ಕಟುನುಡಿ ಬೇಡ
ಯಾರಿಗೂ ಕಟು
ನುಡಿಯಬೇಡ, ಆಲಿಸಿದವರು ಪ್ರತಿ
ಕಟುನುಡಿಯುತ್ತಾರೆ. ಕಟುನುಡಿಯು ದುಃಖಕಾರಕ ಮತ್ತು ಪ್ರತಿಕಾರವನ್ನುಂಟುಮಾಡಿ ಹಾನಿ ತರುತ್ತದೆ. (133)
ಒಡೆದುಹೋದ ಗಂಟೆಯ
ರೀತಿ ನಿನ್ನನ್ನು ನೀನು ನಿಶ್ಶಬ್ಧಗೊಳಿಸಿದ್ದೇ ಆದರೆ, ನೀನು ನಿಬ್ಬಾಣ ತಲುಪಿದವರಂತೆ ಕಾಣುತ್ತೀಯೆ, ಏಕೆಂದರೆ ನಿನ್ನಲ್ಲಿ ಹಗೆತನದ ಪ್ರತಿನುಡಿಗಳು
ಕಾಣಲಾಗುವುದಿಲ್ಲ. (134)
ಗಾಥ ಪ್ರಸಂಗ 10:4
ಕುಂದಧನನ ವಿಚಿತ್ರ ವೃತ್ತಾಂತ
ಶ್ರಾವಸ್ತಿಯಲ್ಲಿ ಕುಂದಧನನೆಂಬುವವನು ಸಂಘಕ್ಕೆ
ಸೇರುತ್ತಾನೆ. ಆತನು ಸಂಘಕ್ಕೆ ಸೇರಿದ ಕೆಲದಿನಗಳ ನಂತರ ಆತನು ದಾರಿಯಲ್ಲಿ ಹೋಗುತ್ತಿದ್ದರೆ,
ಆತನ ಹಿಂದೆ ಸ್ತ್ರೀ ಆಕೃತಿಯೊಂದು
ಹಿಂಬಾಲಿಸುತ್ತಿತ್ತು. ಆತನು ವಿಹಾರದೊಳಕ್ಕೆ ಹೋದರೂ, ಆಗಲೂ ಆ ಸ್ತ್ರೀ ಆಕೃತಿಯು ಹಿಂಬಾಲಿಸುತ್ತಿತ್ತು. ಇದನ್ನು ಪರರು
ಕಾಣುತ್ತಿದ್ದರು, ಆದರೆ ಕುಂದಧನನಿಗೆ
ಮಾತ್ರ ತಿಳಿಯುತ್ತಿರಲಿಲ್ಲ. ಅಷ್ಟೇ ಅಲ್ಲ, ಆತನು ಎಂದಿಗೂ ಅಂತಹದನ್ನು ಕಂಡಿರಲಿಲ್ಲ. ಅಂದಿನಿಂದಲೇ ಆತನು ಹೆಸರು ಕುಂದಧನ ಎಂದಾಯಿತು.
ಕುಂದಧನನು ಭಿಕ್ಷಾಟನೆಗೆ ಹೊರಟಿರುವಾಗ, ಜನರು ಆತನಿಗೆ ಎರಡು ಸೌಟಿನಷ್ಟು ಆಹಾರ ನೀಡಿ, ಹೀಗೆ ಹೇಳುತ್ತಿದ್ದರು. ಪೂಜ್ಯರೇ, ಇದು ನಿಮಗೆ ಮತ್ತು ಇದು ನಿಮ್ಮ ಸಹಚರಳಿಗಾಗಿ. ಇದನ್ನು
ಕೇಳಿ ಆತನು ಆಶ್ಚರ್ಯಗೊಂಡು ಹಿಂದೆ ನೋಡಿದರೂ ಯಾರೂ ಕಾಣಲಿಲ್ಲ. ಇದು ಸಹ ಭಿಕ್ಷುಗಳಿಗೆ
ತಿಳಿಯಿತು. ಅವರು ಈ ವಿಷಯವನ್ನು ಮಹಾದಾನಿ ಅನಾಥಪಿಂಡಿಕನಿಗೆ ಹಾಗು ಮಹಾದಾನಿ ವಿಶಾಖೆಗೆ ತಿಳಿಸಿದರು.
