Saturday 15 November 2014

dhammapada/yamakavagga/1:14/the difference between wise and scholar

ಸಿದ್ಧಾಂತವೇ ಸಾಧನೆಯಲ್ಲ, ಜ್ಞಾನವೇ ಸಾಕ್ಷಾತ್ಕಾರವಲ್ಲ
ಒಬ್ಬನು ಪವಿತ್ರಗ್ರಂಥಗಳನ್ನು ಎಷ್ಟೇ ಓದಿರಲಿ ಅಥವಾ ಎಚ್ಚರಿಸಲಿ. ಆದರೆ ಅದರಂತೆ ಆತನು ಅನುಸರಿಸದಿದ್ದರೆ, ಆತನು ಪರರ ಗೋವುಗಳನ್ನು ಎಣಿಸುವವನಂತೆ ಪವಿತ್ರ ಜೀವನದ ಫಲದಲ್ಲಿ ಭಾಗಿಯಾಗುವುದಿಲ್ಲ.      (19)
ಪವಿತ್ರ ಗ್ರಂಥಗಳನ್ನು ಅಲ್ಪವಾಗಿ ಅರಿತಿದ್ದರೂ ಅದರಂತೆ ಅನುಸರಿಸುವವರು ಹಾಗು ರಾಗ, ದ್ವೇಷ ಮತ್ತು ಮೋಹವನ್ನು ತ್ಯಜಿಸುವವನು, ನಿಜವಾಗಿ ಅರಿತವನು ಸುವಿಮುಕ್ತ ಚಿತ್ತವುಳ್ಳವನು ಆದ ಆತನು ಇಲ್ಲಿಯಾಗಲಿ ಅಥವಾ ನಂತರದ ಕಾಲದಲ್ಲಿಯಾಗಲಿ ಪವಿತ್ರ ಜೀವನದ ಫಲದಲ್ಲಿ ಭಾಗಿಯಾಗುತ್ತಾನೆ. (20)


ಗಾಥ ಪ್ರಸಂಗ 1:14
ವಿದ್ವಾಂಸ ಮತ್ತು ಅರಹಂತ
                ಸದ್ವಂಶಸ್ಥರಾದ ಇಬ್ಬರು ಮಿತ್ರರು ಭಿಕ್ಷುಗಳಾದರು. ಅವರಲ್ಲಿ ಒಬ್ಬ ತಿಪಿಟಕದ ಅಧ್ಯಯನದಲ್ಲಿ ತಲ್ಲೀನನಾಗಿ ವಿದ್ವಾಂಸನಾದನು ಮತ್ತು ಚೆನ್ನಾಗಿ ಬೋಧಿಸುತ್ತಿದ್ದನು. ಈ ರೀತಿಯಿಂದಾಗಿ ಆತನು 18 ಭಿಕ್ಷುಗಳ ಗುಂಪಿಗೆ ಬೋಧಕನಾದನು. ಆದರೆ ಇನ್ನೊಬ್ಬ ಭಿಕ್ಷುವು ತಿಳಿದಿರುವುದನ್ನು ಚೆನ್ನಾಗಿ ಪಾಲಿಸತೊಡಗಿದನು. ಆತನು ಶೀಲದಲ್ಲಿ ಅತ್ಯಂತ ನಿಷ್ಠಾವಂತನಾದನು. ಸದಾ ಜಾಗ್ರತೆಯನ್ನು ಹೊಂದಿದವನು, ಅತ್ಯಂತ ಪ್ರಯತ್ನಶಾಲಿಯು, ಧ್ಯಾನಸಿದ್ದನು ಮತ್ತು ಕೊನೆಗೆ ಅರಹಂತನೇ ಆದನು. ವಿಪಶ್ಶನದ ಆಳಜ್ಞಾನ ಸಾಕ್ಷತ್ಕರಿಸಿದನು, ಮುಕ್ತನಾದನು. ಆದರೆ ಪರರಿಗೆ ಇದು ಗೊತ್ತಾಗಲಿಲ್ಲ.
                ಒಮ್ಮೆ ಜೇತವನದಲ್ಲಿ ಬುದ್ಧಭಗವಾನರು ತಂಗಿದ್ದಾಗ ಅಲ್ಲಿ ಈ ಇಬ್ಬರು ಭಿಕ್ಷುಗಳು ಭೇಟಿಯಾದರು. ಮೊದಲನೆಯವ ತನ್ನ ಪಾಂಡಿತ್ಯ ಪ್ರದಶರ್ಿಸಿ, ಎರಡನೆಯ ಭಿಕ್ಷುವನ್ನು ಕೀಳಾಗಿ ಭಾವಿಸಿದನು. ಈ ಭಿಕ್ಷುವು ಅತ್ಯಂತ ಕಡಿಮೆ ಸಿದ್ಧಾಂತವನ್ನು ತಿಳಿದಿದ್ದಾನೆ. ಈತನ ಜ್ಞಾನವು ಅಪಕ್ವವಾಗಿದೆ ಎಂದು ತಿಳಿದು ತನ್ನ ಬಗ್ಗೆ ಅಹಂಭಾವ ವ್ಯಕ್ತಪಡಿಸಿದನು. ಆತನ ಜೊತೆ ವಾದವಿವಾದ ಮಾಡಿ ಪ್ರಶ್ನಿಸಿ ಆತನಿಗೆ ತೇಜೋಭಂಗ ಮಾಡಲು ಸಿದ್ಧನಾದನು. ಆದರೆ ಹಾಗೆ ಮಾಡಿದರೆ ಆತನಿಗೆ ಅರಹಂತರ ತೇಜೋವಧೆಯ ಪಾಪಕ್ಕೆ ಸಿಲುಕಿ ದೀರ್ಘಕಾಲ ದುಃಖಕ್ಕೆ ಸಿಲುಕುತ್ತಿದ್ದನು. ಆದ್ದರಿಂದ ಬುದ್ಧರಿಗೆ ಈ ವಿಷಯ ತಿಳಿದು ಆತನನ್ನು ಸರಿದಾರಿಗೆ ತಲು ನಿರ್ಧರಿಸಿ ಅವರನ್ನು ಆ ಕ್ಷಣವೇ ಭೇಟಿಯಾದರು. ಹಾಗು ಅವರನ್ನು ಭಗವಾನರು ವಿಪಶ್ಶನ ಧ್ಯಾನಗಳ ಮಾರ್ಗ ಮತ್ತು ಫಲಗಳ ಬಗ್ಗೆ ಪ್ರಶ್ನಿಸಿದರು. ಒಣಜ್ಞಾನಿಯಾದ ಪಂಡಿತನಿಗೆ ಉತ್ತರಿಸಲು ಆಗಲಿಲ್ಲ. ಆದರೆ ಸಾಧನೆಯಲ್ಲಿ ಪ್ರವೀಣ ಮತ್ತು ಅರಹಂತ ಭಿಕ್ಷುವು ಮಾತ್ರ ತನ್ನ ಸಾಕ್ಷಾತ್ಕಾರದ ಅನುಭವದಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದನು.

                ಆಗ ಭಗವಾನರು ಅರಹಂತ ಭಿಕ್ಷುವಿಗೆ ತುಂಬಾ ಪ್ರಶಂಸಿದರು ಮತ್ತು ವಿದ್ವಾಂಸನಿಗೆ ಯಾವರೀತಿಯ ಪ್ರಶಂಸೆ ಸಿಗಲಿಲ್ಲ. ಆಗ ಭಗವಾನರು ಈ ಗಾಥೆಗಳನ್ನು ನುಡಿದರು.

dhammapada/yamakavagga/1:13/sumanadevi's story

ಪುಣ್ಯವಂತರು ಸದಾ ಸುಖಿಯಾಗಿರುತ್ತಾರೆ
ಇಲ್ಲಿ ಆನಂದವಾಗಿರುತ್ತಾನೆ, ಮುಂದೆ ಪರಲೋಕದಲ್ಲೂ ಆನಂದವಾಗಿರುತ್ತಾನೆ, ಪುಣ್ಯವಂತನು ಉಭಯಸ್ಥಿತಿಗಳೆರಡರಲ್ಲೂ ಆನಂದದಿಂದಿರುತ್ತಾನೆ. ನಂತರ ಸುಗತಿಯಲ್ಲಿ ಸೇರಿ ಅಲ್ಲಿ ಇನ್ನೂ ಹೆಚ್ಚು ಆನಂದದಿಂದಿರುತ್ತಾನೆ.  (18)

ಗಾಥ ಪ್ರಸಂಗ 1:13
ಸುಮನದೇವಿಯ ಆನಂದ
                ಬುದ್ಧ ಭಗವಾನರಿಗೆ ಮತ್ತು ಅವರ ಸಂಘಕ್ಕೆ ಮಹಾ ಪೋಷಕರೆಂದರೆ ಮಹಾ ಉಪಾಸಕ ಅನಾಥಪಿಂಡಕ ಮತ್ತು ಮಹಾ ಉಪಾಸಿಕೆ ವಿಸಾಖ. ಅವರಿಬ್ಬರೂ ಪ್ರತ್ಯೇಕವಾಗಿ ಪ್ರತಿನಿತ್ಯ ಎರಡು ಸಾವಿರ ಭಿಕ್ಷುಗಳನ್ನು ಪೋಷಿಸುತ್ತಿದ್ದರು.
                ಅನಾಥಪಿಂಡಕನು ಶ್ರಾವತ್ತಿಯಲ್ಲಿದ್ದನು. ಆತನ ಮನೆಯಲ್ಲಿ ಭಿಕ್ಷುಗಳ ಪಾಲನೆಗೆ ಆತ ತನ್ನ ಹಿರಿಯ ಮಗಳಾದ ಮಹಾ ಸುಭದ್ರೆಗೆ ನೇಮಿಸಿದ್ದನು. ಆಕೆಯ ವಿವಾಹದ ನಂತರ ಚುಲ್ಲ ಸುಭದ್ರೆಗೆ ಆ ಮಹಾ ಕಾರ್ಯಕ್ಕೆ ನೇಮಿಸಿದನು. ಆಕೆಯ ವಿವಾಹದ ನಂತರ ಈ ಪುಣ್ಯಕಾರ್ಯಕ್ಕೆ ಆತ ತನ್ನ ಕಿರಿಯ ಮಗಳನ್ನು ನೇಮಿಸಿದನು ಆಕೆಯೇ ಸುಮನದೇವಿ. ಆಕೆಯ ಹಿರಿಯ ಅಕ್ಕಂದಿರಿಬ್ಬರು ಸೋತಪನ್ನರಾಗಿದ್ದರು. ಆದರೆ ಸುಮನದೇವಿಯು ಸಕದಾಗಾಮಿಯಾಗಿದ್ದಳು ಮತ್ತು ಆಕೆ ಅವಿವಾಹಿತಳಾಗಿಯೇ ಇದ್ದಳು.
                ಒಂದುದಿನ ಆಕೆಯು ತನ್ನ ತಂದೆಗೆ ಬೇಗ ಬರಲು ಸಂದೇಶ ಕಳುಹಿಸಿದಳು. ಅನಾಥಪಿಂಡಕ ಮಗಳೊಂದಿಗೆ ಹೀಗೆ ಕೇಳಿದನು
                ಏನು ಮಗು ಸುಮನ?
                ಏನು ಹೇಳಲಿ ತಮ್ಮ.
                ನೀನು ಅಸಂಬದ್ಧವಾಗಿ ಮಾತನಾಡುತ್ತಿರುವೆ ಮಗು.
                ನಾನು ಅಸಂಬದ್ಧವಾಗಿ ಮಾತಾಡುತ್ತಿಲ್ಲ ತಮ್ಮ.
                ನೀನೇನಾದರೂ ಭೀತಿಗೊಂಡಿರುವೆಯಾ ಮಗು?
                ಇಲ್ಲ ತಮ್ಮ ಎಂದು ಹೇಳಿ ಆಕೆ ಮೃತ್ಯವಶವಾದಳು.
                ಅನಾಥಪಿಂಡಕನಿಗೆ ಅಪಾರವಾದ ದುಃಖವಾಯಿತು. ಆತನು ಸೋತಪನ್ನನಾಗಿದ್ದ ರಿಂದ ಇನ್ನೂ ಶೋಕ ಗೆದ್ದಿರಲಿಲ್ಲ. ಆತನು ಅಂತ್ಯಕ್ರಿಯಾದಿಗಳನ್ನು ಮುಗಿಸಿ ಅತ್ತುಕೊಂಡು ಭಗವಾನರು ಇದ್ದಲ್ಲಿಗೆ ಬಂದನು. ಓ ಗೃಹಪತಿಯೆ, ಏಕೆ ಇಷ್ಟೊಂದು ಶೋಕ?
                ಭಗವಾನ್ ಇಂದು ನನ್ನ ಮಗಳು ಸುಮನ ತೀರಿಕೊಂಡಳು
                ಓಹ್ ಅನಾಥಪಿಂಡಕ, ಸಾವಂತು ಎಲ್ಲರಿಗೆ ನಿಶ್ಚಿತವಲ್ಲವೇ? ಅದಕ್ಕಾಗಿ ಏಕೆ ಚಿಂತಿಸುವೆ?
                ನನಗೆ ಗೊತ್ತು ಭಗವಾನ್, ಆದರೆ ನನ್ನ ಮಗಳು ಅತಿ ಲಜ್ಜಾಸಂಪನ್ನಳು, ಶೀಲವಂತಳು, ದಾನಿ, ಸಹೃದಯಿ, ಆದರೆ ನನಗೆ ದುಃಖದ ಅಂಶ ಏನೆಂದರೆ ಆಕೆ ಸಾಯುವಾಗ ಯೋಗ್ಯ ಪ್ರಜ್ಞಾದಿಂದ ಕೂಡಿರಲಿಲ್ಲ.
                ಅದು ಹೇಗೆ? ಆಕೆ ಸಾಯುವಾಗ ಏನೆಂದು ಹೇಳಿದಳು.
                ಅನಾಥಪಿಂಡಕನು ವಿವರಿಸಿದನು. ಆಗ ಭಗವಾನರು ಹೀಗೆ ಸಮಾಧಾನ ನೀಡಿದರು.
                ಓ ಅನಾಥಪಿಂಡಕ, ನಿನ್ನ ಮಗಳು ಅಸಂಬದ್ಧವಾಗಿ ಮಾತಾಡಲಿಲ್ಲ. ಆಕೆ ಸಕದಾಗಾಮಿಯಾಗಿದ್ದಳು. ನೀನು ಸೋತಪನ್ನನಾಗಿರುವುದರಿಂದ ಆಕೆಗಿಂತ ಕಿರಿಯನೇ ಸರಿ. ಈ ಅರ್ಥದಲ್ಲಿ ಆಕೆಯು ನಿನಗೆ ಈ ರೀತಿ ಮಾತನಾಡಿದ್ದಾಳೆ ಅಷ್ಟೇ. ಆಕೆ ಈಗ ದೇವಲೋಕದಲ್ಲಿದ್ದಾಳೆ.

                ಆಗ ಅನಾಥಪಿಂಡಕನಿಗೆ ಸಮಾಧಾನ ಮೂಡಿ ಅನಂತನಾದನು. ಆಕೆಯ ಸಂಬಂಧವಾಗಿ ಮೇಲಿನ ಗಾಥೆಯನ್ನು ಭಗವಾನರು ನುಡಿದರು.

dhammapada/yamaka vagga/1:12/devadatta's repentance

ಪಾಪಿಯು ಇಲ್ಲಿಯೂ ಮತ್ತು ಮುಂದೆಯೂ ಪ್ರಲಾಪಿಸುತ್ತಾನೆ
ಇಲ್ಲಿಯೂ ದುಃಖಿಸುತ್ತಾನೆ, ಮುಂದೆ ಪರಲೋಕದಲ್ಲಿಯೂ ದುಃಖಿಸುತ್ತಾನೆ. ಉಭಯ ಸ್ಥಿತಿಗಳೆರಡರಲ್ಲೂ ಪಾಪಿಯು ದುಃಖಿಸುತ್ತಾನೆ. ನಾನು ಪಾಪವನ್ನು ಮಾಡಿದೆನಲ್ಲ ಎಂದು ದುಃಖಿಸುತ್ತಾನೆ. ನಂತರದಲ್ಲಿ ದುರ್ಗತಿಗೆ ಹೋಗಿ ಅಲ್ಲೂ ಸಹ ದುಃಖಿಸುತ್ತಾನೆ.     (17)


