ಪಾಪವಿಲ್ಲದವನಿಗೆ ಕೇಡಿಲ್ಲ
ಹೇಗೆ ಅಂಗೈಯಲ್ಲಿ
ಗಾಯವಿಲ್ಲದಿದ್ದರೆ ಒಬ್ಬನು ವಿಷವನ್ನು ತೆಗೆದುಕೊಂಡು ಹೋಗಬಹುದೋ, ಹಾಗೆಯೇ ಪಾಪ (ಪಾಪಿಚ್ಛೆ) ಇಲ್ಲದವನಿಗೆ ಕೇಡಿಲ್ಲ. (124)
ಗಾಥ ಪ್ರಸಂಗ 9:8
ಸೋತಾಪನ್ನರಿಂದ ಪಾಪವಾಗುವುದೇ?
ರಾಜಗೃಹದಲ್ಲಿ ಶ್ರೀಮಂತನೊಬ್ಬನ ಮಗಳಿದ್ದಳು. ಆಕೆ
ಹುಡುಗಿಯಾಗಿರುವಾಗಲೇ ಸೋತಾಪತ್ತಿ ಫಲವನ್ನು ಪಡೆದಿದ್ದಳು. ಒಂದುದಿನ ಕುಕುಟ್ಟಮಿತ್ರನೆಂಬ
ಬೇಟೆಗಾರನು ನಗರಕ್ಕೆ ಬಂಡಿಯಲ್ಲಿನ ಜಿಂಕೆ ಮಾಂಸವನ್ನು ಮಾರಲು ಬಂದಿರುವಾಗ ಆತನನ್ನು ಕಂಡು ಆ
ಯುವತಿಯು ಆ ಕ್ಷಣದಲ್ಲೇ ಪ್ರೇಮವಶಿಯಾದಳು. ಪ್ರಥಮ ನೋಟದಲ್ಲೇ ಅನುರಕ್ತಳಾದಳು. ಆತನನ್ನು
ಹಿಂಬಾಲಿಸಿದಳು, ಆತನನ್ನೇ
ವಿವಾಹವಾಗಿ ಸಣ್ಣ ಹಳ್ಳಿಯಲ್ಲಿ ಆತನೊಂದಿಗೆ ವಾಸಮಾಡತೊಡಗಿದಳು. ಈ ವಿವಾಹದ ಪರಿಣಾಮವಾಗಿ ಆಕೆಗೆ
ಕಾಲಕಾಲಕ್ಕೆ ಪುತ್ರರು ಜನಿಸಿದರು. ಅವರು ಸಹಾ ಹಿರಿಯರಾಗಿ, ಅವರಿಗೂ ವಿವಾಹವಾಯಿತು.
ಒಂದುದಿನ ಮುಂಜಾನೆ ಭಗವಾನರು ಇಂದು ಜ್ಞಾನೋದಯವಾಗಲು
ಯಾರಿಗೆ ಸಹಾಯ ಮಾಡಲಿ ಎಂದು ದಿವ್ಯದೃಷ್ಟಿಯಿಂದ ವೀಕ್ಷಿಸುವಾಗ, ಈ ಕುಟುಂಬವು ಅವರಿಗೆ ಗೋಚರವಾಯಿತು. ಅದರಂತೆ ಅವರು ಕಾಡಿಗೆ ಬಂದರು.
ಹಾಗು ಬೇಟೆಗಾರನ ಬಲೆಯಲ್ಲಿ ಸಿಕ್ಕಿದಂತಹ ಪ್ರಾಣಿಯನ್ನು ಸ್ವತಂತ್ರಗೊಳಿಸಿ, ತಮ್ಮ ಪಾದಚಿಹ್ನೆಯನ್ನು ಸ್ಪಷ್ಟವಾಗಿ ನೆಲದಲ್ಲಿ
ಮುದ್ರಿಸುತ್ತ ಒಂದು ಪೊದೆಯ ನೆರಳಿನಲ್ಲಿ ಕುಳಿತರು.
ಸ್ವಲ್ಪಕಾಲದ ನಂತರ ಬೇಟೆಗಾರನು ಅತ್ತ ಬಂದನು, ಆತನಿಗೆ ಪ್ರಾಣಿಯು ಕಾಣದೆ, ಯಾರು ಬಿಡಿಸಿದರು ಎಂದು ಪತ್ತೆಹಚ್ಚುವಾಗ, ಭಗವಾನರ ಲಕ್ಷಣಭರಿತ ಪಾದಚಿಹ್ನೆಯು ಕಂಡುಬಂದಿತು. ಆ
ಪಾದಚಿಹ್ನೆಗಳನ್ನು ಹಿಂಬಾಲಿಸುತ್ತ ಬಂದಾಗ ಭಗವಾನರು ಅಲ್ಲಿ ಕುಳಿತಿರುವುದನ್ನು ಕಂಡನು. ಆತನು
ಕೋಪಗೊಂಡು ಬಿಲ್ಲನ್ನು ಎತ್ತಿಕೊಂಡು ಬಾಣವನ್ನು ಗುರಿಯಿಟ್ಟು ಬಾಣವನ್ನು ಬಿಡಲು ಮುಂದಾದನು. ಆದರೆ
ಭಗವಾನರ ಸಂಕಲ್ಪ ಶಕ್ತಿಯಿಂದಾಗಿ ಆತನು ಬಾಣಬಿಡಲು ಆಗದೆ, ಶಿಲೆಯ ರೀತಿ, ವಿಗ್ರಹದ ರೀತಿ
ಸ್ತಂಭೀಭೂತನಾದನು.
ತಂದೆಯು ಬಾರದಿರುವುದನ್ನು ಕಂಡು ಮಕ್ಕಳು ಬಂದರು. ಹಾಗು
ತಂದೆಯ ವಿಗ್ರಹದಂತಹ ಸ್ಥಿತಿಯನ್ನು ಕಂಡು, ಆತನಿಗೆ ಎದುರಿಗೆ ಪ್ರಶಾಂತವಾಗಿ ಸ್ಥಿರವಾಗಿ ಕುಳಿತಿದ್ದ ಭಗವಾನರನ್ನು ಕಂಡರು. ಇವರದ್ದೇ ಈ
ಕೆಲಸ ಎಂದು ಭಾವಿಸಿ ಅವರು ಸಹಾ ಬಿಲ್ಲನ್ನು ಸ್ಥಿರವಾಗಿ ಏರಿಸಿ, ಬಾಣವನ್ನು ಗುರಿಯಿಟ್ಟರು. ಆದರೆ ಅವರೂ ಸಹಾ ಬಾಣವನ್ನು ಬಿಡಲಾಗದೆ,
ಶಿಲೆಗಳಂತೆ ನಿಶ್ಚಲರಾದರು.
ಇವರ್ಯಾರೂ ಬಾರದಿದ್ದಾಗ, ಬೇಟೆಗಾರನ ಸೊಸೆಯರು ಹುಡುಕುತ್ತ ಬಂದು ತಮ್ಮ ಪತಿಯರ ಮತ್ತು ಮಾವನ
ಸ್ಥಿತಿಯನ್ನು ಕಂಡು ಅವರು ಬುದ್ಧರಿಗೆ ಬಾಣ ಬಿಡಲು ಮುಂದಾದರು. ತಕ್ಷಣ ಅಲ್ಲಿಗೆ ಓಡಿಬಂದಂತಹ ಅವರ
ಅತ್ತೆಯು ನನ್ನ ತಂದೆಯನ್ನು ಕೊಲ್ಲಬೇಡಿ ಎಂದು ಕೂಗುತ್ತ ಅಡ್ಡಬಂದಳು.
ಆಗ ಹಿರಿಯ ಬೇಟೆಗಾರನು ಓಹ್ ಇವರು ನನ್ನ ಮಾವನಿರಬಹುದು
ಎಂದು ಯೋಚಿಸಿದರೆ, ಓಹ್, ಇವರು ನಮ್ಮ ತಾತ ಎಂದು ಕಿರಿಯ ಬೇಟೆಗಾರರು ಯೋಚಿಸಿದರು.
ಆಗ ಅವರ ಮನಸ್ಸಿನಲ್ಲಿ ಮೈತ್ರಿಯು ಆವರಿಸಿತು. ಆಗ ಆ ಶ್ರೀಮಂತನ ಮಗಳು ಎಲ್ಲರೂ ಆಯುಧವನ್ನು ಎಸೆದು,
ಭಗವಾನರನ್ನು ಗೌರವಿಸಿ ಎಂದಳು. ಅವರು ಹಾಗೆ ಮಾಡಲು
ನಿರ್ಧರಿಸಿದಾಗ ಅವರಿಗೆ ಶರೀರವನ್ನು ಅಲುಗಾಡಿಸಲು ಸಾಧ್ಯವಾಯಿತು. ಎಲ್ಲರೂ ಹಾಗೇ ಮಾಡಿ ಒಂದೆಡೆ
ಕುಳಿತರು. ಆಗ ಭಗವಾನರು ಅವರಿಗೆ ಧಮ್ಮ ಪ್ರವಚನ ನೀಡಿದರು. ಬೋಧನೆಯ ಅಂತ್ಯದಲ್ಲಿ ಅವರೆಲ್ಲರೂ
ಸೋತಾಪನ್ನರಾದರು.
ಈ ವಿಷಯ ಎಲ್ಲೆಡೆ ಹಬ್ಬಿತು. ಆಗ ಭಿಕ್ಖುಗಳಿಗೆ ಒಂದು
ಸಂಶಯ ಉಂಟಾಯಿತು. ಅವರು ಬುದ್ಧರ ಬಳಿಗೆ ಬಂದು ತಮ್ಮ ಸಂಶಯ ಹೇಗೆ ಕೇಳಿದರು: ಭಗವಾನ್ ಆ ಶ್ರೀಮಂತನ
ಮಗಳು ಸೋತಾಪನ್ನಳಾಗಿದ್ದು, ತಾನು
ಪ್ರಾಣಿಗಳನ್ನು ವಧಿಸದಿದ್ದರೂ, ಹಿಂಸಿಸದಿದ್ದರೂ,
ಬಲೆಗಳನ್ನು ಬಾಣಗಳನ್ನು ಪತಿಗೆ ನೀಡಿದ್ದಳು ಇದರಿಂದ
ಆಕೆಗೆ ಪಾಪವಾಗಿಲ್ಲವೆ? ಆಗ ಭಗವಾನರು
ಅದಕ್ಕೆ ಹೀಗೆ ಉತ್ತರಿಸಿದರು: ಭಿಕ್ಖುಗಳೇ, ಯಾರೆಲ್ಲಾ ಸೋತಾಪನ್ನರಾಗಿರುವರೋ ಅವರು ಎಂದಿಗೂ ಕೊಲ್ಲಲಾರರು, ಕೊಲ್ಲಲೆಂದು ಆಶಿಸಲಾರರು, ಆಕೆ ಕೇವಲ ಪತಿಯಾಜ್ಞೆಯನ್ನೇ ಪಾಲಿಸಿ, ವಸ್ತುಗಳನ್ನು ನೀಡಿದ್ದಳು ಹೊರತು, ಆಕೆಯ ಮನಸ್ಸು ಎಂದೂ ಪಾಪದಿಂದ ಕೂಡಿರಲಿಲ್ಲ. ಹೇಗೆ ಗಾಯವಿಲ್ಲದ
ಅಂಗೈಯಲ್ಲಿ ವಿಷವನ್ನು ತೆಗೆದುಕೊಂಡು ಹೋಗಬಹುದೋ, ಅದರಿಂದಾಗಿ ಯಾವ ಅಪಾಯವು ಇಲ್ಲವೋ, ಹಾಗೆಯೇ ಪಾಪದ
ಇಚ್ಛೆಯಿಲ್ಲದೆ, ಪಾಪ ಆಗಲಾರದು,
ಆಕೆಯಿಂದ ಯಾವುದೇ ಪಾಪಕರ್ಮವಾಗಿಲ್ಲ ಎಂದು ನುಡಿದು
ಮೇಲಿನ ಗಾಥೆ ನುಡಿದರು.
No comments:
Post a Comment