Friday 26 June 2015

dhammapada/piyavagga/16.9/nandiya

ಪುಣ್ಯಕಾರ್ಯಗಳ ಪ್ರತಿಫಲ ಮಹತ್ತರವಾದುದು
"ಚಿರಕಾಲ ಮನೆಯಿಂದ ದೂರವಿದ್ದ ಪುರುಷನು
ದೂರದಿಂದ ಕ್ಷೇಮವಾಗಿ ಹಿಂತಿರುಗಿದಾಗ
ಆತನ ಮಿತ್ರರು ಶ್ರೇಯೋಭಿಲಾಷಿಗಳು, ಬಂಧುಗಳು
ಆತನ ಬರುವಿಕೆಗಾಗಿ ಅಭಿನಂದಿಸುತ್ತಾರೆ."    (219)

"ಹಾಗೆಯೇ ಪುಣ್ಯ ಮಾಡಿದವನಿಗೆ,
ಈ ಲೋಕ ತೊರೆದು ಪರಗತಿಗೆ ಹೊರಟಾಗ
ಪುಣ್ಯ ಕಾರ್ಯಗಳು ಬಂಧುಗಳಂತೆ ಪ್ರಿಯಬಾಂಧವರಂತೆ ಸ್ವಾಗತಿಸುತ್ತವೆ."       (220)

ಗಾಥ ಪ್ರಸಂಗ 16:9
ನಂದಿಯನ ದಾನ ವೃತ್ತಾಂತ


            ನಂದಿಯನು ಬನಾರಸ್ನ ಶ್ರೀಮಂತ ಪುತ್ರನಾಗಿದ್ದನು. ಆತನ ತಂದೆ-ತಾಯಿಗಳು ಸಹಾ ನಂದಿಯನ ತರಹ ಧಾಮರ್ಿಕರಾಗಿದ್ದರು. ಅವರು ತಮ್ಮ ಪುತ್ರನು ಸಹಾ ಅವರಂತೆ ಬುದ್ಧ, ಸಂಘಕ್ಕೆ ಸೇವಕನಾಗಿ, ಸಹಾಯಕನಾಗಿ, ಧಾಮರ್ಿಕನಾಗಿ ಜೀವಿಸಲಿ ಎಂದು ಬಯಸುತ್ತಿದ್ದರು. ಆತನ ತಂದೆ-ತಾಯಿಗಳು ಆತನಿಗಾಗಿ ತಮ್ಮ ಬಂಧುವೋರ್ವನ ಪುತ್ರಿ ರೇವತಿ ಎಂಬುವವಳ ಸಂಗಡ ವಿವಾಹ ಮಾಡಲು ಸಿದ್ಧರಾದಾಗ ನಂದಿಯ ಈ ವಿವಾಹಕ್ಕೆ ಒಪ್ಪಲಿಲ್ಲ. ಕಾರಣ ಆಕೆ ತ್ರಿರತ್ನದಲ್ಲಿ ನಂಬಿಕೆವುಳ್ಳವರಾಗಿರಲಿಲ್ಲ ಮತ್ತು ದಾನಾದಿ ಪುಣ್ಯಕಾರ್ಯಗಳನ್ನು ಮಾಡುತ್ತಿರಲಿಲ್ಲ. ಆಗ ನಂದಿಯನ ತಾಯಿಯು ರೇವತಿಗೆ "ಮಗಳೇ, ಮನೆಯನ್ನು ಶುಭ್ರವಾಗಿಡು, ಭಿಕ್ಷುಗಳ ಸೇವೆ ಮಾಡು, ಸತ್ಕರಿಸು. ತ್ರಿಶರಣು, ದಾನ, ಶೀಲದಲ್ಲಿ ತಲ್ಲೀನಳಾಗು, ಆಗ ಮಾತ್ರ ನೀನು ನನ್ನ ಮಗನಿಗೆ ಒಪ್ಪಿಗೆಯಾಗುವೆ."
            ಇದನ್ನು ಆಲಿಸಿದ ರೇವತಿ ಹಾಗೆಯೇ ನಡೆದುಕೊಂಡಳು. ಇದರಿಂದ ಸಂತುಷ್ಟನಾದ ನಂದಿಯ ಆಕೆಯೊಂದಿಗೆ ವಿವಾಹ ಆದನು. ಕಾಲನಂತರ ಆತನ ತಂದೆ-ತಾಯಿಗಳು ಸ್ವರ್ಗಸ್ಥರಾದರು. ನಂದಿಯ ಮತ್ತು ರೇವತಿ ತಮ್ಮ ಎರಡು ಮಕ್ಕಳೊಂದಿಗೆ ಸುಖವಾಗಿದ್ದರು. ಮುಂದೆ ನಂದಿಯನು ಭಿಕ್ಷುಗಳಿಗೆ ದಾನ ಮಾಡುತ್ತಲೇ ಇದ್ದನು. ಆತನು ಧಮರ್ೊಪದೇಶ ಆಲಿಸಿ ಭಿಕ್ಷುಗಳಿಗಾಗಿ ದೊಡ್ಡ ವಿಹಾರವನ್ನು ಕಟ್ಟಿಸಿದನು. ಅದರಲ್ಲಿ ನೆಲೆಸಲು ಸ್ಥಳ, ಧ್ಯಾನಮಂದಿರ, ಸಭಾಂಗಣ ಎಲ್ಲವೂ ಇದ್ದವು. ಅಷ್ಟೇ ಅಲ್ಲದೆ ಭಿಕ್ಷುಗಳಿಗಾಗಿ ಸರ್ವ ಸೌಕರ್ಯದಿಂದ ಕೂಡಿತ್ತು. ಇವೆಲ್ಲಾ ನಿಮರ್ಾಣವಾದ ಮೇಲೆ ಆತನು ಬುದ್ಧರ ಬಳಿಗೆ ಬಂದು ಅವರಿಗೆ ಇಸಿಪಟ್ಟಣದ ಈ ವಿಹಾರ ದಾನಗೈಯ್ಯಲು ನಿರ್ಧರಿಸಿ ಕುಳಿತನು. ನಂತರ ಬುದ್ಧರ ಕೈಯಲ್ಲಿ ಸಾಂಕೇತಿಕವಾಗಿ ನೀರನ್ನು ಸುರಿದು ದಾನ ಮಾಡಿದನು. ಆ ನೀರು ಬುದ್ಧರ ಬಲಗೈಗೆ ಸೋಕಿದ ಕೂಡಲೇ ತಾವತಿಂಸ ಸುಗತಿ ಲೋಕದಲ್ಲಿ 12 ಯೋಜನ ಉದ್ದಗಲದ ಭವ್ಯ ಭವನವು ಸೃಷ್ಟಿಯಾಯಿತು. ಅದು ಹಲವು ನೂರು ಯೋಜನಗಳಷ್ಟು ಎತ್ತರವಾಗಿತ್ತು. ಏಳು ರೀತಿಯ ರತ್ನಗಳಿಂದ ಹಾಗು ಸತ್ಕರಿಸಲು ಅಪ್ಸರೆಯರಿಂದ ಕೂಡಿತ್ತು.
            ಅಲೌಕಿಕ ಸಿದ್ಧಿಗಳಲ್ಲಿ ಬುದ್ಧರ ನಂತರ ಎರಡನೆಯವರಾಗಿ ಅದ್ವಿತೀಯ ಸಾಮಥ್ರ್ಯ ಹೊಂದಿದ್ದ ಮೊಗ್ಗಲ್ಲಾನರು ಆಗಾಗ ಸುಗತಿ ಲೋಕಗಳಿಗೆ ಪ್ರಯಾಣ ಮಾಡುತ್ತಿದ್ದರು. ಈ ಭವ್ಯ ಭವನವನ್ನು ಕಂಡು ಮೊಗ್ಗಲ್ಲಾನರು ದೇವತೆಗಳಲ್ಲಿ "ಈ ಭವನವು ಯಾರಿಗಾಗಿ?" ಎಂದು ವಿಚಾರಿಸಿದಾಗ ಇದು ನಂದಿಯನು ಬುದ್ಧರಿಗೆ ಮತ್ತು ಸಂಘಕ್ಕೆ ದಾನಗೈದ ಫಲದ ಪ್ರತಿಫಲ ಎಂದು ತಿಳಿಯಿತು. ಮೊಗ್ಗಲ್ಲಾನರಿಗೆ ದಾನಾದಿ ಪುಣ್ಯಕರ್ಮಗಳ ಫಲಗಳು ಸತ್ತಮೇಲೆ ಸಿಗುವುದು ತಿಳಿದಿತ್ತು. ಆದರೆ ಆತ ಬದುಕಿರುವಂತೆಯೇ ಆತನಿಗಾಗಿ ಭವ್ಯ ಭವನ ನಿಮರ್ಾಣವಾಗುವುದು ಅವರಿಗೆ ಆಶ್ಚರ್ಯವಾಯಿತು. ಸಂದೇಹ ಪರಿಹರಿಸಿಕೊಳ್ಳಲು ಬುದ್ಧರಲ್ಲಿಗೆ ಬಂದರು ಮತ್ತು ಪ್ರಶ್ನಿಸಿದರು.

            ಅದಕ್ಕೆ ಉತ್ತರವಾಗಿ ಭಗವಾನರು ಈ ರೀತಿ ಹೇಳಿದರು: "ಓ ಮೊಗ್ಗಲ್ಲಾನ, ನಿನ್ನ ಕಣ್ಣಿಂದಲೇ ಸುಗತಿಯಲ್ಲೂ ಕಂಡು ಸಹಾ ನನಗೇಕೆ ಪ್ರಶ್ನಿಸುವೆ?" ಚಿರಕಾಲ ಮನೆಯಿಂದ ದೂರವಿದ್ದು ಪುನಃ ಮನೆಗೆ ಹಿಂದಿರುಗಿ ಬಂದಾಗ ಬಂಧು-ಮಿತ್ರರು ಸ್ವಾಗತಿಸುವುದಿಲ್ಲವೇ? ಹಾಗೆಯೇ ಪುಣ್ಯಶಾಲಿಗೆ ಪುಣ್ಯವು ಪರಲೋಕದಲ್ಲಿ ಸ್ವಾಗತಿಸುತ್ತದೆ" ಎಂದು ಹೇಳಿ ಮೇಲಿನ ಈ ಎರಡು ಗಾಥೆಗಳು ಹೇಳಿದರು.

dhammapada/piyavagga/16.8/master

ಅಂಟಿಕೊಳ್ಳದವರೇ ಪರಮಾರ್ಥದಲ್ಲಿ ಉನ್ನತರು
"ಯಾರು ವಿವರಿಸಲಾಗದ್ದನ್ನು (ನಿಬ್ಬಾಣ) ಸಾಧಿಸಲು
ಪ್ರಬಲ ಆಕಾಂಕ್ಷಿಯೋ, ಮನಸ್ಸಿನಿಂದ
ಲೋಕೋತ್ತರ ಫಲಗಳನ್ನು ಅರಿತಿರುವವನೋ,
ಯಾರ ಚಿತ್ತವು ಕಾಯೋಪಭೋಗಗಳಲ್ಲಿ ಅಂಟುವುದಿಲ್ಲವೋ
ಅಂತಹವನ್ನು ಊಧ್ರ್ವ ಶ್ರೋತೃ (ಪ್ರವಾಹದ ಎದುರಾಗಿ ಸಾಗುವವ) ಎನ್ನುತ್ತೇನೆ.                (218)

ಗಾಥ ಪ್ರಸಂಗ 16:8
ನಮ್ಮ ಗುರುವು ಎಲ್ಲಿ ಜನಿಸಿಹರು ?

            ಒಬ್ಬ ಹಿರಿಯ ಭಿಕ್ಷುವು ತನ್ನ ಅನೇಕ ಶಿಷ್ಯರೊಂದಿಗೆ ಇದ್ದನು. ಒಮ್ಮೆ ಆತನ ಶಿಷ್ಯರು ಆತನ ಬಳಿಗೆ ಬಂದು "ತಾವು ಯಾವುದಾದರೂ ಲೋಕೋತ್ತರ ಮಾರ್ಗಫಲಗಳನ್ನು ಪಡೆಯುವಿರಾ?" ಎಂದು ಪ್ರಶ್ನಿಸಿದರು. ಆ ಹಿರಿಯ ಭಿಕ್ಷುವು ಆಗಲೇ ಮೂರು ಲೋಕೋತ್ತರ ಮಾರ್ಗ ಫಲಗಳನ್ನು ಪಡೆದಿದ್ದನು. ಆದರೆ ಅರಹಂತ ಫಲ ಮಾತ್ರ ಪಡೆದಿರಲಿಲ್ಲ. ಹೀಗಾಗಿ ಆತನಿಗೆ ತಾನಿನ್ನೂ ಅರಹಂತನಾಗಿಲ್ಲವಲ್ಲ ಎಂಬ ನಾಚಿಕೆಯಿಂದ ನಿರುತ್ತರನಾದನು. ಆದರೆ ಆತನ ಶಿಷ್ಯರು ಆತನನ್ನು ಯಾವುದೇ ಮಾರ್ಗಫಲ ಪಡೆದಿಲ್ಲ ಎಂದೇ ಭಾವಿಸಿದರು. ಆದರೆ ಅಷ್ಟರಲ್ಲಿ ಆ ಗುರುವು  ಮೃತ್ಯುವಶವಾದನು.
            ಆತನ ಶಿಷ್ಯರು ತಮ್ಮ ಗುರುಗಳು ಏನೊಂದು ಸಾಧಿಸದೆ ಮರಣವಪ್ಪಿದ್ದರಲ್ಲ ಎಂದು ಶೋಕಿಸುತ್ತ, ಕೊನೆಗೆ ಆತನು ಸುಗತಿಯನ್ನಾದರೂ ಪಡೆದಿರಬಹುದೇ? ಎಂದು ವಿಚಾರಿಸಲು ಭಗವಾನರ ಬಳಿ ಬಂದು "ನಮ್ಮ ಗುರುವು ಎಲ್ಲಿ ಜನಿಸಿಹರು?" ಎಂದು ಕೇಳಿದರು.
            ಆಗ ಭಗವಾನರು "ಭಿಕ್ಷುಗಳೇ, ನಿಮ್ಮ ಗುರುವು ಸಾವಿಗೆ ಮುನ್ನವೇ ಅನಾಗಾಮಿಯಾಗಿದ್ದರು. ಈಗ ಶುದ್ಧವಾದ ಬ್ರಹ್ಮಲೋಕದಲ್ಲಿಹರು. ಅವರು ಅರಹಂತರಾಗಿಲ್ಲದ ಕಾರಣ ನಾಚಿಕೆಯಿಂದ ಸಾಧಿಸಿ ಹೇಳೋಣವೆಂದು ಸುಮ್ಮನಿದ್ದರು. ಅವರು ಕಾಮಲೋಕದಿಂದಲೇ ಮುಕ್ತರಾಗಿದ್ದಾರೆ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.


dhammapada/piyavagga/16.7/mahakassapa

ಪರಿಪೂರ್ಣ ಸುಶೀಲನು ಎಲ್ಲರಿಂದ ಸತ್ಕಾರ ಪಡೆಯುವನು
"ಶೀಲಸಂಪನ್ನನು, ದರ್ಶನ ಸಂಪನ್ನನು,
ಧಮ್ಮದಲ್ಲಿ ಸ್ಥಿರನು, ಸತ್ಯವನ್ನು ಅರಿತವನು
ಹಾಗು ಮಾಡಬೇಕಾದುದೆಲ್ಲವನ್ನು ಮಾಡಿರುವವನು ಆದ
ಆತನನ್ನು ಜನರು ಪ್ರಿಯರೆಂದು ಭಾವಿಸುವರು."             (217)

ಗಾಥ ಪ್ರಸಂಗ 16:7
ಮಹಾಕಶ್ಯಪರ ಮಹಾ ಪ್ರಭಾವ

            ಭಗವಾನರು ಒಮ್ಮೆ 80 ಆಗ್ರ ಶ್ರಾವಕರ ಸಹಿತ 500 ಭಿಕ್ಷುಗಳೊಂದಿಗೆ ರಾಜಗೃಹಕ್ಕೆ ಪ್ರವೇಶಿಸಿದರು. ಅಲ್ಲಿ ಅವರು 500 ಯುವಕರು ಸ್ವಾದಿಷ್ಟಮಯ ಆಹಾರಗಳ ಬುಟ್ಟಿಗಳನ್ನು ತಮ್ಮ ಹೆಗಲ ಮೇಲಿಟ್ಟುಕೊಂಡು ಉದ್ಯಾನದೆಡೆಗೆ ಹೊರಟರು. ಅವರು ದಾರಿಯಲ್ಲಿ ಬುದ್ಧರನ್ನು ಕಂಡು ಹಾಗೆ ಮುಂದುವರೆದುಬಿಟ್ಟರು. ಯಾರಿಗೂ ಸಹಾ ತಿಂಡಿಯನ್ನು ತಿನ್ನಿ ಎಂದು ಹೇಳಲಿಲ್ಲ. ಆಗ ಭಗವಾನರು ಭಿಕ್ಷುಗಳ ಗೊಂದಲ ನಿವಾರಿಸಲು ಹೀಗೆ ನುಡಿದರು: "ಭಿಕ್ಷುಗಳೇ, ಆ ಯುವಕರು ನಿಮಗಾಗಲೀ ಅಥವಾ ನನಗಾಗಲಿ ಆಹಾರದ ಆಮಂತ್ರಣ ನೀಡಿದಿದ್ದರೂ ನಮ್ಮ ಹಿಂದೆ ಬರುತ್ತಿರುವ ಭಿಕ್ಷುಗಳಿಗೆ ದಾನ ನೀಡುತ್ತಾರೆ, ನಂತರ ನಿಮಗೆಲ್ಲಾ ದೊರೆಯುವುದು." ನಂತರ ಅವರೆಲ್ಲಾ ಒಂದು ಮರದ ಕೆಳಗೆ ಕುಳಿತರು.

