ನಿಬ್ಬಾಣ
ಪ್ರಾಪ್ತಿಯವರೆಗೂ ನಿಮ್ಮ ಪ್ರಯತ್ನದಲ್ಲಿ ತೃಪ್ತಿ ತಾಳದಿರಿ
"ಕೇವಲ
ಶೀಲಾಚರಣೆಗಳಿಂದಾಗಲಿ ಅಥವಾ
ಅಪಾರ ಕಲಿಕೆಯಿಂದಾಗಲಿ
ಅಥವಾ
ಸಮಾಧಿ ಲಾಭಗಳಿಂದಾಗಲಿ
ಅಥವಾ
ಏಕಾಂತ
ಜೀವನದಿಂದಾಗಲಿ" (271)
"ಅಥವಾ ಅಲೌಕಿಕರು
ಅನುಭವಿಸುವ
ತ್ಯಾಗದ ಸುಖಗಳಿಂದ
ನಾನು
ಆವೃತನಾಗಿರುವೆ
ಎಂದಾಗಲಿ ನೀವು
ಭಿಕ್ಷುಗಳೇ
ತೃಪ್ತರಾಗದಿರಿ. ಆಸವಕ್ಷಯದ
(ಕ್ಲೇಷಗಳ
ಕ್ಷಯ/ನಿಬ್ಬಾಣ) ಪ್ರಾಪ್ತಿಯ ಹೊರತು ತೃಪ್ತರಾಗದಿರಿ.
(ಶ್ರದ್ಧೆ ಮತ್ತು
ಶ್ರಮಗಳನ್ನು ನಿಲ್ಲಿಸದಿರಿ)." (272)
ಗಾಥ ಪ್ರಸಂಗ 19:10
ಅರಹಂತರಾಗುವುದು ಅಷ್ಟು
ಸುಲಭವಲ್ಲ
ಶ್ರಾವಸ್ತಿಯ ಭಿಕ್ಷುಗಳ ಗುಂಪೊಂದು
ತಮ್ಮಲ್ಲೇ ಹೀಗೆ ಅವಲೋಕಿಸಿಕೊಂಡರು. "ಓಹ್, ನಾವಂತು ಶೀಲವಂತರಾಗಿದ್ದೇವೆ. ನಾವು ಶುದ್ಧ ಸದಾಚಾರಿಗಳಾಗಿದ್ದೇವೆ. ನಾವಂತು ಅಪಾರ
ಕಲಿತಿದ್ದೇವೆ, ನಾವಂತು ಪರಮ ಏಕಾಂತ
ಸ್ಥಳಗಳಲ್ಲಿ ವಿಹರಿಸುವವರಾಗಿದ್ದೇವೆ. ಓಹ್ ನಾವಂತು ಸಮಾಧಿಗಳನ್ನು ಪ್ರಾಪ್ತಿಮಾಡಿ
ಅಭಿಜ್ಞಾಗಳನ್ನು (ಅತೀಂದ್ರಿಯ ಶಕ್ತಿ) ಪಡೆದಿದ್ದೇವೆ. ನಮಗಂತು ಅರಹಂತ ಪ್ರಾಪ್ತಿಯು ಕಷ್ಟಕರವಲ್ಲ,
ನಾವು ಇಚ್ಛಿಸಿದ ವೇಳೆಗೆ ನಾವು ಅರಹಂತರಾಗಬಲ್ಲೆವು."
ಒಂದುದಿನ ಅವರೆಲ್ಲರೂ ಭಗವಾನರ ಬಳಿಗೆ
ಬಂದರು. ಅವರೆಲ್ಲರೂ ವಂದಿಸಿ ಒಂದೆಡೆ ನಿಂತರು. ಆಗ ಭಗವಾನರು ಅವರಿಗೆ ಹೀಗೆ ಕೇಳಿದರು:
ಭಿಕ್ಷುಗಳೇ, ನೀವು ಆಸವಕ್ಷಯಗಳನ್ನು
ಸಿದ್ಧಿಸಿದಿರೆ? ಅರಹಂತತ್ವವನ್ನು
ಪ್ರಾಪ್ತಿಮಾಡಿದಿರೆ? ನಿಮ್ಮ ಶಿಕ್ಷಣದ
ಉದ್ದೇಶ ಪೂರ್ಣಗೊಂಡಿತೆ?"
"ಭಗವಾನ್, ನಾವು ಇಂತಿಂಥ ಸಂತತ್ವದ ಹಂತದಲ್ಲಿರುವೆವು. ಆದ್ದರಿಂದಾಗಿ ನಾವು
ಇಚ್ಛಿಸಿದಾಗ ಅರಹಂತರಾಗಬಲ್ಲೆವು, ಈ ರೀತಿಯ ಶ್ರದ್ಧೆಯಿಂದಲೇ ನಾವು ಕೂಡಿರುವೆವು."
ಆಗ ಭಗವಾನರು ಹೀಗೆ ಹೇಳಿದರು:
"ಭಿಕ್ಷುಗಳೇ, ಈ ರೀತಿಯ ಸಡಿಲಿಕೆಯ
ಯೋಚನೆ, ಈ ರೀತಿಯ ಸಡಿಲಿಕೆಯ ನಿಧರ್ಾರ
ಸರಿಯಲ್ಲ. ಶೀಲಗಳ ಪಾಲನೆ, ದುತಾಂಗಗಳ ಪಾಲನೆ ಅಥವಾ
ಸಮಾಧಿಗಳ ಪ್ರಾಪ್ತಿಗಳಿಂದಲೇ ಅಥವಾ ಅನಾಗಾಮಿತ್ವದಿಂದಲೇ ನೀವು ತೃಪ್ತರಾಗಬಾರದು, 'ಈ ಜನ್ಮದಲ್ಲಿ ನಮಗೆ ದುಃಖವಿಲ್ಲ ಬಿಡು' ಎಂದಾಗಲಿ, ಅಥವಾ ಇದೇರೀತಿಯ ಮುಂದೂಡಿಕೆ ಮಾಡುವ ಯೋಚನೆಗಳು ಸರಿಯಲ್ಲ. ನೀವು ಆಸವಕ್ಷಯ ಅಥವಾ ನಿಬ್ಬಾಣ
ಪ್ರಾಪ್ತಿಯವರೆಗೂ ತೃಪ್ತರಾಗಬಾರದು, ಶ್ರದ್ಧೆ ಕುಗ್ಗಿಸಬಾರದು, ಅಲಕ್ಷ ಮಾಡಬಾರದು, ಪರಿಶ್ರಮದಲ್ಲಿ ದೃಢತೆ
ತಗ್ಗಿಸಬಾರದು" ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು.