ವಯಸ್ಸಿನಿಂದ
ಹಿರಿಯನಲ್ಲ, ನಿರ್ಮಲತೆಯಿಂದಲೇ ಹಿರಿಯ
"ಶಿರವು (ತಲೆಯು)
ಬೆಳ್ಳಗಾದ ಮಾತ್ರಕ್ಕೆ
ಥೇರನಾಗುವುದಿಲ್ಲ
(ಹಿರಿಯ)
ಆತನು ವಯಸ್ಸಿನಲ್ಲಿ
ಪರಿಪಕ್ವನಷ್ಟೇ,
ಆತನು ವ್ಯರ್ಥವಾಗಿ
ವೃದ್ಧಿ ಹೊಂದಿದ ವೃದ್ಧನಷ್ಟೇ." (260)
"ಯಾರಲ್ಲಿ
ಸತ್ಯಸಂಧತೆ, ಧಮ್ಮಸಂಪನ್ನತೆ
ಅಹಿಂಸೆ, ಸಂಯಮ ಇದೆಯೋ
ತಮ್ಮನ್ನು
ಧಮಿಸಿಕೊಂಡಿರುವರೋ ಹಾಗು
ಮಲಗಳಿಂದ ಮುಕ್ತರೋ,
ಧೀಮಂತರೋ,
ಅಂತಹವರನ್ನು ಥೇರರೆಂದು
ಕರೆಯಬಹುದು." (261)
ಗಾಥ ಪ್ರಸಂಗ 19:4
ಲಕುಂಟಿಕ ಭದ್ದಿಯನ
ಹಿರಿತನ
ಒಮ್ಮೆ ಲಕುಂಟಕ ಭದ್ದಿಯ ಭಗವಾನರನ್ನು ನೋಡಲು
ಜೇತವನ ವಿಹಾರಕ್ಕೆ ಹೊರಟರು. ಅವರು ಯುವಕರಾಗಿದ್ದರು. ಆದರೆ ತುಸು ಕುಳ್ಳರಾಗಿದ್ದರು. ಅವರು
ಭಗವಾನರನ್ನು ಭೇಟಿಮಾಡಿ ನಂತರ ಅಲ್ಲಿಂದ ನಿರ್ಗಮಿಸಿದರು. ಅದೇವೇಳೆ 30 ವನವಾಸಿ ಭಿಕ್ಷುಗಳು
ಭಗವಾನರನ್ನು ಕಾಣಲು ಬಂದರು. ಆಗ ಭಗವಾನರಿಗೆ ಅವರು ಅರಹಂತರಾಗಲು ಪಕ್ವಕಾಲ ಎಂದು ಅರಿವಾಯಿತು. ಆಗ
ಭಗವಾನರು ಅವರಿಗೆ ಹೀಗೆ ಪ್ರಶ್ನಿಸಿದರು. "ನೀವು ಥೇರರು (ಹಿರಿಯರು) ಇಲ್ಲಿಂದ
ಹೊರಹೋಗಿದ್ದನ್ನು ನೋಡಿದಿರಲ್ಲವೇ?"
"ಇಲ್ಲ ಭಗವಾನ್, ನಾವು ನೋಡಿಲ್ಲ."
"ನೀವು ನೋಡಿಲ್ಲವೇ ?"
"ನಾವು ಕೇವಲ ಸಾಮಣೇರರನ್ನು ನೋಡಿದೆವು
ಭಗವಾನ್."
"ಭಿಕ್ಷುಗಳೇ, ಅವರು ಸಾಮಣೇರರಲ್ಲ, ಅವರು ಥೇರರಾಗಿರುವರು."
"ಆದರೆ ಭಗವಾನ್ ಅವರು ಅತ್ಯಂತ
ಕಿರಿಯರು, ಯುವಕರಾಗಿರುವರು."
"ಭಿಕ್ಷುಗಳೇ, ನಾನು ವಯಸ್ಸಿನಿಂದ ಯಾರಿಗೂ ಹಿರಿಯನೆಂದು ಹೇಳಲಾರೆ. ಬದಲಿಗೆ
ಯಾರು ಸತ್ಯಗಳನ್ನು ಗ್ರಹಿಸಿರುವರೋ ಮತ್ತು ಪರರಲ್ಲಿ ದಯೆವುಳ್ಳವರು ಅವರೇ
ಹಿರಿಯರಾಗಿರುವರು" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.
No comments:
Post a Comment