ನಿಮ್ಮ ಮನಸ್ಸನ್ನು ಭದ್ರಪಡಿಸಿ ಯಾವುದಕ್ಕೂ ಅಂಟಬೇಡಿ
ಈ ಶರೀರವು
ಒಡೆಯಲ್ಪಡುವ ಮಡಿಕೆ (ಕುಂಭ) ಎಂದು ಅರಿತು ನಗರಕ್ಕೆ ಕೋಟೆಯಿಂದ ರಕ್ಷಿಸುವಂತೆ ಚಿತ್ತವನ್ನು
ಭದ್ರಪಡಿಸಿ, ಪ್ರಜ್ಞಾಯುಧದಿಂದ
ಮಾರನನ್ನು ಎದುರಿಸಿ ಜಯಿಸು, ಜಯವನ್ನು
ರಕ್ಷಿಸಿಕೋ ಆದರೆ ಅಂಟಿಕೊಳ್ಳಬೇಡ. (40)
ಗಾಥ ಪ್ರಸಂಗ 3:6
ಮೈತ್ರಿಯ ಆಯುಧ
ಶ್ರಾವಸ್ತಿಯ 500 ಭಿಕ್ಷುಗಳು ಬುದ್ಧ ಭಗವಾನರಿಂದ ಧ್ಯಾನದ ವಿಷಯವನ್ನು ಸ್ವೀಕರಿಸಿ
ಅಲ್ಲಿಂದ ನೂರು ಯೋಜನ ದೂರವಿರುವ ವಿಶಾಲ ಅರಣ್ಯಕ್ಕೆ ಬಂದರು. ಅವರಿಗೆ ಅದು ಧ್ಯಾನಕ್ಕೆ ಯೋಗ್ಯ
ಪ್ರದೇಶವೆನಿಸಿತು. ಆದರೆ ಅಲ್ಲಿ ವೃಕ್ಷಗಳಲ್ಲಿ ನೆಲೆಸಿದ್ದ ದೇವತೆಗಳಿಗೆ ಭಿಕ್ಷುಗಳೊಡನೆ
ವಾಸಿಸುವುದು ಯೋಗ್ಯವೆನಿಸಲಿಲ್ಲ. ಆದರೂ ಅವು ಭಿಕ್ಷುಗಳು ಕೆಲದಿನಗಳ ನಂತರ ಹೋಗಬಹುದು ಎಂದು
ಭಾವಿಸಿದವು. ಆದರೆ ಅವರು ಆಗಲೂ ಹೊರಡದಿದ್ದಾಗ ಅವು ಹೆದರಿಸಲು ನಿರ್ಧರಿಸಿದವು. ಅವು ಭೀಕರ ಆಕೃತಿ
ತೋರಿಸಿ ಹೆದರಿಸಿದವು. ಭೀಕರ ಶಬ್ದವನ್ನುಂಟು ಮಾಡಿದವು. ಶರೀರವಿಲ್ಲದ ಭಯಾನಕ ರುಂಡಗಳು ಹಾಗೆಯೇ
ರುಂಡವಿಲ್ಲದ ಭೀಕರ ಮುಂಡವನ್ನು ತೋರಿಸಿದವು. ಇದರಿಂದ ಭೀತರಾದ ಭಿಕ್ಷುಗಳು ಆ ಸ್ಥಳವನ್ನು ಬಿಟ್ಟು
ಬುದ್ಧರಲ್ಲಿಗೆ ಬಂದು ವಿಷಯವನ್ನೆಲ್ಲಾ ತಿಳಿಸಿದರು. ಆಗ ಭಗವಾನರು ಹೀಗೆ ಹೇಳಿದರು ನೀವು ಹಿಂದೆ
ಯಾವುದೇ ರಕ್ಷಣೆಯಿಲ್ಲದೆ ಹೋಗಿದ್ದೀರಿ. ಆದರೆ ಈ ಬಾರಿ ಯೋಗ್ಯ ರಕ್ಷಣೆ ಮತ್ತು ಆಯುಧದೊಂದಿಗೆ
ಅಲ್ಲೇ ಹೋಗಿ ಧ್ಯಾನಿಸಿರಿ, ನೀವು
ಅರಹಂತರಾಗುವುದು ಅದೇ ಸ್ಥಳದಲ್ಲಿಯೇ ಎಂದರು. ನಂತರ ಮೆತ್ತ ಸುತ್ತವನ್ನು ಪ್ರವಚನ ಮಾಡಿದರು. ಅದೇ
ಅವರ ಆಯುಧವಾಗಿತ್ತು.
ನಂತರ ಭಿಕ್ಷುಗಳು ಆ ಅರಣ್ಯಕ್ಕೆ ಹೋಗಿ ಮೆತ್ತಸುತ್ತದ
ಪಠಣ ಮಾಡಿ ಮೆತ್ತಾ ಧ್ಯಾನ ಮಾಡಿದರು. ಸರ್ವಜೀವಿಗಳು ಸುಖಿಯಾಗಿ ಮತ್ತು ಕ್ಷೇಮವಾಗಿ ಇರಲಿ,
ಎಲ್ಲರ ಮನಸ್ಸು ಸುಖದಿಂದ ಕೂಡಿರಲಿ ಎಂದು
ಧ್ಯಾನಿಸಿದರು.
ಆಗ ವೃಕ್ಷ ದೇವತೆಗಳು ಮೈತ್ರಿಯನ್ನು ಸ್ವೀಕರಿಸಿ
ಭಿಕ್ಷುಗಳೊಡನೆ ಅವು ಸಹಾ ಮೈತ್ರಿ ತೋರಿದವು ಹೊರತು ಹಾನಿ ಮಾಡಲಿಲ್ಲ. ಈಗ ಅವು ಯಾವುದೇ
ರೀತಿಯಲ್ಲಿ ಹೆದರಿಸಲಿಲ್ಲ. ಈಗ ಭಿಕ್ಷುಗಳು ನಿರಾತಂಕವಾಗಿ ಧ್ಯಾನಿಸಿದರು.
ಆಗ ಆ ಭಿಕ್ಷುಗಳು ದೇಹವನ್ನು ಒಡೆದುಹೋಗುವ ಮಡಿಕೆಯಂತೆ
ಕ್ಷಣಿಕವಾದುದು ಎಂದು ಧ್ಯಾನಿಸಿದರು. ಆಗ ಬುದ್ಧರಿಗೆ ಇದು ಅರಿವಾಗಿ ಅವರು ಜೇತವನದಿಂದ ತಮ್ಮ
ಪ್ರತಿಬಿಂಬಾಕೃತಿಯನ್ನು ಕಿರಣದ ಮೂಲಕ ಸೃಷ್ಟಿಮಾಡಿ ಅವರ ಮುಂದೆ ಪ್ರತ್ಯಕ್ಷ ಮಾಡಿದರು ಮತ್ತು
ಮೇಲಿನ ಗಾಥೆಯನ್ನು ನುಡಿದರು. ನಂತರ ಅವರೆಲ್ಲರೂ ಅರಹಂತರಾದರು.
No comments:
Post a Comment