Friday 9 October 2015

dhammapada/brahmanavagga/26.40/devahita

ಪರಿಪೂರ್ಣತೆ ಸಾಧಿಸಿದವನೇ ಬ್ರಾಹ್ಮಣ
ಯಾರು ತನ್ನ ಹಿಂದಿನ ಜನ್ಮಗಳನ್ನು ನೋಡಿರುವವನೋ,
ಯಾರು ಸ್ವರ್ಗವನ್ನು ಮತ್ತು ಅಪಾಯ ಲೋಕಗಳನ್ನು ನೋಡಿರುವವನೋ,
ಯಾರು ಜನ್ಮಗಳ ಅಂತ್ಯಕ್ಕೆ ತಲುಪಿರುವವನೋ,
ಯಾರು ಅಭಿಜ್ಞಾಗಳನ್ನು ಸಾಧಿಸಿದ ಮುನಿಯೋ,
ಯಾರು ಭಿಕ್ಷು ಜೀವನದಲ್ಲಿ ಪರಿಪೂರ್ಣತೆ ಸಾಧಿಸಿರುವನೋ,
ಅಂತಹವನಿಗೆ ನಾನು ಬ್ರಾಹ್ಮಣ ಎನ್ನುತ್ತೇನೆ. (423)
ಗಾಥ ಪ್ರಸಂಗ 26.40
ದೇವಹಿತನ ದಾನ ಪ್ರಶ್ನೆ

                ಒಮ್ಮೆ ಭಗವಾನರು ವಾತದೋಷದಿಂದ ಕೂಡಿದ್ದರು. ಆಗ ಭಗವಾನರು ಭಿಕ್ಷು ಉಪವನವನ್ನು ಬ್ರಾಹ್ಮಣ ದೇವಾಂಗಿಕನ ಬಳಿಗೆ ಬಿಸಿನೀರಿಗಾಗಿ ಕಳುಹಿಸಿದರು, ಭಿಕ್ಷು ಉಪವವನು ಬ್ರಾಹ್ಮಣ ದೇವಾಂಗಿಕನ ಬಳಿಗೆ ಬಂದು ಸಂದೇಶ ತಿಳಿಸಿದನು. ಅದನ್ನು ಕೇಳಿ ಬ್ರಾಹ್ಮಣನು ಅತ್ಯಂತ ಆನಂದಭರಿತನಾದನು. ನಾನೆಷ್ಟು ಭಾಗ್ಯವಂತ! ಭಗವಾನರು ನನ್ನಲ್ಲಿಗೆ ಬಿಸಿನೀರಿಗೆ ಕಳುಹಿಸಿದ್ದಾರೆ.
                ಆಗ ಭಗವಾನರು ಬಿಸಿನೀರನ್ನು ಮತ್ತು ಹೂಜಿಯ ತುಂಬಾ ಕಾಕಂಬಿ (ಜೇನುಬೆಲ್ಲ) ಕೊಟ್ಟು ಕಳುಹಿಸಿದನು. ಆತನು ಬಿಸಿನೀರಿನ ದೊಡ್ಡ ಪಾತ್ರೆಯನ್ನು ತನ್ನ ಸೇವಕರಿಂದ ಕೊಟ್ಟು ಕಳುಹಿಸಿದನು. ಆಗ ಭಗವಾನರು ಬಿಸಿನೀರಿನ ಸ್ನಾನ ಮಾಡಿ ನಂತರ ಕಾಕಂಬಿಯನ್ನು ಬಿಸಿನೀರಿಗೆ ಬೆರೆಸಿ ಕುಡಿದಾಗ ವಾತದೋಷವು ಪರಿಹಾರವಾಯಿತು.
                ಆಗ ಬ್ರಾಹ್ಮಣನಿಗೆ ಪ್ರಶ್ನೆಯೊಂದು ಉದ್ಭವವಾಯಿತು: ಯಾರಿಗೆ ದಾನ ನೀಡಿದರೆ ಮಹತ್ಫಲ ಸಿಗುವುದು? ಇದನ್ನು ಭಗವಾನರ ಬಳಿಗೆ ಕೇಳೋಣವೆಂದು ಭಗವಾನರ ಬಳಿಗೆ ಬಂದು ಈ ಗಾಥೆಯನ್ನು ನುಡಿದನು:
                “ಯಾರಿಗೆ ಒಬ್ಬನು ದಾನ ನೀಡಬೇಕು?
                ಯಾರಿಗೆ ದಾನ ನೀಡಿದರೆ ಮಹತ್ಫಲ ಸಿಗುವುದು?
                ಹೇಗೆ ದಾನಿಗೆ ಮಹತ್ಫಲವು ಶ್ರೇಷ್ಠವಾಗುತ್ತದೆ.?”
                ಆಗ ಭಗವಾನರು ಉತ್ತರವಾಗಿ ಈ ಮೇಲಿನ ಗಾಥೆಯನ್ನು ನುಡಿದರು. (ಅಂದರೆ ಪರೋಕ್ಷವಾಗಿ ಗಾಥೆಯಲ್ಲಿ ಭಗವಾನರಿಗೆ ನೀಡಿದ ದಾನ ಮಹತ್ಫಲವೆಂದರು).
                    ಇಲ್ಲಿಗೆ ಧಮ್ಮಪದ ಗಾಥಪ್ರಸಂಗಗಳು ಮುಗಿಯಿತು.
                                              ಧನ್ಯವಾದಗಳು.



dhammapada/brahmanavagga/26.39/angulimala

ಸರ್ವ ವಿಜಯಿಯೇ ಬ್ರಾಹ್ಮಣ
ಭಯರಹಿತನು, ಉದಾತ್ತನು, ಪರಮವೀರನು,
ಮಹಷರ್ಿಯು, ಸರ್ವವಿಜಯಿಯು,
ಆಸೆರಹಿತನು (ದೋಷರಹಿತನು) ಪರಿಶುದ್ಧನಾಗಿರುವವನು,
ಆರ್ಯಸತ್ಯಗಳನ್ನು ಅರಿತವನು (ಬುದ್ಧ)
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.               (422)