ಗಾಥ ಪ್ರಸಂಗ 1:12
ದೇವದತ್ತನ ದ್ವೇಷಾಸೂಯೆಗಳ ಪರಿಣಾಮ
                ದೇವದತ್ತನು ಬುದ್ಧರೊಂದಿಗೆ ಕೋಸಂಬಿಯಲ್ಲಿ ವಾಸವಾಗಿದ್ದನು. ಆಗ ಆತನು ಬುದ್ಧರಿಗೆ ಸಿಗುವ ಗೌರವ, ಸತ್ಕಾರ, ಕೀತರ್ಿ, ಎಲ್ಲವನ್ನು ಕಂಡು ಅಸೂಯೆಯುಂಟಾಯಿತು. ಆತನೇ ಭಿಕ್ಷು ಸಂಘಕ್ಕೆ ನಾಯಕನಾಗಲು ಲೋಭಪಟ್ಟನು. ಒಂದುದಿನ ಭಗವಾನರು ರಾಜಗೃಹದ ವೇಲುವನದ ವಿಹಾರದಲ್ಲಿ ಬೋಧಿಸುತ್ತಿರುವಾಗ ಬುದ್ಧರಲ್ಲಿಗೆ ದೇವದತ್ತನು ಬಂದು ಭಗವಾನರಿಗೆ ವಯಸ್ಸಾಯಿತು, ಆದ್ದರಿಂದ ನನಗೆ ಸಂಘದ ನೇತೃತ್ವ ನೀಡಿ ಎಂದು ಕೇಳಿದನು. ಆತನು ಅತ್ಯಂತ ಅನರ್ಹನಾಗಿದ್ದನು. ಕೊನೇ ಪಕ್ಷ ಶೀಲವಂತನೂ ಸಹಾ ಆಗಿರಲಿಲ್ಲ. ಸಂಘದಲ್ಲಿ ಅಸಂಖ್ಯಾತ ಖೀಣಾಸವ ಅರಹಂತರು ಇದ್ದರು. ಅವರಿಗೂ ಸಹಾ ಬುದ್ಧರ ಧಮ್ಮದ ಆಳ್ವಿಕೆ ಸಾಧ್ಯವಿರಲಿಲ್ಲ. ಆದ್ದರಿಂದಾಗಿ ಭಗವಾನರು ಆತನ ಕೋರಿಕೆ ನಿರಾಕರಿಸಿದರು ಮತ್ತು ಆತನ ಮೋಹಕ್ಕೆ ಖಂಡಿಸಿದರು.
                ದೇವದತ್ತನು ಇದರಿಂದಾಗಿ ದ್ವೇಷದಿಂದ ಸೇಡಿನಿಂದ ತುಂಬಿಹೋದನು. ಆತನು ಬುದ್ಧರನ್ನು 3 ಬಾರಿ ಕೊಲ್ಲಲು ಪ್ರಯತ್ನಿಸಿದನು. ಮೊದಲಿಗೆ ಹಲವು ಧನುರ್ಧರರನ್ನು ಕೊಲ್ಲಲು ನೇಮಿಸಿದನು. ಆದರೆ ಬುದ್ಧ ಭಗವಾನರ ಅಸೀಮ ಮೈತ್ರಿಯಿಂದ ಮತ್ತು ಪ್ರಜ್ಞಾಶೀಲತೆಯಿಂದಾಗಿ ಅವರೆಲ್ಲರೂ ಬುದ್ಧಭಗವಾನರ ಶಿಷ್ಯರಾದರು. ನಂತರ ಗಿಜ್ಜಕೂಟ ಬೆಟ್ಟದ ಮೇಲೇರಿ ಅಲ್ಲಿಯ ದೊಡ್ಡ ಬಂಡೆಯನ್ನು ಬುದ್ಧರ ಮೇಲೆ ಉರುಳಿಸಿದನು. ಆದರೆ ಭಗವಾನರು ಪವಾಡಶಕ್ತಿಯಿಂದ ಪಾರಾದರು. ಆದರೂ ಹಿಂದಿನ ಕರ್ಮಫಲದ ಪರಿಣಾಮದಿಂದ ಕೇವಲ ಕಾಲಿನ ಹೆಬ್ಬೆರಳಿಗೆ ಗಾಯವಾಯಿತು. ನಂತರ ನಾಲಾಗಿರಿ ಆನೆಯನ್ನು ಉನ್ಮಾದಿಸಿ ಬುದ್ಧರ ಮೇಲೆ ಬಿಟ್ಟನು. ಆದರೆ ಭಗವಾನರ ಮೈತ್ರಿಯ ಪ್ರಬಲಶಕ್ತಿಯಿಂದಾಗಿ ಆನೆಯು ಸಹಾ ಪಳಗಿ ಶಾಂತವಾಗಿ ವಂದಿಸಿತು. ಆಗ ಈ ಪ್ರಯತ್ನಗಳು ವಿಫಲವಾದಾಗ ದೇವದತ್ತನು ಸಂಘಭೇದ ಮಾಡಲು, ಸಂಘವನ್ನು ಮುರಿಯಲು ಪ್ರಯತ್ನಿಸಿದನು. ಆದರೆ ಸಾರಿಪುತ್ತ ಮತ್ತು ಮೊಗ್ಗಲಾನರಿಂದ ಸಂಘ ಮತ್ತೆ ಒಂದಾಯಿತು.
                ಇದಾದ ಸ್ವಲ್ಪ ದಿನಗಳಲ್ಲಿ ದೇವದತ್ತನು ಕಾಯಿಲೆಗೆ ಬಿದ್ದನು. ಆತ ಒಂಭತ್ತು ತಿಂಗಳು ರೋಗದಿಂದ ನರಳಿದನು. ಕೊನೆಗೆ ಆತನಿಗೆ ಬುದ್ಧರ ಮಹೋನ್ನತೆ ಅರಿವಾಯಿತು. ಆತನಿಗೆ ತನ್ನ ಕಾರ್ಯಗಳ ಬಗ್ಗೆ ಪಶ್ಚಾತ್ತಾಪವುಂಟಾಯಿತು. ಆತನು ತನ್ನ ಶಿಷ್ಯರೊಂದಿಗೆ ಹೀಗೆ ಹೇಳಿದನು ನಾನು ಬುದ್ಧರನ್ನು ಕಾಣುವ ಇಚ್ಛುಕನಾಗಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ.
                ಆಗ ಆತನು ಶಿಷ್ಯರು ಹೀಗೆ ಉತ್ತರಿಸಿದರು ನೀನು ಆರೋಗ್ಯದಿಂದ ಕೂಡಿರುವಾಗ ಬುದ್ಧರನ್ನು ದ್ವೇಷಿಸಿದೆ. ಈಗ ಹೀಗೆ ಹೇಳುತ್ತಿರುವೆ, ನಾವು ನಿನಗೆ ಸಹಾಯ ಮಾಡಲಾರೆವು. ಆಗ ದೇವದತ್ತನು ಹೀಗೆ ಕೇಳಿಕೊಂಡನು ದಯವಿಟ್ಟು ನನ್ನನ್ನು ನಾಶಮಾಡಬೇಡಿ, ನಾನು ಬುದ್ಧರನ್ನು ದ್ವೇಷಿಸಿದ್ದು ನಿಜವಾದರೂ ಬುದ್ಧರು ಮಾತ್ರ ನನಗೆ ಕೂದಲಿನ ಮೊನೆಯಷ್ಟು ದ್ವೇಷಿಸಲಿಲ್ಲ ಎಂದು ಪಶ್ಚಾತ್ತಾಪಪಟ್ಟು ದುಃಖಿಸಿದನು.
                ಆ ಮಾತು ಸತ್ಯವಾಗಿತ್ತು. ಬುದ್ಧರ ಮೈತ್ರಿಯು ಸರ್ವರ ಮೇಲೂ ಸಮಾನವಾಗಿತ್ತು. ಅದು ರಾಹುಲನಾಗಿರಬಹುದು, ದೇವದತ್ತನಾಗಿರಬಹುದು, ಅಂಗುಲಿಮಾಲನಾಗಿರಬಹುದು ಒಂದು ಪಕ್ಷಿಯೇ ಆಗಿರಬಹುದು ಅವರ ನಿಸ್ವಾರ್ಥ, ಶುದ್ಧ ಪ್ರೀತಿ ಸರ್ವರ ಮೇಲೂ ಸಮಾನವಾಗಿತ್ತು.

