Thursday, 15 January 2015

dhammapada/appamadavagga/2.6/2 bhikkus

ಮೇಧಾವಿಗಳು ಮೂರ್ಖರನ್ನು ದಾಟಿ ಹೋಗುತ್ತಾರೆ
ಅಲಕ್ಷವುಳ್ಳವರ ನಡುವೆ ಎಚ್ಚರಿಕೆವುಳ್ಳವನಾಗಿ, ನಿದ್ದೆ ಹೋಗುವವರ ನಡುವೆ ಬಹುಜಾಗಾರೂಕನಾಗಿ, ಮೇಧಾವಿಯು ಮುದಿ ಕುದರೆಯನ್ನು ದಾಟಿ ಓಡುವ ಪಂದ್ಯಾಟದ ಕುದುರೆಯಂತೆ ಮೂರ್ಖನನ್ನು ದಾಟಿ ಹೋಗುವನು.        (29)

ಗಾಥ ಪ್ರಸಂಗ 2:6
ಇಬ್ಬರು ಭಿಕ್ಷುಗಳ ಧಮ್ಮದ ಜೀವನ
                ಇಬ್ಬರು ಭಿಕ್ಷುಗಳು ಬುದ್ಧರಿಂದ ಧ್ಯಾನ ವಿಷಯವನ್ನು ಪಡೆದು ಅಡವಿಗೆ ಧ್ಯಾನಿಸಲು ಹೋದರು. ಅವರಲ್ಲಿ ಒಬ್ಬ ಅಲಕ್ಷದಿಂದ ಕೂಡಿದ್ದನು. ತನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದನು. ಆತ ರಾತ್ರಿಯ ಮೊದಲ ಭಾಗವನ್ನು ಬೆಂಕಿಯಿಂದ ಕಾಯಿಸಿಕೊಳ್ಳುತ್ತಾ ಕಿರಿಯ ಸಮಣೇರರೊಡನೆ ಮಾತನಾಡುತ್ತ, ನಿಂದಿಸುತ್ತಾ ಕಾಲಕಳೆಯುತ್ತಿದ್ದನು. ಆದರೆ ಮತ್ತೊಬ್ಬ ಭಿಕ್ಷು ತನ್ನ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡುತ್ತಿದ್ದನು. ಆತ ರಾತ್ರಿಯ ಪ್ರಥಮ ಭಾಗವನ್ನು (6-10) ನಡಿಗೆಯ ಧ್ಯಾನದಲ್ಲಿ ಕಳೆಯುತ್ತಿದ್ದನು. ರಾತ್ರಿಯ ಎರಡನೆಯ (10-2) ಭಾಗದಲ್ಲಿ ನಿದ್ರಿಸಿ ಮತ್ತು ರಾತ್ರಿಯ ಕೊನೆಯ ಭಾಗದಲ್ಲಿ (2-6) ಧ್ಯಾನಿಸುತ್ತಿದ್ದನು. ಹೀಗಾಗಿ ಆ ಪರಿಶ್ರಮಿ ಭಿಕ್ಷು ಸದಾ ಜಾಗರೂಕನಾಗಿ ಅಲ್ಪಕಾಲದಲ್ಲೇ ಅರಹಂತನಾದನು.
                ವರ್ಷಕಾಲದ ನಂತರ ಇಬ್ಬರೂ ಬುದ್ಧರಿಗೆ ವಂದಿಸಲು ಹೊರಟರು. ಆಗ ಬುದ್ಧರು ಅವರಿಗೆ ಸಮಯವನ್ನು ಹೇಗೆ ಕಳೆದಿರಿ ಎಂದು ವಿಚಾರಿಸಿದಾಗ ಸೋಮಾರಿ ಭಿಕ್ಷುವು ಜಾಗರೂಕನಿಗೆ ತೋರಿಸಿ ಈತ ನಿದ್ರೆ, ಸೋಮಾರಿತನದಿಂದಲೇ ಕಾಲ ಕಳೆದಿದ್ದಾನೆ, ಆದರೆ ನಾನು ಬೆಂಕಿ ಕಾಯಿಸುತ್ತಾ ನಿದ್ರೆ ಹೋಗದೆ ಕುಳಿತಿದ್ದೆ ಎಂದನು. ಆಗ ಭಗವಾನರಿಗೆ ಆತನ ಸುಳ್ಳು ಅರಿವಾಗಿ ಹೀಗೆ ನುಡಿದರು ಸೋಮಾರಿಯಾಗಿದ್ದರೂ ಶ್ರಮಶೀಲನೆಂದು ಹೊಗಳಿಕೊಳ್ಳುತ್ತೀ, ಆದರೆ ನೀನು ಸೋಮಾರಿ ಎಂದು ತೋರಿಸುವ ಭಿಕ್ಷು ಮಾತ್ರ ಅರಹಂತನಾಗಿದ್ದಾನೆ ಎಂದು ಹೇಳಿ ಮೇಲಿನ ಗಾಥೆ ನುಡಿದರು

No comments:

Post a Comment