ಗಾಥ ಪ್ರಸಂಗ 26.39
ಅಂಗುಲಿಮಾಲನ ನಿರ್ಭಯತೆ

                (ಅಂಗುಲಿಮಾಲನ ಬಗ್ಗೆ ವಿಸ್ತ್ರತ ವಿವರಣೆ ಈಗಾಗಲೇ 13ನೇ ಅಧ್ಯಾಯದ 6ನೇಯ ಪ್ರಸಂಗದಲ್ಲಿ ಬಂದಿದೆ (ಗಾಥಾ 173).
                ಒಮ್ಮೆ ರಾಜ ಪಸೇನದಿಯು ಹಾಗು ರಾಣಿ ಮಲ್ಲಿಕಾಳು ಭಗವಾನರಿಗೆ ಹಾಗು ಭಿಕ್ಷುಗಳಿಗೆ ಸರಿಸಾಟಿಯಿಲ್ಲದ ದಾನ ನೀಡಿದರು. (ಇದರ ಬಗ್ಗೆ ವಿವರಣೆಯು 13ನೇ ಅಧ್ಯಾಯದಲ್ಲಿ 10ನೇಯ ಪ್ರಸಂಗದಲ್ಲಿ ಬಂದಿದೆ (ಗಾಥಾ 177).
                ಆಗ ಪ್ರತಿ ಭಿಕ್ಷುವಿಗೂ ಆನೆಯು ಶ್ವೇತಛತ್ರಿಯನ್ನು ಹಿಡಿದು ನೆರಳನ್ನು ನೀಡುತ್ತಿತ್ತು. ಆದರೆ ಆ ಆನೆಗಳಲ್ಲಿ ಒಂದು ತೀರ ಚಿಕ್ಕದಾಗಿತ್ತು. ಜೊತೆಗೆ ಆ ಆನೆಯು ಪಳಗಿರಲಿಲ್ಲ. ಆ ಆನೆಯನ್ನು ಅಂಗುಲಿಮಾಲನಿಗೆ ಶ್ವೇತಛತ್ರಿಯನ್ನು ಹಿಡಿಯಲು ಮಾವುತರು ನಿರ್ಧರಿಸಿದರು. ಪ್ರತಿಯೊಬ್ಬರೂ ಆ ಪಳಗಿಲ್ಲದ ಆನೆಯಿಂದ ತೊಂದರೆ ಬರಬಹುದೆಂದು ನಿರೀಕ್ಷಿಸಿದ್ದರು. ಆದರೆ ಆ ಆನೆಯನ್ನು ಅಂಗುಲಿಮಾಲನ ಹತ್ತಿರ ತಂದೊಡನೆಯೇ ಆ ಆನೆಯೇ ನಮ್ರವಾಯಿತು.

                ನಂತರ ಈ ಘಟನೆ ಬಗ್ಗೆ ಅಂಗುಲಿಮಾಲನಿಗೆ ಭಿಕ್ಷುಗಳು ಆ ಆನೆಯನ್ನು ಕಂಡು ಹೆದರಿದೆಯಾ? ಎಂದು ಕೇಳಿದಾಗ, ಅವನು ಇಲ್ಲವೆಂದನು. ಇದರ ಬಗ್ಗೆ ಭಗವಾನರಿಗೆ ಹೋಗಿ ತಿಳಿಸಿದಾಗ ಭಗವಾನರು ಅಂಗುಲಿಮಾಲನನ್ನು ಅರಹಂತನೆಂದು ನುಡಿದು ಈ ಮೇಲಿನ ಗಾಥೆಯನ್ನು ಆತನ ಬಗ್ಗೆ ತಿಳಿಸಿದರು. 

dhammapada/brahmanavagga/26.38/dhammadinna

ಲಿಪ್ತರಹಿತನೇ ಬ್ರಾಹ್ಮಣ
ಯಾರು ಪ್ರತಿಯೊಂದರ ಭೂತಕಾಲಕ್ಕಾಗಲಿ, ಭವಿಷ್ಯಕ್ಕಾಗಲಿ ಅಥವಾ
ವರ್ತಮಾನಕ್ಕಾಗಲಿ ಅಂಟಿಲ್ಲವೋ, ಆದರೂ ತನ್ನದೆಂದು
ಯಾವುದಕ್ಕೂ ಭಾವಿಸುವುದಿಲ್ಲವೋ, ಲಿಪ್ತರಹಿತನೋ
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.               (421)



ಗಾಥ ಪ್ರಸಂಗ 26.38
ಧಮ್ಮಾದಿನ್ನ ಭಿಕ್ಷುಣಿಯ ಪ್ರಾಜ್ಞ ಉತ್ತರಗಳು

                ವಿಸಾಖನೆಂಬ ಉಪಾಸಕನು ಭಗವಾನರ ಬೋಧನೆಯನ್ನು ಆಲಿಸಿ ಅನಾಗಾಮಿ ಫಲವನ್ನು ಪಡೆದನು. ಆಗ ಆತನು ಹೀಗೆ ಯೋಚಿಸಿದನು: ನಾನು ನನ್ನ ಸಂಪತ್ತನ್ನು ನನ್ನ ಪತ್ನಿ ಧಮ್ಮಾದಿನ್ನಳಿಗೆ ನೀಡುವೆನು ಎನ್ನುತ್ತಾ ಮನೆಗೆ ಬಂದನು. ಸದಾ ಆತನು ಆಕೆಗೆ ಮುಗುಳ್ನಗುತ್ತಾ ದಿಟ್ಟಿಸುತ್ತಾ ಮನೆಗೆ ಬರುತ್ತಿದ್ದನು. ಆದರೆ ಇಂದು ಗಂಭೀರವಾಗಿ ಬಂದನು. ಆಕೆಗೆ ಇದು ಅರ್ಥವಾಗಲಿಲ್ಲ. ಆದರೂ ಊಟದ ಸಮಯದಲ್ಲಿ ಕೇಳುವೆನೆಂದುಕೊಂಡಳು. ಆದರೆ ಆತನು ಊಟದ ಸಮಯದಲ್ಲಿ ನಿಶ್ಶಬ್ದವಾಗಿಯೇ ಇದ್ದನು. ಈತನೇನಾದರೂ ಕೋಪಗೊಂಡಿರಬಹುದೇ ಎಂದು ಆಕೆ ಭಾವಿಸಿದಳು. ಆಹಾರ ಸೇವನೆಯ ನಂತರ ವಿಶಾಖನು ಆಕೆಗೆ ಹೀಗೆ ಹೇಳಿದನು: ಧಮ್ಮಾದಿನ್ನ ನನ್ನ ಎಲ್ಲಾ ಐಶ್ವರ್ಯ ಮನೆಯಲ್ಲಿದೆ, ಇದೆಲ್ಲವೂ ನಿನಗೆಯೇ ಸ್ವೀಕರಿಸು. ಆಕೆಗೆ ಅರ್ಥವಾಗದೆ ಹೀಗೆ ಕೇಳಿದಳು: ಪತಿಯೇ, ಇಂದು ನಿಮಗೆ ಏನಾಗಿದೆ?
                ಇಂದಿನಿಂದ ನಾನು ಪ್ರಾಪಂಚಿಕತೆಯಲ್ಲಿ ತೊಡಗಲಾರೆ.
                ಆಗ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಆಕೆಯು ಹೀಗೆ ಉತ್ತರಿಸಿದಳು: ನೀವು ಉಗಿದಂತಹ ಎಂಜಲನ್ನು ನಾನು ಸ್ವೀಕರಿಸುವವಳೆಂದು ಭಾವಿಸಿದಿರಾ? ನಾನು ಸಹಾ ಬಿಕ್ಷುಣಿಯಾಗುವೆನು.
                ಒಳ್ಳೆಯದು, ನನ್ನ ಪ್ರಿಯ ಪತ್ನಿಯೇ ಎಂದು ಆತನು ಆಕೆಗೆ ಭಿಕ್ಷುಣಿಯಾಗುವ ಅನುಮತಿಯನ್ನು ನೀಡಿದನು. ಸಂಘಕ್ಕೆ ಸೇರಿದ ಆಕೆಯು ಅಂದಿನಿಂದ ಭಿಕ್ಷುಣಿ ಧಮ್ಮಾದಿನ್ನಳಾದಳು.
                ಆಕೆಯು ಏಕಾಂತದಲ್ಲಿ ಸಾಧನೆ ಮಾಡಿ, ಅಭಿಜ್ಞಾಸಹಿತ ಅರಹಂತತ್ವವನ್ನು ಪ್ರಾಪ್ತಿ ಮಾಡಿದಳು. ನಂತರ ಆಕೆ ಹೀಗೆ ಯೋಚಿಸಿದಳು: ಈಗ ನನ್ನಿಂದ ಪ್ರೇರಿತರಾಗಿ ನನ್ನ ಬಂಧು-ಬಾಂಧವರೆಲ್ಲಾ ಪುಣ್ಯದ ಕಾರ್ಯಗಳಲ್ಲಿ ತೊಡಗುವರು.

                ಆಕೆ ರಾಜಗೃಹಕ್ಕೆ ಹಿಂತಿರುಗಿದಳು. ಈಕೆ ಏತಕ್ಕಾಗಿ ಹಿಂತಿರುಗಿದ್ದಾಳೆ ಎಂದು ತಿಳಿಯುವುದಕ್ಕೋಸ್ಕರವಾಗಿ ಆಕೆ ಇರುವಲ್ಲಿಗೆ ವಿಸಾಖನು ಹೋದನು. ಆಕೆಗೆ ವಂದಿಸಿ ಒಂದೆಡೆ ಕುಳಿತನು. ಏತಕ್ಕಾಗಿ ಭಿಕ್ಷುಣಿ ಜೀವನದಲ್ಲಿ ಅಸಂತೃಪ್ತಳಾದೆ ಎಂದು ಕೇಳಲು ಇಚ್ಛಿಸದೆ, ಆತನು ಆಕೆಗೆ ಮಾರ್ಗ ಮತ್ತು ಫಲದ ಬಗ್ಗೆ ಪ್ರಶ್ನಿಸಿದನು. ತಕ್ಷಣ ಆಕೆಯು ಅವೆಲ್ಲಕ್ಕೂ ಉತ್ತರಿಸಿದಳು. ನಂತರ ಆತನು ನಿಬ್ಬಾಣ ಮತ್ತು ಅರಹತ್ವ ಪ್ರಾಪ್ತಿಯ ಬಗ್ಗೆ ಪ್ರಶ್ನಿಸಲು ತೊಡಗಿದಾಗ ಆಕೆಯು ಹೀಗೆ ಉತ್ತರಿಸಿದಳು: ಅದ್ಭುತ, ಸೋದರ ವಿಶಾಖ, ಆದರೆ ಅರಹತ್ವದ ಬಗ್ಗೆ ಅರಿಯಬೇಕಿದ್ದರೆ ಭಗವಾನರಿಗೆ ಸಮೀಪಿಸಿ ಅವರಲ್ಲಿ ಕೇಳಬೇಕು ಎಂದಳು. (ಇವರಿಬ್ಬರ ಸಂಭಾಷಣೆ ಮಜ್ಝಿಮ ನಿಕಾಯದ ವೇದಲ್ಲ ಸುತ್ತದಲ್ಲಿ ಸಿಗುವುದು). ಆಗ ವಿಶಾಖ ಆಕೆಗೆ ವಂದಿಸಿ, ಅಲ್ಲಿಂದ ಎದ್ದು ಭಗವಾನರ ಬಳಿಗೆ ಬಂದನು. ಭಗವಾನರಲ್ಲಿ ಆಕೆಯೊಂದಿಗೆ ನಡೆದ ಸಂಭಾಷಣೆಯೆಲ್ಲವನ್ನು ತಿಳಿಸಿದನು. ಆಗ ಭಗವಾನರು ಹೀಗೆ ಉತ್ತರಿಸಿದರು: ನನ್ನ ಮಗಳಾದ ಧಮ್ಮಾದಿನ್ನಳು ಸರಿಯಾಗಿಯೇ ಉತ್ತರಿಸಿದ್ದಾಳೆ, ಈ ಪ್ರಶ್ನೆಗಳು ನನಗೂ ಕೇಳಿದ್ದರೂ ಇದೇ ಉತ್ತರಗಳು ನನ್ನಿಂದಲೂ ಬರುತ್ತಿತ್ತು ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು. ನಂತರ ಆಕೆಯು ಅರಹಂತಳೆಂದು ತಿಳಿಸಿದರು. 

dhammapada/brahmanavagga/26.37/vangisa

ಅರಹಂತನೇ ಬ್ರಾಹ್ಮಣ
ಯಾರು ಜೀವಿಗಳ ಮರಣವನ್ನು ಮತ್ತು ಪುನಃ ಉತ್ಪತ್ತಿಯನ್ನು
ಸರ್ವಹಂತದಲ್ಲೂ ಅರಿತಿರುವನೋ, ಹಾಗು ಅಂಟದವನೋ,
ಸುಗತನೋ, ಬುದ್ಧನೋ ಅಂತಹವನನ್ನು
ನಾನು ಬ್ರಾಹ್ಮಣ ಎನ್ನುತ್ತೇನೆ.      (419)
ಯಾರ ಗತಿಯನ್ನು ದೇವ, ಗಂಧರ್ವ, ಮನುಷ್ಯರ್ಯಾರು
ತಿಳಿಯಲಾರರೋ, ಕ್ಷೀಣಾಸವನೋ
(ಅಸವಗಳನ್ನು ಕ್ಷೀಣಿಸಿ ನಾಶಗೊಳಿಸಿರುವವನೋ)
ಅರಹಂತನೋ ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.        (420)
ಗಾಥ ಪ್ರಸಂಗ 26.37
ತಲೆಬುರುಡೆ ತಟ್ಟಿ ಭವಿಷ್ಯ ತಿಳಿಯುವ ವಂಗೀಸ