ಆದರೆ ಅವರು ಎಲ್ಲಾ ಬಲ್ಲ ಬುದ್ಧರಿಗೆ ಈ ವಿಷಯ ಬಿಡುವುದು ಉತ್ತಮ ಎಂದು ಉತ್ತರಿಸಿದರು. ಇದರಿಂದ
ಅಸಮಾಧಾನಗೊಂಡ ಆ ಭಿಕ್ಷುಗಳು ಈ ವಿಷಯವನ್ನು ಕುರಿತು ರಾಜ ಪಸೇನದಿಯ ಬಳಿಗೆ ಬಂದು ಹೀಗೆ ನುಡಿದರು:
ಮಹಾರಾಜ, ಭಿಕ್ಷುವಾದ ಈ ಕುಂದಧನನು
ಸ್ತ್ರೀಯೊಬ್ಬಳನ್ನು ಹೊಂದಿದ್ದಾನೆ. ಈತನಿಂದಾಗಿ ಭಿಕ್ಷುಗಳೆಲ್ಲರಿಗೂ ಅಪಮಾನವಾಗಿದೆ, ಅದರಿಂದಾಗಿ ಮಹಾರಾಜ, ದಯವಿಟ್ಟು ತಾವು ಆತನಿಗೆ ರಾಜ್ಯದಿಂದಲೇ ಬಹಿಷ್ಕರಿಸುವುದು, ಉತ್ತಮವಲ್ಲವೇ?
ಓ ಹಾಗೇನು? ಆ ಮಹನೀಯನೆಲ್ಲಿ ?
ವಿಹಾರದಲ್ಲಿರುವನು ಮಹಾರಾಜ.
ಆತನು ಯಾವ ವಿಹಾರದಲ್ಲಿರುವನು ?
ಜೇತವನದ ವಿಹಾರದಲ್ಲೇ ತಂಗಿರುವನು.
ಒಳ್ಳೆಯದು, ಸರಿ ನೀವು ಹೊರಡಿ, ನಾನು ಆತನಿಗೆ ಸಾಕ್ಷಿ ಸಮೇತ ಹಿಡಿಯುವೆನು ಎಂದು ರಾಜನು ನುಡಿದು, ತನ್ನ ಕೆಲಸ ಕಾರ್ಯಗಳನ್ನು ಮುಂದೂಡಿ ಆ ಕುಂದಧನನಿಗಾಗಿ ಸಂಜೆ ವೇಳೆ
ವಿಹಾರಕ್ಕೆ ಬಂದನು. ತನ್ನ ಗುಪ್ತಚರರಿಗೂ ಆತನಿಗೆ ಹಿಂಬಾಲಿಸಲು ತಿಳಿಸಿ, ತಾನು ಸಹಾ, ಆ ಭಿಕ್ಷುವಿನ ವಿಹಾರಕ್ಕೆ ಎದುರಾಗಿ ಕುಳಿತು ವೀಕ್ಷಿಸುತ್ತಿದ್ದನು.
