Saturday 25 July 2015

dhammapada/dhammatthavagga/19.10/noteasythearahanthhood

ನಿಬ್ಬಾಣ ಪ್ರಾಪ್ತಿಯವರೆಗೂ ನಿಮ್ಮ ಪ್ರಯತ್ನದಲ್ಲಿ ತೃಪ್ತಿ ತಾಳದಿರಿ
"ಕೇವಲ ಶೀಲಾಚರಣೆಗಳಿಂದಾಗಲಿ ಅಥವಾ
ಅಪಾರ ಕಲಿಕೆಯಿಂದಾಗಲಿ ಅಥವಾ
ಸಮಾಧಿ ಲಾಭಗಳಿಂದಾಗಲಿ ಅಥವಾ           
ಏಕಾಂತ ಜೀವನದಿಂದಾಗಲಿ"      (271)

"ಅಥವಾ ಅಲೌಕಿಕರು ಅನುಭವಿಸುವ
ತ್ಯಾಗದ ಸುಖಗಳಿಂದ ನಾನು
ಆವೃತನಾಗಿರುವೆ ಎಂದಾಗಲಿ ನೀವು
ಭಿಕ್ಷುಗಳೇ ತೃಪ್ತರಾಗದಿರಿ. ಆಸವಕ್ಷಯದ
(ಕ್ಲೇಷಗಳ ಕ್ಷಯ/ನಿಬ್ಬಾಣ) ಪ್ರಾಪ್ತಿಯ ಹೊರತು ತೃಪ್ತರಾಗದಿರಿ.
(ಶ್ರದ್ಧೆ ಮತ್ತು ಶ್ರಮಗಳನ್ನು ನಿಲ್ಲಿಸದಿರಿ)."        (272)

ಗಾಥ ಪ್ರಸಂಗ 19:10
ಅರಹಂತರಾಗುವುದು ಅಷ್ಟು ಸುಲಭವಲ್ಲ


            ಶ್ರಾವಸ್ತಿಯ ಭಿಕ್ಷುಗಳ ಗುಂಪೊಂದು ತಮ್ಮಲ್ಲೇ ಹೀಗೆ ಅವಲೋಕಿಸಿಕೊಂಡರು. "ಓಹ್, ನಾವಂತು ಶೀಲವಂತರಾಗಿದ್ದೇವೆ. ನಾವು ಶುದ್ಧ ಸದಾಚಾರಿಗಳಾಗಿದ್ದೇವೆ. ನಾವಂತು ಅಪಾರ ಕಲಿತಿದ್ದೇವೆ, ನಾವಂತು ಪರಮ ಏಕಾಂತ ಸ್ಥಳಗಳಲ್ಲಿ ವಿಹರಿಸುವವರಾಗಿದ್ದೇವೆ. ಓಹ್ ನಾವಂತು ಸಮಾಧಿಗಳನ್ನು ಪ್ರಾಪ್ತಿಮಾಡಿ ಅಭಿಜ್ಞಾಗಳನ್ನು (ಅತೀಂದ್ರಿಯ ಶಕ್ತಿ) ಪಡೆದಿದ್ದೇವೆ. ನಮಗಂತು ಅರಹಂತ ಪ್ರಾಪ್ತಿಯು ಕಷ್ಟಕರವಲ್ಲ, ನಾವು ಇಚ್ಛಿಸಿದ ವೇಳೆಗೆ ನಾವು ಅರಹಂತರಾಗಬಲ್ಲೆವು."
            ಒಂದುದಿನ ಅವರೆಲ್ಲರೂ ಭಗವಾನರ ಬಳಿಗೆ ಬಂದರು. ಅವರೆಲ್ಲರೂ ವಂದಿಸಿ ಒಂದೆಡೆ ನಿಂತರು. ಆಗ ಭಗವಾನರು ಅವರಿಗೆ ಹೀಗೆ ಕೇಳಿದರು: ಭಿಕ್ಷುಗಳೇ, ನೀವು ಆಸವಕ್ಷಯಗಳನ್ನು ಸಿದ್ಧಿಸಿದಿರೆ? ಅರಹಂತತ್ವವನ್ನು ಪ್ರಾಪ್ತಿಮಾಡಿದಿರೆ? ನಿಮ್ಮ ಶಿಕ್ಷಣದ ಉದ್ದೇಶ ಪೂರ್ಣಗೊಂಡಿತೆ?"
            "ಭಗವಾನ್, ನಾವು ಇಂತಿಂಥ ಸಂತತ್ವದ ಹಂತದಲ್ಲಿರುವೆವು. ಆದ್ದರಿಂದಾಗಿ ನಾವು ಇಚ್ಛಿಸಿದಾಗ ಅರಹಂತರಾಗಬಲ್ಲೆವು, ಈ ರೀತಿಯ ಶ್ರದ್ಧೆಯಿಂದಲೇ ನಾವು ಕೂಡಿರುವೆವು."

            ಆಗ ಭಗವಾನರು ಹೀಗೆ ಹೇಳಿದರು: "ಭಿಕ್ಷುಗಳೇ, ಈ ರೀತಿಯ ಸಡಿಲಿಕೆಯ ಯೋಚನೆ, ಈ ರೀತಿಯ ಸಡಿಲಿಕೆಯ ನಿಧರ್ಾರ ಸರಿಯಲ್ಲ. ಶೀಲಗಳ ಪಾಲನೆ, ದುತಾಂಗಗಳ ಪಾಲನೆ ಅಥವಾ ಸಮಾಧಿಗಳ ಪ್ರಾಪ್ತಿಗಳಿಂದಲೇ ಅಥವಾ ಅನಾಗಾಮಿತ್ವದಿಂದಲೇ ನೀವು ತೃಪ್ತರಾಗಬಾರದು, 'ಈ ಜನ್ಮದಲ್ಲಿ ನಮಗೆ ದುಃಖವಿಲ್ಲ ಬಿಡು' ಎಂದಾಗಲಿ, ಅಥವಾ ಇದೇರೀತಿಯ ಮುಂದೂಡಿಕೆ ಮಾಡುವ ಯೋಚನೆಗಳು ಸರಿಯಲ್ಲ. ನೀವು ಆಸವಕ್ಷಯ ಅಥವಾ ನಿಬ್ಬಾಣ ಪ್ರಾಪ್ತಿಯವರೆಗೂ ತೃಪ್ತರಾಗಬಾರದು, ಶ್ರದ್ಧೆ ಕುಗ್ಗಿಸಬಾರದು, ಅಲಕ್ಷ ಮಾಡಬಾರದು, ಪರಿಶ್ರಮದಲ್ಲಿ ದೃಢತೆ ತಗ್ಗಿಸಬಾರದು" ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು.

dhammapada/dhammatthavagga/19.9/ariya

ಪ್ರಾಣಿಗಳನ್ನು ಹಿಂಸಿಸುವವನು ಆರ್ಯನಲ್ಲ (ಶ್ರೇಷ್ಠನಲ್ಲ)

"ಪ್ರಾಣಿಗಳನ್ನು ಹಿಂಸಿಸುವವನು ಆರ್ಯನಲ್ಲ,
ಸರ್ವ ಪ್ರಾಣಿಗಳೊಂದಿಗೆ ಅಹಿಂಸೆಯಲ್ಲಿರುವವನೇ         
ಶ್ರೇಷ್ಠನೆಂದು (ಆರ್ಯನೆಂದು) ಕರೆಯಲ್ಪಡುತ್ತಾನೆ."        (270)

ಗಾಥ ಪ್ರಸಂಗ 19:9
ಆರ್ಯನೆಂಬ (ಆರಿಯಾ) ಮೀನುಗಾರನ ಪ್ರಸಂಗ
            ಆಗ ಭಗವಾನರು ಶ್ರಾವಸ್ತಿಯ ಜೇತವನದಲ್ಲಿದ್ದರು. ಅಂದು ಮುಂಜಾನೆಯೇ ಭಗವಾನರಿಗೆ ಇಂದು ಆರ್ಯನೆಂಬ ಮೀನುಗಾರನು ಸೋತಪತ್ತಿ ಫಲ ಪಡೆಯುವನು ಎಂದು ಮಹಾ ಕರುಣಾ ಸಮಾಪತ್ತಿಯಲ್ಲಿ ತಿಳಿಯಿತು.

            ಶ್ರಾವಸ್ತಿಯ ಉತ್ತರ ದ್ವಾರದ ಬಳಿ ಆರಿಯಾನೆಂಬ ಮೀನುಗಾರನಿದ್ದನು. ಆತನ ಬಳಿಗೆ ಭಗವಾನರು ಅಂದು ಊಟ ಮುಗಿಸಿಕೊಂಡು, ಭಿಕ್ಷುಗಳ ಸಮೇತ, ಆತನು ಮೀನುಗಳು ಹಿಡಿಯುತ್ತಿದ್ದಂತಹ ಸ್ಥಳಕ್ಕೆ ಬಂದು ಅಲ್ಲಿ ನಿಂತರು. ಆರಿಯಾನು ಭಗವಾನರನ್ನು ಕಂಡಕೂಡಲೇ ಆತನಲ್ಲಿ ಪಾಪಲಜ್ಜೆ ಮತ್ತು ಪಾಪಭೀತಿಗಳು ಉಂಟಾಗಿ ತಕ್ಷಣ ಆತನು ಮೀನು ಹಿಡಿಯುತ್ತಿದ್ದಂತಹ ಗಾಳವನ್ನು ಎಸೆದು, ಭಗವಾನರ ಬಳಿಗೆ ಬಂದು ನಿಂತನು. ಆಗ ಭಗವಾನರು ಅಲ್ಲಿ ಇದ್ದಂತಹ ಭಿಕ್ಷುಗಳ ಹೆಸರುಗಳನ್ನು ಕೇಳತೊಡಗಿದರು. ಅವರೆಲ್ಲ ತಮ್ಮ ತಮ್ಮ ಹೆಸರುಗಳನ್ನು ತಿಳಿಸುತ್ತಾ ಹೋದರು. ಕೊನೆಗೆ ಭಗವಾನರು ಆರಿಯಾನನ್ನು "ನಿನ್ನ ಹೆಸರೇನು?" ಎಂದು ಕೇಳಿದರು. ಅದಕ್ಕೆ ಆತನು "ಆರಿಯಾ" ಎಂದನು. ಆಗ ಭಗವಾನರು ಆತನಿಗೆ ಹೀಗೆ ನುಡಿದರು: "ಶ್ರೇಷ್ಠರು (ಆರಿಯಾ) ಜೀವಹಿಂಸೆ ಮಾಡುವುದಿಲ್ಲ. ಆದರೆ ನೀನು ಶ್ರೇಷ್ಠನೆಂದು (ಆರಿಯಾನೆಂದು) ಹೆಸರನ್ನು ಹೊಂದಿಯೂ ಸಹಾ ಜೀವಹಿಂಸೆ ಮಾಡುವುದು ಸರಿಯಲ್ಲ. ಕೊನೇ ಪಕ್ಷ ಹೆಸರಿಗೆ ತಕ್ಕಂತೆ ಜೀವಿಸಬೇಕಷ್ಟೇ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.
 

dhammapada/dhammatthavagga/19.8/silentones

ಮೌನಿಯೇ ಮುನಿಯಲ್ಲ
"ಕೇವಲ ಮೌನಿಯಾಗಿರುವುದರಿಂದಲೇ
ಮೂರ್ಖನು ಮತ್ತು ಗೊಂದಲದಲ್ಲಿರುವವನು ಮುನಿಯಾಗಿಬಿಡುವುದಿಲ್ಲ,
ಬದಲಾಗಿ, ತುಲವನ್ನು ಹಿಡಿದು ತೂಗಿ
ಶ್ರೇಷ್ಠತೆಯನ್ನು ಗ್ರಹಿಸಿ, ಸ್ವೀಕರಿಸಿ, ಪಾಪವನ್ನು
ವಜರ್ಿಸುವವನೇ ಪಂಡಿತನಾಗಿರುತ್ತಾನೆ." (268)

"ಪಾಪವನ್ನು ಪೂರ್ಣವಾಗಿ ಪರಿತ್ಯಜಿಸುವಂತಹ
ಮುನಿಯೇ ಮುನಿಯಾಗಿರುತ್ತಾನೆ.
ಯಾವ ಮುನಿಯು ಉಭಯ ಲೋಕಗಳನ್ನು
ಅರಿಯುತ್ತಾನೋ, ಅಂತಹವ ಮುನಿಯೆಂದು ಕರೆಯಲ್ಪಡುತ್ತಾನೆ."    (269)

ಗಾಥ ಪ್ರಸಂಗ 19:8
ಮೌನಚಾರಣೆಯ ಪಂಥಿಯರು


            ಶ್ರಾವಸ್ತಿಯಲ್ಲಿ ಪರಪಂಥಿಯರ ಗುಂಪೊಂದು ಇತ್ತು. ಅವರು ಆಹಾರ ಸೇವನೆಯ ನಂತರ ಆತಿಥ್ಯ ನೀಡಿದವರಿಗೆ ಈ ರೀತಿ ಹಾರೈಸುತ್ತಿದ್ದರು. "ನಿಮಗೆ ಶಾಂತಿ ದೊರೆಯಲಿ, ನಿಮಗೆ ಸುಖ ದೊರೆಯಲಿ, ನಿಮ್ಮ ಆಯಸ್ಸು ವೃದ್ಧಿಯಾಗಲಿ, ಇಂತಿಂಥ ಸ್ಥಳಗಳಲ್ಲಿ ಕೆಸರಿದೆ, ಇಂತಿಂಥ ಸ್ಥಳಗಳಲ್ಲಿ ಮುಳ್ಳುಗಳಿವೆ. ಅಂಥಹ ಕಡೆಗಳಲ್ಲಿ ನೀವು ಸಂಚರಿಸದಿರಿ". ಹೀಗೆ ನುಡಿದು, ಅವರು ಅಲ್ಲಿಂದ ನಿರ್ಗಮಿಸುತ್ತಿದ್ದರು. ಆದರೆ ಭಿಕ್ಷುಗಳು ಮಾತ್ರ ನಿಶ್ಶಬ್ದವಾಗಿ ಆಹಾರ ಸ್ವೀಕರಿಸಿ ನಿಶ್ಶಬ್ದವಾಗಿಯೇ ಅಲ್ಲಿಂದ ಹೊರಟು ಹೋಗುತ್ತಿದ್ದರು. ಭಗವಾನರು ಬೋಧಿ ಪ್ರಾಪ್ತಿ ಮಾಡಿದ ಮೊದಲ 20 ವರ್ಷಗಳು ಹೀಗೆಯೇ ನಡೆದವು. ಇದರಿಂದಾಗಿ ದಾನ ಮಾಡಿದ ಜನರಲ್ಲಿ ಗೊಂದಲವುಂಟಾಯಿತು. "ನಾವು ಪರಪಂಥಿಯರಿಗೆ ದಾನ ಮಾಡಿದಾಗ ಅವರು ಧನ್ಯವಾದ ಆಶೀವರ್ಾದವೆಲ್ಲಾ ನುಡಿಯುವರು, ಆದರೆ ಈ ಬೌದ್ಧ ಭಿಕ್ಷುಗಳು ನಿಶ್ಶಬ್ದವಾಗಿಯೇ, ಮೌನವಾಗಿಯೇ ಹೋಗಿಬಿಡುವರಲ್ಲ, ಇದು ಹೇಗೆ?" ಈ ವಿಷಯವನ್ನು ಭಿಕ್ಷುಗಳು ಭಗವಾನರಿಗೆ ತಲುಪಿಸಿದರು.
            ಆಗ ಭಗವಾನರು ಭಿಕ್ಷುಗಳಿಗೆ ಈ ರೀತಿ ತಿಳಿಸಿದರು: "ಭಿಕ್ಷುಗಳೇ, ಇನ್ನು ನೀವು ಆತಿಥ್ಯ ಪಡೆಯುವವರ ಹತ್ತಿರ ಮೈತ್ರಿಯಿಂದ ವ್ಯವಹರಿಸಿ, ಆಹಾರ ಸೇವನೆಯ ನಂತರ ಧನ್ಯವಾದ ಅಪರ್ಿಸಿ, ಹಾರೈಸಿ" ಎಂದು ನುಡಿದರು.
            ನಂತರ ಭಿಕ್ಷುಗಳು ಹಾಗೆಯೇ ಹಾರೈಸಲು ತೊಡಗಿದರು. ಆಗ ವಿರೋಧಿಗಳಿಗೆ ಏನೊಂದು ಹೇಳಲು ದಾರಿ ಸಿಗದಂತಾಯಿತು. ಇದರಿಂದಾಗಿ ಉಪಾಸಕರಿಗೆ ಭಾರಿ ಉತ್ತೇಜನ ಸಿಕ್ಕಿದಂತಾಯಿತು. ಅವರು ಇನ್ನಷ್ಟು ಆತಿಥ್ಯ ನೀಡತೊಡಗಿದರು. ಇದರಿಂದಾಗಿ ಬೌದ್ಧ ಭಿಕ್ಷುಗಳಿಗೆ ಭಾರಿ ಲಾಭವಾದಂತಾಯಿತು. ಈಗ ಪರಪಂಥೀಯರಿಗೆ ಆತಿಥ್ಯ ತುಸು ಕಷ್ಟಕರವಾಗಿ ದೊರೆಯಲಾರಂಭಿಸಿತು. ಆಗ ಅವರು ಹೊಸ ಉಪಾಯ ಮಾಡಿದರು. ಅದು ಹೀಗಿತ್ತು: "ನಾವು ಈಗ ಮೌನವಾಗಿ ಇದ್ದುಬಿಡೋಣ. ನಮ್ಮನ್ನು ಪರರು ಮುನಿಗಳೆಂದು ಭಾವಿಸುವರು, ಆದರೆ ಬೌದ್ಧ ಭಿಕ್ಷುಗಳು ಧಮ್ಮಪ್ರವಚನ ಮಾಡುವುದರಿಂದಾಗಿ ಚೆನ್ನಾಗಿ ಕಾಣಿಸಲಾರರು."

            ಭಗವಾನರಿಗೆ ಅವರ ಈ ನಿಲುವಿನ ಆಚರಣೆಯನ್ನು ಭಿಕ್ಷುಗಳು ಗಮನಕ್ಕೆ ತಂದರು. ಆಗ ಭಗವಾನರು ಹೀಗೆ ನುಡಿದರು: "ಭಿಕ್ಷುಗಳೇ, ಮೌನಿಯಾದ ಮಾತ್ರಕ್ಕೆ ಮುನಿಗಳಾಗುವುದಿಲ್ಲ, ಭಯದಿಂದಲು ಮೌನಿಗಳಾಗುವರು, ಅಜ್ಞಾನದಿಂದಾಗಿ ಕೆಲವರು ಮೌನಿಗಳಾದರೆ, ನಂಬಿಕೆಯಿಲ್ಲದ ಕಾರಣ ಕೆಲವರು ಮೌನಿಗಳಾಗುವರು. ಕೆಲವರು ತಮ್ಮ ಜ್ಞಾನವನ್ನು ಹಂಚಲು ಇಷ್ಟಪಡದೆ ಮೌನಿಗಳಾಗುವರು. ಆದ್ದರಿಂದಾಗಿ ನಾನು ಹೇಳುವುದು ಏನೆಂದರೆ ಪಾಪಗಳನ್ನು ಪೂರ್ಣವಾಗಿ ದಮಿಸಿದವರೇ ಮುನಿಗಳೆಂದು ಕರೆಯಲ್ಪಡುವರು" ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು.

dhammapada/dhammatthavagga/19.7/brahmin

ಪರಿಶುದ್ಧವಾಗಿ ಜೀವಿಸುವವರೇ ಭಿಕ್ಷು

"ಪರರು ನೀಡುವ ಆಹಾರದಿಂದ
ಜೀವಿಸಿದ ಮಾತ್ರಕ್ಕೆ ಭಿಕ್ಷುವಾಗುವುದಿಲ್ಲ,
ವಿಷಧಮ್ಮವನ್ನು (ದುರಾಚಾರದ ಧಮ್ಮವನ್ನು)
ಅಪ್ಪದವರು, ಇಡೀ ಭಿಕ್ಷು ಶೀಲವನ್ನು            
ಪಾಲಿಸುವವರೇ ಭಿಕ್ಷುಗಳಾಗುತ್ತಾರೆ."           (266)

"ಯಾರು ಪುಣ್ಯವನ್ನು ಹಾಗು ಪಾಪವನ್ನು
ಮೀರಿರುವರೋ, ಬ್ರಹ್ಮಚರ್ಯೆಯುತ ಶ್ರೇಷ್ಠ
ಜೀವನ ಪಾಲಿಸಿರುವರೋ, ಈ ಲೋಕದಲ್ಲಿ
ಪ್ರಾಜ್ಞಯುತವಾಗಿ ಚಿಂತಿಸಿ ಜೀವಿಸುವರೋ
ಅಂತಹವರನ್ನು ಭಿಕ್ಷು ಎನ್ನುವರು."                (267)

ಗಾಥ ಪ್ರಸಂಗ 19:7
ತನ್ನನ್ನು ಭಿಕ್ಷುವೆಂದು ಭಾವಿಸಿದ ಬ್ರಾಹ್ಮಣ


            ಶ್ರಾವಸ್ತಿಯಲ್ಲಿ ಬ್ರಾಹ್ಮಣನೊಬ್ಬನಿದ್ದನು. ಆತನು ಮನೆಯಿಂದ ನಿವೃತ್ತಿ ಹೊಂದಿ ಭಿಕ್ಷೆಯಿಂದ ಜೀವನ ಮಾಡುತ್ತಿದ್ದನು. ಆದರೆ ಆತನು ಯಾವುದೇ ಉನ್ನತ ಶೀಲ ಪಾಲಿಸುತ್ತಿರಲಿಲ್ಲ. ಆದರೂ ತನ್ನನ್ನು ಹೀಗೆ ಭಿಕ್ಷುವೆಂದು ಭಾವಿಸಿದನು: "ಬೌದ್ಧ ಭಿಕ್ಷುಗಳು ಪರರು ನೀಡಿದ ಆಹಾರದಿಂದಲೇ ಜೀವಿಸುವರು. ನಾನು ಸಹಾ ಹಾಗೆಯೇ ಇರುವುದರಿಂದ ನನ್ನನ್ನು ಅವರು ಭಿಕ್ಷುವೆಂದೇ ಪರಿಗಣಿಸಲಿ." ಹೀಗೆಯೇ ಯೋಚಿಸುತ್ತಾ ಆತನು ಬುದ್ಧರ ಬಳಿಗೆ ಬಂದನು. ನಂತರ ಹೀಗೆ ಹೇಳಿದನು: "ಭಗವಾನ್, ನಾನು ಸಹಾ ಭಿಕ್ಷೆಯಿಂದಲೇ ಆಹಾರ ಪಡೆಯುತ್ತಿರುವೆ, ನನ್ನನ್ನು ಭಿಕ್ಷುವೆಂದೇ ಕರೆಯುವಂತಾಗಲಿ."

            ಆಗ ಭಗವಾನರು ಆತನಿಗೆ ಹೀಗೆ ನುಡಿದರು: "ಬ್ರಾಹ್ಮಣನೇ, ನಾನು ಭಿಕ್ಷೆಯಿಂದ ಜೀವಿಸುತ್ತಿರುವವರಿಗೆ, ಭಿಕ್ಷುವೆನ್ನುವುದಿಲ್ಲ. ಏಕೆಂದರೆ ಭಿಕ್ಷುಕನು ಎಲ್ಲಾರೀತಿಯ ಶೀಲಗಳನ್ನು ಪಾಲಿಸುವುದಿಲ್ಲ, ಯಾರು ಉನ್ನತವಾದ ಶೀಲಗಳನ್ನು, ಧುತಾಂಗಗಳನ್ನು ಪಾಲಿಸುತ್ತಾ ಧ್ಯಾನಶೀಲನೋ, ಯಾರು ಖಂದಗಳನ್ನು ಅಳೆಯುತ್ತಾ ವಿಶ್ಲೇಷಿಸುವನೋ, ಧಮ್ಮಚಾರಿಯೋ ಆತನು ಮಾತ್ರ ಭಿಕ್ಷು" ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು. 

dhammapada/dhammatthavagga/19.6/hatthaka

ಬೋಳುತಲೆಯವನೇ ಸಮಣನಲ್ಲ, ಪಾಪರಹಿತನೇ ಸಮಣ

"ತಲೆ ಮುಂಡನವಾದ ಮಾತ್ರಕ್ಕೆ ಸಮಣನಾಗುವುದಿಲ್ಲ,
ಅಶಿಸ್ತಿನಿಂದ, ಸುಳ್ಳಿನಿಂದ ಕೂಡಿದವರೂ
ಲೋಭಗಳ ಇಚ್ಛೆಗಳಿಂದ ಕೂಡಿರುವವರೂ
ಹೇಗೆ ತಾನೇ ಸಮಣರಾಗುವರು."                (264)

"ಯಾರು ಅಣುವಿನಷ್ಟು ಅಥವಾ ಸ್ಥೂಲವಾದ
ಸರ್ವರೀತಿಯ ಪಾಪಗಳನ್ನು ದಮಿಸಿರುವರೋ
ಪಾಪಗಳೆಲ್ಲದರಿಂದ ಜಯಶಾಲಿಯಾದ ಆತನೇ
ಸಮಣನೆಂದು ಕರೆಯಲ್ಪಡುವನು."               (265)

ಗಾಥ ಪ್ರಸಂಗ 19:6
ಹಟ್ಟಕನ ವಾದ ವೈಖರಿ


            ಹಟ್ಟಕನು ಶ್ರಾವಸ್ತಿಯಲ್ಲಿನ ಭಿಕ್ಷುವಾಗಿದ್ದನು. ಆತನಿಗೆ ಸ್ವಲ್ಪ ವಾದ ಮಾಡುವ ಪ್ರವೃತ್ತಿಯಿತ್ತು. ಹಾಗೆಂದ ಮಾತ್ರಕ್ಕೆ ಆತನು ಮಹಾ ಮೇಧಾವಿ ಅಥವಾ ಮಹಾ ವಾಗ್ಮಿಯೇನು ಆಗಿರಲಿಲ್ಲ. ಆತನು ಸೋಲುವ ಕ್ಷಣಗಳು ಹತ್ತಿರ ಬಂದಾಗ ತಕ್ಷಣ ಆತನು ಈ ರೀತಿಯ ಹೇಳಿಕೆಯಿಂದ ವಾದಗಳನ್ನು ಮುಂದೂಡುತ್ತಿದ್ದನು: "ಇಂತಹ ಸ್ಥಳದಲ್ಲಿ, ಇಂತಹ ಸಮಯದಲ್ಲಿ ನೀವೆಲ್ಲಾ ಬನ್ನಿ, ನನಗೀಗ ಕೆಲಸವಿದೆ, ನಾವು ವಾದವನ್ನು ಆಗ ಮುಂದುವರೆಸೋಣ." ಎಂದು. ಆದರೆ ಆ ಸ್ಥಳದಲ್ಲಿ ಆತನು ಅವರಿಗಿಂತ ಮುಂಚೆಯೇ ತೆರಳಿ ಜನರಿಗೆ ಹೀಗೆ ಹೇಳುತ್ತಿದ್ದನು: "ನೋಡಿ ಈ ಪ್ರತಿವಾದಿಗಳನ್ನು, ನನಗೆ ಹೆದರಿ ಬರಲೇ ಇಲ್ಲ. ನನ್ನನ್ನು ಎದುರಿಸಲು ಅವರಿಗೆ ಧೈರ್ಯವಾಗಲಿ, ಸಮರ್ಥವಾಗಲಿ ಇಲ್ಲವೇ ಇಲ್ಲ. ಇದರಿಂದಾಗಿ ಅವರು ಸೋತಂತೆ ಆಯಿತು. ನಾನೇ ನಿಜವಾದ ವಿಜಯಶಾಲಿಯಾಗಿದ್ದೇನೆ" ಎಂದು ನುಡಿದು ಪರಾರಿಯಾಗುತ್ತಿದ್ದನು. ಇದೇರೀತಿಯಲ್ಲಿ ಆತನು ಹಲವಾರು ಜನರಿಗೆ ಮುಖಭಂಗ ಮಾಡಿದ್ದನು.
            ಕೊನೆಗೆ ಈ ವಿಷಯವು ಭಗವಾನ್ ಬುದ್ಧರ ಬಳಿಗೂ ಹೋಯಿತು. ಭಗವಾನರು ಆತನನ್ನು ಕರೆಸಿದರು. ನಂತರ ಈ ರೀತಿ ವಿಚಾರಿಸಿದರು: "ಹಟ್ಟಕ, ಈ ಬಗೆಯಲ್ಲಿ ಸುದ್ದಿ ಕೇಳಲ್ಪಟ್ಟಿರುವೆ, ನೀನು ಸುಳ್ಳು ವಿಧದಿಂದ ವಾದಮಾಡಿ ನಂತರ ವಾದ ನಿಲ್ಲಿಸಿ, ಇಂತಹ ಕಡೆ ಬನ್ನಿ ಎಂದು ತಿಳಿಸಿ, ಅವರಿಗಿಂತ ಮುಂಚೆಯೇ ತಲುಪಿ, ಅವರೇ ಸೋತವರು ಎಂದು ವಿತಂಡವಾದ ಆಡುವೆಯಂತೆ, ಇದು ನಿಜವೇ?"
            "ಹೌದು ಭಗವಾನ್, ಇದು ನಿಜವೇ ಆಗಿದೆ."

