Saturday 15 November 2014

dhammapada/yamaka vagga/1:12/devadatta's repentance

ಪಾಪಿಯು ಇಲ್ಲಿಯೂ ಮತ್ತು ಮುಂದೆಯೂ ಪ್ರಲಾಪಿಸುತ್ತಾನೆ
ಇಲ್ಲಿಯೂ ದುಃಖಿಸುತ್ತಾನೆ, ಮುಂದೆ ಪರಲೋಕದಲ್ಲಿಯೂ ದುಃಖಿಸುತ್ತಾನೆ. ಉಭಯ ಸ್ಥಿತಿಗಳೆರಡರಲ್ಲೂ ಪಾಪಿಯು ದುಃಖಿಸುತ್ತಾನೆ. ನಾನು ಪಾಪವನ್ನು ಮಾಡಿದೆನಲ್ಲ ಎಂದು ದುಃಖಿಸುತ್ತಾನೆ. ನಂತರದಲ್ಲಿ ದುರ್ಗತಿಗೆ ಹೋಗಿ ಅಲ್ಲೂ ಸಹ ದುಃಖಿಸುತ್ತಾನೆ.     (17)


ಗಾಥ ಪ್ರಸಂಗ 1:12
ದೇವದತ್ತನ ದ್ವೇಷಾಸೂಯೆಗಳ ಪರಿಣಾಮ
                ದೇವದತ್ತನು ಬುದ್ಧರೊಂದಿಗೆ ಕೋಸಂಬಿಯಲ್ಲಿ ವಾಸವಾಗಿದ್ದನು. ಆಗ ಆತನು ಬುದ್ಧರಿಗೆ ಸಿಗುವ ಗೌರವ, ಸತ್ಕಾರ, ಕೀತರ್ಿ, ಎಲ್ಲವನ್ನು ಕಂಡು ಅಸೂಯೆಯುಂಟಾಯಿತು. ಆತನೇ ಭಿಕ್ಷು ಸಂಘಕ್ಕೆ ನಾಯಕನಾಗಲು ಲೋಭಪಟ್ಟನು. ಒಂದುದಿನ ಭಗವಾನರು ರಾಜಗೃಹದ ವೇಲುವನದ ವಿಹಾರದಲ್ಲಿ ಬೋಧಿಸುತ್ತಿರುವಾಗ ಬುದ್ಧರಲ್ಲಿಗೆ ದೇವದತ್ತನು ಬಂದು ಭಗವಾನರಿಗೆ ವಯಸ್ಸಾಯಿತು, ಆದ್ದರಿಂದ ನನಗೆ ಸಂಘದ ನೇತೃತ್ವ ನೀಡಿ ಎಂದು ಕೇಳಿದನು. ಆತನು ಅತ್ಯಂತ ಅನರ್ಹನಾಗಿದ್ದನು. ಕೊನೇ ಪಕ್ಷ ಶೀಲವಂತನೂ ಸಹಾ ಆಗಿರಲಿಲ್ಲ. ಸಂಘದಲ್ಲಿ ಅಸಂಖ್ಯಾತ ಖೀಣಾಸವ ಅರಹಂತರು ಇದ್ದರು. ಅವರಿಗೂ ಸಹಾ ಬುದ್ಧರ ಧಮ್ಮದ ಆಳ್ವಿಕೆ ಸಾಧ್ಯವಿರಲಿಲ್ಲ. ಆದ್ದರಿಂದಾಗಿ ಭಗವಾನರು ಆತನ ಕೋರಿಕೆ ನಿರಾಕರಿಸಿದರು ಮತ್ತು ಆತನ ಮೋಹಕ್ಕೆ ಖಂಡಿಸಿದರು.
                ದೇವದತ್ತನು ಇದರಿಂದಾಗಿ ದ್ವೇಷದಿಂದ ಸೇಡಿನಿಂದ ತುಂಬಿಹೋದನು. ಆತನು ಬುದ್ಧರನ್ನು 3 ಬಾರಿ ಕೊಲ್ಲಲು ಪ್ರಯತ್ನಿಸಿದನು. ಮೊದಲಿಗೆ ಹಲವು ಧನುರ್ಧರರನ್ನು ಕೊಲ್ಲಲು ನೇಮಿಸಿದನು. ಆದರೆ ಬುದ್ಧ ಭಗವಾನರ ಅಸೀಮ ಮೈತ್ರಿಯಿಂದ ಮತ್ತು ಪ್ರಜ್ಞಾಶೀಲತೆಯಿಂದಾಗಿ ಅವರೆಲ್ಲರೂ ಬುದ್ಧಭಗವಾನರ ಶಿಷ್ಯರಾದರು. ನಂತರ ಗಿಜ್ಜಕೂಟ ಬೆಟ್ಟದ ಮೇಲೇರಿ ಅಲ್ಲಿಯ ದೊಡ್ಡ ಬಂಡೆಯನ್ನು ಬುದ್ಧರ ಮೇಲೆ ಉರುಳಿಸಿದನು. ಆದರೆ ಭಗವಾನರು ಪವಾಡಶಕ್ತಿಯಿಂದ ಪಾರಾದರು. ಆದರೂ ಹಿಂದಿನ ಕರ್ಮಫಲದ ಪರಿಣಾಮದಿಂದ ಕೇವಲ ಕಾಲಿನ ಹೆಬ್ಬೆರಳಿಗೆ ಗಾಯವಾಯಿತು. ನಂತರ ನಾಲಾಗಿರಿ ಆನೆಯನ್ನು ಉನ್ಮಾದಿಸಿ ಬುದ್ಧರ ಮೇಲೆ ಬಿಟ್ಟನು. ಆದರೆ ಭಗವಾನರ ಮೈತ್ರಿಯ ಪ್ರಬಲಶಕ್ತಿಯಿಂದಾಗಿ ಆನೆಯು ಸಹಾ ಪಳಗಿ ಶಾಂತವಾಗಿ ವಂದಿಸಿತು. ಆಗ ಈ ಪ್ರಯತ್ನಗಳು ವಿಫಲವಾದಾಗ ದೇವದತ್ತನು ಸಂಘಭೇದ ಮಾಡಲು, ಸಂಘವನ್ನು ಮುರಿಯಲು ಪ್ರಯತ್ನಿಸಿದನು. ಆದರೆ ಸಾರಿಪುತ್ತ ಮತ್ತು ಮೊಗ್ಗಲಾನರಿಂದ ಸಂಘ ಮತ್ತೆ ಒಂದಾಯಿತು.
                ಇದಾದ ಸ್ವಲ್ಪ ದಿನಗಳಲ್ಲಿ ದೇವದತ್ತನು ಕಾಯಿಲೆಗೆ ಬಿದ್ದನು. ಆತ ಒಂಭತ್ತು ತಿಂಗಳು ರೋಗದಿಂದ ನರಳಿದನು. ಕೊನೆಗೆ ಆತನಿಗೆ ಬುದ್ಧರ ಮಹೋನ್ನತೆ ಅರಿವಾಯಿತು. ಆತನಿಗೆ ತನ್ನ ಕಾರ್ಯಗಳ ಬಗ್ಗೆ ಪಶ್ಚಾತ್ತಾಪವುಂಟಾಯಿತು. ಆತನು ತನ್ನ ಶಿಷ್ಯರೊಂದಿಗೆ ಹೀಗೆ ಹೇಳಿದನು ನಾನು ಬುದ್ಧರನ್ನು ಕಾಣುವ ಇಚ್ಛುಕನಾಗಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ.
                ಆಗ ಆತನು ಶಿಷ್ಯರು ಹೀಗೆ ಉತ್ತರಿಸಿದರು ನೀನು ಆರೋಗ್ಯದಿಂದ ಕೂಡಿರುವಾಗ ಬುದ್ಧರನ್ನು ದ್ವೇಷಿಸಿದೆ. ಈಗ ಹೀಗೆ ಹೇಳುತ್ತಿರುವೆ, ನಾವು ನಿನಗೆ ಸಹಾಯ ಮಾಡಲಾರೆವು. ಆಗ ದೇವದತ್ತನು ಹೀಗೆ ಕೇಳಿಕೊಂಡನು ದಯವಿಟ್ಟು ನನ್ನನ್ನು ನಾಶಮಾಡಬೇಡಿ, ನಾನು ಬುದ್ಧರನ್ನು ದ್ವೇಷಿಸಿದ್ದು ನಿಜವಾದರೂ ಬುದ್ಧರು ಮಾತ್ರ ನನಗೆ ಕೂದಲಿನ ಮೊನೆಯಷ್ಟು ದ್ವೇಷಿಸಲಿಲ್ಲ ಎಂದು ಪಶ್ಚಾತ್ತಾಪಪಟ್ಟು ದುಃಖಿಸಿದನು.
                ಆ ಮಾತು ಸತ್ಯವಾಗಿತ್ತು. ಬುದ್ಧರ ಮೈತ್ರಿಯು ಸರ್ವರ ಮೇಲೂ ಸಮಾನವಾಗಿತ್ತು. ಅದು ರಾಹುಲನಾಗಿರಬಹುದು, ದೇವದತ್ತನಾಗಿರಬಹುದು, ಅಂಗುಲಿಮಾಲನಾಗಿರಬಹುದು ಒಂದು ಪಕ್ಷಿಯೇ ಆಗಿರಬಹುದು ಅವರ ನಿಸ್ವಾರ್ಥ, ಶುದ್ಧ ಪ್ರೀತಿ ಸರ್ವರ ಮೇಲೂ ಸಮಾನವಾಗಿತ್ತು.