            ನಂತರ ಆ ಯುವಕರು ಪರಮಪೂಜ್ಯ ಮಹಾಕಸ್ಸಪರನ್ನು ನೋಡಿದರು. ತಕ್ಷಣ ಅವರ ಮನಸ್ಸು ಆನಂದಿತವಾಯಿತು, ಶರೀರ ಸಹಾ ಆನಂದತೆ ಮತ್ತು ಹಗುರತೆಯಿಂದ ಕೂಡಿಕೊಂಡಿತು. ತಕ್ಷಣ ಅವರು ಮಹಾಕಸ್ಸಪರಿಗೆ ವಂದಿಸಿ ಅವರಿಗೆ ಹೀಗೆ ಹೇಳಿದರು. "ಓ ಯುವಕರೇ, ನೀವು ತಪ್ಪು ಮಾಡಿದಿರಿ, ಸ್ವಲ್ಪ ದೂರದಲ್ಲಿ ಬುದ್ಧರು ಮತ್ತು ಸಂಘ ಕುಳಿತಿದ್ದಾರೆ, ನೀವು ಅವರಿಗೆ ಮೊದಲು ದಾನ ನೀಡಬೇಕಿತ್ತು. ಪರವಾಗಿಲ್ಲ, ಈಗ ತಪ್ಪದೇ ನೀವು ಅವರಲ್ಲಿಗೆ ಹೋಗಿ ಸತ್ಕರಿಸಿ" ಎಂದರು. ಅವರು "ಸರಿ ಪೂಜ್ಯರೇ" ಎಂದು ಹೇಳಿ ಅದರಂತೆಯೇ ಭಗವಾನರಿಗೆ ಮತ್ತು ಸಂಘಕ್ಕೆ ಸತ್ಕರಿಸಿದರು. ಆಗ ಭಿಕ್ಷುಗಳು ಇದು ಯುವಕರ ಪಕ್ಷಪಾತವಿರಬಹುದೇ ಎಂದು ಚಚರ್ಿಸುವಾಗ ಭಗವಾನರು ಮಹಾಕಸ್ಸಪರವರ ಸದ್ಗುಣಗಳನ್ನು ಹೊಗಳುತ್ತಾ ಈ ಮೇಲಿನ ಗಾಥೆಯನ್ನು ನುಡಿದರು. 

dhammapada/piyavagga/16.6/brahmin

ತೃಷ್ಣೆಯಿಂದಲೇ ಶೋಕ ಉಂಟಾಗುತ್ತದೆ
"ತೃಷ್ಣೆಯಿಂದಲೇ ಶೋಕ ಉಂಟಾಗುತ್ತದೆ,
ತೃಷ್ಣೆಯಿಂದಲೇ ಭಯವು ಉಂಟಾಗುತ್ತದೆ.
ಯಾರು ತೃಷ್ಣೆಯಿಂದ ಪೂರ್ಣವಾಗಿ ಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯ ಹೇಗೆ ತಾನೇ ಇರಬಲ್ಲದು?"          (216)

ಗಾಥ ಪ್ರಸಂಗ 16:6
ಬ್ರಾಹ್ಮಣನಿಗೆ ವಾಗ್ದಾನದಿಂದ ಶೋಕ

            ಭಗವಾನರು ಆಗ ಶ್ರಾವಸ್ಥಿಯಲ್ಲಿದ್ದರು. ಅವರಿಗೆ ಮಹಾಕರುಣಾ ಸಮಾಪತ್ತಿಯಲ್ಲಿ ಬ್ರಾಹ್ಮಣ ರೈತನೊಬ್ಬನು ಸೋತಪತ್ತಿಯಾಗುವ ಬಗ್ಗೆ ಅರಿತುಕೊಂಡರು. ಆದರೆ ಆತನು ಜ್ಞಾನೋದಯ ಪಡೆಯಲು ದೀರ್ಘಕಾಲದ ಪರಿಚಯ ಮಾಡಿಕೊಳ್ಳಬೇಕು ಎಂದು ಅರಿವಾಗಿ ಆ ದಿನ ನದಿಯ ದಡದಲ್ಲಿದ್ದ ಆತನ ಭೂಮಿಯ ಬಳಿಗೆ ಬಂದರು. ಆದರೆ ಆ ಬ್ರಾಹ್ಮಣನು ಬುದ್ಧರನ್ನು ಕಂಡಾಗಲೂ ಯಾವುದೇ ಗೌರವ ನೀಡಲಿಲ್ಲ. ನಿಶ್ಶಬ್ಧವಾಗಿಯೇ ಇದ್ದನು. ಆಗ ಭಗವಾನರೇ ಆತನಿಗೆ ಮೊದಲು ಮಾತನ್ನು ಆರಂಭಿಸಿದರು.
            "ಬ್ರಾಹ್ಮಣ ಏನನ್ನು ಮಾಡುತ್ತಿರುವೆ?"
            "ನನ್ನ ಹೊಲವನ್ನು ಶುದ್ಧಗೊಳಿಸುತ್ತಿದ್ದೇನೆ ಭಂತೆ."
            ನಂತರ ಭಗವಾನರು ಏನನ್ನು ಮಾತನಾಡಲಿಲ್ಲ, ತಮ್ಮ ದಾರಿ ಹಿಡಿದರು. ಮಾರನೆಯ ದಿನ ಆ ಬ್ರಾಹ್ಮಣನ ಹೊಲದ ಬಳಿಗೆ ಹೋದಾಗ ಆ ಬ್ರಾಹ್ಮಣನು ನೇಗಿಲು ಹೊಡೆಯುತ್ತಿದ್ದನು. ಆಗ ಭಗವಾನರು ಹೀಗೆ ಪ್ರಶ್ನಿಸಿದರು.
            "ಬ್ರಾಹ್ಮಣನೇ ಏನನ್ನು ಮಾಡುತ್ತಿರುವೆ?"
            "ನನ್ನ ಹೊಲವನ್ನು ನೇಗಿಲಿನಿಂದ ಹುತ್ತುತ್ತಿರುವೆ."
            ನಂತರ ಭಗವಾನರು ಮರುಮಾತನಾಡದೆ ತಮ್ಮ ದಾರಿ ಹಿಡಿದರು. ಹೀಗೆ ಹಲವು ದಿನಗಳವರೆಗೆ ಭಗವಾನ್ ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದರು ಮತ್ತು ಆತನು "ಭಂತೆ ನಾನು ಬೀಜ ಬಿತ್ತುತ್ತಿದ್ದೇನೆ, ಕಳೆ ಕೀಳುತ್ತಿದ್ದೇನೆ, ರಕ್ಷಿಸುತ್ತಿದ್ದೇನೆ" ಎಂದು ಉತ್ತರಿಸುತ್ತಿದ್ದನು. ಹಾಗು ಭಗವಾನರು ಸಹಾ ತಮ್ಮ ಹಾದಿ ಹಿಡಿಯುತ್ತಿದ್ದರು. ಒಂದು ದಿನವಂತೂ ಬ್ರಾಹ್ಮಣನು ಭಗವಾನರಿಗೆ ಹೀಗೆ ಹೇಳಿಯೇಬಿಟ್ಟನು. "ಭಂತೆ, ನಾನು ಹೊಲವನ್ನು ಶುಚಿಗೊಳಿಸಿದಾಗಿನಿಂದಲೂ ಬರುತ್ತಿರುವಿರಿ, ನನಗೆ ಒಳ್ಳೆಯ ಬೆಳೆ ಬಂದರೆ, ನಾನು ನಿಮ್ಮೊಂದಿಗೆ ಹಂಚಿಕೊಳ್ಳುವೆನು. ನಿಮಗೆ ದಾನ ನೀಡದೆ ಆಗ ನಾನು ತಿನ್ನುವುದಿಲ್ಲ. ಇಂದಿನಿಂದ ನೀವು ನನ್ನ ಸಹಭಾಗಿ" ಎಂದುಬಿಟ್ಟನು.
            ಕಾಲಕಳೆದಂತೆ ಆತನಿಗೆ ಒಳ್ಳೆಯ ಬೆಳೆಯು ಬಂತು. ಆತನು ತನ್ನಲೇ ಹೀಗೆ ಹೇಳಿಕೊಂಡನು: "ನನ್ನ ಬೆಳೆಯು ಹುಲುಸಾಗಿ ಬೆಳೆದಿದೆ, ನಾಳೆಯಿಂದ ನಾನು ಬೆಳೆ ಕೊಯ್ಯಲು ಆರಂಭಿಸುವೆ" ಹೀಗೆ ಆತನು ಸಿದ್ಧನಾದನು. ಆದರೆ ಅಂದು ರಾತ್ರಿ ಬಿರುಗಾಳಿ ಸಹಿತ ಭೀಕರ ಮಳೆಯು ಬಿದ್ದಿತು. ಪರಿಣಾಮವಾಗಿ ಆತನ ಬೆಳೆಯೆಲ್ಲ ಕೊಚ್ಚಿಕೊಂಡು ಹೋಯಿತು. ಈಗ ಆತನು ಹೊಲವು ಬಟ್ಟಬಯಲಾಗಿತ್ತು. ಭಗವಾನರಿಗೆ ಮೊದಲೇ ಈತನ ಬೆಳೆಯು ನಷ್ಟವಾಗುವುದೆಂದು ತಿಳಿದಿತ್ತು. ಆದರೆ ಆತನಿಗೆ ಆಗುವ ನಷ್ಟದಿಂದಲೇ ಆತನಿಗೆ ಗಂಭೀರ ಜ್ಞಾನೋದಯ (ಸೋತಪತ್ತಿ) ಆಗುವ ಸಾಧ್ಯತೆ ಇದ್ದುದರಿಂದಾಗಿಯೇ ಅವರು ಆತನಿಗೆ ಆಗುವ ಮುಂದಿನ ಮಹತ್ ಲಾಭ ಗಮನಿಸಿ ಅದರ ಬಗ್ಗೆ ಯಾವ ಮುನ್ನೆಚ್ಚರಿಕೆಯನ್ನು ನೀಡಲಿಲ್ಲ. ಹೀಗಾಗಿಯೇ ಅವರು ಆತನೊಂದಿಗೆ ಆರಂಭದಿಂದಲೂ ಸ್ನೇಹ ಆರಂಭಿಸಿದರು.
            ಮಾರನೆಯದಿನ ಆ ಬ್ರಾಹ್ಮಣನು ತನ್ನ ಹೊಲವನ್ನು ನೋಡಿ ಅಪಾರ ಶೋಕಕ್ಕೆ ಗುರಿಯಾದನು. "ಓಹ್, ನನ್ನ ಹೊಲ ನಾಶವಾಯಿತಲ್ಲ, ನಾನು ಭಗವಾನರಿಗೂ ನನ್ನ ಬೆಳೆಯಲ್ಲಿ ಅರ್ಧ ಭಾಗ ನೀಡುತ್ತೇನೆ ಎಂದಿದ್ದೆ. ಆ ಬಯಕೆಯೂ ನೆರವೇರಲಿಲ್ಲ!" ಎಂದು ಅಪಾರ ಶೋಕಪಟ್ಟನು. ಹೀಗಾಗಿ ಆತನು ಆಹಾರವನ್ನು ಸೇವಿಸದೆ, ಹಾಸಿಗೆ ಹಿಡಿದನು. ಆಗ ಭಗವಾನರು ಆತನ ಮನೆಯ ಬಾಗಿಲಿಗೆ ಬಂದರು. ಆ ಸುದ್ದಿ ತಿಳಿದ ಬ್ರಾಹ್ಮಣನು ತನ್ನ ಸೇವಕನೊಂದಿಗೆ "ನನ್ನ ಸಹಭಾಗಿಯಾದ ಭಗವಾನರನ್ನು ಇಲ್ಲಿ ಕರೆತನ್ನಿ ಮತ್ತು ಗೌರವಯುತವಾಗಿ ಕುಳ್ಳರಿಸಿ" ಎಂದನು. ಆತನ ಸೇವಕರು ಹಾಗೇ ಮಾಡಿದರು. ಭಗವಾನರು ಕುಳಿತುಕೊಂಡು ಹೀಗೆ ಕೇಳಿದರು: "ಬ್ರಾಹ್ಮಣನೇ ಏನು ಸಮಾಚಾರ?"
            "ಭಗವಾನರೇ, ನೀವು ನಾನು ಹೊಲವನ್ನು ಶುದ್ಧಿಗೊಳಿಸಿದಾಗಿನಿಂದ ಬಂದಿದ್ದೀರಿ, ಆಗ ನಾನು ನಿಮಗೆ ವಚನ ನೀಡಿದ್ದೆ, 'ನನಗೆ ಒಳ್ಳೆಯ ಬೆಳೆ ಬಂದರೆ ನಿಮಗೆ ಅರ್ಥ ನೀಡುತ್ತೇನೆ' ಎಂದು. ಆದರೆ ನನ್ನ ಆಸೆ ಪೂರೈಸಿಲ್ಲ. ಆದ್ದರಿಂದಲೇ ನಾನು ಶೋಕಪೀಡಿತನಾಗಿದ್ದೇನೆ. ನನಗೆ ಆಹಾರವೂ ಸೇರುತ್ತಿಲ್ಲ." ಆಗ ಭಗವಾನರು ಹೀಗೆ ಹೇಳಿದರು: "ಆದರೆ ಬ್ರಾಹ್ಮಣನೇ, ಈ ಶೋಕ ನಿನ್ನಲ್ಲಿ ಯಾವ ಕಾರಣದಿಂದ ಉಂಟಾಯಿತು ಎಂದು ತಿಳಿದಿದೆಯೇ?"
            "ಇಲ್ಲ ಭಂತೆ ತಿಳಿದಿಲ್ಲ."