            "ಓ ಹಟ್ಟಕ, ಏತಕ್ಕಾಗಿ ನೀನು ಹೀಗೆ ಮಾಡುವೆ, ಯಾರು ಸುಳ್ಳು ಹೇಳುವನೋ ಆತನಿಗೆ ಸಮಣನಾಗಲು ಹಕ್ಕೇ ಇಲ್ಲ. ಏಕೆಂದರೆ ಬೋಳುತಲೆಯಾದ ಮಾತ್ರಕ್ಕೆ ಯಾರೊಬ್ಬರು ಭಿಕ್ಷುವಾಗುವುದಿಲ್ಲ, ಬದಲಾಗಿ ಯಾರು ಸಣ್ಣ, ದೊಡ್ಡ ರೀತಿಯ ಪಾಪಗಳನ್ನು ಪರಾಜಯಗೊಳಿಸಿದವರೇ ನಿಜಕ್ಕೂ ಸಮಣ ಎನಿಸಿಕೊಳ್ಳುವರು" ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು.

dhammapada/dhammatthavagga/19.5/artificiality

ಚಾರಿತ್ರ್ಯದಿಂದಲೇ ನೈಜ ಸೌಂದರ್ಯ

"ಚಾತುರ್ಯಯುತ ವ್ಯಾಕರಣಬದ್ಧ ಮಾತಿನಿಂದಾಗಲಿ,
ಸುವರ್ಣ ಸುಂದರಕಾಯದಿಂದಾಗಲಿ ಒಬ್ಬನನ್ನು
ಸಹೃದಯ ಸುರೂಪಿ ಎನ್ನಲಾಗದು, ಏಕೆಂದರೆ
ಆತನಲ್ಲಿ ಈಷರ್ೆ, ಸ್ವಾರ್ಥ ಹಾಗು ವಂಚಕತನವಿದ್ದರೆ
ಆತನನ್ನು ಸಾಧು ರೂಪ ಎನ್ನಲಾಗದು."        (262)

"ಆದರೆ ಯಾರಲ್ಲಿ ಇವೆಲ್ಲಾ ಕತ್ತರಿಸಲ್ಪಟ್ಟಿವೆಯೋ
ಬೇರುಸಹಿತ ಕೀಳಲ್ಪಟ್ಟಿವೆಯೋ, ಪೂರ್ಣ ನಾಶವಾಗಿವೆಯೋ
ಯಾರಲ್ಲಿ ದ್ವೇಷವೇ ಇಲ್ಲವೋ ಅಂತಹ ಮೇಧಾವಿಗೆ ಮಾತ್ರ
ಸಾಧು ರೂಪ (ಸುರೂಪಿ) ಎನ್ನಬಹುದು."       (263)

ಗಾಥ ಪ್ರಸಂಗ 19:5
ಕೃತ್ರಿಮ ಸಾಧುಪರತೆ

            ಶ್ರಾವಸ್ತಿಯ ಕೆಲ ಭಿಕ್ಷುಗಳಿಗೆ ಕಿರಿಯ ಭಿಕ್ಷುಗಳು (ಸಾಮಣೇರರು) ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಉದಾಹರಿಸುವುದಾದರೆ ಚೀವರಗಳಿಗೆ ಬಣ್ಣ ಹಾಕುವುದು, ಇತ್ಯಾದಿ. ಇದನ್ನು ಇತರ ಭಿಕ್ಷುಗಳು ನೋಡಿದರು. ಆಗ ಅವರು ತಮ್ಮಲ್ಲಿಯೇ ಹೀಗೆ ಹೇಳಿಕೊಂಡರು: "ನಾವು ಹಿರಿಯರೇ ಆಗಿದ್ದೇವೆ, ನಮಗೂ ಸಹಾ ಈ ರೀತಿಯ ಸೇವೆಯು ಬೇಕಾಗಿದೆ. ನಾವು ಭಗವಾನರಲ್ಲಿಗೆ ಹೋಗಿ ಇದೇ ರೀತಿಯ ಸೇವಾವ್ಯವಸ್ಥೆ ಮಾಡಿಕೊಂಡರೆ ನಮ್ಮ ಗೌರವ, ಖ್ಯಾತಿ ಎರಡೂ ಹೆಚ್ಚಾಗುವುದು."
            ಹೀಗಾಗಿ ಅವರು ಭಗವಾನರಲ್ಲಿಗೆ ಬಂದರು. ನಂತರ ಹೀಗೆ ಕೇಳಿಕೊಂಡರು: "ಭಗವಾನ್, ನಾವು ಈಗ ಜ್ಞಾನದಲ್ಲಿ ವಿಶಾರದರಾಗಿದ್ದೇವೆ. ನಮ್ಮನ್ನೇ ಹಿಂಬಾಲಿಸುವಂತೆ ಸಾಮಣೇರರಿಗೆ ಹೇಳುವುದು ಉಚಿತವೆಂದು ಭಾವಿಸಿದ್ದೇವೆ. ಅವರು ಪರರಲ್ಲಿ ಧಮ್ಮವಿನಯ ಕಲಿತಿದ್ದರೂ, ನಮ್ಮಲ್ಲಿಯೇ ಮುಂದುವರೆಯಲಿ".

            ಭಗವಾನರಿಗೆ ಅವರ ನೀಚ ಉದ್ದೇಶ ಅರ್ಥವಾಯಿತು. ಆಗ ಅವರು ಹೀಗೆ ಹೇಳಿದರು: "ನೀವು ವಾಕ್ಪಟುಗಳೆಂದು ನಾನು ಬಲ್ಲೆನು, ಆದರೂ ಕೇವಲ ಇದೊಂದೇ ಅರ್ಹತೆ ನಿಮಗೆ ಸಾಲದು. ಯಾರಲ್ಲಿ ಈಷರ್ೆ, ಸ್ವಾರ್ಥ, ವಂಚಕತನ ಪೂರ್ಣವಾಗಿ ನಾಶವಾಗಿದೆಯೋ ಆತನೇ ನಾಯಕನಾಗಲು ಸಾಧುವಾಗಲು ಅರ್ಹ". ನಂತರ ಭಗವಾನರು ಈ ಮೇಲಿನ ಗಾಥೆಗಳನ್ನು ಹೇಳಿದರು.

