Monday, 13 July 2015

dhammapada/malavagga/18.5/virtuelesswife

ಅವಿದ್ಯೆಯೇ ಪರಮ ಮಲ

"ಸ್ತ್ರೀಗೆ ದುಶ್ಚರಿತೆಯೇ ಮಲ
ಸ್ವಾರ್ಥವು ದಾನಿಗೆ ಮಲ
ಪಾಪ ಧಮ್ಮವು ಈ ಲೋಕದಲ್ಲಿ ಮತ್ತು
ಪರಲೋಕದಲ್ಲಿ ನಿಜಕ್ಕೂ ಮಲವಾಗಿದೆ."        (242)

"ಈ ಎಲ್ಲಾ ಮಲಗಳಿಂದ ನೀಚವಾದದ್ದು,
ಪರಮ ಮಲವು ಅವಿದ್ಯೆಯಾಗಿದೆ.
ಈ ಮಲವನ್ನು ತೊಡೆದುಹಾಕಿ
ನಿರ್ಮಲರಾಗಿರಿ; ಓ ಭಿಕ್ಷುಗಳೇ."   (243)

ಗಾಥ ಪ್ರಸಂಗ 18:5
ದುರಾಚಾರಿ ಪತ್ನಿಯ ಶೀಲವಂತ ಪತಿ

            ಒಬ್ಬ ಯುವಕನು ಸಮಾನಶ್ರೇಣಿಯ (ಜಾತಿಯ) ಸ್ತ್ರೀಯೊಂದಿಗೆ ವಿವಾಹವಾದನು. ಆದರೆ ವಿವಾಹವಾದ ದಿನದಿಂದಲೂ ಆಕೆ ದುರಾಚಾರಿಯಾಗಿದ್ದಳು, ವ್ಯಭಿಚಾರಿಣಿ ಯಾಗಿದ್ದಳು. ಆಕೆಯ ಈ ಕೃತ್ಯದಿಂದಾಗಿ ಆ ಯುವಕನು ತನ್ನ ಮಿತ್ರರಿಗೆ ಆಗಲಿ, ಜನರಿಗೆ ಆಗಲಿ ಮುಖ ತೋರಿಸಲು ನಾಚಿಕೊಂಡನು, ದುಃಖಿಸಿದನು. ಮುಖಾಮುಖಿ ಯಾಗಲು ಹಿಂದುಮುಂದು ನೋಡುತ್ತಿದ್ದನು. ಬುದ್ಧರ ಬಳಿಗೆ ಬರಲು ಹಿಂದೇಟು ಹಾಕುತ್ತಿದ್ದನು. ಒಂದುದಿನ ಬುದ್ಧರನ್ನು ಭೇಟಿ ಮಾಡಿಯೇ ಬಿಟ್ಟನು. "ಉಪಾಸಕನೇ, ಏತಕ್ಕಾಗಿ ಬಹುದಿನಗಳಿಂದ ಕಾಣಿಸುತ್ತಿಲ್ಲ" ಎಂದು ಭಗವಾನರು ಪ್ರಶ್ನಿಸಿದರು.


            ಆಗ ಆ ಯುವಕನು ನಡೆದ ವಿಷಯವೆಲ್ಲಾ ತಿಳಿಸಿಬಿಟ್ಟನು. ಆಗ ಭಗವಾನರು ಹೀಗೆ ಹೇಳಿದರು: ಯುವಕನೇ, ನಿನ್ನ ಹಿಂದಿನ ಜನ್ಮದಲ್ಲೇ ನಾನು ನಿನಗೆ ಹೀಗೆ ಹೇಳಿದ್ದೆ: "ಕೆಲವು ಸ್ತ್ರೀಯರು ನದಿಗಳಂತೆ, ರಸ್ತೆಗಳಂತೆ, ಛತ್ರದಂತೆ, ಸಭಾಂಗಣದಂತೆ, ಚಪ್ಪರದಂತೆ, ಅವರ ಕಾಲ ಅರಿಯಲಾಗುವುದಿಲ್ಲ. ಆದ್ದರಿಂದ ವಿವೇಕಿಗಳು ಅವರಲ್ಲಿ ಕೋಪಗೊಳ್ಳಬಾರದು, ನಿರೀಕ್ಷೆಯೂ ಇಡಬಾರದು" ಎಂದು ನುಡಿದು ಭಗವಾನರು ಆ ಜಾತಕ ಕಥೆ (ಹಿಂದಿನ ಜನ್ಮವೃತ್ತಾಂತ) ತಿಳಿಸಿದರು. ನಂತರ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು. 

No comments:

Post a Comment