Thursday 15 January 2015

dhammapada/appamadavagga/2.8/mindful

ಜಾಗೃತನು ಉನ್ನತಿಗೇರುತ್ತಾನೆ
ಎಚ್ಚರಿಕೆಯಲ್ಲಿ ಆನಂದಿಸುವ ಭಿಕ್ಷುವು ಎಚ್ಚರಿಕೆಯಿಲ್ಲದಿರುವಿಕೆಯಲ್ಲಿ ಭಯಪಡುತ್ತಾನೆ. ಆತನು ಅಗ್ನಿಯಂತೆ ಎಲ್ಲಾ ಸಣ್ಣ ದೊಡ್ಡ ಸಂಕೋಲೆಗಳನ್ನು ಸುಡುತ್ತಾ ಮುಂದುವರೆಯುತ್ತಾನೆ.        (31)

ಗಾಥ ಪ್ರಸಂಗ 2:8
ಕಾಡಾಗ್ನಿಯಂತೆ ದಹಿಸು ನೀ ಎಲ್ಲಾ ಬಂಧನಗಳನ್ನು
                ಒಮ್ಮೆ ಒಬ್ಬ ಭಿಕ್ಷು ಬುದ್ಧರಿಂದ ಧ್ಯಾನದ ವಿಷಯವನ್ನು ಪಡೆದು ಅರಣ್ಯದಲ್ಲಿ ಧ್ಯಾನ ಮಾಡತೊಡಗಿದನು. ಆತನು ಕಠಿಣವಾಗಿಯೆ ಪರಿಶ್ರಮಿಸಿ ಧ್ಯಾನಿಸಿದನು. ಆದರೂ ಧ್ಯಾನದಲ್ಲಿ ಅತ್ಯಲ್ಪ ಲಾಭವನ್ನು ಗಳಿಸಿದನು. ಪರಿಣಾಮವಾಗಿ ಕುಗ್ಗಿದ ಆತನು ನಿರಾಶನಾದನು. ಆತನು ಬುದ್ಧರಿಂದ ಮತ್ತಷ್ಟು ಮಾಹಿತಿ ಪಡೆಯುವ ಉದ್ದೇಶದಿಂದ ಜೇತವನ ವಿಹಾರಕ್ಕೆ ಬರತೊಡಗಿದನು. ದಾರಿಯಲ್ಲಿ ದೊಡ್ಡ ಕಾಡ್ಗಿಚ್ಚು ಹಬ್ಬಿತ್ತು. ಆತನು ಒಂದು ದೊಡ್ಡ ಬೆಟ್ಟವೇರಿದನು. ಅಲ್ಲಿಂದ ಬೆಂಕಿಯನ್ನು ವೀಕ್ಷಿಸಿದನು. ಆ ಬೆಂಕಿಯು ಸಣ್ಣದನ್ನು, ದೊಡ್ಡದನ್ನು, ಯಾವುದನ್ನೂ ಬಿಡದೆ ದಹಿಸುತ್ತಿತ್ತು. ಇದನ್ನು ಕಂಡ ಆತನು ಚಿಂತನೆಗೆ ಜಾರಿದನು. ಹೇಗೆ ಬೆಂಕಿಯು ಎಲ್ಲವನ್ನು ದಹಿಸುತ್ತಿದೆಯೋ ಹಾಗೆಯೇ ನಾನು ಸಹಾ ನನ್ನ ಪ್ರಜ್ಞಾಶಕ್ತಿಯಿಂದ, ವೀರ್ಯಬಲದಿಂದ ಸಣ್ಣ ಮತ್ತು ದೊಡ್ಡ ಬಂಧನಗಳನ್ನೆಲ್ಲಾ ಸುಟ್ಟು ಹಾಕಿದರೆ ಹೇಗೆ?
                ಆ ಕ್ಷಣದಲ್ಲೇ ಆತನ ಉದಾತ್ತ ಯೋಚನೆಯು ಬುದ್ಧರಿಗೆ ಗೊತ್ತಾಯಿತು. ಅವರು ತಕ್ಷಣ ತೇಜೋಸ್ವರೂಪಿಯಾಗಿ ಆತನ ಮುಂದೆ ಪ್ರತ್ಯಕ್ಷರಾದರು ಮತ್ತು ಹೀಗೆ ಹೇಳಿದರು: ನೀನು ನಿಜವಾಗಿಯೂ ಯೋಗ್ಯವಾದ ಹಾದಿಯಲ್ಲೇ ಇದ್ದೀಯೆ. ಅದೇರೀತಿ ಚಿಂತಿಸು, ಮುಂದುವರೆಸು, ಹಾಗೇ ಮಾಡು. ಹೇಗೆ ಬೆಂಕಿಯು ಚಿಕ್ಕ ಮತ್ತು ದೊಡ್ಡದೆನ್ನದೆ ಎಲ್ಲವನ್ನು ಸುಟ್ಟು ಹಾಕುವುದೋ ಹಾಗೆಯೇ ಓ ಭಿಕ್ಷು ನೀನು ಹಾಗೇ ಮಾಡು. ಜಾಗರೂಕತೆಯಲ್ಲಿ ಭಯಪಡುವ ಭಿಕ್ಷುವು ಎಲ್ಲಾ ಬಂಧನಗಳನ್ನು ಸುಟ್ಟುಹಾಕುತ್ತಾನೆ.

                ಆ ಭಿಕ್ಷು ಸ್ಫೂತರ್ಿ ಹೊಂದಿ, ಧ್ಯಾನಿಸಿ, ಜ್ಞಾನೋದಯ ಹೊಂದಿ ಅರಹಂತತ್ವ ಪಡೆದನು. ಆಗ ಬುದ್ಧರು ಹೇಳುವ ಗಾಥೆಯಿದು.

No comments:

Post a Comment