dhammapada/dhammatthavagga/19.4/lakuntikabhaddhiya

ವಯಸ್ಸಿನಿಂದ ಹಿರಿಯನಲ್ಲ, ನಿರ್ಮಲತೆಯಿಂದಲೇ ಹಿರಿಯ

"ಶಿರವು (ತಲೆಯು) ಬೆಳ್ಳಗಾದ ಮಾತ್ರಕ್ಕೆ
ಥೇರನಾಗುವುದಿಲ್ಲ (ಹಿರಿಯ)
ಆತನು ವಯಸ್ಸಿನಲ್ಲಿ ಪರಿಪಕ್ವನಷ್ಟೇ,
ಆತನು ವ್ಯರ್ಥವಾಗಿ ವೃದ್ಧಿ ಹೊಂದಿದ ವೃದ್ಧನಷ್ಟೇ."          (260)



"ಯಾರಲ್ಲಿ ಸತ್ಯಸಂಧತೆ, ಧಮ್ಮಸಂಪನ್ನತೆ
ಅಹಿಂಸೆ, ಸಂಯಮ ಇದೆಯೋ
ತಮ್ಮನ್ನು ಧಮಿಸಿಕೊಂಡಿರುವರೋ ಹಾಗು
ಮಲಗಳಿಂದ ಮುಕ್ತರೋ, ಧೀಮಂತರೋ,
ಅಂತಹವರನ್ನು ಥೇರರೆಂದು ಕರೆಯಬಹುದು."               (261)

ಗಾಥ ಪ್ರಸಂಗ 19:4
ಲಕುಂಟಿಕ ಭದ್ದಿಯನ ಹಿರಿತನ


            ಒಮ್ಮೆ ಲಕುಂಟಕ ಭದ್ದಿಯ ಭಗವಾನರನ್ನು ನೋಡಲು ಜೇತವನ ವಿಹಾರಕ್ಕೆ ಹೊರಟರು. ಅವರು ಯುವಕರಾಗಿದ್ದರು. ಆದರೆ ತುಸು ಕುಳ್ಳರಾಗಿದ್ದರು. ಅವರು ಭಗವಾನರನ್ನು ಭೇಟಿಮಾಡಿ ನಂತರ ಅಲ್ಲಿಂದ ನಿರ್ಗಮಿಸಿದರು. ಅದೇವೇಳೆ 30 ವನವಾಸಿ ಭಿಕ್ಷುಗಳು ಭಗವಾನರನ್ನು ಕಾಣಲು ಬಂದರು. ಆಗ ಭಗವಾನರಿಗೆ ಅವರು ಅರಹಂತರಾಗಲು ಪಕ್ವಕಾಲ ಎಂದು ಅರಿವಾಯಿತು. ಆಗ ಭಗವಾನರು ಅವರಿಗೆ ಹೀಗೆ ಪ್ರಶ್ನಿಸಿದರು. "ನೀವು ಥೇರರು (ಹಿರಿಯರು) ಇಲ್ಲಿಂದ ಹೊರಹೋಗಿದ್ದನ್ನು ನೋಡಿದಿರಲ್ಲವೇ?"
            "ಇಲ್ಲ ಭಗವಾನ್, ನಾವು ನೋಡಿಲ್ಲ."
            "ನೀವು ನೋಡಿಲ್ಲವೇ ?"
            "ನಾವು ಕೇವಲ ಸಾಮಣೇರರನ್ನು ನೋಡಿದೆವು ಭಗವಾನ್."
            "ಭಿಕ್ಷುಗಳೇ, ಅವರು ಸಾಮಣೇರರಲ್ಲ, ಅವರು ಥೇರರಾಗಿರುವರು."
            "ಆದರೆ ಭಗವಾನ್ ಅವರು ಅತ್ಯಂತ ಕಿರಿಯರು, ಯುವಕರಾಗಿರುವರು."

            "ಭಿಕ್ಷುಗಳೇ, ನಾನು ವಯಸ್ಸಿನಿಂದ ಯಾರಿಗೂ ಹಿರಿಯನೆಂದು ಹೇಳಲಾರೆ. ಬದಲಿಗೆ ಯಾರು ಸತ್ಯಗಳನ್ನು ಗ್ರಹಿಸಿರುವರೋ ಮತ್ತು ಪರರಲ್ಲಿ ದಯೆವುಳ್ಳವರು ಅವರೇ ಹಿರಿಯರಾಗಿರುವರು" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

dhammapada/dhammatthavagga/19.3/ekodaana

ವಾಕ್ಚಾತುರ್ಯವುಳ್ಳವನೇ ಧಮ್ಮಜ್ಞನಲ್ಲ

"ಒಬ್ಬನು ಬಹುವಾಗಿ ಭಾಷ್ಯಕಾರನಾದ ಮಾತ್ರಕ್ಕೆ
ಧಮ್ಮಧರನಾಗುವುದಿಲ್ಲ (ಧರ್ಮಜ್ಞ),
ಯಾರು ಧಮ್ಮವನ್ನು ಅಲ್ಪವಾಗಿಯೇ
ಶ್ರೋತಿಸಿದ್ದರೂ (ಕೇಳಿದ್ದರು) ಧಮ್ಮವನ್ನು
ಕಾಯದಲ್ಲಿ ಪಾಲಿಸುವಾತನೇ ಅಂತಹ
ಸಂಶಯದಾಟಿದವನು ಧಮ್ಮಧರನಾಗುತ್ತಾನೆ,
ಧಮ್ಮ ಜಾಗೃತನಾಗುತ್ತಾನೆ."       (259)


ಗಾಥ ಪ್ರಸಂಗ 19:3
ಪಾಂಡಿತ್ಯವೇ ಸಾಕ್ಷಾತ್ಕಾರವಲ್ಲ

            ಒಬ್ಬ ಭಿಕ್ಷುವು ಶ್ರಾವಸ್ಥಿಯ ಸಮೀಪದ ತೋಪಿನಲ್ಲಿದ್ದನು. ಆತನು ಏಕೂದಾನನೆಂದೇ ತಿಳಿಯಲ್ಪಟ್ಟಿದ್ದನು. ಏಕೆಂದರೆ ಆತನಿಗೆ ಏಕ (ಒಂದು) ಉದಾನ (ಆನಂದೋದ್ಗಾರ)ವೇ ತಿಳಿದಿತ್ತು. ಅದೇನೆಂದರೆ:
            "ಯಾವ ಭಿಕ್ಷುವು ಉನ್ನತ ಧ್ಯಾನಾವಸ್ಥಿಯಲ್ಲಿರುತ್ತಾನೋ,
                ಜಾಗ್ರತನೋ, ನಿಶ್ಶಬ್ದತೆಯ ರೀತಿಗಳಲ್ಲಿ ನಿಪುಣನೋ,
                ಅಂತಹ ಪ್ರಶಾಂತತೆಯ ಮತ್ತು ಜಾಗೃತನಿಗೆ ದುಃಖವು ಬರಲಾರದು."
            ಆ ಭಿಕ್ಷುವಿಗೆ ಆ ಗಾಥೆಯ (ಉದಾನದ) ಅರ್ಥವು ತಿಳಿದಿತ್ತು. ಆತನು ಅದನ್ನು ಪಾಲನೆ ಮಾಡುತ್ತಿದ್ದನು. ಉಪೋಸಥದ ದಿನಗಳಲ್ಲಿ ಬೇರೆ ಭಿಕ್ಷುಗಳು ವಿಸ್ತಾರವಾದ ಸುತ್ತಗಳ ವಾಚನ ಮಾಡುತ್ತಿದ್ದೆ, ಇತನು ಕೇವಲ ಈ ಒಂದು ಉದಾನವನ್ನೇ ನುಡಿಯುತ್ತಿದ್ದನು.
            ಪ್ರತಿಸಾರಿಯು ಆತನು ಈ ಉದಾನವನ್ನು ನುಡಿದ ಒಡನೆಯೇ ವನದಲ್ಲಿದ್ದ ದೇವದೇವತೆಗಳು ಆತನಿಗೆ ಸ್ತುತಿಸುತ್ತಿದ್ದರು, ಪ್ರಶಂಸಿಸುತ್ತಿದ್ದರು.
            ಒಂದು ಉಪೋಸಥದ ದಿನದಂದು ತಿಪಿಟಕದಲ್ಲಿ ಅಪಾರ ನೆನಪಿದ್ದ ಇಬ್ಬರು ಹಿರಿಯ ಭಿಕ್ಷುಗಳು 500 ಕಿರಿಯ ಭಿಕ್ಷುಗಳ ಸಮೇತ ಅಲ್ಲಿಗೆ ಬಂದರು. ಆಗ ಏಕೂದಾನನು ಅವರಿಗೆ ಧಮ್ಮ ಬೋಧಿಸುವಂತೆ ಕೇಳಿಕೊಂಡನು. ಆಗ ಅವರು ಹೀಗೆ ಕೇಳಿದರು: "ಇಲ್ಲಿ ಧಮ್ಮವನ್ನು ಆಲಿಸಲು ಯಾರು ಇರುವರು?" ಆಗ ಏಕೋದಾನರು ಹೀಗೆ ಹೇಳಿದರು: "ಹಾಗೆನ್ನದಿರಿ, ಇಲ್ಲಿ ವನದಲ್ಲಿರುವ ದೇವ ದೇವತೆಗಳೆಲ್ಲರೂ ಧಮ್ಮವನ್ನು ಆಲಿಸುವರು. ಅಷ್ಟೇ ಅಲ್ಲ, ಬೋಧನೆಯ ಅಂತ್ಯದಲ್ಲಿ ಸ್ತುತಿಸುವರು ಸಹ."

            ಇರಬಹುದೆಂದು ಆ ಇಬ್ಬರು ಹಿರಿಯ ಭಿಕ್ಷುಗಳು ಧಮ್ಮವನ್ನು ವಿಸ್ತಾರವಾಗಿ ಬೋಧಿಸಿದರು. ಆದರೆ ಅವರಿಗೆ ಪ್ರತಿಫಲವಾಗಿ ಯಾವ ಸ್ತುತಿಯೂ ಸಿಗಲಿಲ್ಲ. ಆಗ ಅವರಿಗೆ ಏಕೂದಾನನು ಸುಳ್ಳು ಹೇಳುತ್ತಿರಬಹುದೇ ಎಂದು ಸಂಶಯವುಂಟಾಯಿತು. ಆದರೆ ಏಕೂದಾನನು ಹಿಂದಿನಂತೆಯೇ ಪುನರುಚ್ಚರಿಸಿದನು. ಆಗ ಅವರು ಏಕೂದಾನನಿಗೆ ಧಮ್ಮ ಬೋಧಿಸುವಂತೆ ಕೇಳಿಕೊಂಡರು. ಆಗ ಏಕೂದಾನನು ತನಗೆ ತಿಳಿದಿದ್ದ ಆ ಉದಾನವೊಂದನ್ನು ನುಡಿದನು. ಅದು ಮುಗಿದ ತಕ್ಷಣ ವನದಲ್ಲಿದ್ದ ದೇವಗಣವು ಸ್ತುತಿಸಿದರು: 'ಸಾಧು ಸಾಧು ಸಾಧು' ಎಂದು ಪ್ರಶಂಶಿಸಿದರು. ಆಗ ಆ ಹಿರಿಯ ಭಿಕ್ಷುಗಳಿಗೆ ದೇವಗಣವು ಪಕ್ಷಪಾತದಿಂದ ಕೂಡಿವೆ ಎಂದು ಅನುಮಾನವಾಯಿತು. ಹೀಗಾಗಿ ಅವರು ಈ ವಿಷಯವೆಲ್ಲಾ ಭಗವಾನರಿಗೆ ತಿಳಿಸಿದರು. ಆಗ ಬುದ್ಧ ಭಗವಾನರು ಅವರಿಗೆ ಹೀಗೆ ನುಡಿದರು: "ಭಿಕ್ಷುಗಳೇ, ದೇವತೆಗಳು ಪಕ್ಷಪಾತ ಮಾಡಿಲ್ಲ, ಅವರು ಸರಿಯಾಗಿಯೇ ವತರ್ಿಸಿದ್ದಾರೆ. ಏಕೆಂದರೆ ಒಬ್ಬನು ಅಪಾರ ಪಾಂಡಿತ್ಯ ಗಳಿಸಿ, ವಾಕ್ಚಾತುರ್ಯದಿಂದ ಧಮ್ಮ ಪಠಿಸಿದ ಮಾತ್ರಕ್ಕೆ ಆತನು 'ಧಮ್ಮಧರ'ನಾಗುವುದಿಲ್ಲ. ಬದಲಾಗಿ ಯಾರೂ ಧಮ್ಮವನ್ನು ಅಲ್ಪವೇ ಅರಿತಿದ್ದರೂ, ಅದರಿಂದಲೇ ನಾಲ್ಕು ಸತ್ಯಗಳ ಆಳದ ಅರಿವನ್ನು ಹೊಂದಿದ್ದರೇ, ಕಾಯದಲ್ಲೂ ಸಹಾ ಆರ್ಯ ಅಷ್ಠಾಂಗ ಮಾರ್ಗದ ಪಾಲನೆಯಾಗಿದ್ದರೆ ಅಂತಹ ಜಾಗೃತನೇ ಧಮ್ಮಧರನಾಗಿರುತ್ತಾನೆ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

dhammapada/dhammatthavagga/19.2/sixbhikkhus

ಬಹುವಾಗಿ ಮಾತನಾಡಿದ ಮಾತ್ರಕ್ಕೆ ಜ್ಞಾನಿಯಲ್ಲ

"ಬಹುವಾಗಿ ಮಾತನಾಡಿದ ಮಾತ್ರಕ್ಕೆ ಪಂಡಿತನಾಗುವುದಿಲ್ಲ,
ಕ್ಷೇಮಿಯು (ಮನಸ್ಸಿನ ಶಾಂತತೆಯ ರಕ್ಷಿಸಿದವನು)
ವೈರರಹಿತನೂ, ಭಯರಹಿತನೂ (ಅಭಯನು)
ಪಂಡಿತನೆಂದು ಕರೆಯಲ್ಪಡುತ್ತಾನೆ."             (258)

