Saturday, 25 July 2015

dhammapada/dhammatthavagga/19.6/hatthaka

ಬೋಳುತಲೆಯವನೇ ಸಮಣನಲ್ಲ, ಪಾಪರಹಿತನೇ ಸಮಣ

"ತಲೆ ಮುಂಡನವಾದ ಮಾತ್ರಕ್ಕೆ ಸಮಣನಾಗುವುದಿಲ್ಲ,
ಅಶಿಸ್ತಿನಿಂದ, ಸುಳ್ಳಿನಿಂದ ಕೂಡಿದವರೂ
ಲೋಭಗಳ ಇಚ್ಛೆಗಳಿಂದ ಕೂಡಿರುವವರೂ
ಹೇಗೆ ತಾನೇ ಸಮಣರಾಗುವರು."                (264)

"ಯಾರು ಅಣುವಿನಷ್ಟು ಅಥವಾ ಸ್ಥೂಲವಾದ
ಸರ್ವರೀತಿಯ ಪಾಪಗಳನ್ನು ದಮಿಸಿರುವರೋ
ಪಾಪಗಳೆಲ್ಲದರಿಂದ ಜಯಶಾಲಿಯಾದ ಆತನೇ
ಸಮಣನೆಂದು ಕರೆಯಲ್ಪಡುವನು."               (265)

ಗಾಥ ಪ್ರಸಂಗ 19:6
ಹಟ್ಟಕನ ವಾದ ವೈಖರಿ


            ಹಟ್ಟಕನು ಶ್ರಾವಸ್ತಿಯಲ್ಲಿನ ಭಿಕ್ಷುವಾಗಿದ್ದನು. ಆತನಿಗೆ ಸ್ವಲ್ಪ ವಾದ ಮಾಡುವ ಪ್ರವೃತ್ತಿಯಿತ್ತು. ಹಾಗೆಂದ ಮಾತ್ರಕ್ಕೆ ಆತನು ಮಹಾ ಮೇಧಾವಿ ಅಥವಾ ಮಹಾ ವಾಗ್ಮಿಯೇನು ಆಗಿರಲಿಲ್ಲ. ಆತನು ಸೋಲುವ ಕ್ಷಣಗಳು ಹತ್ತಿರ ಬಂದಾಗ ತಕ್ಷಣ ಆತನು ಈ ರೀತಿಯ ಹೇಳಿಕೆಯಿಂದ ವಾದಗಳನ್ನು ಮುಂದೂಡುತ್ತಿದ್ದನು: "ಇಂತಹ ಸ್ಥಳದಲ್ಲಿ, ಇಂತಹ ಸಮಯದಲ್ಲಿ ನೀವೆಲ್ಲಾ ಬನ್ನಿ, ನನಗೀಗ ಕೆಲಸವಿದೆ, ನಾವು ವಾದವನ್ನು ಆಗ ಮುಂದುವರೆಸೋಣ." ಎಂದು. ಆದರೆ ಆ ಸ್ಥಳದಲ್ಲಿ ಆತನು ಅವರಿಗಿಂತ ಮುಂಚೆಯೇ ತೆರಳಿ ಜನರಿಗೆ ಹೀಗೆ ಹೇಳುತ್ತಿದ್ದನು: "ನೋಡಿ ಈ ಪ್ರತಿವಾದಿಗಳನ್ನು, ನನಗೆ ಹೆದರಿ ಬರಲೇ ಇಲ್ಲ. ನನ್ನನ್ನು ಎದುರಿಸಲು ಅವರಿಗೆ ಧೈರ್ಯವಾಗಲಿ, ಸಮರ್ಥವಾಗಲಿ ಇಲ್ಲವೇ ಇಲ್ಲ. ಇದರಿಂದಾಗಿ ಅವರು ಸೋತಂತೆ ಆಯಿತು. ನಾನೇ ನಿಜವಾದ ವಿಜಯಶಾಲಿಯಾಗಿದ್ದೇನೆ" ಎಂದು ನುಡಿದು ಪರಾರಿಯಾಗುತ್ತಿದ್ದನು. ಇದೇರೀತಿಯಲ್ಲಿ ಆತನು ಹಲವಾರು ಜನರಿಗೆ ಮುಖಭಂಗ ಮಾಡಿದ್ದನು.
            ಕೊನೆಗೆ ಈ ವಿಷಯವು ಭಗವಾನ್ ಬುದ್ಧರ ಬಳಿಗೂ ಹೋಯಿತು. ಭಗವಾನರು ಆತನನ್ನು ಕರೆಸಿದರು. ನಂತರ ಈ ರೀತಿ ವಿಚಾರಿಸಿದರು: "ಹಟ್ಟಕ, ಈ ಬಗೆಯಲ್ಲಿ ಸುದ್ದಿ ಕೇಳಲ್ಪಟ್ಟಿರುವೆ, ನೀನು ಸುಳ್ಳು ವಿಧದಿಂದ ವಾದಮಾಡಿ ನಂತರ ವಾದ ನಿಲ್ಲಿಸಿ, ಇಂತಹ ಕಡೆ ಬನ್ನಿ ಎಂದು ತಿಳಿಸಿ, ಅವರಿಗಿಂತ ಮುಂಚೆಯೇ ತಲುಪಿ, ಅವರೇ ಸೋತವರು ಎಂದು ವಿತಂಡವಾದ ಆಡುವೆಯಂತೆ, ಇದು ನಿಜವೇ?"
            "ಹೌದು ಭಗವಾನ್, ಇದು ನಿಜವೇ ಆಗಿದೆ."

            "ಓ ಹಟ್ಟಕ, ಏತಕ್ಕಾಗಿ ನೀನು ಹೀಗೆ ಮಾಡುವೆ, ಯಾರು ಸುಳ್ಳು ಹೇಳುವನೋ ಆತನಿಗೆ ಸಮಣನಾಗಲು ಹಕ್ಕೇ ಇಲ್ಲ. ಏಕೆಂದರೆ ಬೋಳುತಲೆಯಾದ ಮಾತ್ರಕ್ಕೆ ಯಾರೊಬ್ಬರು ಭಿಕ್ಷುವಾಗುವುದಿಲ್ಲ, ಬದಲಾಗಿ ಯಾರು ಸಣ್ಣ, ದೊಡ್ಡ ರೀತಿಯ ಪಾಪಗಳನ್ನು ಪರಾಜಯಗೊಳಿಸಿದವರೇ ನಿಜಕ್ಕೂ ಸಮಣ ಎನಿಸಿಕೊಳ್ಳುವರು" ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು.

No comments:

Post a Comment