ಇದರಿಂದಾಗಿ ವಿಹಾರದಲ್ಲಿ ಶಬ್ದಗಳು ಹೆಚ್ಚಾಗಿ, ಆ ಕುಂದಧನನು ತನ್ನ ವಾಸಸ್ಥಳದಿಂದ ಹೊರಗೆ ಬಂದನು. ಆಗ ರಾಜನಿಗೆ ಆತನ ಹಿಂದೆ ಸ್ತ್ರೀ
ಆಕೃತಿಯು ನಿಂತಿರುವುದು ಕಂಡುಬಂದಿತು. ಈ ವಿಷಯವೊಂದು ಅರಿಯದ ಕುಂದಧನನು ಮತ್ತೆ ವಿಹಾರದೊಳಕ್ಕೆ
ಹೊರಟು ಪದ್ಮಾಸನದಲ್ಲಿ ಕುಳಿತನು. ಈ ಬಾರಿ ರಾಜನು ಧೈರ್ಯಮಾಡಿ ಆತನ ಕೋಣೆಯಲ್ಲಿ ಪ್ರವೇಶ ಮಾಡಿಯೇ
ಬಿಟ್ಟನು. ಆದರೆ ಆ ಸ್ತ್ರೀ ಆಕೃತಿಯು ಆತನಿಗೆ ಕಾಣಲಿಲ್ಲ. ರಾಜನಿಗೆ ಪರಮಾಶ್ಚರ್ಯವಾಯಿತು.
ಕೋಣೆಯಿಂದ ಹೊರಹೋಗಲು ಗುಪ್ತಮಾರ್ಗ ಯಾವುದೂ ಆತನಿಗೆ ಕಾಣಲಿಲ್ಲ. ರಾಜನು ಕುಂದಧನನಿಗೆ ಕೇಳಿಯೇ
ಬಿಟ್ಟನು; ಭಂತೆ, ನಿಮ್ಮ ಹಿಂದೆ ಸ್ತ್ರೀಯನ್ನು ಕೆಲಕ್ಷಣಗಳ ಹಿಂದೆ
ನೋಡಿದ್ದೆ, ಆಕೆಯೆಲ್ಲಿ?
ನನಗೊಂದು ತಿಳಿಯದು ಮಹಾರಾಜ, ನಾನೇನೂ ನೋಡಿಲ್ಲ.
ಹಾಗಾದರೆ ಪೂಜ್ಯರೇ, ಒಂದು ನಿಮಿಷ ನಿಮ್ಮ ಕೋಣೆಯಿಂದ ಹೊರಬರಬಲ್ಲಿರಾ?
ಆಗ ಆ ಭಿಕ್ಷುವು ಕೋಣೆಯಿಂದ ಹೊರಬಂದು ವಿಹಾರಕ್ಕೆ
ಎದುರಾಗಿ ನಿಂತೊಡನೆಯೇ, ಪುನಃ
ಪ್ರತ್ಯಕ್ಷಳಾದ ಸ್ತ್ರೀ ಪ್ರೇತವು ಆತನ ಹಿಂದೆ ಮಾನವಸ್ತ್ರೀ ಆಕಾರದಲ್ಲಿ, ಭಿಕ್ಷುವಿನ ಹಿಂದೆ ನಿಂತಳು. ಇದನ್ನು ಕಂಡ ರಾಜನಿಗೆ
ದಿಗ್ಭ್ರಮೆಯಾಗಿ, ಮೇಲಿನ ಮಹಡಿಗೆ ಹತ್ತಿದನು.
ಆಗ ಆ ಭಿಕ್ಷುವು ಪುನಃ ಕೋಣೆಯಲ್ಲಿ ಪ್ರವೇಶಿಸಿದನು. ನಂತರ ರಾಜನು ಆತನಿಗೆ ಕಾಣಲು ಒಳಗೆ ಬಂದಾಗ
ಪುನಃ ಆ ಸ್ತ್ರೀಯು ಮಾಯವಾಗಿದ್ದಳು. ಆ ರಾಜನ ಪುನಃ ಆ ಬಗ್ಗೆ ಕುಂದಧನ ಭಿಕ್ಷುವಿಗೆ
ಪ್ರಶ್ನಿಸಿದಾಗ ಹಿಂದಿನಂತೆ ಮುಗ್ಧತೆಯ ಉತ್ತರವೇ ಸಿಕ್ಕಿತು. ಆಗ ರಾಜನು ಹೀಗೆಂದನು: ಭಂತೆ,
ನನ್ನ ಕಣ್ಣಾರೆ ನಾನೇ ನಿಮ್ಮ ಹಿಂದೆ ಸ್ತ್ರೀಯನ್ನು
ಕಂಡಿದ್ದೇನಲ್ಲಾ.
ಹೌದು ಪ್ರಭು, ಹಾಗೆಯೇ ಪ್ರತಿಯೊಬ್ಬರೂ ನುಡಿಯುತ್ತಾರೆ. ಆದರೆ ನನಗೆ ಮಾತ್ರ ಎಂದಿಗೂ
ಕಾಣಿಸಲಿಲ್ಲ.
ಆಗ ರಾಜನಿಗೆ ಇದು ಪ್ರೇತಕಾಟವಿರಬಹುದೆಂದು ಭಾವಿಸಿ,
ಆತನಿಗೆ ಹೀಗೆ ಹೇಳಿದನು: ಭಂತೆ, ನಿಮ್ಮ ಮೇಲೆ ಅಪಾರ ಅಪನಿಂದನೆ ಹೆಚ್ಚಿ, ನಿಮಗೆ ಸರಿಯಾಗಿ ಆಹಾರ ದಾನವನ್ನು ಅದಕ್ಕಾಗಿಯೇ
ನೀಡಲಾಗುತ್ತಿಲ್ಲ, ಆದರೆ
ಪರಿಸ್ಥಿತಿಯನ್ನು ಅರಿತ ನಾನು ಮಾತ್ರ ನಿಮ್ಮ ಆಹಾರ ಮತ್ತು ಇನ್ನಿತರ ಅವಶ್ಯಕತೆ ಪೂರೈಸುವನು,
ನೀವು ಅರಮನೆಗೆ ಪ್ರತಿದಿನ ಬನ್ನಿ ಎಂದು ಆಹ್ವಾನಿಸಿ
ಹೊರಟನು.
ಇತರ ಭಿಕ್ಷುಗಲಿಗೆ ರಾಜನು ಬಹಿಷ್ಕಾರ ಹಾಕುವ ಬದಲು ಬಹು
ವಿನಯದಿಂದ ಆಹ್ವಾನಿಸಿರುವುದು ತಿಳಿದು ಆಶ್ಚರ್ಯಚಕಿತರಾದರು. ಆಗ ಅವರು ಆ ಭಿಕ್ಷುವಿಗೆ
ಬಹಿರಂಗವಾಗಿಯೇ ಎದುರಿನಲ್ಲಿಯೇ ಈ ರೀತಿ ನುಡಿದರು: ಓ ಭಿಕ್ಷುವೇ, ನಿನ್ನಲ್ಲಿ ಶೀಲವೇ ಇಲ್ಲ, ದುಶ್ಶೀಲನಾಗಿರುವೆ. ರಾಜನು ಸಹಾ ನಿನಗೆ ಅಪಾರವಾಗಿ ಖಂಡಿಸುವ,
ಬದಲು ಆಹಾರಕ್ಕೆ ಆಹ್ವಾನಿಸಿದ್ದಾನೆ. ಓ ಮಾಯಾವಿ,
ಅದೇನು ಮಾಯತನ ತೋರಿರುವೆಯೋ ನೀನು ನಾಶವಾಗಿ ಹೋಗಿರುವೆ.
ಇದನ್ನು ಆಲಿಸಿದ ಕುಂದಧನನು ಕ್ರುದ್ಧನಾಗಿ ಪ್ರತಿಯಾಗಿ
ಹೀಗೆ ಹೇಳಿದನು: ನೀವೇ ದುಶ್ಶೀಲರು, ನೀವೇ ನಾಶವಾಗುವವರು;
ಏಕೆಂದರೆ ನೀವೇ ಸ್ತ್ರೀಯರೊಂದಿಗೆ ಬೆರೆಯುವವರು.
ಕೊನೆಗೆ ಈ ವಿಷಯ ಬುದ್ಧರ ಬಳಿಗೆ ಬಂದೇಬಿಟ್ಟಿತು. ಆಗ
ಭಗವಾನರು ಆ ಎಲ್ಲರನ್ನು ಕರೆಯಿಸಿದರು. ನಂತರ ಕುಂದಧನನಿಗೆ ಹೀಗೆ ಕೇಳಿದರು: ಮಗು, ಕುಂದಧನನೇ, ನೀನು ಭಿಕ್ಷುಗಳಿಗೆ ದುಶ್ಶೀಲರು ಎಂದು ತೆಗಳಿರುವೆಯಾ? ಅವರು ಸ್ತ್ರೀಯರೊಂದಿಗೆ ಬೆರೆತಿರುವುದನ್ನು ಏನದರೂ
ನೀನು ಕಂಡಿರುವೆಯಾ? ಆದರೆ ನೀನು
ಸ್ತ್ರೀಯನ್ನು ಹಿಂದೆ ಹೊಂದಿರುವುದನ್ನು ಅವರು ಕಂಡಿದ್ದಾರೆ. ಇದೆಲ್ಲಾ ನಿನ್ನ ಪೂರ್ವಜನ್ಮದ
ಪಾಪಫಲವೆಂದು ಅರಿಯಲಾರದೆ ಹೋದೆಯಾ? ನಾನೀಗ ಆ ಸ್ತ್ರೀಯ
ಆಕೃತಿಯು ಏಕೆ ನಿನ್ನನ್ನು ಹಿಂಬಾಲಿಸುತ್ತದೆ ಎಂಬುದನ್ನು ತಿಳಿಸುತ್ತೇನೆ ಆಲಿಸು ಎಂದು ಆತನ
ಪೂರ್ವಜನ್ಮದ ವಿಷಯ ತಿಳಿಸಲು ಆರಂಭಿಸಿದರು.
ದೀಘಾಯುಬುದ್ಧರ ಕಾಲದ ಜನ್ಮದಲ್ಲಿ ಈ ಕುಂದಧನನು ಸ್ತ್ರೀ
ದೇವತೆಯಾಗಿದ್ದನು. ಆ ಸಮಯದಲ್ಲಿ ಅತ್ಯಂತ ಸ್ನೇಹಶೀಲರಾದ ಭಿಕ್ಷುಗಳ ಜೊತೆಯೊಂದು ಇತ್ತು.
ಅವರಿಬ್ಬರು ಸಮಾನ ಮನಸ್ಕರು ಮಾತ್ರವಲ್ಲದೆ ಸದಾ ಒಬ್ಬರನ್ನು ಬಿಟ್ಟಿರದ ಕಾಂತಶಕ್ತಿಯಂತೆ ಜೊತೆಗಿರುತ್ತಿದ್ದರು.
ಈ ಇಬ್ಬರ ಸ್ನೇಹ ಕಂಡು ಆ ಸ್ತ್ರೀ ದೇವತೆಗೆ ಈಷರ್ೆ ಉಂಟಾಯಿತು. ಅದು ಅವರಿಬ್ಬರನ್ನು ಬೇರ್ಪಡಿಸಲು
ನಿರ್ಧರಿಸಿತು. ಅದೇ ಸಮಯದಲ್ಲಿ ಆ ಸ್ನೇಹಮಯಿ ಭಿಕ್ಷುವೊಬ್ಬನು ಪ್ರಕೃತಿಬಾಧೆ ತೀರಿಸಲು ಹೋದನು.
ಆತ ಪೊದೆಗಳ ಬಳಿ ಹೋದಾಗ, ಆಕೆಯು ಮಾನವ
ಸ್ತ್ರೀ ರೂಪದಲ್ಲಿ ಆತನನ್ನು ಹಿಂಬಾಲಿಸಿದಳು. ಆತನು ಪೊದೆಯಿಂದ ಹೊರಬಂದಾಗ ಆಕೆಯು ಆತನನ್ನು
ಹಿಂಬಾಲಿಸುತ್ತ, ವಸ್ತ್ರ ಹಾಗು
ಜಡೆಯನ್ನು ಸರಿಪಡಿಸುವುದು ಇನ್ನೊಬ್ಬ ಭಿಕ್ಷುವಿಗೆ ಕಾಣಿಸಿತು. ಆದರೆ ಪೊದೆಯಿಂದ ಹೊರಬಂದ ಮುಗ್ಧ
ಭಿಕ್ಷುವಿಗೆ ಇದ್ಯಾವುದೂ ತಿಳಿಯಲಿಲ್ಲ. ಸ್ತ್ರೀಯೊಂದಿಗಿದ್ದ ಆತನನ್ನು ಕಂಡು ಆ ಭಿಕ್ಷುವಿನ
ಸ್ನೇಹಿತನಾದ ಭಿಕ್ಷುವು ಹೀಗೆ ಖಂಡಿಸಿದನು: ಓ ಸ್ನೇಹಿತನೇ, ಬ್ರಹ್ಮಚಾರ್ಯವನ್ನು ನಾಶಪಡಿಸಿಕೊಂಡೆಯಾ! ಅನೈತಿಕ ಸಂಬಂಧದಲ್ಲಿ
ಬೆರೆತೆಯಾ! ಛೀ!.
ಓಹ್ ಮಿತ್ರ! ಹೀಗೇಕೆ ಹೇಳುವೆ, ನಾನಂಥ ಯಾವ ಕೃತ್ಯವನ್ನು ಮಾಡೇ ಇಲ್ಲ.
ಛೀ! ನಾನು ಈಗತಾನೇ ನೀನು ಸ್ತ್ರೀಯೊಂದಿಗೆ
ಹೊರಬಂದಿರುವುದನ್ನು ಕಾಣಲಿಲ್ಲವೇ? ಆದರೂ ನೀನು ಸುಳ್ಳು
ನುಡಿಯುವೆಯಲ್ಲ.
ಓ ಮಿತ್ರ ನನ್ನ ಮೇಲೆ ಇಂತಹ ಘೋರ ಅಪವಾದ ಹಾಕದಿರು,
ನಾನಂಥ ಯಾವುದೇ ಪಾಪ ಮಾಡಲಿಲ್ಲ.
ಛೇ, ನನ್ನ ಕಣ್ಣುಗಳಿಂದ ಕಣ್ಣಾರೆ ನೋಡಿದ ಮೇಲೆಯೂ ನಿನ್ನ ಮಾತನ್ನು ನಂಬಬೇಕೇನು? ಇನ್ನು ನಿನ್ನ ಜೊತೆ ನಾನು ಭಿಕ್ಷು ಜೀವನ ನಡೆಸಲಾರೆನು
ಎನ್ನುತ್ತಾ ಆ ಭಿಕ್ಷುವನ್ನು ಬಿಟ್ಟು ಹೊರಡಲು ಸಿದ್ಧನಾದನು.
ನಾನು ಅಣುವಿನಷ್ಟು ಪಾಪ ಮಾಡಿಲ್ಲ, ನನ್ನ ಬ್ರಹ್ಮಚರ್ಯೆಯು ಅಚಲ, ಸುಭದ್ರ, ಅಮಲ, ಅಛಿದ್ರ ಹಾಗು ಅಖಂಡವಾಗಿದೆ.
ನಾನೇ ಸ್ತ್ರೀ ನಿನ್ನ ಹಿಂದೆ ಆ ಅವಸ್ಥೆಯಲ್ಲಿ
ಹಿಂಬಾಲಿಸುವುದನ್ನು ಕಂಡೆನಲ್ಲಾ, ಇನ್ನು ನಿನ್ನ ಜೊತೆ
ಉಪೋಸಥ ಆಚರಿಸಲಾರೆನು.
