ಪಾಪಲಜ್ಜೆಯಿಂದ ಪಾಪವನ್ನು ತಡೆಗಟ್ಟಿ
ಲೋಕದಲ್ಲಿ
ಪಾಪಲಜ್ಜೆಯಿಂದ ಕೂಡಿದಂತಹ ವಿನಯಸಂಪನ್ನನು ಅತಿವಿರಳ. ಅಂತಹವ ಉತ್ತಮ ಜಾತಿಯ ಕುದುರೆಯು ಚಾಟಿ
ಏಟಿಗೆ ಅವಕಾಶ ನೀಡದೆ ಹೇಗೆ ಜೀವಿಸುವುದೋ ಹಾಗೇ ಪಾಪಲಜ್ಜೆಯಿಂದ ಕೂಡಿ ನಿಯಂತ್ರಿತನಾಗಿರುತ್ತಾನೆ
ಹಾಗೂ ಆತನು ನಿಂದೆಗೆ ಅತೀತವಾಗಿರುತ್ತಾನೆ. (143)
ಅಶ್ವವು ಹೇಗೆ ಚಾಟಿ
ಸೋಕಿದ ಕೂಡಲೇ ಜಾಗೃತವಾಗುವುದೋ ಹಾಗೆಯೇ ನೀವು ಸಹಾ ಶ್ರದ್ಧೆಯಿಂದ, ಶೀಲದಿಂದ, ವೀರ್ಯದಿಂದ (ಪ್ರಯತ್ನ), ಸಮಾಧಿಯಿಂದ, ಧಮ್ಮ ಪರೀಕ್ಷೆಯಿಂದ, ವಿದ್ಯೆ ಮತ್ತು
ಆಚರಣೆ ಸಂಪನ್ನತೆಯಿಂದ ಸದಾ ಸ್ಮೃತಿಯಿಂದ ಕೂಡಿ ಈ ಮಹಾ ದುಃಖದಿಂದ ಪಾರಾಗಿ. (144)
ಗಾಥ ಪ್ರಸಂಗ 10:10
ಭಿಕ್ಷುಕನಿಗೂ ಭಿಕ್ಷುವಿಗೂ ಇರುವ ಅಂತರ
ಒಂದುದಿನ ಪರಮಪೂಜ್ಯ ಆನಂದರವರು ಶ್ರಾವಸ್ತಿಯಲ್ಲಿ
ನಡೆಯುತ್ತಿರುವಾಗ ಭಿಕ್ಷೆ ಬೇಡುತ್ತಿದ್ದ ಯುವ ಭಿಕ್ಷುಕನನ್ನು ನೋಡಿದರು. ಅವರಿಗೆ ಕನಿಕರ ಉಂಟಾಗಿ
ಭಿಕ್ಷು ಜೀವನದ ಉತ್ಕೃಷ್ಟತೆ ತಿಳಿಸಿದರು. ಆಗ ಆತನು ಸಮಣೇರನಾಗಲು ನಿರ್ಧರಿಸಿದನು. ಆಗ ಆ ಯುವಕನು
ತನ್ನ ಹರಿದ ವಸ್ತ್ರಗಳನ್ನು ಮರವೊಂದಕ್ಕೆ ನೇತುಹಾಕಿ, ಭಿಕ್ಷಾ ತಟ್ಟೆಯನ್ನು ಮರದ ಟಿಸಿಲಿಗೆ ಸಿಕ್ಕಿಸಿ ನಂತರ ಸಮಣೇರನಾದನು.
ಆತನಿಗೆ ಎಲ್ಲರೂ ಪಿಲೋತಿಕತಿಸ್ಸ ಎಂದು ಕರೆಯಲಾರಂಭಿಸಿದರು. ಭಿಕ್ಖುವಾದ ಮೇಲೆ ಆತನಿಗೆ ಆಹಾರ
ಮತ್ತು ವಸ್ತ್ರಕ್ಕೆ ತೊಂದರೆಯಾಗಲಿಲ್ಲ. ಅವೆಲ್ಲಾ ಆತನಿಗೆ ಹೇರಳವಾಗಿ ಸಿಗುತ್ತಿತ್ತು. ಆದರೂ
ಕೆಲವೊಮ್ಮೆ ಆತನಿಗೆ ಭಿಕ್ಷು ಜೀವನದಲ್ಲಿ ಬೇಸರ ಮೂಡುತ್ತಿತ್ತು. ಆಗ ಆತನು ಗೃಹಸ್ಥನಾಗಲು
ಯೋಚಿಸುತ್ತಿದ್ದನು, ದ್ವಂದ್ವಕ್ಕೆ
ಸಿಲುಕುತ್ತಿದ್ದನು. ಆಗ ಆತನು ತನ್ನ ಚಿಂದಿಬಟ್ಟೆ ಮತ್ತು ಪಾತ್ರೆ ಸಿಕ್ಕಿಸಿದ್ದಂತಹ ಮರದ ಬಳಿಗೆ
ಬರುತ್ತಿದ್ದನು. ಹಾಗು ಆ ಮರದ ಬುಡದಲ್ಲಿ ಆತನು ತನ್ನಲ್ಲೇ ಹೀಗೆ ಪ್ರಶ್ನಿಸಿಕೊಳ್ಳುತ್ತಿದ್ದನು:
ಓಹ್, ನೀನು ಎಂತಹ
ನಾಚಿಕೆಗೆಟ್ಟವನು! ಎಲ್ಲ ನಿನಗೆ ತಿನ್ನಲು ಯಥೇಚ್ಛವಾಗಿ ದೊರೆತರೂ ಹಾಗು ಉತ್ತಮ ವಸ್ತ್ರಗಳು
ದೊರೆತರೂ ಇಂತಹ ಉದಾತ್ತ ಜೀವನವನ್ನು ತೊರೆಯಲು ಬಯಸುವೆಯಾ? ನೀನು ಮತ್ತೆ ಬಯಕೆಗಳಿಂದ ಕೂಡಿ, ದರಿದ್ರ ಮನಸ್ಕನಾಗಿ ಭಿಕ್ಷೆ ಬೇಡುತ್ತ, ಅಸಂತೃಪ್ತಿಯುತವಾದ ಮನದಿಂದ ಕೂಡಿದವನಾಗಿ ಕೈಯಲ್ಲಿ ಭಿಕ್ಷೆಯ
ತಟ್ಟೆಯನ್ನು ಹಿಡಿದು, ಚಿಂದಿ
ವಸ್ತ್ರಗಳನ್ನು ಧರಿಸುವವನಾಗವುವೆಯಾ?! ಹೀಗೆ ಅತನು
ತನ್ನಲ್ಲೇ ತನ್ನನ್ನು ಖಂಡಿಸುತ್ತ, ನಿಯಂತ್ರಿಸುತ್ತ,
ಚಿತ್ತವನ್ನು ಶಾಂತಿಗೊಳಿಸುತ್ತ ವಿಹಾರಕ್ಕೆ ಮರಳುತ್ತಿದ್ದನು.
ನಂತರ ಮೂರು ಅಥವಾ ನಾಲ್ಕು ದಿನಗಳ ನಂತರ ಪುನಃ
ಗೃಹಸ್ಥನಾಗಲು ಬಯಸಿ, ಆ ಮರದೆಡೆಗೆ ಹೋಗಿ,
ಪುನಃ ಗೃಹಸ್ಥನಾಗಲು ಬಯಸಿ, ಪುನಃ ಲಜ್ಜೆಪಡುತ್ತ, ಭಿಕ್ಷು ಜೀವನವನ್ನೇ ಆಯ್ಕೆ ಮಾಡುತ್ತ, ಪುನಃ ವಿಹಾರಕ್ಕೆ ಹಿಂತಿರುಗುತ್ತಿದ್ದನು. ಇದೇರೀತಿಯ ಪ್ರಕ್ರಿಯೆ ಹಲವುಬಾರಿ ನಡೆಯಿತು. ಕೆಲ
ಭಿಕ್ಷುಗಳು ಆತನನ್ನು ಕುರಿತು ಏತಕ್ಕಾಗಿ ನೀನು ಆ ಚಿಂದಿಬಟ್ಟೆಯುಳ್ಳ ಮರದ ಬಳಿಗೆ ಹೋಗುವೆ?
ಎಂದು ಪ್ರಶ್ನಿಸಿದಾಗ, ಆತನು ಹೀಗೆ ಉತ್ತರಿಸುತ್ತಿದ್ದನು: ನಾನು ನನ್ನ ಗುರುವಿನ ಬಳಿಗೆ
ಹೋಗಿದ್ದೆನು.
ಒಂದುದಿನ ಆತನು ತನ್ನ ಹಳೆಯ ವಸ್ತ್ರಗಳನ್ನೇ ಧ್ಯಾನದ
ವಸ್ತುವಾಗಿಟ್ಟು ಧ್ಯಾನಿಸಲು ಆರಂಭಿಸಿದನು. ನಂತರ ಹಾಗೆಯೇ ಪಂಚಖಂದಗಳ ಸ್ವರೂಪ ಕಂಡನು. ಆತನಿಗೆ
ಸ್ಪಷ್ಟವಾಗಿ ದೇಹ ಮತ್ತು ಮನಸ್ಸಿನ ರಾಶಿಯು ಅನಿತ್ಯತೆಯ ದುಃಖದ ಮತ್ತು ಅನಾತ್ಮತೆಯ ಬೆಳಕಿನಲ್ಲಿ
ಸ್ಪಷ್ಟವಾಗಿ ಅರಿವಾಗಿ ಆತನು ಅರಹಂತನೇ ಆಗಿಬಿಟ್ಟನು. ಅರಹಂತನಾದ ಮೇಲೆ ಆತನ ಮನಸ್ಸು
ಚಂಚಲವಾಗಲಿಲ್ಲ. ಆದ್ದರಿಂದ ಆತನು ಆ ಮರದ ಬಳಿಗೆ ಹೋಗಲಿಲ್ಲ. ಆಗ ಭಿಕ್ಷುಗಳು ಆತನಿಗೆ ಏತಕ್ಕಾಗಿ
ಮರದ ಬಳಿಗೆ ಗುರುವಿನ ಹತ್ತಿರ ಹೋಗುತ್ತಿಲ್ಲ ಎಂದು ವಿಚಾರಿಸಿದಾಗ, ಆತನು ಯಾವಾಗ ನನಗೆ ಅವಶ್ಯಕತೆಯಿತ್ತೋ ಆಗ ಹೋಗಲೇಬೇಕಿತ್ತು, ಆದರೆ ಈಗ ಅಲ್ಲಿಗೆ ಹೋಗುವ ಅವಶ್ಯಕತೆಯೇ ಇಲ್ಲ ಎಂದು
ದೃಢವಾಗಿ ಹೇಳಿಬಿಟ್ಟನು. ಆಗ ಅವರಿಗೆ ಈತನು ಸುಳ್ಳು ನುಡಿಯುತ್ತಿರಬಹುದೆಂದು ಭಾವಿಸಿ ಆತನನ್ನು
ಬುದ್ಧರ ಬಳಿಗೆ ಕರೆತಂದರು. ಹಾಗು ಹೀಗೆ ನುಡಿದರು ಭಗವಾನ್! ಈ ಭಿಕ್ಷುವು ತಾನು ಅರಹತ್ವ
ಸಾಧಿಸಿರುವುದಾಗಿ ಸುಳ್ಳು ನುಡಿಯುತ್ತಿರುವನು.
ಆಗ ಭಗವಾನರು ಹೀಗೆ ನುಡಿದರು: ಭಿಕ್ಖುಗಳೇ
ಪಿಲೊತಿಕತಿಸ್ಸನು ಸುಳ್ಳು ನುಡಿಯುತ್ತಿಲ್ಲ. ಆತನು ಸತ್ಯವನ್ನೇ ನುಡಿಯುತ್ತಿದ್ದಾನೆ. ಆತನು
ಅರಹಂತನಾಗದಿದ್ದಾಗ ಆತನಿಗೆ ಗುರುವಿನ ಅವಶ್ಯಕತೆ ಬೇಕಾಗಿತ್ತು, ಅರಹಂತನಾದಮೇಲೆ ಗುರುವಿನ ಅವಶ್ಯಕತೆ ಬೇಕಿಲ್ಲ. ಇಲ್ಲಿ ಆತನ ಗುರು
ಯಾರೆಂದರೆ ಸ್ವತಃ ಆತನೇ ಆಗಿದ್ದನು. ಆತನು ವಿಶ್ಲೇಷಿಸುತ್ತ, ಅರಿಯುತ್ತಾ, ಶುದ್ಧನಾಗಿದ್ದಾನೆ.
ಸತ್ಯವನ್ನು ಅರಿತು ಅರಹಂತನಾಗಿದ್ದಾನೆ, ಆತನಿಗೆ ಈಗ ಗುರು
ಬೇಕಿಲ್ಲ ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು.
No comments:
Post a Comment