                ದೇವದತ್ತನು ಬುದ್ಧರಿಂದ ಕ್ಷಮೆ ಯಾಚಿಸಲು ದೃಢವಾಗಿ ನಿರ್ಧರಿಸಿದ್ದನು. ಆತನ ಶಿಷ್ಯರು ಆತನಿಗೆ ಹೊತ್ತುಕೊಂಡು ಹೊರಟರು. ಅವರೆಲ್ಲರೂ ಜೇತವನದ ವಿಹಾರದ ಬಳಿ ಬಂದರು. ಆಗ ದೇವದತ್ತನಿಗೆ ಅಪಾರ ಬಾಯಾರಿಕೆಯಾಯಿತು. ಹೀಗಾಗಿ ಅವರು ಆತನ ಮಂಚವನ್ನು ಕೊಳದ ಬಳಿ ಕೆಳಗಿಳಿಸಿ ನೀರನ್ನು ತರಲು ಹೋದರು. ಆಗ ದೇವದತ್ತನು ಸಹಾ ಎರಡು ಪಾದಗಳನ್ನು ನೆಲದ ಮೇಲಿಟ್ಟು ನಿಂತನು. ತಕ್ಷಣವೇ ಭೂಮಿಯಿಂದ ಬಿರುಕುಂಟಾಗಿ ಕುಸಿದು, ಆತನು ಭೂಮಿಯೊಳಕ್ಕೆ ಹೋದನು. ಜ್ವಾಲೆಗಳು ಕಾಣಿಸಿಕೊಂಡು ಆತನಿಗೆ ಭೂಗರ್ಭದಲ್ಲಿ ಸೆಳೆದುಕೊಂಡು ಹೋದವು. ಆತನ ಕುಕರ್ಮ ಫಲದಿಂದ ಆತನಿಗೆ ಬುದ್ಧರ ದರ್ಶನ ಸಿಗದೆ ಹೋಯಿತು ಮತ್ತು ಆತನು ಅವೀಚಿ ನರಕದಲ್ಲಿ ಹುಟ್ಟಿದನು. ಹೀಗೆ ಆತನು ಇಹದಲ್ಲಿ ಮತ್ತು ಪರದಲ್ಲೂ ಅತ್ಯಂತ ದುಃಖ ಅನುಭವಿಸಿದನು. ಆತನಿಗೆ ಸಂಬಂಧಿಸಿದಂತೆ ಭಗವಾನರು ಈ ಮೇಲಿನ ಗಾಥೆಗಳನ್ನು ನುಡಿದರು. 

No comments:

Post a Comment