            "ಬ್ರಾಹ್ಮಣನೇ, ಯಾವ ಶೋಕವೇ ಆಗಲಿ ಅಥವಾ ಭಯವೇ ಆಗಲಿ ತೀವ್ರ ಬಯಕೆಗಳಿಂದಲೇ ಉಂಟಾಗುತ್ತದೆ. ಯಾವಾಗ ನಿನ್ನಲ್ಲಿ ಯಾವುದೇ ರೀತಿಯ ಬಯಕೆಗಳು ಇಲ್ಲವಾಗುವುದೋ ಆಗ ಯಾವ ಶೋಕವೂ ನಿನ್ನಲ್ಲಿ ಇರಲಾರದು" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

dhammapada/piyavagga/16.5/anitthigandhakumara

ಕಾಮದಿಂದ ಶೋಕ ಉಂಟಾಗುತ್ತದೆ
"ಕಾಮದಿಂದ ಶೋಕ ಉಂಟಾಗುತ್ತದೆ,
ಕಾಮದಿಂದ ಭಯವು ಉಂಟಾಗುತ್ತದೆ.
ಯಾರು ಕಾಮದಿಂದ ಪೂರ್ಣವಾಗಿ ಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯ ಹೇಗೆ ತಾನೇ ಇರಬಲ್ಲದು?"          (215)

