಮನಸ್ಸಿಗೆ ಶಾಂತಿ ಸಿಕ್ಕಿಲ್ಲ ಎಂದು ಅರಿತು ಆಕೆಯು ಅವರಿಗಾಗಿ ಪುಷ್ಟಿಯುತ ಸ್ವಾದಿಷ್ಟಕರ ಆಹಾರ ಮಾಡಿ ಬಡಿಸಲಾರಂಭಿಸಿದಳು. ಇದರಿಂದಾಗಿ ಭಿಕ್ಷುಗಳು ಶ್ರೇಷ್ಠವಾಗಿ ಅರಹಂತತ್ವ ಪ್ರಾಪ್ತಿ ಮಾಡಿದರು.
                ವಷರ್ಾವಾಸ ಮುಗಿದ ನಂತರ ಅವರು ಭಗವಾನರ ಬಳಿಗೆ ಬಂದು ಎಲ್ಲ ವಿಷಯವನ್ನು ಹೇಳಿದರು. ಒಬ್ಬ ಭಿಕ್ಷುವು ಈ ವಿಷಯ ತಿಳಿದು ಅತನು ಅಲ್ಲೇ ಧ್ಯಾನ ವಿಮುಕ್ತಿ ಸಾಧಿಸಲು ಭಗವಾನರಿಂದ ಧ್ಯಾನವಸ್ತು ಪಡೆದು ಆಕೆಯ ಮನೆಯಲ್ಲಿದ್ದು ಧ್ಯಾನವನ್ನು ಆರಂಭಿಸಿದನು. ಆತನಿಗೆ ಇಷ್ಟವಾದ ತಿಂಡಿಗಳೇ ಆಹಾರಗಳೇ ಆಕೆ ಬಡಿಸಿದಾಗ ಆತನಿಗೆ ಆಶ್ಚರ್ಯವಾಯಿತು. ಆತ ಆಕೆಗೆ ವಿಚಾರಿಸಿದಾಗ ಆಕೆ ಆತನ ಮನಸ್ಸು ಓದಿ ಸಿದ್ಧಪಡಿಸಿರುವುದಾಗಿ ಒಪ್ಪಿದಳು.

                ಆಗ ಆ ಭಿಕ್ಷುವು ಈ ರೀತಿ ಯೋಚಿಸಿದನು. ನಾನಿನ್ನೂ ಪ್ರಾಪಂಚಿಕನಾಗಿದ್ದೇನೆ, ನನ್ನಲ್ಲಿ ಇನ್ನೂ ಕಶ್ಮಲಗಳಿಂದ ಕೂಡಿದ ಪಾಪಯುತ ಯೋಚನೆಗಳೇ ಉದಯಿಸುತ್ತಿರುತ್ತವೆ. ಆಕೆಯೇನಾದರೂ ಅದನ್ನು ಓದಿದರೆ ನನ್ನ ಬಗ್ಗೆ ಕೆಟ್ಟದಾಗಿ ಯೋಚಿಸುವಳು ಹೀಗೆ ಯೋಚಿಸಿ ಭೀತನಾಗಿ ಆತನು ಜೇತವನಕ್ಕೆ ಹಿಂದಿರುಗಿದನು ಮತ್ತು ಬುದ್ಧರಿಗೆ ಎಲ್ಲಾ ವಿಷಯವನ್ನು ತಿಳಿಸಿದನು. ಆಗ ಬುದ್ಧರು ಆತನಿಗೆ ನಿನ್ನ ಮನಸ್ಸನ್ನು ನಿಯಂತ್ರಿಸು, ಧ್ಯಾನ ವಿಷಯವಲ್ಲದೆ ಮತ್ತೇನೂ ಯೋಚಿಸಬೇಡ ಎಂದು ತಿಳಿಸಿ ಕಳಿಸಿಕೊಟ್ಟರು. ಆತನು ಮನಸ್ಸನ್ನು ನಿಯಂತ್ರಿಸಿದ್ದರಿಂದಾಗಿ ಪ್ರಶಾಂತವಾಗಿ ಧ್ಯಾನಿಸಲಾರಂಭಿಸಿದನು. ಆತನು ಸ್ವಲ್ಪ ಕಾಲದಲ್ಲೇ ಚಿತ್ತಶುದ್ಧಿ ಪಡೆದು ಅರಹಂತನಾದನು.

No comments:

Post a Comment