Saturday, 25 July 2015

dhammapada/dhammatthavagga/19.7/brahmin

ಪರಿಶುದ್ಧವಾಗಿ ಜೀವಿಸುವವರೇ ಭಿಕ್ಷು

"ಪರರು ನೀಡುವ ಆಹಾರದಿಂದ
ಜೀವಿಸಿದ ಮಾತ್ರಕ್ಕೆ ಭಿಕ್ಷುವಾಗುವುದಿಲ್ಲ,
ವಿಷಧಮ್ಮವನ್ನು (ದುರಾಚಾರದ ಧಮ್ಮವನ್ನು)
ಅಪ್ಪದವರು, ಇಡೀ ಭಿಕ್ಷು ಶೀಲವನ್ನು            
ಪಾಲಿಸುವವರೇ ಭಿಕ್ಷುಗಳಾಗುತ್ತಾರೆ."           (266)

"ಯಾರು ಪುಣ್ಯವನ್ನು ಹಾಗು ಪಾಪವನ್ನು
ಮೀರಿರುವರೋ, ಬ್ರಹ್ಮಚರ್ಯೆಯುತ ಶ್ರೇಷ್ಠ
ಜೀವನ ಪಾಲಿಸಿರುವರೋ, ಈ ಲೋಕದಲ್ಲಿ
ಪ್ರಾಜ್ಞಯುತವಾಗಿ ಚಿಂತಿಸಿ ಜೀವಿಸುವರೋ
ಅಂತಹವರನ್ನು ಭಿಕ್ಷು ಎನ್ನುವರು."                (267)

ಗಾಥ ಪ್ರಸಂಗ 19:7
ತನ್ನನ್ನು ಭಿಕ್ಷುವೆಂದು ಭಾವಿಸಿದ ಬ್ರಾಹ್ಮಣ


            ಶ್ರಾವಸ್ತಿಯಲ್ಲಿ ಬ್ರಾಹ್ಮಣನೊಬ್ಬನಿದ್ದನು. ಆತನು ಮನೆಯಿಂದ ನಿವೃತ್ತಿ ಹೊಂದಿ ಭಿಕ್ಷೆಯಿಂದ ಜೀವನ ಮಾಡುತ್ತಿದ್ದನು. ಆದರೆ ಆತನು ಯಾವುದೇ ಉನ್ನತ ಶೀಲ ಪಾಲಿಸುತ್ತಿರಲಿಲ್ಲ. ಆದರೂ ತನ್ನನ್ನು ಹೀಗೆ ಭಿಕ್ಷುವೆಂದು ಭಾವಿಸಿದನು: "ಬೌದ್ಧ ಭಿಕ್ಷುಗಳು ಪರರು ನೀಡಿದ ಆಹಾರದಿಂದಲೇ ಜೀವಿಸುವರು. ನಾನು ಸಹಾ ಹಾಗೆಯೇ ಇರುವುದರಿಂದ ನನ್ನನ್ನು ಅವರು ಭಿಕ್ಷುವೆಂದೇ ಪರಿಗಣಿಸಲಿ." ಹೀಗೆಯೇ ಯೋಚಿಸುತ್ತಾ ಆತನು ಬುದ್ಧರ ಬಳಿಗೆ ಬಂದನು. ನಂತರ ಹೀಗೆ ಹೇಳಿದನು: "ಭಗವಾನ್, ನಾನು ಸಹಾ ಭಿಕ್ಷೆಯಿಂದಲೇ ಆಹಾರ ಪಡೆಯುತ್ತಿರುವೆ, ನನ್ನನ್ನು ಭಿಕ್ಷುವೆಂದೇ ಕರೆಯುವಂತಾಗಲಿ."

            ಆಗ ಭಗವಾನರು ಆತನಿಗೆ ಹೀಗೆ ನುಡಿದರು: "ಬ್ರಾಹ್ಮಣನೇ, ನಾನು ಭಿಕ್ಷೆಯಿಂದ ಜೀವಿಸುತ್ತಿರುವವರಿಗೆ, ಭಿಕ್ಷುವೆನ್ನುವುದಿಲ್ಲ. ಏಕೆಂದರೆ ಭಿಕ್ಷುಕನು ಎಲ್ಲಾರೀತಿಯ ಶೀಲಗಳನ್ನು ಪಾಲಿಸುವುದಿಲ್ಲ, ಯಾರು ಉನ್ನತವಾದ ಶೀಲಗಳನ್ನು, ಧುತಾಂಗಗಳನ್ನು ಪಾಲಿಸುತ್ತಾ ಧ್ಯಾನಶೀಲನೋ, ಯಾರು ಖಂದಗಳನ್ನು ಅಳೆಯುತ್ತಾ ವಿಶ್ಲೇಷಿಸುವನೋ, ಧಮ್ಮಚಾರಿಯೋ ಆತನು ಮಾತ್ರ ಭಿಕ್ಷು" ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು. 

No comments:

Post a Comment