ಗಾಥ ಪ್ರಸಂಗ 19:2
ಆರು ಭಿಕ್ಷುಗಳ ಅವಿಧೇಯತೆ ಹಾಗು ಅಜ್ಞಾನ


            ಶ್ರಾವಸ್ತಿಯಲ್ಲಿ ಆರು ಭಿಕ್ಷುಗಳ ಒಂದು ಗುಂಪು ಇತ್ತು. ಅವರು ಹಳ್ಳಿಯಲ್ಲೇ ಇರಲಿ ಅಥವಾ ವಿಹಾರದಲ್ಲೇ ಇರಲಿ, ಸದಾ ತೊಂದರೆ ನೀಡುವವರು ಆಗಿದ್ದರು. ಒಂದುದಿನ ಕೆಲವು ಸಾಮಣೇರರು ಊಟ ಮಾಡುತ್ತಿರುವಾಗ ಈ ಆರು ಜನರ ಗುಂಪಿನ ಭಿಕ್ಷುಗಳು ಬಂದು ತಮ್ಮ ಕುಕೃತ್ಯದ ಬಗ್ಗೆ ಪ್ರಶಂಸಿಸಿಕೊಳ್ಳುತ್ತಾ ಹೀಗೆ ಹೇಳಿಕೊಂಡರು. "ನೋಡಿ ನಾವೇ ಪಂಡಿತರು (ಬುದ್ಧಿವಂತರು), ನಂತರ ಅವರು ಅಷ್ಟಕ್ಕೇ ಸುಮ್ಮನಾಗದೆ ವಸ್ತುಗಳನ್ನು ಎಸೆಯಲಾರಂಭಿಸಿದರು. ಇದರಿಂದಾಗಿ ಗದ್ದಲವುಂಟಾಯಿತು. ಆಹಾರ ಸೇವಿಸುವ ಸ್ಥಳ ಅಸ್ತವ್ಯಸ್ತವಾಯಿತು. ನಂತರ ಈ ವಿಷಯವನ್ನು ಭಗವಾನರಿಗೆ ತಿಳಿಸಲಾಯಿತು. ಆಗ ಭಗವಾನರು ಹೀಗೆ ನುಡಿದರು: "ಭಿಕ್ಷುಗಳೇ, ಒಬ್ಬನು ಬಹುವಾಗಿ ಮಾತನಾಡುವುದರಿಂದಲೇ ಪಂಡಿತನಾಗುವುದಿಲ್ಲ (ಜ್ಞಾನಿ), ಹಾಗೆಯೇ ನಿಂದಿಸುವವನು ಮತ್ತು ಪರರನ್ನು ಪೀಡಿಸುವವನು ಸಹಾ ಜ್ಞಾನಿಯಲ್ಲ. ಯಾರು ವೈರರಹಿತನೋ, ಹಿಂಸಾರಹಿತನೋ ಆತನೇ ಪಂಡಿತ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು. 

dhammapada/dhammatthavagga/19.1/justice

     
       19. ಧಮ್ಮಟ್ಠ ವರ್ಗ




ನಿಷ್ಪಕ್ಷಪಾತಿಯು ಮತ್ತು ಸತ್ಯ ಪರೀಕ್ಷಕನೇ ನ್ಯಾಯಾಧೀಶ
 
"ಯಾರು ಇಚ್ಛಾನುಸಾರಿಯಾಗಿ (ನಿರಂಕುಶತ್ವದಿಂದ)
ನಿರ್ಣಯಗಳನ್ನು ನೀಡುವನೋ ಆತನು ಧಮರ್ಿಷ್ಠನಲ್ಲ,
ಯಾರು ಅರ್ಥ ಮತ್ತು ಅನರ್ಥಗಳನ್ನು (ಒಳಿತು-ಕೆಡುಕು / ಸರಿ-ತಪ್ಪು)
ಪರೀಕ್ಷಿಸಿ ಧಮರ್ಾನುಸಾರವಾಗಿ ತೀಮರ್ಾನಿಸುವನೋ
ಆತನೇ ಪಂಡಿತನಾಗಿದ್ದಾನೆ."      (256)



"ಯಾರು ನಿರಂಕುಶತ್ವದಿಂದ, ಪಕ್ಷಪಾತದಿಂದ
ನಿರ್ಣಯ ನೀಡದೆ, ಧಮರ್ಾನುಸಾರವಾಗಿ
ನ್ಯಾಯಾನುಸಾರವಾಗಿ ನಿರ್ಣಯಗಳನ್ನು
ನೀಡುವನೋ ಅಂತಹವನೇ ಧರ್ಮರಕ್ಷಕ
'ಧಮರ್ಾಥರ್ಿ' 'ಧಮರ್ಿಷ್ಠ' ಎನಿಸಿಕೊಳ್ಳುತ್ತಾನೆ."              (257)

ಗಾಥ ಪ್ರಸಂಗ 19:1
ನ್ಯಾಯಾಧೀಶನ ನ್ಯಾಯಹೀನತೆ

            ಒಮ್ಮೆ ಭಿಕ್ಷುಗಳು ಶ್ರಾವಸ್ಥಿಯಲ್ಲಿ ಆಹಾರಕ್ಕಾಗಿ ಹೊರಟಿರುವಾಗ ಉತ್ತರ ಭಾಗದ ಹೆಬ್ಬಾಗಿಲಿನ ಬಳಿ ನ್ಯಾಯವೊಂದು ತೀಮರ್ಾನವಾಗುತ್ತಿತ್ತು. ಭಿಕ್ಷುಗಳು ವಿಹಾರಕ್ಕೆ ಹಿಂತಿರುಗುತ್ತಿರುವಾಗ ಮಳೆಯು ಆರಂಭವಾಯಿತು. ಆಗ ಅವರು ಮಳೆ ರಕ್ಷಣೆಗಾಗಿ ನ್ಯಾಯ ನಡೆಯುತ್ತಿದ್ದ ಸಭಾಂಗಣಕ್ಕೆ ಬಂದರು. ಅವರು ಅಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ನೋಡಿದರು. ಅದೇನೆಂದರೆ, ಸ್ವತಃ ನ್ಯಾಯಾಧೀಶರೇ ಲಂಚ ತೆಗೆದುಕೊಂಡು, ನಿಜವಾಗಿಯೂ ನ್ಯಾಯ ಹಾಗು ಆಸ್ತಿ ಸಿಗಬೇಕಾಗಿದ್ದವರಿಗೆ ಅನ್ಯಾಯವೆಸಗಿದರು. ಆಗ ಅವರು ಈ ವಿಷಯವನ್ನು ಭಗವಾನರಿಗೆ ತಿಳಿಸಬೇಕೆಂದುಕೊಂಡರು. ಮಳೆ ನಿಂತ ನಂತರ ಅವರು ವಿಹಾರಕ್ಕೆ ಮರಳಿ ಭಗವಾನರಿಗೆ ಈ ವಿಷಯವೆಲ್ಲಾ ತಿಳಿಸಿದರು. ಆಗ ಭಗವಾನರು ಹೀಗೆ ನುಡಿದರು: "ಭಿಕ್ಷುಗಳೇ, ಯಾರು ಪಾಪೀಚ್ಛೆಗಳಿಂದ ಕೂಡಿ, ನ್ಯಾಯ ತೀಮರ್ಾನಿಸುವರೋ ಅವರು ನ್ಯಾಯಾಧೀಶರಲ್ಲ. ಬದಲಾಗಿ ಯಾರು ಸಾಕ್ಷಿಯನ್ನು ಬುದ್ಧಿವಂತಿಕೆಯಿಂದ ತೂಗಿ, ನಿಷ್ಪಕ್ಷಪಾತವಾಗಿ ನಿರ್ಣಯಿಸುವರೋ ಅವರು ನ್ಯಾಯಾಧೀಶರು ಆಗುವರು" ಎಂದು ನುಡಿದು ಈ ಮೇಲಿನ ಗಾಥೆ ನುಡಿದರು.