                ರಾಜಗೃಹದಲ್ಲಿ ವಂಗೀಶ (ವಂಗೀಸ)ನೆಂಬ ಬ್ರಾಹ್ಮಣನಿದ್ದನು. ಆತನಲ್ಲಿ ವಿಶಿಷ್ಟತೆಯೊಂದಿತ್ತು. ಅದೆಂದರೆ, ಮಾನವನ ತಲೆಬುರುಡೆ ತಟ್ಟುತ್ತಲೇ ಈ ಮಾನವ ಎಲ್ಲಿ ಜನಿಸಿದ್ದಾನೆ ಎಂದು ನಿಖರವಾಗಿ ತಿಳಿಸುತ್ತಿದ್ದನು. ಈ ಮನುಷ್ಯ ನರಕದಲ್ಲಿ ಹುಟ್ಟಿದ್ದಾನೆ ಅಥವಾ ಪ್ರಾಣಿ ಲೋಕದಲ್ಲಿ ಹುಟ್ಟಿದ್ದಾನೆ ಅಥವಾ ಪ್ರೇತವಾಗಿದ್ದಾನೆ ಅಥವಾ ಪುನಃ ಮಾನವನಾಗಿದ್ದಾನೆ ಎಂದು ಹೇಳುತ್ತಿದ್ದನು. ಹೀಗಾಗಿ ಆತನಲ್ಲಿ ಈ ಶಕ್ತಿ ಕಂಡಂತಹ ಬ್ರಾಹ್ಮಣರು ಈ ವಿದ್ಯೆಯನ್ನು ಹಣಕ್ಕಾಗಿ ಬಳಸಲು ಆರಂಭಿಸಿದರು. ಆತನಿಗೆ ಕೆಂಪುವಸ್ತ್ರ ಧರಿಸಿ ಆತನನ್ನು ರಾಜ್ಯದಾದ್ಯಂತ ಕರೆದುಕೊಂಡು ಹೋಗಿ ಹೀಗೆ ಹೇಳುತ್ತಿದ್ದರು: ಈ ಬ್ರಾಹ್ಮಣನಾದ ವಂಗೀಶನು ಮಾನವರ ತಲೆಬುರುಡೆಯನ್ನು ತಟ್ಟಿ ಅವರು ಸತ್ತನಂತರ ಮರು ಹುಟ್ಟಿರುವಂತಹ ಸ್ಥಿತಿಯನ್ನು ಹೇಳುತ್ತಾನೆ. ನಿಮ್ಮ ಬಂಧು-ಬಾಂಧವರ ಗತಿಯನ್ನು ತಿಳಿಯಬಯಸುವಂತಹವರು ಈತನನ್ನು ಭೇಟಿಮಾಡಿರಿ.
                ಹೀಗೆ ಜನರು ತಮ್ಮ ಶಕ್ತ್ಯಾನುಸಾರವಾಗಿ ಹತ್ತು ಅಥವಾ ಇಪ್ಪತ್ತು ಅಥವಾ ನೂರು ಅಥವಾ ಸಾವಿರಗಳನ್ನು ತೆತ್ತು ತಮ್ಮ ಬಂಧು-ಬಾಂಧವರ ಗತಿ ತಿಳಿಯುತ್ತಿದ್ದರು.
                ಅವರು ಹೀಗೆಯೇ ಸಾಗುತ್ತಾ ಶ್ರಾವಸ್ಥಿಗೆ ಬಂದರು. ಶ್ರಾವಸ್ಥಿಯ ಜೇತವನದ ಬಳಿಯಲ್ಲಿ ವಾಸಸ್ಥಳವನ್ನು ತೆಗೆದುಕೊಂಡರು. ಪ್ರತಿದಿನ ಉಪಹಾರದ ನಂತರ ಜನರು ಸುಗಂಧಗಳಿಂದ, ಪುಷ್ಪಮಾಲೆಗಳಿಂದ ಕೂಡಿ ಜೇತವನಕ್ಕೆ ಧಮ್ಮವನ್ನು ಆಲಿಸಲು ಹೋಗುತ್ತಿದ್ದರು.
                ಆಗ ವಂಗೀಶನ ಕಡೆಯವರು ನೀವೆಲ್ಲಿಗೆ ಹೋಗುತ್ತಿರುವಿರಿ? ಎಂದು ಪ್ರಶ್ನಿಸಿದರು. ಧಮ್ಮವನ್ನು ಆಲಿಸಲು ವಿಹಾರಕ್ಕೆ ಹೋಗುತ್ತಿದ್ದೇವೆ.
                ಅಲ್ಲಿ ಹೋಗಿ ನೀವು ಏನು ಲಾಭ ಪಡೆಯುವಿರಿ? ನಮ್ಮಲ್ಲಿ ವಂಗೀಶನೆಂಬ ಬ್ರಾಹ್ಮಣನಿದ್ದಾನೆ, ಆತನು ಶವಗಳ ಕಾಪಾಲಗಳನ್ನು ತಟ್ಟುತ್ತಲೇ, ಸತ್ತಿರುವವನು ಎಲ್ಲಿ ಹುಟ್ಟಿರುವನೆಂದು ಹೇಳಿಬಿಡುತ್ತಾನೆ, ನಿಮ್ಮ ಬಾಂಧವ್ಯರಾರಾದರೂ ಸತ್ತಿದ್ದರೆ, ಬಂದು ಪರೀಕ್ಷಿಸಿರಿ.
                ನಿಮ್ಮ ವಂಗೀಶ ಎಷ್ಟರವನು, ಭಗವಾನರು ತಲೆಬುರುಡೆ ತಟ್ಟದೆಯೇ, ಶವವನ್ನು ಸಹಾ ನೋಡದೆಯೇ ಶವದ ಮುಂದಿನ ಗತಿಯಷ್ಟೇ ಅಲ್ಲ, ಬದುಕಿರುವಾಗಲೇ ಆತನು ಎಲ್ಲಿ ಹುಟ್ಟುವನೆಂದು ಹೇಳಬಲ್ಲರು. ಆದ್ದರಿಂದ ನಮ್ಮ ಭಗವಾನರೇ ಶ್ರೇಷ್ಠರಾಗಿದ್ದಾರೆ ಎಂದು ಉಪಾಸಕರು ಉತ್ತರಿಸಿದರು.
                ಇದನ್ನು ನಂಬದ ವಂಗೀಶ ಹಾಗು ಆತನ ಬ್ರಾಹ್ಮಣರು ಸತ್ಯವನ್ನು ಪರೀಕ್ಷಿಸಲು ವಿಹಾರಕ್ಕೆ ಬಂದರು.
                ಭಗವಾನರಿಗೆ ಈತನ ಉದ್ದೇಶ ತಿಳಿದುಹೋಗಿ ಅವರು ಭಿಕ್ಷುವೊಬ್ಬನಿಗೆ ಹೇಳಿ ನರಕದಲ್ಲಿ ಹುಟ್ಟಿರುವವನ ಕಪಾಲ, ಪ್ರಾಣಿಜನ್ಮವೆತ್ತಿದವನ ಕಪಾಲ, ಪ್ರೇತನಾಗಿರುವವನ ಕಪಾಲ, ದೇವತ್ವ ಹೊಂದಿದವನ ತಲೆಬುರುಡೆ ಹಾಗು ಅರಹಂತರಾಗಿರುವವನ ತಲೆಬುರುಡೆಯನ್ನು ತರಿಸಿ ಒಂದು ಸಾಲಾಗಿ ಇರಿಸಿದರು.
                ವಂಗೀಶ ಭಗವಾನರತ್ತ ಪ್ರವೇಶಿಸುತ್ತಲೇ ಭಗವಾನರು ಆತನಿಗೆ ಹೀಗೆ ಪ್ರಶ್ನಿಸಿದರು: ಓಹ್, ನೀನೇ ಅಲ್ಲವೆ, ಕಪಾಲಗಳನ್ನು ತಟ್ಟಿ ಅದರ ಪುನರ್ಜನ್ಮವನ್ನು ನುಡಿಯುವವನು. ಇಲ್ಲಿ ಐದು ತಲೆಬರುಡೆಗಳಿವೆ, ಅವರಲ್ಲಿ ಯಾರ್ಯಾರು ಎಲ್ಲಿ ಹುಟ್ಟಿರುವವರು ಎಂದು ತಿಳಿಸಬಲ್ಲೆಯಾ?”
                “ಖಂಡಿತವಾಗಿ.
                “ಹಾಗಾದರೆ ತಿಳಿಸು.
                “ಈ ತಲೆಬುರುಡೆಯವನು ನರಕದಲ್ಲಿ ಹುಟ್ಟಿರುವನು.
                “ಸಾಧು, ಸಾಧು ನಿಜ, ಮುಂದುವರೆಸು.
                “ಈ ತಲೆಬುರುಡೆಯವ ಪ್ರಾಣಿ ಜನ್ಮವೆತ್ತಿದ್ದಾನೆ……., ಈತನು ಪ್ರೇತವಾಗಿದ್ದಾನೆ, ………ಈ ತಲೆಬರುಡೆಯವನು ದೇವಜನ್ಮವೆತ್ತಿದ್ದಾನೆ.
                “ಸಾಧು, ಸಾಧು ನಿಜ, ಮುಂದುವರೆಸು, ಇದು ಯಾರ ತಲೆಬುರುಡೆ?”
                ಈ ಬಾರಿ ಐದನೆಯ ತಲೆಬರುಡೆಯ ಭವಿಷ್ಯವನ್ನು ಆತನು ಅದರ ಮುಂದಿನ ಗತಿ ಹೇಳಲಾರದೆ ಹೋದನು.
                “ವಂಗೀಶ, ನಿನಗೆ ಇದರ ಮುಂದಿನ ಗತಿ ತಿಳಿದಿಲ್ಲ, ಆದರೆ ನನಗೆ ತಿಳಿದಿದೆ.
                “ಭಗವಾನ್, ನನಗೂ ಇದನ್ನು ಕಲಿಸಿಕೊಡಿ.
                “ಆದರೆ ಭಿಕ್ಷುಗಳಲ್ಲದವರಿಗೆ ನಾನು ಕಲಿಸಲಾರೆ.
                ಆಗ ವಂಗೀಶನು ಹೀಗೆ ಯೋಚಿಸಿದನು: ನಾನು ಈ ವಿದ್ಯೆಯನ್ನು ಬಲ್ಲವನಾದರೆ ಇಡೀ ಭಾರತಕ್ಕೆ ಅಗ್ರವ್ಯಕ್ತಿ ಆಗುತ್ತೇನೆ.
                ಆಗ ಆತನು ತನ್ನ ಸಹಚರರಿಗೆ ಹೀಗೆ ಹೇಳಿದನು: ನೀವು ಇಲ್ಲೇ ಕೆಲದಿನಗಳು ಇರಿ, ನಾನು ಭಿಕ್ಷುವಾಗಬಯಸುತ್ತೇನೆ.
                ನಂತರ ವಂಗೀಸನು ಭಿಕ್ಷುವಾಗಿ ಭಂತೆ (ಪೂಜ್ಯ) ವಂಗೀಸನಾದನು. ಭಗವಾನರು ಆತನಿಗೆ 32 ದೇಹದ ಅಂಗಗಳ ಧ್ಯಾನವಾದ ಕಾಯಗತಾನುಸತಿ ಧ್ಯಾನವನ್ನು ಅಭ್ಯಸಿಸಲು ಹೇಳಿದರು. ಅದರಲ್ಲಿ ಬರುವ ಪದಗಳ ಜಪ ಮಾಡಲು ಹಾಗು ಕಲ್ಪಿಸುವ ವಿಧಾನ ಹೇಳಿದರು.
                ಇಲ್ಲಿ ಬ್ರಾಹ್ಮಣರು ಕಾಲಕಾಲಕ್ಕೆ ಬಂದು ಕಲಿತಿದ್ದು ಆಯಿತೆ? ಎಂದು ಕೇಳಲು ಬರುತ್ತಿದ್ದರು. ಇನ್ನೂ ಆಗಿಲ್ಲವೆಂದು ವಂಗೀಸನು ನುಡಿಯುತ್ತಿದ್ದನು. ಆದರೆ ಕೆಲದಿನಗಳ ನಂತರ ಆತನು ಅರಹಂತನಾಗಿಬಿಟ್ಟನು. ಅನಂತರ ಆ ಬ್ರಾಹ್ಮಣರು ಬಂದು ಕಲಿತಿದ್ದು ಆಯಿತೆ? ಎಂದು ಪ್ರಶ್ನಿಸಿದಾಗ ವಂಗೀಸನು ಹೀಗೆ ಉತ್ತರಿಸಿದನು: ಓ ಬ್ರಾಹ್ಮಣರೇ, ನೀವು ಈ ನಗರದಿಂದಲೇ ಹೊರಡಿ, ನಾನು ನಿಮ್ಮ ಜೊತೆ ಬರಲಾರೆ, ಅಷ್ಟೇ ಅಲ್ಲ, ನನಗೆ ಆ ವಿದ್ಯೆಯನ್ನು ಕಲಿಯುವ ಅವಶ್ಯಕತೆಯೇ ಇಲ್ಲ.
                ಇದನ್ನು ಕೇಳಿದ ಭಿಕ್ಷುಗಳು ಭಗವಾನರ ಬಳಿಗೆ ಬಂದು ಹೀಗೆ ಕೇಳಿದರು: ಭಗವಾನ್, ಪೂಜ್ಯ ವಂಗೀಸನು ಅರಹಂತನಾದೆನೆಂದು ಹೇಳುತ್ತಿದ್ದಾನೆ, ಇದು ನಿಜವೇ?

