Saturday, 4 July 2015

dhammapada/kodhavagga/17.7/atula

ಲೋಕದಲ್ಲಿ ಅನಿಂದಿತರು ಯಾರೂ ಇಲ್ಲ

"ಇದು ಅತ್ಯಂತ ಪುರಾತನವಾದುದು, ಅತುಲ,
ಕೇವಲ ಇಂದಿನದಲ್ಲ,
ನಿಂದಿಸುವರು ಮೌನಿಯನ್ನು,
ನಿಂದಿಸುವರು ಅತಿ ವಾಚಾಳಿಯನ್ನು,
ಮಿತಭಾಷಿಯನ್ನು ಸಹಾ ನಿಂದಿಸುವರು,
ಲೋಕದಲ್ಲಿ ಅನಿಂದಿತರು ಯಾರೂ ಇಲ್ಲ."      (227)

"ಈ ಹಿಂದೆಯಾಗಲಿ ಅಥವಾ ಭವಿಷ್ಯದಲ್ಲಾಗಲೀ
ಅಥವಾ ವರ್ತಮಾನದಲ್ಲೇ ಆಗಲಿ
ಪ್ರತ್ಯೇಕವಾಗಿ (ಪೂರ್ಣವಾಗಿ) ನಿಂದಿತನೂ, ಹಾಗೆಯೇ
ಪ್ರತ್ಯೇಕವಾಗಿ (ಪೂರ್ಣವಾಗಿ) ಪ್ರಶಂಸಿತನು ಯಾರೂ ಇಲ್ಲ."            (228)

"ಆದರೆ ಜ್ಞಾನಿಗಳು ಪ್ರಶಂಸಿಸಿದರೆ
ಅವರು ಅನುದಿನವೂ ನಿಷ್ಕಳಂಕನೆಂದು
ಪರೀಕ್ಷಿಸಿಯೇ ಹೇಳಿರುತ್ತಾರೆ, ಅಂತಹ
ಮೇಧಾವಿಯನ್ನು, ಪ್ರಜ್ಞಾಶೀಲನನ್ನು ಸಮಾಹಿತ (ಸಮಾಧಿ)
ಚಿತ್ತ ಪಡೆದವನನ್ನು..." (229)

"ಪುಟವಿಟ್ಟ ಬಂಗಾರದ ನಾಣ್ಯದಂತಿರುವವನನ್ನು
ಯಾರು ತಾನೇ ನಿಂದಿಸುವರು ?
ದೇವತೆಗಳು ಪ್ರಶಂಸಿಸುವರು
ಬ್ರಹ್ಮರೂ ಸಹಾ ಆತನಿಗೆ ಪ್ರಶಂಸಿಸುವರು."  (230)

ಗಾಥ ಪ್ರಸಂಗ 17:7
ಅತುಲನ ಅತೃಪ್ತತೆ


            ಶ್ರಾವಸ್ಥಿಯಲ್ಲಿ ಅತುಲನೆಂಬ ಉಪಾಸಕನಿದ್ದನು. ಆತನೊಂದಿಗೆ 500 ಜನರು ಉಪಾಸಕರಿದ್ದರು. ಒಮ್ಮೆ ಅತುಲನು ತನ್ನ ಈ ಮಿತ್ರರೊಂದಿಗೆ ಧಮ್ಮೋಪದೇಶ ಕೇಳಲು ವಿಹಾರಕ್ಕೆ ಬಂದನು. ಆಗ ಅವರು ಪೂಜ್ಯ ರೇವತರ ಬಳಿ ಧಮ್ಮ ಪಾಲಿಸಲು ಅವರ ಬಳಿಗೆ ಬಂದು ವಂದಿಸಿ ಗೌರವಯುತವಾಗಿ ಒಂದೆಡೆ ಕುಳಿತರು. ಆದರೆ ರೇವತರು ಆಗ ವಿರಾಗ ಮತ್ತು ಏಕಾಂತತೆ ಅತಿ ಇಷ್ಟಪಟ್ಟು, ಏಕಾಂಕಿ ಸಿಂಹದ ರೀತಿ ಅವರು ಮೌನಿಯಾದರು. ಹೀಗಾಗಿ ಅವರು ಏನನ್ನೂ ಮಾತನಾಡಲಿಲ್ಲ. ಅತ್ಯಂತ ತಟಸ್ಥರು ಮತ್ತು ಶಾಂತ ಪುರುಷರಂತೆ ಕಂಡರು.
            "ಈ ಪೂಜ್ಯರು ಏನೂ ಹೇಳಲಾರರು" ಎಂದು ಉದ್ರೇಕಿತನಾದ ಅತುಲ ಅಲ್ಲಿಂದ ಎದ್ದು ಸಾರಿಪುತ್ರರಲ್ಲಿಗೆ ಬಂದು ಅವರನ್ನು ಗೌರವದಿಂದ ವಂದಿಸಿ ಒಂದೆಡೆ ಕುಳಿತರು. "ಉಪಾಸಕ, ಯಾವ ಉದ್ದೇಶದಿಂದ ಇಲ್ಲಿಗೆ ಬಂದಿರುವಿರಿ?" ಎಂದು ಸಾರಿಪುತ್ತರು ಅವರಿಗೆ ಕೇಳಿದರು.
            "ಭಂತೆ, ನಾನು ಈ ಎಲ್ಲಾ ಉಪಾಸಕರನ್ನು ಧಮ್ಮ ಆಲಿಸಲು ಕರೆತಂದೆನು, ಆದರೆ ಪೂಜ್ಯ ರೇವತರು ಏನನ್ನೂ ನುಡಿಯಲಿಲ್ಲ. ಹೀಗಾಗಿ ನಾವು ಇಲ್ಲಿಗೆ ಬಂದೆವು" ಎಂದನು.

