Friday, 17 April 2015

dhammapada/papavagga/9.7/mahadhana

ಭಯಪೂರಿತ ಮಾರ್ಗದಂತೆ ಅಥವಾ ವಿಷದಂತೆ ಪಾಪವನ್ನು ಪರಿತ್ಯಜಿಸಿ
ಹೇಗೆ ಅಪಾರ ಶಸ್ತ್ರಾಸ್ತ್ರಧಾರಿಯಾಗಿಯು, ಧನವಂತನು ಆಗಿರುವ ವಾಣಿಜನು (ವ್ಯಾಪಾರಿಯು) ಭಯಪೂರಿತ ಮಾರ್ಗದಲ್ಲಿ ಹೋಗುವುದಿಲ್ಲವೋ ಮತ್ತು ಜೀವಿಸಲು ಇಚ್ಛಿಸುವವನು ಹೇಗೆ ವಿಷವನ್ನು ಬಳಸುವುದಿಲ್ಲವೋ ಹಾಗೆಯೇ ಪಾಪವನ್ನು ಪರಿವಜರ್ಿಸಿರಿ.        (123)
ಗಾಥ ಪ್ರಸಂಗ 9:7
ಮಹಾಧನವಂತನ ವಿವೇಚನೆ

                ಶ್ರಾವಸ್ತಿಯಲ್ಲಿ ಮಹಾಧನನೆಂಬ ಶ್ರೀಮಂತ ವ್ಯಾಪಾರಿಯಿದ್ದನು. ಒಂದು ಸಂದರ್ಭದಲ್ಲಿ 500 ಜನ ಡಕಾಯಿತರು ಆತನನ್ನು ದೋಚಲು ಹೊಂಚುಹಾಕಿದರು. ಆದರೆ ಹಾಗೆ ಆಗಲು ಅವರಿಗೆ ಅವಕಾಶವೇ ಸಿಗಲಿಲ್ಲ. ಇನ್ನೊಮ್ಮೆ ವ್ಯಾಪಾರಿಯು 500 ಬಂಡಿಗಳಷ್ಟು ಅಮೂಲ್ಯವಾದ ಸಾಮಗ್ರಿಗಳನ್ನು ತುಂಬಿಕೊಂಡು ಹೊರಡಲು ಸಿದ್ಧನಾಗಿರುವುದು ಅವರಿಗೆ ತಿಳಿಯಿತು. ಆದರೆ ಆ ಸಮಯದಲ್ಲಿ ವ್ಯಾಪಾರಿಯು ಭಿಕ್ಷುಗಳನ್ನು ತನ್ನೊಂದಿಗೆ ಪ್ರಯಾಣಿಸಲು ಆಹ್ವಾನಿಸಿದನು. ಅವರ ಎಲ್ಲಾ ಅಗತ್ಯತೆ ತಾನು ಪೂರೈಸುವುದಾಗಿ ವಚನವನ್ನಿತ್ತನು. ಹೀಗಾಗಿ 500 ಭಿಕ್ಖುಗಳು ಆತನ ಜೊತೆಗೆ ಹೊರಟರು. ವ್ಯಾಪಾರಿಯು ಪ್ರಯಾಣಿಸುವ ಸುದ್ದಿ ಕೇಳಿ ಡಕಾಯಿತರು ಹೊಂಚು ಹಾಕುತ್ತಿದ್ದರು. ಆದರೆ ವಿವೇಕಿಯಾದ ವ್ಯಾಪಾರಿಯು ಪ್ರಯಾಣವನ್ನು ನಿಲ್ಲಿಸಿದನು. ಕೆಲವು ದಿನಗಳ ಕಾಲ ಬಿಡಾರವನ್ನು ಹಾಕಿದರು. ಈ ವಿಷಯವು ಕಳ್ಳರಿಗೂ ತಿಳಿಯಿತು. ಅವರು ಆ ಸ್ಥಳದಲ್ಲಿಯೇ ಆಕ್ರಮಣ ಮಾಡಲು ನಿರ್ಧರಿಸಿದರು. ಈ ವಿಷಯ ಮತ್ತೆ ಹೇಗೋ ತಿಳಿದ ವ್ಯಾಪಾರಿಯು ಮನೆಗೆ ಹಿಂತಿರುಗುವ ನಿಧರ್ಾರ ಕೈಗೊಂಡನು. ಈ ವಿಷಯವನ್ನು ಸುದ್ದಿಕಾರರಿಂದ ತಿಳಿದ ಡಕಾಯಿತರು ಆತನು ಮನೆಕಡೆಗೆ ಮರಳುವ ಹಾದಿಯಲ್ಲಿ ಹೊಂಚು ಹಾಕಿದರು. ಡಕಾಯಿತರ ಈ ನಿಧರ್ಾರವನ್ನು ತಿಳಿದ ವ್ಯಾಪಾರಿಯು ಮತ್ತೆ ಆ ಸ್ಥಳದಲ್ಲೇ ಉಳಿದನು. ಈ ಎಲ್ಲಾ ವಿಷಯವನ್ನು ಭಿಕ್ಷುಗಳಿಗೆ ವ್ಯಾಪಾರಿಯು ತಿಳಿಸಿದನು. ಹೀಗಾಗಿ ಭಿಕ್ಷುಗಳು ಶ್ರಾವಸ್ತಿಗೆ ತಾವೇ ಹೊರಟರು.

                ಜೇತವನದಲ್ಲಿ ಭಿಕ್ಷುಗಳು ಭಗವಾನರಲ್ಲಿ ಈ ಎಲ್ಲಾ ವಿಷಯ ತಿಳಿಸಿ, ಮಹಾಧನನ ದೂರದೃಷ್ಟಿ ಪ್ರಶಂಸಿಸಿದರು. ಆಗ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment