Friday, 3 July 2015

dhammapada/kodhavagga/17.1/rohini

        17.ಕೋಧ ವಗ್ಗ (ಕ್ರೋಧ ವರ್ಗ)

ಯಾರು ಅಹಂಕಾರಕ್ಕೆ ಅಂಟಿಲ್ಲವೋ ಅವರಿಗೆ
ಕೋಪವೂ ಇಲ್ಲ, ದುಃಖವೂ ಇಲ್ಲ :

"ಕ್ರೋಧವನ್ನು ಹಾಗು ಅಹಂಕಾರವನ್ನು ಬಿಟ್ಟುಬಿಡಬೇಕು,
ಎಲ್ಲಾ ಸಂಯೋಜನೆಗಳನ್ನು (ಬಂಧನಗಳನ್ನು) ಪಕ್ಕಕ್ಕೆಸೆಯಬೇಕು,
ಯಾರು ದೇಹ ಮನಸ್ಸಿಗೆ ಅಂಟಿಲ್ಲವೋ
ಅಂತಹವರಿಗೆ ಯಾವ ದುಃಖವೂ ಇಲ್ಲ."         (221)


ಗಾಥ ಪ್ರಸಂಗ 17:1
ದಾನದಿಂದ ರೋಗವು ವಾಸಿಯಾಯಿತು


            ಒಮ್ಮೆ ಪರಮಪೂಜ್ಯ ಅನುರುದ್ಧರವರು ಕಪಿಲವಸ್ತುವಿಗೆ ಭೇಟಿ ನೀಡಿದರು. ಅಲ್ಲಿನ ವಿಹಾರದಲ್ಲಿದ್ದಾಗ, ಅವರ ಇಡೀ ಬಂಧುಗಳು ಅವರನ್ನು ಭೇಟಿ ಮಾಡಿದರು. ಆದರೆ ಅವರ ಸೋದರಿ ರೋಹಿಣಿಯು ಮಾತ್ರ ಬರಲಿಲ್ಲ. ಅವರು ಆಕೆಯನ್ನು ಕರೆಸಿದರು. ಆಕೆಯು ತನ್ನ ತಲೆಯನ್ನು ವಸ್ತ್ರದಿಂದ ಮುಚ್ಚಿಕೊಂಡು ನಾಚಿಕೆಯಿಂದ ಭೇಟಿ ನೀಡಿದಳು. ಆಕೆ ಹೀಗೆ ವತರ್ಿಸಲು ಕಾರಣವೂ ಇತ್ತು. ಅದೇನೆಂದರೆ ಆಕೆಯ ಚರ್ಮಕ್ಕೆ ಕುಷ್ಠರೋಗವು ಆವರಿಸಿತ್ತು. ಇದರ ಪರಿಹಾರಕ್ಕೆ ಅನುರುದ್ಧರವರು ಒಂದು ಸಲಹೆ ನೀಡಿದರು. ಅದೇನೆಂದರೆ ಆಕೆ ಪುಣ್ಯ ಕಾರ್ಯಗಳನ್ನು ಮಾಡುವುದು. ಅದರಂತೆಯೇ ಆಕೆಯು ನಡೆಯಲು ಸಿದ್ಧಳಾದಳು. ಆಕೆಯು ತನ್ನ ಆಭರಣಗಳೆಲ್ಲಾ ಮಾರಿ, ಆ ಹಣದಲ್ಲಿ ಭಿಕ್ಷುಗಳಿಗಾಗಿ ಉಪಹಾರಗೃಹವನ್ನು ಕಟ್ಟಿಸಿದಳು. ಆಕೆಯು ಸಹಾ ಪ್ರತಿದಿನ ನೆಲವನ್ನು ಗುಡಿಸುತ್ತಿದ್ದಳು. ಕಟ್ಟಡ ನಿಮರ್ಾಣದ ಸಮಯದಲ್ಲಿ ನೀರನ್ನು ಹಿಡಿದು ತುಂಬಿಸುತ್ತಿದ್ದಳು.
            ಬುದ್ಧರಿಗೆ ಮತ್ತು ಸಂಘಕ್ಕೆ ಆಹಾರ ದಾನವನ್ನು ಸ್ವೀಕರಿಸಲು ಆಹ್ವಾನಿಸಿದಳು. ಅವರು ಅದರಂತೆಯೇ ಬಂದು ಆಹಾರ ಸ್ವೀಕರಿಸಿದರು. ನಂತರ ಭಗವಾನರು ಆಕೆಗೆ ಹೀಗೆ ಪ್ರಶ್ನಿಸಿದರು: "ಓ ರೋಹಿಣಿಯೇ ನಿನಗೆ ಈ ಕುಷ್ಟರೋಗವು ಹೇಗೆ ಬಂದಿತೆಂದು ತಿಳಿದಿದೆಯೇ?" ತನಗೆ ಗೊತ್ತಿಲ್ಲವೆಂದು ಆಕೆ ಹೇಳಿದಳು. ಆಗ ಭಗವಾನರು ಆಕೆಯ ಪೂರ್ವ ಜನ್ಮ ವೃತ್ತಾಂತವನ್ನ ತಿಳಿಸಿದರು. ಆಕೆಯು ಹಿಂದಿನ ಜನ್ಮದಲ್ಲಿ ಬನಾರಸ್ನ ರಾಣಿಯಾಗಿದ್ದಳು. ಅಲ್ಲಿ ರಾಜನಿಗೆ ಪ್ರಿಯಳಾದ ನರ್ತಕಿಯು ಸಹಾ ಇದ್ದಳು. ಒಂದುದಿನ ರಾಣಿಯು ಮತ್ಸರದಿಂದಾಗಿ ಆ ನರ್ತಕಿಯ ಹಾಸಿಗೆ ಮತ್ತು ಕಂಬಳಿಯಲ್ಲಿ ನವೆ-ತುರಿಕೆ ಉಂಟುಮಾಡುವ ಪುಡಿಯನ್ನು ಸಿಂಪಡಿಸಿದಳು.
            ಇದರಿಂದಾಗಿ ಆ ನರ್ತಕಿಯು ಅತಿಯಾಗಿ ನರಳಿ ದುಃಖಿಸಿದಳು. ಈ ಕರ್ಮಫಲದಿಂದಾಗಿ ರಾಣಿಯು ಈ ಜನ್ಮದಲ್ಲಿ ರೋಹಿಣಿಯಾಗಿ ಹುಟ್ಟಿರುವಾಗ ಆಕೆಗೆ ಕುಷ್ಠರೋಗವು ಬಂದಿತ್ತು. ಇದನ್ನೆಲ್ಲಾ ಭಗವಾನರು ವಿವರಿಸಿ ಈ ಗಾಥೆಯನ್ನು ನುಡಿದರು.

            ಈ ಗಾಥೆಯ ಅಂತ್ಯದಲ್ಲಿ ರೋಹಿಣಿಯು ಸೋತಪತ್ತಿ ಫಲವನ್ನು ಪಡೆದಳು. ಅದೇ ವೇಳೆಯಲ್ಲಿ ಆಕೆಯ ಕುಷ್ಠರೋಗವೂ ಪೂರ್ಣವಾಗಿ ಮಾಯವಾಯಿತು. ಈಗ ಆಕೆಯು ಸುಂದರ, ಆಕಷರ್ಿತ, ಹೊಳಪುಳ್ಳ ಚರ್ಮದ ಒಡತಿಯಾದಳು.

No comments:

Post a Comment