ಆಗ ಆ ಸ್ತ್ರೀ ದೇವತೆಗೆ ತಾನು ಮಾಡಿದ್ದು, ಘೋರ
ಪಾಪ ಎಂದು ತಿಳಿಯಿತು. ತಕ್ಷಣ ಆಕೆಯು ಆ ನಿಂದೆ ಹೊರೆಸಿದ್ದ ಭಿಕ್ಷುವಿನ ಬಳಿಗೆ ಹೋಗಿ ಗಾಳಿಯಲ್ಲಿ
ತೇಲುತ್ತಾ, ತನ್ನ
ದಿವ್ಯ ರೂಪದಲ್ಲಿ, ಮಧುರವಾದ ನುಡಿಗಳಿಂದ ನಿಜವೆಲ್ಲಾ ತಿಳಿಸಿ, ಆ
ಭಿಕ್ಷು ಪೂರ್ಣ ಪರಿಶುದ್ಧನೆಂದು ತಿಳಿಸಿದಳು. ಆತನನ್ನು ವಜರ್ಿಸದೆ, ಆತನ
ಜೊತೆಯೇ ಉಪೋಸಥ ಆಚರಿಸಬೇಕೆಂದು ಕೇಳಿಕೊಂಡಳು. ಆತನು ಈಗ ಈಕೆಯ ಮಾತನ್ನು ಹಾಗು ಮುಗ್ಧ ಭಿಕ್ಷುವಿನ
ನಡತೆಯನ್ನು ಮೆಚ್ಚಿದನು. ಹೀಗೆ ಕುಂದಧನನು ಹಿಂದಿನ ಸ್ತ್ರೀ ದೇವತೆಯ ಜನ್ಮವೊಂದರಲ್ಲಿ ಹೀಗೆ
ದುರಾಚಾರವೆಸಗಿದ್ದನು. ಇದರ ಪರಿಣಾಮವಾಗಿ ಆ ಸ್ತ್ರೀ ದೇವತೆಯು ಅವೀಚಿ ನರಕದಲ್ಲಿ ಜನಿಸಬೇಕಾಯಿತು.
ನಂತರ ಈ ಬುದ್ಧರ ಕಾಲದಲ್ಲಿ ಶ್ರಾವಸ್ಥಿಯಲ್ಲಿ ಕುಂದಧನನಾಗಿ ಜನಿಸಿದ್ದಳು. ಆ ಕರ್ಮಫಲ ಮತ್ತೆ
ಮುಂದುವರೆದು ಹೀಗೆ ಅವನಿಂದೆಗೆ ಗುರಿಯಾಗಬೇಕಾಯಿತು ಎಂದು ಹೇಳಿ ಭಗವಾನರು ಕುಂದಧನನಿಗೆ ಹೀಗೆ ನುಡಿದರು:
ಆದ್ದರಿಂದ ಮಗು ಕುಂದಧನನೇ, ಆ ಪಾಪ ಕೃತ್ಯದಿಂದಾಗಿಯೇ ನಿನ್ನ ಹಿಂದೆ ಸ್ತ್ರೀ ಆಕೃತಿಯು
ಗೋಚರಿಸುವುದು, ಆದ್ದರಿಂದಾಗಿ ನೀನು ಯಾರೊಂದಿಗೂ ವಾದಿಸಲು, ಕಟುವಾಕ್ಯ
ಪ್ರಯೋಗಿಸಲು ಹೋಗಬೇಡ, ನಿಶ್ಶಬ್ದದಿಂದ ಕೂಡಿರುವವನಾಗು ಮತ್ತು ನಿಬ್ಬಾಣಕ್ಕೆ
ಶ್ರಮಿಸುವಂತವನಾಗು ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು
No comments:
Post a Comment