ಕಾಯಾ,
ವಾಚಾ,
ಮನಸಾ ಪರಿಶುದ್ಧರಾಗಿ
"ಕಾಯದಿಂದಾಗುವ
ಉದ್ವೇಗಗಳಿಂದ ರಕ್ಷಿಸಿಕೊಳ್ಳಲಿ
ಕಾಯದಿಂದ ಸದಾ
ಸಂಯಮದಿಂದಿರಲಿ
ಕಾಯದಿಂದ
ದುಶ್ಚಾರಿತ್ರ್ಯತೆ ತೊಡೆದುಹಾಕಲಿ
ಕಾಯದಿಂದ ಸುಚಾರಿತ್ರ್ಯ
ನೆಲೆಗೊಳ್ಳಲಿ." (231)
"ಮಾತಿನಿಂದಾಗುವ
ಉದ್ವೇಗಗಳಿಂದ ರಕ್ಷಿಸಿಕೊಳ್ಳಿ,
ಮಾತಿನಲ್ಲಿ ಸದಾ
ಸಂಯಮದಿಂದಿರಲಿ
ಮಾತಿನಿಂದ
ದುಶ್ಚಾರಿತ್ರ್ಯತೆ ತೊಡೆದುಹಾಕಲಿ
ಮಾತನಿಂದ ಸುಚಾರಿತ್ರತೆ
ನೆಲೆಗೊಳ್ಳಲಿ." (232)
"ಮನಸ್ಸಿನಿಂದಾಗುವ
ಉದ್ವೇಗಗಳಿಂದ ರಕ್ಷಿಸಿಕೊಳ್ಳಲಿ,
ಮನಸ್ಸಿನಲ್ಲಿ ಸದಾ
ಸಂಯಮದಿಂದಿರಲಿ
ಮನಸ್ಸಿನಿಂದ
ದುಶ್ಚಾರಿತ್ರ್ಯತೆ ತೊಡೆದುಹಾಕಲಿ
ಮನಸ್ಸಿನಲ್ಲಿ ಸುಚಾರಿತ್ರತೆ
ನೆಲೆಗೊಳ್ಳಲಿ." (233)
"ಕಾಯದಲ್ಲಿ
ಧೀಮಂತರು ಸಂಯಮವುಳ್ಳವರಾಗುತ್ತಾರೆ,
ಹಾಗೆಯೇ ಮಾತಿನಲ್ಲೂ
ಸಂಯಮದಿಂದಿರುತ್ತಾರೆ
ಮನಸ್ಸಿನಲ್ಲಿಯೂ
ಧೀಮಂತರು ಸಂಯಮಿತರಾಗುತ್ತಾರೆ
ಹೀಗಾಗಿ ಅವರು ಸಂಪೂರ್ಣ
ಸಂಯಮಶೀಲರಾಗಿರುತ್ತಾರೆ." (234)
ಗಾಥ ಪ್ರಸಂಗ 17:8
ಆರು ಭಿಕ್ಷುಗಳ ಗದ್ದಲ
ಆಗ ಭಗವಾನರು ರಾಜಗೃಹದ ವೇಲುವನದಲ್ಲಿದ್ದರು.
ಆಗ ಆರು ಭಿಕ್ಷುಗಳ ಗುಂಪೊಂದು ಮರದ ಚಪ್ಪಲಿಗಳನ್ನು ಹಾಕಿಕೊಂಡು ಕೈಯಲ್ಲಿ ದಂಡವನ್ನು
ಹಿಡಿದುಕೊಂಡು ಕಲ್ಲಿನ ನೆಲದ ಮೇಲೆ ನಡೆಯುತ್ತಿದ್ದರು. ಆಗ ಚಪ್ಪಲಿಗಳ ಮತ್ತು ದಂಡವೂರುತ್ತಿದ್ದ
ಶಬ್ದವು ಜೋರಾಗಿ ಕೇಳಿಸುತ್ತಿತ್ತು. ಇದರಿಂದಾಗಿ ಧ್ಯಾನಿಸುತ್ತಿದ್ದಂತಹ ಇತರ ಭಿಕ್ಷುಗಳಿಗೆ
ಅತಿಯಾದ ತೊಂದರೆಯಾಗುತ್ತಿತ್ತು. ಭಗವಾನರು ಸಹಾ ಈ ಕಟಕಟ ಶಬ್ದವನ್ನು ಕೇಳಿದರು. ಪೂಜ್ಯ ಆನಂದರಿಗೆ
ಹೀಗೆ ಹೇಳಿದರು: "ಆನಂದ, ಆ ಶಬ್ದ ಏನದು?"
"ಭಂತೆ, ಆರು ಭಿಕ್ಷುಗಳಿಗೆ ಮರದ ಚಪ್ಪಲಿ ಸಿಕ್ಕಿದೆ. ಅವರ ನಡಿಗೆಯಿಂದಾದ
ಶಬ್ದವಿದು."
ಆಗ ಭಗವಾನರು ಆ ಆರು ಭಿಕ್ಷುಗಳನ್ನು
ಕರೆಸಿದರು: "ಓ ಭಿಕ್ಷುಗಳೇ, ನೀವು ಶಾಂತಿ ಮತ್ತು ನಿಶ್ಶಬ್ದತೆಗಳ ಪ್ರತೀಕವಾಗಬೇಕಾಗಿದೆ.
ಹೀಗಾಗಿ ನೀವು ಗದ್ದಲವನ್ನು
ಮಾಡಬಾರದು, ಗದ್ದಲವುಂಟುಮಾಡುವಂತಹ ಮರದ
ಚಪ್ಪಲಿ ಹಾಕಬೇಡಿ. ನೀವು ಕಾಯದಿಂದ ಸಂಯಮದಿಂದಿರಬೇಕು, ಮಾತಿನಿಂದಲೂ ಸಂಯಮದಿಂದಿರಬೇಕು ಮತ್ತು ಮನಸ್ಸಿನಿಂದಲೂ
ಸಂಯಮದಿಂದಿರಬೇಕು. ಹೀಗೆ ಎಲ್ಲದರಲ್ಲೂ ನೀವು ಸಂಯಮ ದಿಂದಿದ್ದು ಉನ್ನತಿ ಸಾಧಿಸಬೇಕು" ಎಂದು
ಈ ಮೇಲಿನ ಗಾಥೆಗಳನ್ನು ನುಡಿದರು.
No comments:
Post a Comment