                ಹೌದು ಭಿಕ್ಷುಗಳೇ! ಯಾರು ಜೀವಿಗಳ ಜನನ ಮರಣ ಬಲ್ಲವನೋ... ಆತನೇ ಅರಹಂತನೆಂದು ಈ ಮೇಲಿನ ಗಾಥೆಯನ್ನು ನುಡಿದರು.

dhammapada/brahmanavagga/26.36/thedancerofveluvana

ಇಷ್ಟ ಅನಿಷ್ಟಗಳ ಮೀರಿರುವವನೇ ಬ್ರಾಹ್ಮಣ
ಯಾರು ಬೇಸರ (ಅನಿಷ್ಟ) ಹಾಗು ಆನಂದ (ಇಷ್ಟ) ಗಳನ್ನು ವಜರ್ಿಸಿರುವನೋ,
ಶಾಂತಸ್ವರೂಪಿಯಾಗಿ, ಕಲ್ಮಶರಹಿತನಾಗಿರುವನೋ,
ಯಾರು ಸರ್ವ ಲೋಕಗಳನ್ನು ಜಯಿಸಿದ ವೀರನೋ
ಅಂತಹ ಪ್ರಯತ್ನಶಾಲಿಗೆ ನಾನು ಬ್ರಾಹ್ಮಣ ಎನ್ನುತ್ತೇನೆ.  (418)