ಗಾಥ ಪ್ರಸಂಗ 16:5
ಅನಿತ್ಥಿಗಂಧ ಕುಮಾರನ ಪ್ರೇಮ


            ಅನಿತ್ಥಿಗಂಧ ಕುಮಾರನು ಶ್ರಾವಸ್ಥಿಯ ಮಹಾ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದನು. ಆತನು ಇಲ್ಲಿ ಹುಟ್ಟುವ ಮುನ್ನ ಬ್ರಹ್ಮಲೋಕದಲ್ಲಿದ್ದನು. ಈ ಕಾರಣದಿಂದಾಗಿ ಆತನಿಗೆ ಬ್ರಹ್ಮಚಾರ್ಯ ಇಷ್ಟವಾಗಿ ಬಾಲ್ಯದಿಂದಲೂ ಸ್ತ್ರೀಯರ ಹತ್ತಿರವೇ ಹೋಗುತ್ತಿರಲಿಲ್ಲ. ಆತನು ಯುವಕನಾದಾಗ ತಂದೆ-ತಾಯಿಗಳು ಆತನಿಗೆ ಹೀಗೆ ಹೇಳಿದರು: "ಮಗು, ನಾವು ನಿನಗೆ ವಿವಾಹ ಮಾಡಬೇಕೆಂದಿದ್ದೇವೆ." "ನನಗೆ ಸ್ತ್ರೀಯರೇ ಬೇಕಿಲ್ಲ" ಎಂದುಬಿಟ್ಟನು. ಪ್ರತಿಬಾರಿ ಕೇಳಿದಾಗಲೂ ಆತನು ಹಾಗೆಯೇ ಉತ್ತರಿಸಿದನು. ಕೊನೆಗೆ ಆತನು ತಂದೆ-ತಾಯಿಗಳ ಒತ್ತಾಯಕ್ಕೆ ಮಣಿದು 500 ಅಕ್ಕಸಾಲಿಗರ ಸಹಾಯದಿಂದ ಈತನ ನಿದರ್ೆಶನದಂತೆಯೇ ಅಪೂರ್ವ ಸ್ತ್ರೀ ಆಕೃತಿಯೊಂದನ್ನು ನಿಮರ್ಿಸಿದನು. ನಂತರ ಹೀಗೆ ಹೇಳಿದನು, "ನೀವೊಂದು ವೇಳೆ ಈ ರೀತಿಯ ಅಪೂರ್ವ ಸುಂದರ ಕನ್ಯೆಯನ್ನು ಹುಡುಕಿ ತಂದರೆ ನಾನು ನೀವು ಹೇಳಿದಂತೆಯೇ ವಿವಾಹವಾಗುವೆ. ಆಗ ಆತನ ತಂದೆ-ತಾಯಿಗಳು ಕೆಲವು ಬ್ರಾಹ್ಮಣರನ್ನು ನೇಮಕ ಮಾಡಿ ಹೀಗೆ ಹೇಳಿದರು. "ನಮ್ಮ ಪುತ್ರನು ಅಪಾರ ಪುಣ್ಯಶಾಲಿಯಾಗಿದ್ದಾನೆ. ಖಂಡಿತವಾಗಿ ಆತನು ನಿಮರ್ಿಸಿರುವಂತಹ ಸ್ತ್ರೀಯು ಇದ್ದೇ ಇರಬೇಕು, ಹೋಗಿ ದೇಶ-ವಿದೇಶಗಳಲ್ಲಿ ಹುಡುಕಿ ಮತ್ತು ಅಂತಹ ಅನುರೂಪ ಸುಂದರಿಯನ್ನೇ ಕರೆತನ್ನಿ". ಅದಕ್ಕೆ ಒಪ್ಪಿದ ಬ್ರಾಹ್ಮಣರು ಹುಡುಕುತ್ತಾ ಹುಡುಕುತ್ತಾ ಸಾಗಾಲ ನಗರಕ್ಕೆ ಬಂದರು. ಅದು ಮದ್ರಾ ರಾಜ್ಯದಲ್ಲಿತ್ತು. ಆ ನಗರದಲ್ಲಿ 16ರ ವಯಸ್ಸಿನ ಅತ್ಯಂತ ಸುಂದರವಾದ ಕನ್ಯೆಯಿದ್ದಳು. ಅವಳ ತಾಯಿಯು ಒಮ್ಮೆ ನಗರದ ಸ್ನಾನಗೃಹದ ಸಮೀಪ ಹೋಗುತ್ತಿರುವಾಗ ಆಕೆಯ ಮಗಳ ಆಕೃತಿಯಂತೆಯೇ ಇದ್ದಂತಹ ಸ್ವರ್ಣದ ಗೊಂಬೆ ನೋಡಿದಳು. ಆ ಬ್ರಾಹ್ಮಣರಿಗೆ ಹೀಗೆ ಕೇಳಿದಳು: "ಓಹ್, ನಾನು ಇದನ್ನು ನನ್ನ ಮಗಳೆಂದು ಭಾವಿಸಿದೆ, ದಯವಿಟ್ಟು ನೀವಿದನ್ನು ಹೇಗೆ ನಿಮರ್ಿಸಿದಿರಿ ತಿಳಿಸುವಿರಾ?"
            "ತಾಯಿ, ನಿಮ್ಮ ಮಗಳು ಈ ಸ್ತಂಭದ ಪ್ರತಿಮೆಯಂತೆಯೇ ಇದ್ದಾಳೆಯೇ?"
            "ಓಹ್ ಇದಕ್ಕಿಂತಲೂ ಚೆಂದಾಗಿದ್ದಾಳೆ."
            "ಹಾಗಾದರೆ ದಯವಿಟ್ಟು ತೋರಿಸುವಿರಾ?" ಎಂದು ಅನಿತ್ಥಿಕುಮಾರನ ನಿಧರ್ಾರವೆಲ್ಲಾ ತಿಳಿಸಿದರು. ನಂತರ ಅವರು ಆ ಗೃಹಸ್ಥಳ ಮನೆಗೆ ಹೋದರು. ಅಲ್ಲಿ ಅವರು ಆ ಪ್ರತಿಮೆಯ ಪಕ್ಕ, ತಮ್ಮ ಮಗಳನ್ನು ನಿಲ್ಲಿಸಿದರು. ಆ ಕುಮಾರಿಯ ಸೌಂದರ್ಯಕ್ಕೆ ಆ ಸ್ವರ್ಣಗೊಂಬೆಯೇ ಸಪ್ಪೆಯಾದಂತೆ ಕಂಡುಬಂದಿತು. ತಕ್ಷಣ ಅವರು ಸಂಬಂಧವನ್ನು ಕುದುರಿಸಿದರು. ನಂತರ ಈ ವಿಷಯವನ್ನು ಅನಿತ್ಥಿಕುಮಾರನ ತಂದೆ ತಾಯಿಗಳಿಗೆ ತಿಳಿಸಿದರು. ಅವರ ಆನಂದಕ್ಕೆ ಪಾರವೇ ಇರಲಿಲ್ಲ. ತಕ್ಷಣವೇ ಅವರು ಅತ್ಯಂತ ಬೆಲೆಬಾಳುವ ಉಡುಗೊರೆಗಳನ್ನು ನೀಡಿ ಆ ಸುಂದರ ಕನ್ಯೆಯನ್ನು ಇಲ್ಲಿಗೆ ಶೀಘ್ರವೇ ಕರೆತರುವಂತೆ ಹೇಳಿ ಕಳುಹಿಸಿದರು. ಆ ಕುಮಾರನಿಗೂ ಆ ಯುವತಿಯ ಬಗ್ಗೆ ಕೇಳಿಯೇ ಪ್ರೇಮವುಂಟಾಯಿತು. ಆತನು ಸಹಾ ಆಕೆಯನ್ನು ಅತಿ ಶೀಘ್ರದಲ್ಲಿ ಕರೆತರುವಂತೆ ಒತ್ತಾಯಿಸಿದನು.
            ಆದರೆ ಆಕೆಯನ್ನು ಹಾಗೆ ಸಾರೋಟು ರಥದಲ್ಲಿ ಕರೆತರುವಾಗ ಬಂಡಿಯ ಅತಿಯಾದ ಕುಲುಕಾಟದಿಂದಾಗಿ, ಅತಿ ಸುಕುಮಾರಿಯಾದ, ಅತ್ಯಂತ ನಾಜೂಕು ಶರೀರ ಪಡೆದಿದ್ದ ಆ ಸುಂದರ ಕನ್ಯೆಗೆ ಬೆನ್ನು ಮತ್ತು ಸೊಂಟವು ಉಳುಕಿ, ಅತಿಯಾದ ನೋವು ಉಂಟಾಗಿ ಆಕೆಯು ದಾರಿಯಲ್ಲೇ ಸತ್ತಳು. ಈ ವಿಷಯವನ್ನು ಆ ಬ್ರಾಹ್ಮಣರು ಅನಿತ್ಥಿಕುಮಾರನಿಗೆ ತಿಳಿಸಿದರು. "ಓಹ್, ಕೊನೆಗೂ ನಾನು ಆಕೆಯನ್ನು ಭೇಟಿಯಾಗದೆ ಹೋದೆನಲ್ಲಾ" ಎಂದು ಅತಿಯಾದ ದುಃಖವನ್ನು ತಂದುಕೊಂಡನು.
            ಭಗವಾನರು ಮುಂಜಾನೆಯೇ ಈ ಯುವಕನ ಬಗ್ಗೆ ಮಹಾಕರುಣಾ ಸಮಾಪತ್ತಿಯಲ್ಲಿ ತಿಳಿದುಕೊಂಡಿದ್ದರು. ಆತನು ಸೋತಾಪತ್ತಿ ಫಲ ಪಡೆಯುವ ಕಾಲ ಸನಿಹವಾಗಿತ್ತು. ಭಗವಾನರು ಆಹಾರಕ್ಕಾಗಿ ಬಂದಿರುವಂತೆ ಆ ಯುವಕನ ಮನೆಯ ಬಾಗಿಲಲ್ಲಿ ನಿಂತರು. ಆಗ ಕುಮಾರನ ತಂದೆ-ತಾಯಿಗಳು ಭಗವಾನರನ್ನು ಆಹಾರ ಸ್ವೀಕರಿಸಲು ಆಹ್ವಾನಿಸಿದರು. ಆಹಾರ ಸೇವನೆಯ ನಂತರ ಭಗವಾನರು ಆ ಯುವಕನಿಗೆ ಹೀಗೆ ಪ್ರಶ್ನಿಸಿದರು. "ಓಹ್, ಯುವಕನೇ, ನೀನು ತುಂಬಾ ದುಃಖಿತನಂತೆ ಕಾಣುತ್ತಿರುವೆ."
            "ಹೌದು ಪೂಜ್ಯರೇ, ನನಗಾಗಿಯೇ ಇದ್ದಂತಹ ವಧುವನ್ನು ಸಾರೋಟು ಬಂಡಿಯಲ್ಲಿ ಕರೆತರುವಾಗ ದಾರಿಯಲ್ಲಿಯೇ ಆಕೆ ಸತ್ತಳು, ಆಕೆಯ ಸಾವಿನ ಸುದ್ದಿಯಿಂದ ನಾನು ದುಃಖಿತನಾಗಿರುವೆನು. ಹೀಗಾಗಿ ನನಗೆ ಊಟವೂ ಸೇರುತ್ತಿಲ್ಲ."
            "ಓಹ್ ಯುವಕನೇ, ನಿನ್ನ ಅತೀವ ದುಃಖಕ್ಕೆ ಕಾರಣ ತಿಳಿದಿದೆಯೇ?"
            "ಇಲ್ಲ ಭಂತೆ."

            "ಯುವಕನೇ, ಪ್ರೇಮವೊಂದರಿಂದಲೇ ನಿನಗೆ ಈ ದುಃಖ ಒದಗಿಬಂದಿದೆ. ಈ ಬಗೆಯ ಅಂಟುವಿಕೆಯಿಂದಲೇ ಭಯ, ಶೋಕ ಉಂಟಾಗುತ್ತದೆ. ಈ ಅಂಟುವಿಕೆಯಿಂದ ವಿಮುಕ್ತನಾದರೆ, ನಿನಗೆ ದುಃಖವೇ ಇರುವುದಿಲ್ಲ" ಎಂದು ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು.

dhammapada/piyavagga/16.4/liccavipnince

ರತಿವಿಲಾಸದಿಂದ ಶೋಕ ಉಂಟಾಗುತ್ತದೆ
"ರತಿವಿಲಾಸದಿಂದ ಶೋಕ ಉಂಟಾಗುತ್ತದೆ,
ರತಿವಿಲಾಸದಿಂದಲೇ ಭಯವು ಉಂಟಾಗುತ್ತದೆ.
ಯಾರು ಪೂರ್ಣವಾಗಿ ರತಿವಿಲಾಸದಿಂದ ವಿಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯ ಹೇಗೆ ತಾನೇ ಇರಬಲ್ಲದು?"          (214)


ಗಾಥ ಪ್ರಸಂಗ 16:4
ಲಿಚ್ಚವಿ ರಾಜಕುಮಾರರಲ್ಲಿ ಸ್ತ್ರೀಗಾಗಿ ರಕ್ತಪಾತ


            ಒಮ್ಮೆ ಭಗವಾನರು ವೈಶಾಲಿಯ ಕೂಟಾಗಾರ ವಿಹಾರದಲ್ಲಿ ನೆಲೆಸಿದ್ದರು. ಅಂದು ಲಿಚ್ಚವಿಗಳ ನಗರದಲ್ಲಿ ಹಬ್ಬವಿತ್ತು. ಆಗ ಲಿಚ್ಚವಿ ರಾಜಕುಮಾರರು ಒಳ್ಳೆಯ ವಸ್ತ್ರಗಳಿಂದ ಮತ್ತು ಆಭರಣಗಳಿಂದ ಅತ್ಯಂತ ಸುಂದರವಾಗಿ ಕಾಣುತ್ತ, ನಗರದಿಂದ ಉದ್ಯಾನವನಕ್ಕೆ ತೆರಳಿದರು. ಆಗತಾನೇ ಭಗವಾನರು ಸಹಾ ಆಹಾರಕ್ಕಾಗಿ ನಗರವನ್ನು ಪ್ರವೇಶಿಸಿದ್ದರು. ಅವರು ಲಿಚ್ಚವಿಗಳನ್ನು ನೋಡುತ್ತಾ ಭಿಕ್ಷುಗಳಿಗೆ ಹೀಗೆಂದರು: "ಭಿಕ್ಷುಗಳೇ, ಈ ಲಿಚ್ಚವಿ ರಾಜಕುಮಾರರನ್ನು ನೋಡಿರಿ, ನೀವು ತಾವತಿಂಸ ದೇವತೆಗಳನ್ನು ಎಂದಿಗೂ ನೋಡಿಲ್ಲ. ಈ ರಾಜಕುಮಾರರನ್ನು ನೋಡಿದರೆ ಅವರಿಗೆ ಸಾಮಿಪ್ಯವಾಗಿ ಕಾಣಿಸುವುದು."
*   *   *
            ಲಿಚ್ಚವಿ ರಾಜಕುಮಾರರು ಉದ್ಯಾನವನದಲ್ಲಿ ತಾವು ಹೊರಟ ದಾರಿಯಲ್ಲಿ ಓರ್ವ ಸುಂದರ ನರ್ತಕಿಯೊಬ್ಬಳನ್ನು ಕಂಡರು. ಆಕೆಯನ್ನು ಸಹಾ ಅವರು ಉದ್ಯಾನವನಕ್ಕೆ ಕರೆದೊಯ್ದರು. ಆಕೆಯನ್ನು ಪಡೆಯಬೇಕೆಂಬ ಹಂಬಲ ಎಲ್ಲರಲ್ಲಿ ಜಾಗ್ರತವಾಯಿತು. ಈ ಸ್ವಾರ್ಥದಿಂದಲೇ ಅವರಲ್ಲಿಯೇ ಹೊಡೆದಾಟ ಆರಂಭವಾಯಿತು. ಅವರು ತಮ್ಮ ತಮ್ಮಲ್ಲಿಯೇ ಶಸ್ತ್ರಾಯುದ್ದ ನಡೆದು, ಕತ್ತರಿಸಿಕೊಂಡರು. ಆಗ ರಕ್ತದ ಹೊಳೆಯೇ ಹರಿದಿತ್ತು. ಜನರು ಅವರ ಶರೀರಗಳನ್ನು ಗೌರವಯುತವಾಗಿ ಪಲ್ಲಕ್ಕಿಯಲ್ಲಿ ಎತ್ತಿಕೊಂಡು ಹೋದರು.
*   *   *
            ಇತ್ತ ಭಗವಾನರು ಆಹಾರ ಮುಗಿಸಿಕೊಂಡು ನಗರದಿಂದ ವಿಹಾರಕ್ಕೆ ಮರಳಿದರು. ಆಗ ಭಿಕ್ಷುಗಳು ಅಲ್ಲಿ ನಡೆದ ರಕ್ತಪಾತದ ಬಗ್ಗೆ ತಿಳಿಸಿದರು. ಆಗ ಭಗವಾನರು ಈ ಗಾಥೆಯನ್ನು ನುಡಿದರು.





dhammapada/piyavagga/16.3/visaaka

ಪ್ರೇಮದಿಂದ ಶೋಕ ಹುಟ್ಟುವುದು
"ಪ್ರೇಮದಿಂದ ಶೋಕ ಹುಟ್ಟುವುದು
ಪ್ರೇಮದಿಂದಲೇ ಭಯವು ಹುಟ್ಟುವುದು
ಯಾರು ಪ್ರೇಮದಿಂದ ಪೂರ್ಣವಾಗಿ ಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯ ಹೇಗೆ ತಾನೇ ಇರಬಲ್ಲದು?"          (213)


ಗಾಥ ಪ್ರಸಂಗ 16:3
ಬುದ್ಧರಿಂದ ವಿಶಾಖೆಗೆ ಸಾಂತ್ವನ


            ಒಮ್ಮೆ ಭಗವಾನರು ಶ್ರಾವಸ್ಥಿಯ ಜೇತವನದಲ್ಲಿದ್ದರು. ವಿಶಾಖೆಗೆ ಸುದತ್ತಳೆಂಬ ಮೊಮ್ಮಗಳು ಇದ್ದಳು. ವಿಶಾಖೆ ಇಲ್ಲದಿದ್ದಾಗ ಭಿಕ್ಷುಗಳಿಗೆ ಆಕೆಯೇ ದಾನ ಮಾಡುತ್ತಿದ್ದಳು. ಹೀಗಿರುವಾಗ ಒಮ್ಮೆ ಸುದತ್ತಳು ಸತ್ತುಹೋದಳು. ನಂತರ ಆಕೆಯ ಶವಸಂಸ್ಕಾರವೂ ಆಯಿತು. ಈ ಘಟನೆಯಿಂದಾಗಿ ವಿಶಾಖೆಯು ಅಪಾರ ಶೋಕಪಟ್ಟಳು. ತನ್ನ ದುಃಖ ನಿಯಂತ್ರಿಸಲಾಗದೆ ಆಕೆಯು ಬುದ್ಧ ಭಗವಾನರ ಬಳಿಗೆ ಬಂದಳು. ಗೌರವಯುತವಾಗಿ ವಂದಿಸಿ ಒಂದೆಡೆ ಕುಳಿತಳು. ಆಗ ಭಗವಾನರು ಆಕೆಗೆ ಹೀಗೆ ಪ್ರಶ್ನಿಸಿದರು: "ವಿಶಾಖಾ, ಏತಕ್ಕಾಗಿ ಹೀಗೆ ಶೋಕದಿಂದ ಕೂಡಿರುವೆ?"
            "ಭಂತೆ, ನನ್ನ ಪ್ರೀತಿಪಾತ್ರಳಾದ ಮೊಮ್ಮಗಳನ್ನು ನಾನು ಕಳೆದುಕೊಂಡುಬಿಟ್ಟೆನು. ಆಕೆಯು ನನಗೆ ಅತಿ ಪ್ರೀತಿಪಾತ್ರಳು, ನಿಷ್ಠಾವಂತಳು ಆಗಿದ್ದಳು. ನಾನು ಆಕೆಗೆ ಮತ್ತೆ ನೋಡಲಾರೆನಲ್ಲ?" ಎಂದು ಪುನಃ ಅತ್ತಳು. ಭಗವಾನರು ಆಕೆಗೆ ಸಮಾಧಾನಿಸಿ ಹೀಗೆ ಪ್ರಶ್ನಿಸಿದರು. "ವಿಶಾಖಾ, ಶ್ರಾವಸ್ಥಿಯಲ್ಲಿ ಎಷ್ಟು ನಿವಾಸಿಗಳಿದ್ದಾರೆ?"
            "ಭಗವಾನ್, ತಾವೇ ಹೇಳಿರುವಂತೆ 70 ದಶಲಕ್ಷ ಜನರಿದ್ದಾರೆ."
            "ವಿಶಾಖ, ಒಂದುವೇಳೆ ಸುದತ್ತಳಷ್ಟೇ ಪ್ರೀತಿಪಾತ್ರರಾಗಿ ಈ ಎಲ್ಲಾ ಜನರನ್ನು ನೀನು ಹೊಂದುವಂತಿದ್ದರೆ ಸ್ವೀಕರಿಸುತ್ತಿದ್ದೆಯೇ?"
            "ಖಂಡಿತ ಭಗವಾನ್."
            "ಓ ವಿಶಾಖೆ, ಶ್ರಾವಸ್ಥಿಯಲ್ಲಿ ಪ್ರತಿದಿನ ಎಷ್ಟು ಮಂದಿ ಸಾಯುವರು?"
            "ಬಹಳಷ್ಟು ಮಂದಿ ಭಗವಾನ್."
            "ಹಾಗಿರುವಂತಿದ್ದರೆ ನಿನಗೆ ಪ್ರತಿದಿನ ಶೋಕಪಡುವುದೇ ಆಗಿಬಿಡುತ್ತದೆ. ನಿನ್ನ ಸಮಯವೆಲ್ಲಾ ಶೋಕಾಚರಣೆಗೆ ಸೀಮಿತವಾಗುತ್ತದೆ. ನಿನ್ನ ಇಡೀ ಹಗಲು ಮತ್ತು ಪ್ರತಿ ರಾತ್ರಿ ಶೋಕವೇ ಪಡಬೇಕಾಗುತ್ತದೆ. ಇದು ನಿನಗೆ ಇಷ್ಟವೇ?"
            "ಇಲ್ಲ ಭಗವಾನ್, ನನಗೆ ಈಗ ಸ್ಪಷ್ಟವಾಗಿ ಮರಣದ ಬಗ್ಗೆ ಅರ್ಥವಾಗಿದೆ."

            "ಒಳ್ಳೆಯದು, ಶೋಕಪಡಬೇಡ. ಪ್ರೇಮದಿಂದ (ವಾತ್ಸಲ್ಯದಿಂದ) ಶೋಕವುಂಟಾಗುತ್ತದೆ. ಪ್ರೇಮ ವಾತ್ಸಲ್ಯದಿಂದ ವಿಮುಕ್ತಳಾದಾಗ ಶೋಕದಿಂದಲೂ ವಿಮುಕ್ತಳಾಗುವೆ" ಎಂದು ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು.

dhammapada/piyavagga/16.2/thegreifofthefather

ಪ್ರಿಯವಾದುದರಿಂದಲೇ ಶೋಕ
"ಪ್ರಿಯವಾದುದರಿಂದಲೇ ಶೋಕವು ಹುಟ್ಟುವುದು
ಪ್ರಿಯವಾದುದರಿಂದಲೇ ಭಯವು ಹುಟ್ಟುವುದು
ಯಾರು ಪ್ರಿಯವಾದುದರಿಂದ ಪೂರ್ಣವಾಗಿ ಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯವು ಹೇಗೆ ತಾನೇ ಇರುವುದು?"       (212)