                ದೇವದತ್ತನು ಬುದ್ಧರಿಂದ ಕ್ಷಮೆ ಯಾಚಿಸಲು ದೃಢವಾಗಿ ನಿರ್ಧರಿಸಿದ್ದನು. ಆತನ ಶಿಷ್ಯರು ಆತನಿಗೆ ಹೊತ್ತುಕೊಂಡು ಹೊರಟರು. ಅವರೆಲ್ಲರೂ ಜೇತವನದ ವಿಹಾರದ ಬಳಿ ಬಂದರು. ಆಗ ದೇವದತ್ತನಿಗೆ ಅಪಾರ ಬಾಯಾರಿಕೆಯಾಯಿತು. ಹೀಗಾಗಿ ಅವರು ಆತನ ಮಂಚವನ್ನು ಕೊಳದ ಬಳಿ ಕೆಳಗಿಳಿಸಿ ನೀರನ್ನು ತರಲು ಹೋದರು. ಆಗ ದೇವದತ್ತನು ಸಹಾ ಎರಡು ಪಾದಗಳನ್ನು ನೆಲದ ಮೇಲಿಟ್ಟು ನಿಂತನು. ತಕ್ಷಣವೇ ಭೂಮಿಯಿಂದ ಬಿರುಕುಂಟಾಗಿ ಕುಸಿದು, ಆತನು ಭೂಮಿಯೊಳಕ್ಕೆ ಹೋದನು. ಜ್ವಾಲೆಗಳು ಕಾಣಿಸಿಕೊಂಡು ಆತನಿಗೆ ಭೂಗರ್ಭದಲ್ಲಿ ಸೆಳೆದುಕೊಂಡು ಹೋದವು. ಆತನ ಕುಕರ್ಮ ಫಲದಿಂದ ಆತನಿಗೆ ಬುದ್ಧರ ದರ್ಶನ ಸಿಗದೆ ಹೋಯಿತು ಮತ್ತು ಆತನು ಅವೀಚಿ ನರಕದಲ್ಲಿ ಹುಟ್ಟಿದನು. ಹೀಗೆ ಆತನು ಇಹದಲ್ಲಿ ಮತ್ತು ಪರದಲ್ಲೂ ಅತ್ಯಂತ ದುಃಖ ಅನುಭವಿಸಿದನು. ಆತನಿಗೆ ಸಂಬಂಧಿಸಿದಂತೆ ಭಗವಾನರು ಈ ಮೇಲಿನ ಗಾಥೆಗಳನ್ನು ನುಡಿದರು. 

dhammapada/yamaka vagga/1:11/upasaka dhammika story

 ಪುಣ್ಯಶಾಲಿಯು ಇಹಪರಗಳೆರಡರಲ್ಲೂ ಸುಖಿಸುತ್ತಾನೆ
ಇಲ್ಲಿಯೂ ಸಂತೋಷಿಸುತ್ತಾನೆ, ಮುಂದೆ ಪರಲೋಕದಲ್ಲಿಯೂ ಸಂತೋಷಿಸುತ್ತಾನೆ. ಪುಣ್ಯಶಾಲಿಯು ಉಭಯ ಸ್ಥಿತಿಗಳೆರಡರಲ್ಲೂ ಸಂತೋಷಿಸುತ್ತಾನೆ. ತನ್ನ ಪುಣ್ಯ ಕಾರ್ಯಗಳನ್ನು ನೆನೆಯುತ್ತ ಸಂತೋಷಿಸುತ್ತಾನೆ ಮತ್ತು ನಲಿಯುತ್ತಾನೆ.        (16)