ಗಾಥ ಪ್ರಸಂಗ 26.36
ವೇಲುವನದ ನೃತ್ಯಗಾರ ಅರಹಂತನಾದನು

                ವೇಲುವನದಲ್ಲಿ ನೃತ್ಯಗಾರನು ಈ ಹಿಂದಿನ ಪ್ರಸಂಗದಂತೆಯೇ ಬೋಧನೆ ಆಲಿಸಿ ಭಿಕ್ಷುವಾಗಿ ಅರಹಂತನಾದನು. ಹಿಂದಿನ ಪ್ರಸಂಗದಂತೆಯೇ ಭಿಕ್ಷುಗಳು ಬೇರೆ ನೃತ್ಯಗಾರನನ್ನು ಕಂಡು ನಿಮಗೆ ನೃತ್ಯವೂ ಈಗಲೂ ಇಷ್ಟವೇ ಎಂದು ಪ್ರಶ್ನಿಸಿದಾಗ, ನನಗೆ ಇಷ್ಟ, ಅನಿಷ್ಟ ಯಾವುದೂ ಇಲ್ಲ ಎಂದು ಉತ್ತರಿಸಿದಾಗ ಆತನು ಸುಳ್ಳುಗಾರನೆಂದು ಭಗವಾನರ ಬಳಿ ಕರೆತಂದಾಗ, ಭಗವಾನರು ಆತ ಅರಹಂತನೆಂದು ಘೋಷಿಸಿ ಈ ಮೇಲಿನ ಗಾಥೆಯನ್ನು ನುಡಿದರು.

dhammapada/brahmanavagga/26.35/nataputta

ಸರ್ವಬಂಧನ ಮುಕ್ತನೇ ಬ್ರಾಹ್ಮಣ
ಯಾರು ಮನುಷ್ಯ ಲೋಕದ ಬಂಧನಗಳನ್ನು ತ್ಯಜಿಸಿ,
ದಿವ್ಯಲೋಕಗಳ ಬಂಧನಗಳಿಂದಲೂ ಮೀರಿ ಹೋಗಿರುವನೋ,
ಪ್ರತಿ ಬಂಧನಗಳಿಂದಲೂ ಪೂರ್ಣ ಮುಕ್ತನೋ
ಅಂಥವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.  (417)

ಗಾಥ ಪ್ರಸಂಗ 26.35
ನಾಟ್ಯಪುತ್ತ (ನಾಟಪುತ್ತ) ಅರಹಂತನಾದನು

                ಒಮ್ಮೆ ನಾಟಪುತ್ತನೆಂಬ ನೃತ್ಯಗಾರನು, ತನ್ನ ಪ್ರದರ್ಶನಗಳನ್ನು ಸ್ಥಳದಿಂದ ಸ್ಥಳಕ್ಕೆ ತೋರಿಸುತ್ತಾ ಬರುತ್ತಿರುವಾಗ, ಭಗವಾನರ ಬೋಧನೆ ಆಲಿಸಿದನು. ತಕ್ಷಣ ಲೌಕಿಕ ಜೀವನ ವಜರ್ಿಸಿ ಭಿಕ್ಷುವಾಗಿ, ಕೆಲಕಾಲದ ನಂತರ ಅರಹಂತನೂ ಆಗಿಬಿಟ್ಟನು.
                ಒಂದುದಿನ ಒಂದು ಹಳ್ಳಿಯಲ್ಲಿ ಆಹಾರಕ್ಕಾಗಿ ಭಿಕ್ಷುಗಳೊಂದಿಗೆ ಹೋಗುತ್ತಿರುವಾಗ, ಅಲ್ಲಿ ಒಬ್ಬನು ನೃತ್ಯವನ್ನು ಪ್ರದಶರ್ಿಸುತ್ತಿದ್ದನು. ಅದನ್ನು ಕಂಡಂತಹ ಭಿಕ್ಷುಗಳು ಆತನಿಗೆ ಹೀಗೆ ಕೇಳಿದರು: ಸೋದರ, ನೀನು ಸಹಾ ಹೀಗೆಯೇ ಇಂತಹ ನೃತ್ಯದ, ನಾಟಕಗಳ ಪ್ರದರ್ಶನ ನೀಡುತ್ತಿದ್ದೆ. ಈಗಲೂ ಸಹಾ ಅಂತಹ ವಿಷಯಗಳಲ್ಲಿ ನೀನು ಆನಂದಪಡುತ್ತಿಯಲ್ಲವೇ?
                ಇಲ್ಲ, ಖಂಡಿತವಾಗಿಯೂ ಇಲ್ಲ.

                ಆಗ ಭಿಕ್ಷು ಈತನ ಮಾತನ್ನು ನಂಬದೆ ಭಗವಾನರಲ್ಲಿ ಈತನು ಸುಳ್ಳು ನುಡಿಯುತ್ತಿದ್ದಾನೆ ಎಂದು ದೂರು ನೀಡಿದರು. ಆಗ ಭಗವಾನರು ನನ್ನ ಪುತ್ರ ಸರ್ವ ಬಂಧನಗಳಿಗೆ ಅತೀತನಾಗಿದ್ದಾನೆ ಎಂದು ತಿಳಿಸಿ ಈ ಮೇಲಿನ ಗಾಥೆಯನ್ನು ನುಡಿದರು. 

dhammapada/brahmanavagga/26.34/jyotika

ತೃಷ್ಣೆ ತ್ಯಾಗಿಯೇ ಬ್ರಾಹ್ಮಣ
ಯಾರು ಇಲ್ಲಿ ತೃಷ್ಣೆಯನ್ನು ತ್ಯಜಿಸಿರುವನೋ,
ಎಲ್ಲವನ್ನು ತ್ಯಾಗಮಾಡಿ, ಮನೆಯಿಲ್ಲದವನಾಗಿ
ಯಾರು ತೃಷ್ಣೆಯನ್ನು ನಾಶಮಾಡಿ, ಭವದ ಅಂತ್ಯಕ್ಕೆ
ಬಂದಿರುವನೋ, ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.      (416)

[416 ಗಾಥೆಗೆ ಒಂದು ವಿಶೇಷತೆಯಿದೆ. ಒಂದೇ ಗಾಥೆಗೆ 2 ವಿಭಿನ್ನ ಘಟನೆಗಳಿವೆ. ಘಟನೆಗಳು ಬೇರೆ ಇದ್ದರೂ ಸಹಾ (ಭಗವಾನರು ಈ ಗಾಥೆಯನ್ನು ಎರಡೂ ಕಡೆ ಬಳಸಿದ್ದಾರೆ). ಧಮ್ಮಪದ ಅಟ್ಠಕಥದಲ್ಲಿ ಇದೊಂದೇ ಗಾಥೆ ಈ ರೀತಿ ಬಳಸಲಾಗಿದೆ.]
ಗಾಥ ಪ್ರಸಂಗ 26.34
ಜ್ಯೋತಿಕನ ದಿವ್ಯಭವನ ಹಾಗು ದಿವ್ಯಶಕ್ತಿ

                ಜೋತಿಕ ರಾಜಗೃಹದ ಖ್ಯಾತ ಶ್ರೀಮಂತನಾಗಿದ್ದನು. ಆತನು ಅತ್ಯಂತ ಭವ್ಯವಾದ ಭವನದಲ್ಲಿ ವಾಸಿಸುತ್ತಿದ್ದನು. ಅದರ ರಕ್ಷಣೆಗಾಗಿ ಏಳು ಗೋಡೆಗಳು ಅದನ್ನು ಸುತ್ತುವರೆದಿತ್ತು. ಪ್ರತಿಯೊಂದು ಗೋಡೆಗೂ ಪ್ರವೇಶದ್ವಾರವಿದ್ದು ಒಂದೊಂದು ಪ್ರವೇಶದ್ವಾರಕ್ಕೂ ಯಕ್ಷರು (ಮಾನವಾತೀತ ಜೀವಿಗಳು) ಕಾವಲು ಕಾಯುತ್ತಿದ್ದವು. ಈತನ ಐಶ್ವರ್ಯದ ಖ್ಯಾತಿಯು ಉದ್ದಗಲಕ್ಕೂ ಹಬ್ಬಿತ್ತು ಮತ್ತು ಬಹಳಷ್ಟು ಜನರು ಈ ಭವನವನ್ನು ಕಾಣಲು ಬರುತ್ತಿದ್ದರು.
                ಒಮ್ಮೆ ರಾಜ ಬಿಂಬಿಸಾರನು ಜೋತಿಕನನ್ನು ನೋಡಲು ತನ್ನ ಮಗನಾದ ಅಜಾತಶತ್ರುವಿನೊಂದಿಗೆ ಬಂದಿದ್ದನು. ಆ ಭವನವನ್ನು ನೋಡಿದ ಕೂಡಲೇ ಅಜಾತಶತ್ರುವು ಈ ರೀತಿಯ ನೀಚ ಸಂಕಲ್ಪ ತನ್ನಲ್ಲೇ ಮಾಡಿಕೊಂಡನು: ನಾನು ರಾಜನಾದ ಕೂಡಲೇ ಹೇ ಜೋತಿಕ, ನಿನ್ನನ್ನು ಈ ಭವನದಲ್ಲಿ ಇರಲು ಬಿಡಲಾರೆ, ಈ ಭವನ ಇಂದಿನಿಂದ ನನ್ನದೇ.
                ರಾಜ ಬಿಂಬಿಸಾರನು ಅಲ್ಲಿಂದ ಹೊರಡುವಾಗ ಜೋತಿಕನು ರಾಜರಿಗೆ ಅಗಲವಾದ ಅತ್ಯಮೂಲ್ಯ ಮಾಣಿಕ್ಯವನ್ನು ಉಡುಗೊರೆಯಾಗಿ ನೀಡಿದನು. ತನ್ನ ಭವನಕ್ಕೆ ಭೇಟಿ ಮಾಡುವ ಪ್ರತಿಯೊಬ್ಬರಿಗೂ ಉಡುಗೊರೆ ನೀಡುವ ಸಂಪ್ರದಾಯವನ್ನು ಜೋತಿಕ ಪಾಲಿಸುತ್ತಿದ್ದನು. ಯಾವಾಗ ಅಜಾತಸತ್ತು (ಅಜಾತಶತ್ರು)ವು ತನ್ನ ತಂದೆಯನ್ನು ಕೊಲ್ಲಿಸಿ ಸಿಂಹಾಸನವನ್ನು ಏರಿದನೋ, ಅದಾದ ಕೆಲದಿನಗಳಲ್ಲೇ ಆತನು ಜೋತಿಕನ ಭವನವನ್ನು ಪಡೆಯಲು ಅಪಾರ ಸೈನಿಕರೊಡನೆ ಬಂದನು. ಆದರೆ ಪ್ರತಿಯೊಂದು ಬಾಗಿಲುಗಳಲ್ಲಿ ಯಕ್ಷರು ಕಾವಲು ಕಾಯುತ್ತಿದ್ದರು.
                ಒಮ್ಮೆ ಜೋತಕನು ಬೆಳಿಗ್ಗೆ ಆಹಾರ ಸೇವಿಸಿ ಉಪೋಸಥ ವ್ರತ ಪಾಲಿಸಲು ನಿರ್ಧರಿಸಿ ಅಷ್ಠಾಂಗ ಶೀಲದ ದೀಕ್ಷೆ ಕೈಗೊಂಡು ಆತನು ವಿಹಾರಕ್ಕೆ ತೆರಳಿ ಭಗವಾನರ ಧಮ್ಮವನ್ನು ಆಲಿಸುತ್ತಿದ್ದನು. ಹೀಗಾಗಿ ಯಕ್ಖ ಯಮಕೋಲಿ ಪ್ರಥಮ ಹೆಬ್ಬಾಗಿಲನ್ನು ಕಾಯುತ್ತಿದ್ದನು. ಆಗ ನುಸುಳಲು ಬಂದಂತಹ ಅಜಾತಸತ್ತು ಮತ್ತು ಆತನ ಸೈನಿಕರನ್ನು ಎಲ್ಲಿಗೆ ಹೋಗುತ್ತಿರುವಿರಿ? ಎಂದು ಪ್ರಶ್ನಿಸಿ, ಅವರನ್ನು ದಿಕ್ಕಾಪಾಲಾಗಿ ಓಡುವಂತೆ ಮಾಡಿದನು. ಆಗ ರಾಜನು ಸಹಾ ರಕ್ಷಣೆಗಾಗಿ ಜೋತಿಕನು ಇರುವಲ್ಲಿಗೇ ಬಂದನು. ರಾಜನನ್ನು ಕಂಡು ಜೋತಿಕನು ಪೀಠದಿಂದ ಎದ್ದು ಗೌರವಿಸಿದನು.
                “ಮಹಾರಾಜ, ಏನು ವಿಷಯ? “ಎಂದು ಕೇಳಿದನು.
                “ಜೋತಿಕ, ನಿನ್ನ ಮನುಷ್ಯರನ್ನು ನನ್ನೊಂದಿಗೆ ಹೋರಾಟಕ್ಕೆ ಬಿಟ್ಟು, ಇಲ್ಲಿ ಧಮ್ಮವನ್ನು ಆಲಿಸುವಂತೆ ನಟಿಸುತ್ತಿರುವೆಯಾ?”
                “ಹಾಗಾದರೆ ಮಹಾಪ್ರಭು, ನೀವು ನನ್ನ ಭವನವನ್ನು ತೆಗೆದುಕೊಳ್ಳಲೆಂದು ಬಂದಿದ್ದಿರಾ?”
                “ಹೌದು, ಆ ಉದ್ದೇಶದಿಂದಲೇ ಬಂದಿದ್ದೆನು.
                “ಆದರೆ ಮಹಾಪ್ರಭು, ನನ್ನ ಇಚ್ಛೆಗೆ ವಿರುದ್ಧವಾಗಿ ಸಾವಿರ ರಾಜರೇ ಆಗಲಿ, ನನ್ನ ಭವನವನ್ನು ತೆಗೆದುಕೊಳ್ಳಲಾಗುವುದಿಲ್ಲ.
