Thursday, 15 January 2015

dhammapada/appamadavagga/2.7/sakka

ಎಚ್ಚರಿಕೆಯಿಂದ ಇಂದ್ರನಾಗುತ್ತಾನೆ
ಎಚ್ಚರಿಕೆಯಿಂದಲೇ ಮಾಘವನು (ಇಂದ್ರ) ದೇವತೆಗಳಲ್ಲಿ ಶ್ರೇಷ್ಠನಾದನು, ಎಚ್ಚರಿಕೆಯು ಸದಾ ಪ್ರಶಂಸನೀಯ, ಎಚ್ಚರಿಕೆಹೀನತೆಯು ಸದಾ ನಿಂದನೀಯ.        (30)

ಗಾಥ ಪ್ರಸಂಗ 2:7
ಮೇಘ ಸಕ್ಕನಾದುದು
                ಒಂದುದಿನ ಲಿಚ್ಚವಿ ರಾಜಕುಮಾರನಾದ ಮಹಾಲಿಯು ಬುದ್ಧರಿಂದ ಧಮ್ಮೋಪದೇಶವನ್ನು ಕೇಳಿದನು. ಆ ಸುತ್ತವೇ ಸಕ್ಕಪನ್ಹಾಸುತ್ತ. ಅದರಲ್ಲಿ ಬುದ್ಧರು ಶಕ್ರನ (ದೇವೇಂದ್ರ) ಯಶಸ್ಸಿನ ಬಗ್ಗೆ ಹೇಳಿದರು. ಆಗ ಮಹಾಲಿಯು ಬುದ್ಧರು ಖಂಡಿತವಾಗಿ ಇಂದ್ರನನ್ನು ನೋಡಿದ್ದಾರೆ ಎಂದು ಚಿಂತಿಸಿದನು. ಅದನ್ನು ದೃಢಪಡಿಸಿ ಕೊಳ್ಳಲು ಆತನು ಬುದ್ಧರಿಗೆ ಭಗವಾನ್ ತಾವು ಸಕ್ಕನನ್ನು ಕಂಡಿದ್ದೀರಿ ಅಲ್ಲವೇ? ಎಂದು ಪ್ರಶ್ನಿಸಿದನು. ಅದಕ್ಕೆ ಭಗವಾನರು ಹೌದು ಮಹಾಲಿ, ನಾನು ಕಂಡಿದ್ದೇನೆ, ಅಷ್ಟೇ ಅಲ್ಲ, ಸಕ್ಕನಾಗಲು ಬೇಕಾದ ಗುಣಗಳನ್ನು ಬಲ್ಲೆ. ಅವರನ್ನು ಪೂರ್ಣಗೊಳಿಸಿದಾಗಲೇ ಸಕ್ಕ ಸ್ಥಿತಿ ಪ್ರಾಪ್ತಿಯಾಗುತ್ತದೆ. ಮಹಾಲಿ, ಸಕ್ಕನು ಹಿಂದಿನ ಜನ್ಮದಲ್ಲಿ ಮೇಘ ಎಂಬ ಹೆಸರನ್ನು ಹೊಂದಿದ್ದನು. ಆದ್ದರಿಂದಲೇ ಆತನಿಗೆ ಮಾಘವ ಎನ್ನುತ್ತಾರೆ. ಆತ ಆಗ ದಾನಿಯಾಗಿದ್ದರಿಂದ ಆತನಿಗೆ ಪುರಿಂದದ ಎನ್ನುತ್ತಾರೆ. ಆತ ಹಿಂದೆ ಆಹಾರ ದಾನ ನೀಡಿದ್ದರಿಂದ ಸಕ್ಕ ಎನ್ನುತ್ತಾರೆ. ಆತ ಹಿಂದೆ ವಾಸಸ್ಥಳವನ್ನು ದಾನ ನೀಡಿದ್ದರಿಂದ ಆತನನ್ನು ವಾಸವಾ ಎನ್ನುತ್ತಾರೆ. ಆತ ಕ್ಷಣದಲ್ಲಿ ಸಹಸ್ರ ವಿಷಯ ಯೋಚಿಸಬಲ್ಲ ನಾದುದ್ದರಿಂದ ಆತನಿಗೆ ಸಹಸ್ರಾಕ್ಷ ಎನ್ನುತ್ತಾರೆ. ಆತನು 33 ದೇವತೆಗಳಿಗೆ ನಾಯಕನಾದ್ದರಿಂದ ಆತನಿಗೆ ದೇವೇಂದ್ರ ಎನ್ನುತ್ತಾರೆ. ಆತ ಹಿಂದಿನ ಜನ್ಮದಲ್ಲಿ 7 ಶೀಲಗಳನ್ನು ಪಾಲಿಸುತ್ತಿದ್ದನು. ಅದೆಂದರೆ: ಮಾತಾಪಿತರನ್ನು ಸಲಹುವಿಕೆ, ವೃದ್ಧರಿಗೆ ಗೌರವಿಸುವಿಕೆ, ಯೋಗ್ಯ ಸಂಭಾಷಣೆ, ಚಾಡಿ ಇಲ್ಲದಿರುವಿಕೆ, ಸ್ವಾರ್ಥವಿಲ್ಲದಿರುವಿಕೆ ದಾನಿಯಾಗಿರುವಿಕೆ, ಸದಾ ಸತ್ಯವಚನ ನುಡಿಯುವಿಕೆ, ಕೋಪವಿಲ್ಲದಿರುವಿಕೆ ಹೀಗೆ ಆತನು ಸದ್ಗುಣ ಸಂಪನ್ನನಾಗಿದ್ದರಿಂದ ಆತನು ಇಂದ್ರನಾದನು. ಆದ್ದರಿಂದ ಕುಶಲಸ್ಥಿತಿಗಳಲ್ಲಿ ಜಾಗರೂಕನಾಗು ಎಂದು ಹೇಳಿ ಮೇಲಿನ ಗಾಥೆ ನುಡಿದರು

No comments:

Post a Comment