ಗಾಥ ಪ್ರಸಂಗ 16:2
ಪುತ್ರಶೋಕದ ತಂದೆಗೆ ಸಂತಾನ

            ಶ್ರಾವಸ್ಥಿಯ ಗೃಹಸ್ಥನೊಬ್ಬನು ತನ್ನ ಪುತ್ರನನ್ನು ಕಳೆದುಕೊಂಡನು. ಶೋಕ ತಡೆಯಲಾರದೆ ಆತನು ಪ್ರತಿದಿನ ಶವ ಸುಟ್ಟ ಸ್ಥಳಕ್ಕೆ ಹೋಗಿ ಅಳುತ್ತಿದ್ದನು. ಆತನಿಗೆ ದುಃಖ ತಡೆಯಲು ಆಗುತ್ತಲೇ ಇರಲಿಲ್ಲ.
            ಭಗವಾನರು ಎಂದಿನಂತೆ ಮುಂಜಾನೆ ಮಹಾಕರುಣಾ ಸಮಾಪತ್ತಿಯಲ್ಲಿ 'ಇಂದು ಯಾರಿಗೆ ಸಹಾಯ ಮಾಡಲಿ' ಎಂದು ವೀಕ್ಷಿಸಿದಾಗ, ಈ ಗೃಹಸ್ಥನು ಅವರಿಗೆ ಕಾಣಿಸಿದನು. ಹೀಗಾಗಿ ಅವರು ಆ ಗೃಹಸ್ಥನ ಮನೆಗೆ ಹೋಗಿ ಬಾಗಿಲಲ್ಲಿ ನಿಂತರು. ಆಗ ಗೃಹಸ್ಥನು ಅವರಿಗೆ ಆಹ್ವಾನಿಸಿದನು. ಅವರಿಗಾಗಿ ಪೀಠವನ್ನು ಒದಗಿಸಿದನು. ನಂತರ ಆತನು ಗೌರವದಿಂದ ನಮಸ್ಕರಿಸಿ ಒಂದೆಡೆ ಕುಳಿತನು. ನಂತರ ಭಗವಾನರು ಆತನಿಗೆ ಹೀಗೆ ಕೇಳಿದರು: "ಗೃಹಪತಿಯೇ, ಏತಕ್ಕಾಗಿ ದುಃಖಿತನಾಗಿರುವೆ?"
            "ಭಗವಾನ್, ನಾನು ನನ್ನ ಪುತ್ರನನ್ನು ಕಳೆದುಕೊಂಡಿರುವೆ, ಅದಕ್ಕಾಗಿಯೇ ನಾನು ದುಃಖಿತನಾಗಿರುವೆ."
            "ಓ ಗೃಹಪತಿ, ಶೋಕಿಸಬೇಡ. ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಗಾಗಿಯೇ ಸಾವಿಲ್ಲ, ಎಲ್ಲರಿಗೂ ಸಾವು ಬರುತ್ತದೆ. ಹಾಗೆಯೇ ಒಂದೇ ಸ್ಥಳದಲ್ಲಿಯೇ ಸಾವು ಸಂಭವಿಸದು, ಎಲ್ಲೆಡೆ ಸಾವು ಬರುವುದು. ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿ ಜೀವಿಗೂ ಸಾವಿದೆ, ಯಾವ ಧಾತುವೂ ಸಹಾ ನಿತ್ಯವಲ್ಲ. ಆದ್ದರಿಂದಾಗಿ ಶೋಕಪಡಬೇಡ, ಬದಲಾಗಿ ಮರಣದ ಬಗ್ಗೆ ಚಿಂತನೆ ನಡೆಸು. (ಮರಣಾನುಸ್ಸತಿ/ಮರಣಾನುಸ್ಮೃತಿ) 'ಬದುಕು ಅನಿಶ್ಚಿತ, ಸಾವು ನಿಶ್ಚಿತ'. ಪ್ರತಿಯೊಂದೂ ಭಂಗವಾಗುವುದು, ಸಾವಿಗೀಡಾಗುವುದು" ಎಂದು ನುಡಿದು ಮತ್ತೆ ಹೀಗೆ ಮುಂದುವರಿಸಿದರು: "ಓ ಗೃಹಪತಿಯೇ, ಹಿಂದೆ ಪಂಡಿತರು ಪುತ್ರ ಶೋಕಕ್ಕಾಗಿ ಶೋಕಪಡಲಿಲ್ಲ. ಬದಲಾಗಿ ಮರಣದ ಬಗ್ಗೆ ಯಥಾರ್ಥ ಚಿಂತನೆ ನಡೆಸಿದರು. 'ಮತ್ರ್ಯರಿಗೆ ಮೃತ್ತುವಿದ್ದೇ ಇದೆ' ಎಂದು ದೃಢಭಾವ ತಾಳುತ್ತಿದ್ದರು. ಆದರೆ ನೀವು ನಿನ್ನ ಆಹಾರ ಬಿಟ್ಟಿರುವೆ. ದೈನಂದಿನ ಕಾರ್ಯಗಳೆಲ್ಲ ಸ್ಥಗಿತಗೊಳಿಸಿರುವೆ, ಸಿಕ್ಕ ಕಾಲವೆಲ್ಲಾ ಶೋಕದಲ್ಲೇ ಕಳೆಯುತ್ತಿರುವೆ. ಆದರೆ ಹಿಂದಿನ ಪಂಡಿತರು ಹೀಗೆ ಮಾಡಲಿಲ್ಲ. ಬದಲಾಗಿ ಅವರು ಮರಣಾನುಸ್ಮೃತಿಯಲ್ಲಿ ತೊಡಗಿದರು. ಎಂದಿನಂತೆ ಆಹಾರವನ್ನು ಸ್ವೀಕರಿಸಿದರು ಹಾಗು ದೈನಂದಿನ ಕಾರ್ಯಗಳೆಲ್ಲ ಎಂದಿನಂತೆ ನಡೆಯುವಂತೆ ನೋಡಿಕೊಂಡರು. ಆದ್ದರಿಂದಾಗಿ ಪುತ್ರಶೋಕ ತ್ಯಜಿಸು. ಈ ಶೋಕ ಪುತ್ರನ ಸಾವಿನಿಂದ ಹುಟ್ಟಲಿಲ್ಲ, ಬದಲಾಗಿ ಪುತ್ರನನ್ನು ಪ್ರಿಯವಾಗಿ ಅಂಟಿದ್ದರಿಂದಾಗಿ ಉಂಟಾಗಿದೆ. ಈ ಪ್ರಿಯ ಭಾವನೆ ಯಿಂದ ಪೂರ್ಣವಾಗಿ ಮುಕ್ತನಾಗು. ಆಗ ಶೋಕದಿಂದ ಪಾರಾಗುವೆ" ಎಂದು ನುಡಿದು ಈ ಮೇಲಿನ ಗಾಥೆ ನುಡಿದರು. ಆಗ ಆ ಗೃಹಪತಿಯು ಸೋತಪತ್ತಿ ಫಲ ಪಡೆದನು.


dhammapada/piyavagga/16.1/affectionfamily

16. ಪಿಯ ವಗ್ಗ

ಯಾವುದು ತೊರೆಯಬೇಕಾಗಿದೆಯೋ ಅದಕ್ಕೆ ಅಂಟಬೇಡ
"ಯಾವುದನ್ನು ತಡೆಗಟ್ಟಬೇಕಾಗಿದೆಯೋ
ಅದರಲ್ಲಿ ತನ್ನನ್ನು ತೊಡಗಿಸಿಕೊಳ್ಳುವಿಕೆ ಹಾಗೂ
ಯಾವುದನ್ನು ಅನುಸರಿಸಬೇಕೋ ಅದರಲ್ಲಿ
ತೊಡಗಿಸಿಕೊಳ್ಳದಿರುವಿಕೆ ಹೀಗೆ ತನ್ನ ಹಿತದ
ಮಹತ್ ಅನ್ವೇಷಣೆಯನ್ನು ಬಿಟ್ಟಿರುವವನು
ಉನ್ನತಿಗಾಗಿ ಪರಿಶ್ರಮಿಸುತ್ತಿರುವವನನ್ನು ಕಂಡು ಅಸೂಯೆಪಡುತ್ತಾನೆ."           (209)

"ಪ್ರಿಯವೆಂದು ಯಾವುದಕ್ಕೂ ಅಂಟಿಕೊಳ್ಳಬೇಡ,
ಹಾಗೆಯೇ ಅಪ್ರಿಯವೆಂದು ಯಾವುದಕ್ಕೂ ಅಂಟಿಕೊಳ್ಳಬೇಡ,
ಪ್ರಿಯರ ದರ್ಶನವಾಗದಿರುವಿಕೆ
ಅಪ್ರಿಯರ ದರ್ಶನವಾಗುವಿಕೆ ಎರಡೂ ದುಃಖಕರ."          (210)

"ಆದ್ದರಿಂದ ಪ್ರಿಯವೆಂದು ಯಾವುದಕ್ಕೂ ಅಂಟಿಕೊಳ್ಳಬೇಡ,
ಏಕೆಂದರೆ ಪ್ರಿಯರ (ಪ್ರಿಯವಾದುದರ) ಅಗಲಿಕೆ
ನೋವನ್ನು ತರುತ್ತದೆ. ಯಾರಿಗೆ ಯಾವುದು (ಯಾರು)
ಪ್ರಿಯ ಅಪ್ರಿಯವಲ್ಲವೋ ಆತನಿಗೆ ಯಾವ ಬಂಧನವೂ ಇಲ್ಲ."           (211)


ಗಾಥ ಪ್ರಸಂಗ 16:1
ಬಾಂಧವ್ಯವು ಪರಮಾಥರ್ಾಭಿವೃದ್ಧಿಗೆ ಅಡ್ಡಿಯಾಗುವುದು



            ಶ್ರಾವಸ್ಥಿಯ ಒಂದು ಕುಟುಂಬದ ದಂಪತಿಗೆ ಒಬ್ಬನು ಮಗನಿದ್ದನು. ಆತನನ್ನು ಅವರು ಅತಿ ಮುದ್ದಿನಿಂದ ಸಾಕಿದ್ದರು. ಆತನು ಅವರಿಗೆ ಪ್ರಾಣದಷ್ಟು ಪ್ರಿಯವಾಗಿದ್ದನು. ಒಂದುದಿನ ಅವರು ಭಿಕ್ಷುಗಳಿಗೆ ಆಹಾರಕ್ಕಾಗಿ ಮನೆಗೆ ಆಹ್ವಾನಿಸಿದರು. ಭೋಜನದ ನಂತರ ಭಿಕ್ಷುಗಳು ಧಮ್ಮಪ್ರವಚನ ಮಾಡಿದರು. ಆ ಮನೆಯ ದಂಪತಿಗಳ ಏಕೈಕ ಪುತ್ರನಿಗೆ ಭಿಕ್ಖುವಾಗಬೇಕೆಂಬ ಆಕಾಂಕ್ಷೆಯಾಯಿತು. ಆತನು ತನ್ನ ತಂದೆ ಮತ್ತು ತಾಯಿಯಲ್ಲಿಗೆ ಹೋಗಿ ತಾನು ಭಿಕ್ಷುವಾಗಲು ಅಪ್ಪಣೆ ಕೇಳಿದನು. ಆದರೆ ಅವರು ಹಾಗಾಗಲು ನಿರಾಕರಿಸಿದರು. ಆಗ ಆತನು ಈ ರೀತಿಯ ನಿಧರ್ಾರ ಕೈಗೊಂಡನು: "ನನ್ನ ತಾಯಿ ಮತ್ತು ತಂದೆಯರು ನನ್ನನ್ನು ಕಾವಲು ಕಾಯುತ್ತಲೇ ಇದ್ದಾರೆ, ಯಾವಾಗಲಾದರೂ ಇವರು ಜಾಗ್ರತೆ ತಪ್ಪುವರು, ಆ ಕ್ಷಣದಲ್ಲೇ ನಾನು ಪರಾರಿಯಾಗಿ ಭಿಕ್ಷುವಾಗುವೆನು."
            ಆದರೆ ಆ ಯುವಕನ ತಂದೆ-ತಾಯಿಯರು ಅಪಾರವಾಗಿ ಜಾಗ್ರತೆ ವಹಿಸಿಕೊಂಡಿದ್ದರು. ತಂದೆಯು ಮನೆಯಿಂದ ಹೊರಗಡೆ ಹೋಗಬೇಕಾಗಿ ಬಂದರೆ ಆತನು ತಾಯಿಯ ಕೈಗೆ ಮಗನನ್ನು ಒಪ್ಪಿಸಿ ಹೋಗುತ್ತಿದ್ದನು ಹಾಗೆಯೇ ಆತನ ತಾಯಿಯು ಎಲ್ಲಿಯಾದರೂ ಹೋಗಬೇಕೆಂದರೆ ಆ ಯುವಕನನ್ನು ತನ್ನ ಗಂಡನಿಗೆ ಒಪ್ಪಿಸಿ ಹೊರ ಹೋಗುತ್ತಿದ್ದಳು. ಹೀಗೆ ಅತನಿಗೆ ಅವರಿಂದ ತಪ್ಪಿಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ತಾಯಿಯು ಮನೆಯ ಬಾಗಿಲಿನಲ್ಲಿ ಕುಳಿತಿರುತ್ತಿದ್ದಳು. ಒಂದುದಿನ ಆ ಯುವಕನು ಪ್ರಕೃತಿಯ ಕರೆಗೆ ಓಗೊಡಬೇಕೆಂದು ಹೇಳಿ ತಾಯಿಯಿಂದ ತಪ್ಪಿಸಿಕೊಂಡನು. ಹಾಗು ಅಲ್ಲಿಂದ ನೇರವಾಗಿ ಭಿಕ್ಷುಗಳ ಬಳಿಗೆ ಬಂದು "ಓ ಪೂಜ್ಯರೇ, ನನ್ನನ್ನು ಸಂಘಕ್ಕೆ ಸ್ವೀಕರಿಸಿ" ಎಂದು ಕೇಳಿಕೊಂಡನು.
            ನಂತರ ಇಲ್ಲಿ ಆ ಯುವಕನ ತಂದೆಯು "ಮಗನೆಲ್ಲಿ?" ಎಂದು ಮಡದಿಗೆ ಕೇಳಿದನು. "ಇಲ್ಲೇ ಇರಬೇಕು ನೋಡಿ" ಎಂದಳು. ಆದರೆ ಹುಡುಕಾಡಿ ಪ್ರಯೋಜನ ವಾಗಲಿಲ್ಲ. ಆಗ ತಂದೆಗೆ ಹೀಗೆ ಅನಿಸಿತು: 'ಖಂಡಿತವಾಗಿ ಈತನು ವಿಹಾರಕ್ಕೆ ಹೋಗಿರು ತ್ತಾನೆ'. ಆತನ ಲೆಕ್ಕಾಚಾರ ಸರಿಯಾಗಿಯೇ ಇತ್ತು. "ಓ ಮಗನೇ, ನನಗೆ ಏಕೆ ನಾಶ ಮಾಡಿದೆ" ಎಂದು ಗೋಳಿಟ್ಟು ಅತ್ತನು. ನಂತರ ತಂದೆಯು ಹೀಗೆ ಚಿಂತನೆ ಮಾಡಿದನು.
            "ಓಹ್, ಈಗ ನನ್ನ ಮಗನು ಭಿಕ್ಷುವಾಗಿದ್ದಾನೆ, ನಾನು ಈಗ ಗೃಹಸ್ಥನಾಗಿ ಏಕೆ ಜೀವಿಸಬೇಕು?" ನಂತರ ಆತನು ಸಹಾ ಭಿಕ್ಷುವಾಗಿಬಿಟ್ಟನು.
            ಇತ್ತ ತಾಯಿಯು "ನನ್ನ ಮಗ ಮತ್ತು ಗಂಡ ಏಕೆ ಇನ್ನೂ ಬರಲಿಲ್ಲ. ಬಹುಶಃ ಅವರು ಭಿಕ್ಷುಗಳಾಗಿರಬಹುದೇ?" ಎಂದು ಆತಂಕಪಡುತ್ತಾ ಆಕೆ ವಿಹಾರಕ್ಕೆ ಬಂದಾಗ ಆಕೆಯ ತರ್ಕ ಸರಿಯಾಗಿಯೇ ಇತ್ತು. ಆಗ ಆಕೆಯೂ ಹೀಗೆ ಚಿಂತಿಸಿದಳು: "ನನ್ನ ಮಗ ಮತ್ತು ಗಂಡನು ಭಿಕ್ಷುವಾಗಿರುವಾಗ ನಾನು ಗೃಹಸ್ಥಳಾಗಿರುವುದರಲ್ಲಿ ಅರ್ಥವೂ ಇಲ್ಲ, ಲಾಭವೂ ಇಲ್ಲ" ಎಂದು ಆಕೆಯು ಭಿಕ್ಷುಣಿಯಾಗಿಬಿಟ್ಟಳು.
            ಆದರೆ ಅವರು ಹೀಗೆ ಸಂಘಕ್ಕೆ ಸೇರಿದರೂ ಸಹಾ ಅವರಿಂದ ಪ್ರತ್ಯೇಕವಾಗಿ ಜೀವಿಸಲು ಸಾಧ್ಯವಾಗಲಿಲ್ಲ. ವಿಹಾರವೇ ಆಗಲಿ ಅಥವಾ ಇನ್ನಿತರ ಸ್ಥಳವೇ ಆಗಲಿ ಅವರು ಒಟ್ಟಾಗಿಯೇ ಜೀವಿಸುತ್ತಿದ್ದರು. ಒಟ್ಟಾಗಿ ಸದಾ ಮಾತನಾಡುತ್ತಲೇ ಇದ್ದರು. ಹೀಗಾಗಿ ಈ ವಿಷಯವು ಬುದ್ಧ ಭಗವಾನರ ಬಳಿಗೆ ತಲುಪಿತು. ಆಗ ಭಗವಾನರು ಇದು ನಿಜವೇ ಎಂದು ವಿಚಾರಿಸಿದಾಗ ಅವರು ಸತ್ಯವೆಂದು ಒಪ್ಪಿದರು. ಆಗ ಭಗವಾನರು ಅವರಿಗೆ ಹೀಗೆ ಹೇಳಿದರು: "ಏತಕ್ಕಾಗಿ ಹೀಗೆ ನೀವು ಮಾಡುತ್ತಿರುವಿರಿ, ಇಂದು ನಿಜವಾಗಿ ಭಿಕ್ಷುಗಳು ಮತ್ತು ಭಿಕ್ಷುಣಿಯರು ವತರ್ಿಸುವಂತಹ ವರ್ತನೆಯೇ ಅಲ್ಲ."
            "ಆದರೆ ಭಗವಾನ್, ನಮ್ಮಿಂದ ಪ್ರತ್ಯೇಕವಾಗಿ ಜೀವಿಸಲು ಸಾಧ್ಯವೇ ಆಗುತ್ತಿಲ್ಲ."

            "ನೀವು ಈ ಗೃಹಸ್ಥ ಜೀವನದಿಂದ ನಿವೃತ್ತಿ ಪಡೆದನಂತರ ಭಿಕ್ಷುವಾಗಿ ಇಂತಹ ವರ್ತನೆ ನಿಜಕ್ಕೂ ಖಂಡನೀಯ, ಅಸಮಂಜಸವಾಗಿದೆ. ಅಪ್ರಿಯರಾದವರನ್ನು ನೋಡುವುದು, ಹಾಗೆಯೇ ಪ್ರಿಯರಾದವರನ್ನು ನೋಡದಿರುವುದು ನಿಜಕ್ಕೂ ದುಃಖಕರವಾಗಿದೆ. ಆದ್ದರಿಂದಲೇ ನೀವು ದುಃಖಕ್ಕೆ ಒಳಗಾಗಬಾರದು ಎಂದು ನಿಶ್ಚಯಿಸಿರುವುದಾದರೆ ನೀವು ವ್ಯಕ್ತಿಗಳಲ್ಲಿ ಮತ್ತು ವಸ್ತುಗಳಲ್ಲಿ ಪ್ರಿಯಭಾವನೆ ತಾಳಬೇಡಿ, ಹಾಗೆಯೇ ಅಪ್ರಿಯಭಾವನೆಯನ್ನು ತಾಳಬೇಡಿ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.