            "ಹಾಗಾದರೆ ಉಪಾಸಕರೇ, ಕುಳಿತು ಗಮನವಿಟ್ಟು ಕೇಳಿ" ಎಂದು ಸಾರಿಪುತ್ರರು ಅಭಿಧಮ್ಮದ ಹಂತದವರೆಗೆ ವಿಸ್ತಾರವಾಗಿ ಬೋಧನೆ ಮಾಡಿದರು. ಅದನ್ನು ಆಲಿಸಿದ ಆ ಉಪಾಸಕರಿಗೆ ಬಹಳಷ್ಟು ವಿಷಯಗಳು ಅರ್ಥವೇ ಆಗಲಿಲ್ಲ. ಅವರು ಹೀಗೆ ಯೋಚಿಸಿದರು: "ಈ ಅಭಿಧಮ್ಮವು ಅತ್ಯಂತ ಕ್ಲಿಷ್ಟವಾದುದು, ಈ ಅತ್ಯಂತ ಉನ್ನತ ಬೋಧನೆ ನಮಗೆ ಜೀರ್ಣವೇ ಆಗಲಿಲ್ಲ" ಎಂದುಕೊಂಡು ಅವರು ಅತೃಪ್ತರಾಗಿ ಅಲ್ಲಿಂದ ಪೂಜ್ಯ ಆನಂದರ ಬಳಿಗೆ ಬಂದರು.
            "ಉಪಾಸಕರೇ, ಏನು ವಿಷಯ?" ಎಂದು ಪೂಜ್ಯ ಆನಂದರು ಕೇಳಿದಾಗ ಅವರು ನಡೆದ ವಿಷಯ ತಿಳಿಸಿ ಹೀಗಾಗಿ ತಮ್ಮ ಬಳಿಗೆ ಬಂದಿರುವೆವು" ಎಂದರು
.
            ಆಗ ಪೂಜ್ಯ ಆನಂದರು ಅವರಿಗೆ ಅತ್ಯಂತ ಸಂಕ್ಷಿಪ್ತವಾಗಿ, ಸಾರಭರಿತವಾಗಿ ಅರ್ಥವಾಗುವಂತೆ ಧಮ್ಮವನ್ನು ಬೋಧಿಸಿದರು.
            ಆದರೆ ಅವರು ಆಗಲೂ ಅತೃಪ್ತರಾದರು; "ಇದು ತೀರ ಸಂಕ್ಷಿಪ್ತವಾಯಿತು" ಎಂದು ಅಸಂತೃಪ್ತರಾಗಿ ಕೊನೆಗೆ ಅವರು ಭಗವಾನರ ಬಳಿಗೆ ಬಂದರು. ಆಗ ಭಗವಾನರು ಅವರಿಗೆ ಕೇಳಿದರು: "ಉಪಾಸಕರೇ, ಏನು ವಿಷಯ?"
            "ಧಮ್ಮವನ್ನು ಆಲಿಸಲು ಬಂದಿರುವೆವು ಭಗವಾನ್" ಎಂದರು.
            ಆದರೆ ನೀವು ಆಗಲೇ ಧಮ್ಮವನ್ನು ಕೇಳಿದ್ದೀರಲ್ಲಾ!"
            "ಹೌದು ಭಗವಾನ್, ಆದರೆ ನಾವು ರೇವತರ ಬಳಿಗೆ ಹೋದಾಗ ಅವರ ಮೌನ ಕಂಡು ಇರಲಾರದೆ ಪೂಜ್ಯ ಸಾರಿಪುತ್ತರ ಬಳಿಗೆ ಬಂದೆವು. ಆದರೆ ಅವರ ಬೋಧನೆ ಅತ್ಯಂತ ಕ್ಲಿಷ್ಟಕರ ಹಾಗು ವಿಸ್ತಾರವಾಗಿತ್ತು. ಅದನ್ನು ಜೀಣರ್ಿಸಲು ಆಗದೆ, ಅಲ್ಲಿಂದ ಪೂಜ್ಯ ಆನಂದರ ಬಳಿಗೆ ಬಂದೆವು. ಆದರೆ ಅವರೂ ಸಹಾ ಅತ್ಯಂತ ಸಂಕ್ಷಿಪ್ತವಾಗಿ ಬೋಧಿಸಿದರು. ಹೀಗೆ ನಾವು ಅಸಂತೃಪ್ತರಾಗಿ ತಮ್ಮ ಬಳಿಗೆ ಬಂದಿರುವೆವು" ಎಂದನು ಅತುಲ.


            ಆಗ ಭಗವಾನರು ಹೀಗೆ ಹೇಳಿದರು: "ಅತುಲ, ಇದು ಬಹಳ ಹಿಂದಿನಿಂದಲೂ ಬಂದಿರುವಂತಹುದು, ಈಗಿನದೇನಲ್ಲ. ಈ ಲೋಕದಲ್ಲಿ ಮೌನಿಯು, ಅತಿ ವಾಚಾಳಿಯು ಅಷ್ಟೇ ಏಕೆ, ಮಿತಭಾಷಿಯು ಸಹಾ ನಿಂದೆಗೆ ಗುರಿಯಾಗುತ್ತಾನೆ. ಜಗತ್ತಿನಲ್ಲಿ ಪ್ರತ್ಯೇಕವಾಗಿ ಪ್ರತಿಯೊಬ್ಬರಿಗೂ ಪ್ರಶಂಸಿತರೇ, ಹಾಗೆಯೇ ಈ ಜಗತ್ತಿನಲ್ಲಿ ಪ್ರತ್ಯೇಕವಾಗಿ ಪ್ರತಿಯೊಬ್ಬರೂ ನಿಂದಿತರೇ ಆಗಿದ್ದಾರೆ. ಪೂರ್ಣವಾಗಿ ಪ್ರಶಂಸಿತರು ಹಾಗೆಯೇ ಪೂರ್ಣವಾಗಿ ನಿಂದಿತರೂ ಯಾರೂ ಇಲ್ಲ. ರಾಜರಾಗಿಯು ಸಹಾ ಅವರಿಗೂ ಸ್ತುತಿ ನಿಂದೆ ತಪ್ಪಿದ್ದಲ್ಲ. ಅಷ್ಟೇ ಏಕೆ, ಬುದ್ಧರು ಸಹಾ ಸ್ತುತಿ ನಿಂದೆಗಳಿಗೆ ಒಳಗಾಗಿದ್ದಾರೆ. ಆದರೆ ಬಹುಜನರ ಸ್ತುತಿ ನಿಂದೆಗಿಂತ, ಜ್ಞಾನಿಯ ಸ್ತುತಿ ನಿಂದೆಗೆ ಮೌಲ್ಯ ನೀಡಬೇಕು. ಏಕೆಂದರೆ ಬಹುಜನರ ಸ್ತುತಿ ನಿಂದೆಗೆ ಸುಪರಿಣಾಮವಿಲ್ಲ, ಜ್ಞಾನಿಗಳಿಂದ ಪರೀಕ್ಷಿಸಲ್ಟಟ್ಟು ನಿಂದೆಗೆ ಗುರಿಯಾಗಿದ್ದರೇ ಆತನು ದೋಷಿಯೇ ಹೌದು. ಹಾಗೆಯೇ ಜ್ಞಾನಿಗಳಿಂದ ಪ್ರಶಂಸಿತವಾದರೆ ಆತನು ಅದಕ್ಕೆ ಅರ್ಹನೂ ಹೌದು" ಎಂದು ಹೇಳಿ ಈ ಮೇಲಿನ ಗಾಥೆಗಳನ್ನು ನುಡಿದರು.

No comments:

Post a Comment