Saturday, 25 April 2015

dhammapada/dandavagga/10.1/6bhikkhus

                                                                   10.ದಂಡ ವಗ್ಗ

ಹತ್ಯೆ ಬೇಡ
ದಂಡಕ್ಕೆ (ಶಿಕ್ಷಗೆ) ಸರ್ವರೂ ನಡುಗುವರು. ಸರ್ವರೂ ಮೃತ್ಯುವಿಗೆ ಭಯಪಡುವರು, ಪರರನ್ನು ತನಗೆ ಹೋಲಿಸಿಕೊಂಡು, ಒಬ್ಬನು ಹತ್ಯೆಗೈಯದಿರಲಿ ಅಥವಾ ಘಾತಗೊಳಿಸದಿರಲಿ. (129)
ಗಾಥ ಪ್ರಸಂಗ 10:1
ಆರು ಭಿಕ್ಷುಗಳ ವಸತಿ ತೃಷ್ಣೆ

                ಒಮ್ಮೆ ಆರು ಭಿಕ್ಷುಗಳ ಗುಂಪೊಂದು ಜೇತವನದ ವಿಹಾರದಲ್ಲಿದ್ದ ಕಟ್ಟಡವನ್ನು ಸ್ವಚ್ಛಗೊಳಿಸುತ್ತಿದ್ದರು. ಅವರ ಇಚ್ಛೆಯು ಅದರಲ್ಲಿ ವಾಸಿಸುವದಾಗಿತ್ತು. ಆಗ ಭಿಕ್ಷುಗಳ ಬೇರೆ ಗುಂಪೊಂದು ಅಲ್ಲಿಗೆ ಬಂದು ಹೀಗೆ ಹೇಳಿದರು: ನೋಡಿ ಕಿರಿಯ ಭಿಕ್ಷುಗಳೇ, ನಾವು ನಿಮಗಿಂತ ಹಿರಿಯರಾಗಿದ್ದೇವೆ, ಆದ್ದರಿಂದ ನೀವು ನಮಗೆ ಎಲ್ಲ ರೀತಿಯಲ್ಲಿ ಗೌರವಿಸಿ, ನಮಗೆ ದಾರಿಬಿಡಬೇಕು; ನಾವು ಈ ಸ್ಥಳವನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಇದನ್ನು ಯಾರೂ ತಡೆಯಲಾರರು ಎಂದರು.
                ಹೀಗೆ ಹೇಳಿದ ಮೇಲೆಯೂ ಆ ಕಿರಿಯ ಭಿಕ್ಷುಗಳ ಗುಂಪು ಸ್ಥಳ ಬಿಡಲು ನಿರಾಕರಿಸಿದರು. ಇದರಿಂದ ಕ್ರುದ್ಧರಾದ ಹಿರಿಯ ಭಿಕ್ಷುಗಳ ಗುಂಪು, ಆ ಕಿರಿಯರಿಗೆ ಹೊಡೆತಗಳನ್ನು ನೀಡಿದರು. ಅವರು ಆ ಪೆಟ್ಟುಗಳನ್ನು ಸಹಿಸಲಾರದೆ ನೋವಿನಿಂದ ಕಿರುಚಿದರು.

                ಈ ಸುದ್ದಿಯು ಭಗವಾನರ ಬಳಿಗೆ ಬಂದಿತು. ಆಗ ಭಗವಾನರು ಅವರ ಕೃತ್ಯವನ್ನು ಖಂಡಿಸಿದರು. ಯಾರೂ ಸಹ ವಸತಿಗೆ ಅಂಟಬಾರದು, ಹಿರಿಯರಿಗೆ ಗೌರವಿಸಬೇಕು, ಕಿರಿಯರಲ್ಲಿ ವಾತ್ಸಲ್ಯ ತೋರಬೇಕು ಎಂದು ಹೇಳಿ ಭಿಕ್ಷುಗಳಿಗೆ ಹಿಂಸೆ ಶೋಭಿಸದು ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment