Saturday 15 November 2014

dhammapada/yamakavagga/1:14/the difference between wise and scholar

ಸಿದ್ಧಾಂತವೇ ಸಾಧನೆಯಲ್ಲ, ಜ್ಞಾನವೇ ಸಾಕ್ಷಾತ್ಕಾರವಲ್ಲ
ಒಬ್ಬನು ಪವಿತ್ರಗ್ರಂಥಗಳನ್ನು ಎಷ್ಟೇ ಓದಿರಲಿ ಅಥವಾ ಎಚ್ಚರಿಸಲಿ. ಆದರೆ ಅದರಂತೆ ಆತನು ಅನುಸರಿಸದಿದ್ದರೆ, ಆತನು ಪರರ ಗೋವುಗಳನ್ನು ಎಣಿಸುವವನಂತೆ ಪವಿತ್ರ ಜೀವನದ ಫಲದಲ್ಲಿ ಭಾಗಿಯಾಗುವುದಿಲ್ಲ.      (19)
ಪವಿತ್ರ ಗ್ರಂಥಗಳನ್ನು ಅಲ್ಪವಾಗಿ ಅರಿತಿದ್ದರೂ ಅದರಂತೆ ಅನುಸರಿಸುವವರು ಹಾಗು ರಾಗ, ದ್ವೇಷ ಮತ್ತು ಮೋಹವನ್ನು ತ್ಯಜಿಸುವವನು, ನಿಜವಾಗಿ ಅರಿತವನು ಸುವಿಮುಕ್ತ ಚಿತ್ತವುಳ್ಳವನು ಆದ ಆತನು ಇಲ್ಲಿಯಾಗಲಿ ಅಥವಾ ನಂತರದ ಕಾಲದಲ್ಲಿಯಾಗಲಿ ಪವಿತ್ರ ಜೀವನದ ಫಲದಲ್ಲಿ ಭಾಗಿಯಾಗುತ್ತಾನೆ. (20)


ಗಾಥ ಪ್ರಸಂಗ 1:14
ವಿದ್ವಾಂಸ ಮತ್ತು ಅರಹಂತ
                ಸದ್ವಂಶಸ್ಥರಾದ ಇಬ್ಬರು ಮಿತ್ರರು ಭಿಕ್ಷುಗಳಾದರು. ಅವರಲ್ಲಿ ಒಬ್ಬ ತಿಪಿಟಕದ ಅಧ್ಯಯನದಲ್ಲಿ ತಲ್ಲೀನನಾಗಿ ವಿದ್ವಾಂಸನಾದನು ಮತ್ತು ಚೆನ್ನಾಗಿ ಬೋಧಿಸುತ್ತಿದ್ದನು. ಈ ರೀತಿಯಿಂದಾಗಿ ಆತನು 18 ಭಿಕ್ಷುಗಳ ಗುಂಪಿಗೆ ಬೋಧಕನಾದನು. ಆದರೆ ಇನ್ನೊಬ್ಬ ಭಿಕ್ಷುವು ತಿಳಿದಿರುವುದನ್ನು ಚೆನ್ನಾಗಿ ಪಾಲಿಸತೊಡಗಿದನು. ಆತನು ಶೀಲದಲ್ಲಿ ಅತ್ಯಂತ ನಿಷ್ಠಾವಂತನಾದನು. ಸದಾ ಜಾಗ್ರತೆಯನ್ನು ಹೊಂದಿದವನು, ಅತ್ಯಂತ ಪ್ರಯತ್ನಶಾಲಿಯು, ಧ್ಯಾನಸಿದ್ದನು ಮತ್ತು ಕೊನೆಗೆ ಅರಹಂತನೇ ಆದನು. ವಿಪಶ್ಶನದ ಆಳಜ್ಞಾನ ಸಾಕ್ಷತ್ಕರಿಸಿದನು, ಮುಕ್ತನಾದನು. ಆದರೆ ಪರರಿಗೆ ಇದು ಗೊತ್ತಾಗಲಿಲ್ಲ.
                ಒಮ್ಮೆ ಜೇತವನದಲ್ಲಿ ಬುದ್ಧಭಗವಾನರು ತಂಗಿದ್ದಾಗ ಅಲ್ಲಿ ಈ ಇಬ್ಬರು ಭಿಕ್ಷುಗಳು ಭೇಟಿಯಾದರು. ಮೊದಲನೆಯವ ತನ್ನ ಪಾಂಡಿತ್ಯ ಪ್ರದಶರ್ಿಸಿ, ಎರಡನೆಯ ಭಿಕ್ಷುವನ್ನು ಕೀಳಾಗಿ ಭಾವಿಸಿದನು. ಈ ಭಿಕ್ಷುವು ಅತ್ಯಂತ ಕಡಿಮೆ ಸಿದ್ಧಾಂತವನ್ನು ತಿಳಿದಿದ್ದಾನೆ. ಈತನ ಜ್ಞಾನವು ಅಪಕ್ವವಾಗಿದೆ ಎಂದು ತಿಳಿದು ತನ್ನ ಬಗ್ಗೆ ಅಹಂಭಾವ ವ್ಯಕ್ತಪಡಿಸಿದನು. ಆತನ ಜೊತೆ ವಾದವಿವಾದ ಮಾಡಿ ಪ್ರಶ್ನಿಸಿ ಆತನಿಗೆ ತೇಜೋಭಂಗ ಮಾಡಲು ಸಿದ್ಧನಾದನು. ಆದರೆ ಹಾಗೆ ಮಾಡಿದರೆ ಆತನಿಗೆ ಅರಹಂತರ ತೇಜೋವಧೆಯ ಪಾಪಕ್ಕೆ ಸಿಲುಕಿ ದೀರ್ಘಕಾಲ ದುಃಖಕ್ಕೆ ಸಿಲುಕುತ್ತಿದ್ದನು. ಆದ್ದರಿಂದ ಬುದ್ಧರಿಗೆ ಈ ವಿಷಯ ತಿಳಿದು ಆತನನ್ನು ಸರಿದಾರಿಗೆ ತಲು ನಿರ್ಧರಿಸಿ ಅವರನ್ನು ಆ ಕ್ಷಣವೇ ಭೇಟಿಯಾದರು. ಹಾಗು ಅವರನ್ನು ಭಗವಾನರು ವಿಪಶ್ಶನ ಧ್ಯಾನಗಳ ಮಾರ್ಗ ಮತ್ತು ಫಲಗಳ ಬಗ್ಗೆ ಪ್ರಶ್ನಿಸಿದರು. ಒಣಜ್ಞಾನಿಯಾದ ಪಂಡಿತನಿಗೆ ಉತ್ತರಿಸಲು ಆಗಲಿಲ್ಲ. ಆದರೆ ಸಾಧನೆಯಲ್ಲಿ ಪ್ರವೀಣ ಮತ್ತು ಅರಹಂತ ಭಿಕ್ಷುವು ಮಾತ್ರ ತನ್ನ ಸಾಕ್ಷಾತ್ಕಾರದ ಅನುಭವದಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದನು.

                ಆಗ ಭಗವಾನರು ಅರಹಂತ ಭಿಕ್ಷುವಿಗೆ ತುಂಬಾ ಪ್ರಶಂಸಿದರು ಮತ್ತು ವಿದ್ವಾಂಸನಿಗೆ ಯಾವರೀತಿಯ ಪ್ರಶಂಸೆ ಸಿಗಲಿಲ್ಲ. ಆಗ ಭಗವಾನರು ಈ ಗಾಥೆಗಳನ್ನು ನುಡಿದರು.

No comments:

Post a Comment