ಗಾಥ ಪ್ರಸಂಗ 1:11
ಉಪಾಸಕ ಧಮ್ಮಿಕನ ಆನಂದಬಾಷ್ಪ
          ಶ್ರಾವಸ್ತಿಯಲ್ಲಿ ಧಮ್ಮಿಕನೆಂಬ ಶ್ರದ್ಧೋಪಾಸಕನಿದ್ದನು. ಆತನು ಪ್ರತಿದಿನ ಭಿಕ್ಷುಗಳಿಗೆ ದಾನ ನೀಡುತ್ತ ಮತ್ತು ಶೀಲ ಪಾಲಿಸುತ್ತಾ ಇದ್ದನು. ಆತನಿಗೆ ಏಳು ಗಂಡು ಮತ್ತು ಏಳು ಹೆಣ್ಣು ಮಕ್ಕಳಿದ್ದರು. ಅವರು ಸಹಾ ಆತನಂತೆಯೇ ದಾನ, ಶೀಲಗಳ ಸದ್ಗುಣಗಳಲ್ಲಿ ತಲ್ಲೀನರಾಗಿದ್ದರು. ಧಮ್ಮಿಕನಿಗೆ 500 ಜನ ಉಪಾಸಕ ಹಿಂಬಾಲಕರಿದ್ದರು.
          ಒಂದುದಿನ ಧಮ್ಮಿಕ ರೋಗಗ್ರಸ್ತನಾಗಿ, ಸಾವಿನ ದವಡೆಯಲ್ಲಿದ್ದನು. ಆತನು ಸಂಘಕ್ಕೆ ಪವಿತ್ರ ಗ್ರಂಥಗಳ ಪಠಣೆ ಮಾಡುವಂತೆ ಕೇಳಿಕೊಂಡಾಗ, ಭಿಕ್ಷುಗಳು ಆತನ ಹಾಸಿಗೆಯ ಪಕ್ಕದಲ್ಲಿ ಮಹಾ ಸತಿಪಟ್ಠಾನ ಸುತ್ತದ ಪಠನೆ ಮಾಡತೊಡಗಿದರು. ಆಗ ಆರು ಸುಗತಿಯ ಲೋಕದಿಂದ ಆರು ರಥಗಳು ಆಯಾ ಲೋಕಕ್ಕೆ ಆಹ್ವಾನ ನೀಡಲು ಬಂದವು. ಆದರೆ ಧಮ್ಮಿಕನು ಸುತ್ತದ ಪಠಣಕ್ಕೆ ಅಡ್ಡಿಯಾಗಬಹುದೆಂದು ಆ ರಥಗಳಿಗೆ ನಿಲ್ಲಿರಿ ಎಂದನು. ಆದರೆ ಪಠಣ ಮಾಡುತ್ತಿದ್ದ ಭಿಕ್ಷುಗಳು ತಮಗೆ ಹೇಳುತ್ತಿರಬಹುದೆಂದು ಅಷ್ಟಕ್ಕೆ ನಿಲ್ಲಿ ಹೊರಟರು.
          ಸ್ವಲ್ಪಕಾಲನಂತರ ಧಮ್ಮಿಕ ತನ್ನ ಮಕ್ಕಳಿಗೆ ಸುಗತಿಯ ಕಥೆಗಳ ಬಗ್ಗೆ ಹೇಳಿದರು. ಅವರು ರಥದ ಆಯ್ಕೆಗಾಗಿ ಹಾರವೊಂದನ್ನು ಆ ಕಡೆ ಎಸೆಯುವಂತೆ ಮಕ್ಕಳಿಗೆ ಹೇಳಿದರು. ಅದರಂತೆ ಆ ಹಾರವು ಗಾಳಿಯಲ್ಲಿ ನಿಂತಂತೆ ಕಾಣಿಸಿ ನಂತರ ಮೇಲ್ಬಾಗಕ್ಕೆ ಚಲಿಸಿತು. ವಾಸ್ತವವಾಗಿ ಅದು ರಥದ ಚಕ್ರಕ್ಕೆ ಸಿಲುಕಿತ್ತು. ಆಗ ಮಕ್ಕಳಿಗೆ ಹೀಗೆ ಹೇಳಿದನು. ನಾನು ತುಸಿತಾ ದೇವಲೋಕ್ಕೆ ಹೊರಡುತ್ತಿರುವೆನು. ನೀವು ಕ್ಷೊಭೆಗೆ ಒಳಗಾಗದಿರಿ. ನನ್ನಂತೆ ಸುಗತಿ ಬಯಸುವುದಾದರೆ ನೀವು ದಾನಶೀಲ ಪಾಲಿಸಿ ಎಂದು ಹೇಳಿ ಸುಗತಿಯಲ್ಲಿ ಹುಟ್ಟಿದರು.

          ಹೀಗೆ ಶೀಲವಂತರು ಇಲ್ಲಿ ಮತ್ತು ಮುಂದೆಯೂ ಸುಖವಾಗಿ ಇರುತ್ತಾರೆ. ಈ ವಿಷಯ ಭಗವಾನರ ಬಳಿಗೆ ಬಂದಾಗ ಭಗವಾನರು ಸಹಾ ಆತನು ತುಸಿತಾದಲ್ಲಿ ಹುಟ್ಟಿರುವನೆಂದು ತಿಳಿಸಿ ಮೇಲಿನ ಗಾಥೆ ನುಡಿದರು.

Saturday 1 November 2014

dhammapada/yamaka vagga/1:10/the story of chunda butcher

ಪಾಪಿಯು ಇಹಪರಗಳೆರಡರಲ್ಲೂ ದುಃಖಿಸುತ್ತಾನೆ
ಇಲ್ಲಿಯೂ ಶೋಕಿಸುತ್ತಾನೆ, ಮುಂದೆ ಪರಲೋಕದಲ್ಲಿಯೂ ಶೋಕಿಸುತ್ತಾನೆ. ಪಾಪಿಯು ಉಭಯ ಸ್ಥಿತಿಗಳೆರಡರಲ್ಲೂ ಶೋಕಿಸುತ್ತಾನೆ. ತನ್ನ ಪಾಪಕೃತ್ಯಗಳನ್ನು ನೆನೆಯುತ್ತ ಶೋಕಿಸುತ್ತಾನೆ ಮತ್ತು ನರಳುತ್ತಾನೆ.  (15)
ಗಾಥ ಪ್ರಸಂಗ 1:10
ಕಸಾಯಿಯವನ ಶೋಕ ಪಶ್ಚಾತ್ತಾಪ (ಚುಂದ)

                ವೇಲುವನ ವಿಹಾರದ ಸಮೀಪದಲ್ಲಿ ಚುಂದನೆಂಬ ಅತಿಕ್ರೂರ ಕಸಾಯಿಯವನಿದ್ದನು. ಆತ ಸದಾ ಪ್ರಾಣಿಗಳ ಹತ್ಯೆ ಮಾಡುತ್ತಿದ್ದನು. ಆತ ತನ್ನ ಜೀವನ ಕಾಲದಲ್ಲಿ ಹತ್ಯೆಗಳು ಮಾಡುತ್ತಿದ್ದನೆ ಹೊರತು ಬೇರೆ ಯಾವ ಪುಣ್ಯ ಕಾರ್ಯಗಳನ್ನು ಮಾಡಲಿಲ್ಲ
.
                ಒಂದುದಿನ ಆತನು ಹುಚ್ಚಿಗೆ ಬಲಿಯಾದನು. ಆತನು ಬದುಕ್ಕಿದ್ದಂತೆಯೇ ನರಕಾಗ್ನಿಯ ಶಾರೀರಿಕ ಪೀಡೆಯನ್ನು ಅನುಭವಿಸತೊಡಗಿದನು. ಆತನ ಪಾಪಕೃತ್ಯಗಳ ಫಲವನ್ನು ಅನುಭವಿಸತೊಡಗಿದನು. ಆತನು ಹಂದಿಯು ಹತ್ಯೆಗೀಡಾಗುವಾಗ ನರಳುವಂತೆ ಮನೆಯಲ್ಲಿ ಹೊರಳಾಡಿ ನರಳಿದನು. ಆತನ ನರಳಾಟ, ಕಿರುಚಾಟಕ್ಕೆ ಹತ್ತರದ ಮನೆಗಳವರು ಏಳು ದಿನಗಳ ಕಾಲ ನಿದ್ರಿಸಲಿಲ್ಲ. ನಂತರ ಆತನು ಮರಣ ಹೊಂದಿ ನರಕದಲ್ಲಿ ಹುಟ್ಟಿದನು.

                ಈ ವಿಷಯವು ಭಿಕ್ಷುಗಳಲ್ಲಿ ಚಚರ್ೆಯ ವಿಷಯವಾಯಿತು. ಭಗವಾನರಲ್ಲಿ ಈ ವಿಷಯ ಕೇಳಿದಾಗ ಭಿಕ್ಷುಗಳೇ, ಆತನ ಪಾಪವು ಫಲ ನೀಡಿದೆ, ಆತ ಜೀವಿಸಿದ್ದರೂ ಇದೇರೀತಿ ನರಳುತ್ತಿದ್ದನು. ಈಗ ಆತನು ನರಕದಲ್ಲಿ ಉದಯಿಸಿದ್ದಾನೆ ಎಂದು ಹೇಳಿ ಮೇಲಿನ ಗಾಥೆಯನ್ನು ಹೇಳಿದರು.

dhammapada/yamaka vagga/1:9/the story of nanda

ಅಭಿವೃದ್ಧಿಯಿಲ್ಲದ ಮನಸ್ಸಿನಲ್ಲಿ ರಾಗವು ಪ್ರವೇಶಿಸುತ್ತದೆ
ಕೆಟ್ಟ ಛಾವಣಿಯ ಮನೆಯಲ್ಲಿ ಮಳೆಯು ನುಗ್ಗುವ ಹಾಗೆ ಅಭಿವೃದ್ಧಿ ಹೊಂದದ ಮನಸ್ಸಿನಲ್ಲಿ ರಾಗವು ನುಗ್ಗುತ್ತದೆ.     (13)
ಸುಭದ್ರವಾದ ಛಾವಣಿಯ ಮನೆಯಲ್ಲಿ ಮಳೆಯು ನುಗ್ಗದ ಹಾಗೆ ಅಭಿವೃದ್ಧಿ ಹೊಂದಿರುವ ಮನಸ್ಸಿನಲ್ಲಿ ರಾಗವು ನುಗ್ಗುವುದಿಲ್ಲ. (14)
ಗಾಥ ಪ್ರಸಂಗ 1:9
ನಂದ ಭಿಕ್ಷುವಿನ ಸಂಗತಿ
                ಒಮ್ಮೆ ಭಗವಾನರು ರಾಜಗೃಹದ ವೇಲುವನದಲ್ಲಿ ತಂಗಿದ್ದರು. ಆಗ ಅವರ ತಂದೆ ಶುದ್ಧೋದನರು ನಿರಂತರವಾಗಿ ಸಂದೇಶಕಾರರನ್ನು ಕಳುಹಿಸಿದರು. ಕಪಿಲವಸ್ತುವಿಗೆ ಅವರಿಗಾಗಿ ಆಹ್ವಾನ ನೀಡಿದರು. ಅದರಂತೆಯೇ ಭಗವಾನರು ದೊಡ್ಡ ಅರಹಂತರ ಸಮೂಹದೊಂದಿಗೆ ಪ್ರಯಾಣ ಬೆಳೆಸಿದರು.

                ಅವರು ಕಪಿಲವಸ್ತುವಿಗೆ ಪ್ರವೇಶಿಸಿದಾಗ ಅವರ ಬಂಧು-ಭಾಂದವರಿಗೆ ವಸ್ಸಂತರಜಾತಕ ತಿಳಿಸಿದರು. ಎರಡನೆಯದಿನ ಅವರು ನಗರವನ್ನು ಪ್ರವೇಶಿಸುವಾಗ ಜಾಗೃತರಾಗಿ, ಅಪ್ರಮಾದಿತರಾಗದಿರಿ, ಧರ್ಮದಿಂದ ಸುಚಾರಿತ್ರ್ಯದಿಂದ ಜೀವಿಸಿ, ಧರ್ಮಚಾರಿಯು ಈ ಲೋಕದಲ್ಲಿ ಮತ್ತು ಪರಲೋಕದಲ್ಲಿಯೂ ಸುಖಿಯಾಗಿ ಜೀವಿಸುವನು ಎಂದು ತಿಳಿಸಿದರು. ಅದನ್ನು ಕೇಳಿ ಶುದ್ದೋದನ ಮಹಾರಾಜರು ಸೋತಪತ್ತಿಫಲ ಪ್ರಾಪ್ತಿಮಾಡಿದರು. ಹಾಗೆಯೇ ಭಗವಾನರು ಅರಮನೆಯನ್ನು ಪ್ರವೇಶಿಸುವಾಗ ಸುಚ್ಚಾರಿತ್ರ್ಯದಿಂದ, ಧರ್ಮದಿಂದ ಜೀವಿಸಿ. ದುಚ್ಚಾರಿತ್ರ್ಯದ ಜೀವನ ನಡೆಸದಿರಿ. ಧಮ್ಮಾಚಾರಿಯು ಈ ಲೋಕದಲ್ಲಿ ಮತ್ತು ಪರಲೋಕದಲ್ಲೂ ಸುಖಿಯಾಗಿ ಜೀವಿಸುವನು ಎಂದು ನುಡಿದರು. ಈ ಗಾಥೆಯನ್ನು ಕೇಳಿದಾಗ ಶುದ್ದೋದನರು ಸಕದಾಗಾಮಿಫಲ ಪ್ರಾಪ್ತಿಮಾಡಿದರು ಮತ್ತು ಪ್ರಜಾಪತಿ ಗೋತಮಿ ಸೋತಪತ್ತಿಫಲ ಪಡೆದರು. ಭೋಜನದ ನಂತರ ಚಂದಾಕಿನ್ನರ ಜಾತಕ ಹೇಳಿದರು. ಆ ಜಾತಕದಲ್ಲಿ ರಾಹುಲಮಾತೆ (ಯಶೋಧರೆ)ಯ ಶ್ರೇಷ್ಠ ಸದ್ಗುಣಗಳ ಬಗ್ಗೆ ತಿಳಿಸಿದರು.
                ಮಾರನೆಯದಿನ ಬೋಧಿಸತ್ತರ ಮಲ ತಮ್ಮ ಮದುವೆಯ ದಿನದ ಸಂಭ್ರಮ ಆಚರಿಸುತ್ತಿದ್ದರು. ಭಗವಾನರು ನಂದರ ಮನೆಗೆ ಆಹಾರಕ್ಕೆ ಹೊರಟರು ಮತ್ತು ಪಿಂಡಪಾತ್ರೆಯನ್ನು ರಾಜಕುಮಾರ ನಂದರವರ ಕೈಗೆ ಇಟ್ಟರು. ನಂತರ ಭಗವಾನರು ಅದನ್ನು ತೆಗೆದುಕೊಳ್ಳದೆ ಹೊರಟರು. ಹೀಗಾಗಿ ನಂದರವರು ಅದನ್ನು ಹಿಂತಿರುಗಿಸಲು ಹಿಂದೆ ಹಿಂದೆ ಹೊರಟರು. ಅವರನ್ನು ವಿವಾಹವಾಗಲು ಸಿದ್ಧವಾಗಿದ್ದ ನವವಧು ರಾಜಕುಮಾರಿ ಜನಪದ ಕಲ್ಯಾಣಿಯು ರಾಜಕುಮಾರ ಬೇಗ ಹಿಂತಿರುಗಿ ಎಂದಳು. ಆದರೆ ವಿಹಾರದಲ್ಲಿ ರಾಜಕುಮಾರ ಭಿಕ್ಷುವಾಗಲು ಒಪ್ಪಿದರು.
                ಭಿಕ್ಷುವಾದರೂ ಸಹಾ ನಂದರವರ ಮನಸ್ಸು ಸದಾ ಜನಪದ ಕಲ್ಯಾಣಿಯ ಕಡೆಗೆ ವಾಲುತ್ತಿತತು. ಅವರ ಮನಸ್ಸು ದ್ವಂದ್ವದಲ್ಲಿ ಸಿಲುಕಿತ್ತು. ಇದನ್ನು ಅರಿತ ಭಗವಾನರು ನಂದರವರಿಗೆ ತಾವತಿಂಸ ಲೋಕದ ದೇವಿಯರನ್ನು ತೋರಿಸಿದರು. ಅವರ ಸೌಂದರ್ಯವು ಜನಪದ ಕಲ್ಯಾಣಿಗಿಂತ ಹಲವಾರುಪಟ್ಟು ಸೌಂದರ್ಯವುಳ್ಳವರಾಗಿದ್ದರು. ನಂದರವರು ಧಮ್ಮಜೀವನ ಪಾಲಿಸಿದರೆ ಅವರಲ್ಲಿ ಒಬ್ಬರನ್ನು ಪಡೆಯಬಹುದು ಎಂದು ಹೇಳಿದಾಗ ನಂದರು ಆನಂದದಿಂದ ಒಪ್ಪಿದರು. ಅವರು ಶ್ರೇಷ್ಠ ಜೀವನವನ್ನು ಪಾಲಿಸತೊಡಗಿದರು. ಆದರೆ ಸಹ ಭಿಕ್ಷುಗಳು ಹೆಣ್ಣಿಗಾಗಿ ಧಮರ್ಾಚರಣೆ ಮಾಡುವವ ಎಂದು ಹಿಯಾಳಿಸಿದಾಗ, ವ್ಯಂಗ್ಯ ಮಾಡಿದಾಗ ಆತ ನಾಚಿ, ಕೊನೆಗೆ ತನ್ನ ದೃಢ ಪರಿಶ್ರಮದಿಂದ ಅರಹತ್ವ ಪ್ರಾಪ್ತಿಮಾಡಿದರು. ಆದರೆ ಅರಹಂತರಲ್ಲಿ ಯಾವುದೇ ಬಯಕೆಯೇ ಇರುವುದಿಲ್ಲ. ಇನ್ನು ಹೆಣ್ಣಿನ ಬಯಕೆ ಎಲ್ಲಿ ಬರಬೇಕು. ಇದೆಲ್ಲವೂ ಭಗವಾನರಿಗೆ ಮೊದಲೇ ಗೊತ್ತಿತ್ತು. ಅವರು ದೇವಮಾನವರನ್ನು ಪಳಗಿಸುವುದರಲ್ಲಿ ನಿಸ್ಸೀಮರು. ಅವರು ಪ್ರತಿ ವ್ಯಕ್ತಿಯ ಪ್ರಚ್ಛನ್ನತೆಯಂತೆ ಪಳಗಿಸುತ್ತಿದ್ದರು.
                ಮುಂದೆ ಭಿಕ್ಷುಗಳು ನಂದರವರನ್ನು ಹೆಣ್ಣಿನ ಬಗ್ಗೆ ಕೇಳಿದಾಗ ಅವರು ನನ್ನಲ್ಲಿ ಯಾವುದೇ ಅಂಟುವಿಕೆ ಇಲ್ಲ ಎಂದರು. ಭಿಕ್ಷುಗಳಿಗೆ ಅನುಮಾನ ಮೂಡಿ ಭಗವಾನರಲ್ಲಿಗೆ ಈ ವಿಷಯ ತಿಳಿಸಿದಾಗ ಭಗವಾನರು ಮೇಲಿನ ಗಾಥೆ ಹೇಳಿ ನಂದರವರ ಹಿಂದಿನ ಮತ್ತು ಇಂದಿನ ಮನಸ್ಥಿತಿಯಂತೆ ಈ ಎರಡು ಗಾಥೆಗಳನ್ನು ನುಡಿದು ವಿವರಿಸಿದರು.