                ಈ ಮಾತಿನಿಂದ ಅತ್ಯಂತ ಕೋಪಗೊಂಡ ರಾಜನು ಹೀಗೆ ಕೇಳಿದನು: ಅಂದರೆ, ನೀನು ರಾಜನಾಗಬೇಕೆಂದಿರುವೆಯಾ?”
                “ಇಲ್ಲ ಪ್ರಭು, ನನ್ನ ಅರ್ಥ ಅದಲ್ಲ, ನಾನು ಹೇಳಿದ್ದು ಏನೆಂದರೆ ಪೂರ್ವಜನ್ಮದ ಸುಕೃತ ಫಲದಿಂದಾಗಿ ಯಾರೇ ಆಗಲಿ, ರಾಜರೇ ಇರಬಹುದು ಅಥವಾ ಕಳ್ಳರೇ ಇರಬಹುದು. ನನ್ನ ಇಚ್ಛೆಗೆ ವಿರುದ್ಧವಾಗಿ ದಾರದ ತುಂಡನ್ನು ತೆಗೆದುಕೊಂಡು ಹೋಗಲಾರರು.
                ‘ಹಾಗಾದರೆ ನಿನ್ನ ಅನುಮತಿಯಿಂದಲೇ ನಾವು ಭವನವನ್ನು ತೆಗೆದುಕೊಳ್ಳಬಹುದೇ?”
                “ಮಹಾಪ್ರಭು, ಇದೋ ನನ್ನ ಕೈ ಬೆರಳುಗಳಲ್ಲಿ 20 ಉಂಗುರಗಳಿವೆ, ನನಗೆ ಇದನ್ನು ನೀಡುವ ಇಚ್ಛೆಯಿಲ್ಲ, ನಿಮಗೆ ಸಾಧ್ಯವಾದರೆ ತೆಗೆದುಕೊಳ್ಳಿ ನೋಡೋಣ.
                ಈ ಸವಾಲಿನಿಂದ ರಾಜನಿಗೆ ಕೆರಳಿಸಿದಂತಾಯಿತು. ಆತ ನೆಲದಿಂದಲೇ 18 ಮೊಳದಷ್ಟು ಮೇಲಕ್ಕೆ ಗಾಳಿಯಲ್ಲಿ ಹಾರಿದನು. ನಂತರ ಅಲ್ಲಿಂದಲೇ ಇನ್ನಷ್ಟು ಮೇಲೆ ಹಾರಿ ನೆಲದ ಮೇಲೆ ನಿಂತನು. ಅಂತಹ ಶಕ್ತಿವಂತನಾಗಿದ್ದ ರಾಜನು ತನ್ನ ಇಡೀ ಬಲಪ್ರಯೋಗ ಮಾಡಿದರೂ ಸಹಾ ಆತನು ಜೋತಿಕನ ಬೆರಳುಗಳಲ್ಲಿನ ಒಂದು ಉಂಗುರವನ್ನು ಸಹಾ ತೆಗೆಯಲಾಗಲಿಲ್ಲ.
                ಆಗ ಜೋತಿಕನು ರಾಜನಿಗೆ ಹೀಗೆ ಹೇಳಿದನು: ಮಹಾಪ್ರಭು, ತಮ್ಮ ಮೇಲಂಗಿಯನ್ನು ಚಾಚಿರಿ. ರಾಜನು ಮೇಲಂಗಿಯನ್ನು ಚಾಚಿದಾಗ, ಜೋತಿಕನು ತನ್ನ ಬೆರಳುಗಳನ್ನು ನೇರವಾಗಿ ಮಾಡಿ, ಮೇಲಂಗಿಯತ್ತ ಬಾಗಿಸಿದನು. ತಕ್ಷಣ ಆ ಎಲ್ಲಾ ಉಂಗುರಗಳು ಅದರಲ್ಲಿ ಬಿದ್ದವು.
                ಆಗ ಜೋತಿಕನು ಹೀಗೆ ನುಡಿದನು: ಹೀಗೆ ಮಹಾಪ್ರಭು, ನನ್ನ ಇಚ್ಛೆಯಿಲ್ಲದೆ ನನ್ನ ಯಾವುದನ್ನೂ ನೀವು ತೆಗೆದುಕೊಳ್ಳಲಾರಿರಿ ಎಂದು ನುಡಿದ ಜೋತಿಕನು ರಾಜನ ಉಗ್ರ ಕೋಪದಿಂದ ತನ್ನನ್ನು ನಿಯಂತ್ರಿಸಲಾರದ್ದನ್ನು ಕಂಡನು.
                “ಮಹಾಪ್ರಭು, ನಾನು ಈ ಲೋಕದಿಂದ ಬಿಡುಗಡೆ ಹೊಂದಿ ಭಿಕ್ಷುವಾಗಲು ಇಚ್ಛಿಸಿದ್ದೇನೆ, ತಾವು ಅಪ್ಪಣೆ ನೀಡುವಿರಾ? “ಆಗ ರಾಜನಿಗೆ ಈಗ ದಾರಿ ಸುಗಮವಾಯಿತೆಂದು ಭಾವಿಸಿ ತಕ್ಷಣ ಭಿಕ್ಷುವಾಗು ಎಂದನು.
                ನಂತರ ಆ ಕ್ಷಣದಿಂದಲೇ ಇಡೀ ಲೋಕದ ವಸ್ತುಗಳಿಂದ ನಿರಾಮಿಷನಾಗಿ, ಆತನು ಭಗವಾನರ ಸಮ್ಮುಖದಲ್ಲೇ ಭಿಕ್ಷುವಾದನು. ಅದೇದಿನ ಅರಹಂತನಾಗಿಬಿಟ್ಟನು. ಅಂದಿನಿಂದ ಆತನು ಪೂಜ್ಯ (ಭಂತೆ) ಜೋತಿಕನಾಗಿಬಿಟ್ಟನು. ಆದರೆ ಆತನು ಅರಹಂತನಾದ ಕ್ಷಣದಲ್ಲೇ ಆತನ ಭವನವೂ ಸೇರಿ, ಆತನ ಸಕಲ ಐಶ್ವರ್ಯವೆಲ್ಲವೂ ಮಾಯವಾದವು ಮತ್ತು ಆತನ ದಿವ್ಯಶಕ್ತಿಗಳು ಮತ್ತು ಸಂಪತ್ತು ಉತ್ತರ ಕುರುವಿನಲ್ಲಿದ್ದ ಆತನ ಪತ್ನಿಗೆ ಸೇರಿದವು.
                ಒಂದುದಿನ ಭಿಕ್ಷುಗಳ ಆತನಿಗೆ ಹೀಗೆ ಕೇಳಿದರು: ಜೋತಿಕ, ನೀವು ಭವನಕ್ಕಾಗಲಿ, ಅಥವಾ ಪತ್ನಿಗಾಗಲಿ ಬಯಸುತ್ತಿರುವಿರಾ?”
                “ಖಂಡಿತವಾಗಿಯೂ ಇಲ್ಲ.

                ಇದರ ಸಂಬಂಧ ಭಿಕ್ಷುಗಳು ಭಗವಾನರ ಬಳಿಗೆ ಬಂದು ತಿಳಿಸಿದಾಗ, ಭಗವಾನರು ಈ ಮೇಲಿನ ಗಾಥೆ ನುಡಿದು, ಆತನು ಅರಹಂತನೆಂದು ಸಾರಿದರು.