Thursday 29 January 2015

dhammapada/cittavagga/3.9/surayya

ಸಮ್ಮಾ ಮಾರ್ಗದಶರ್ಿತ ಮನಸ್ಸಿನಿಂದ ಮಹಾ ಶ್ರೇಯಸ್ಸು ಲಭಿಸುತ್ತದೆ
ಯಾವುದನ್ನು ಮಾತೆ ಆಗಲಿ ಅಥವಾ ಪಿತ ಆಗಲಿ ಅಥವಾ ಯಾವುದೇ ಬಂಧುವಾಗಲಿ (ಹಿತವನ್ನು) ಮಾಡಬಲ್ಲರೋ, ಅವೆಲ್ಲಕ್ಕಿಂತ ಹೆಚ್ಚಿನ ಶ್ರೇಯಸ್ಸನ್ನು ಯೋಗ್ಯ ಹಾದಿಯಲ್ಲಿ ಹೋಗುತ್ತಿರುವ ಚಿತ್ತವು ಮಾಡುತ್ತದೆ. ಅದನ್ನು ಪರರು ಮಾಡಲಾರರು.  (43)
ಗಾಥ ಪ್ರಸಂಗ 3:9
ಲಿಂಗ ಪರಿವರ್ತನೆ ಸಾಧ್ಯ !
                ಸೂರಯ್ಯನು ಶ್ರೀಮಂತನ ಮಗನಾಗಿದ್ದನು. ಒಮ್ಮೆ ಆತನು ತನ್ನ ಮಿತ್ರರು ಮತ್ತು ಸೇವಕರೊಡನೆ ಸ್ನಾನಕ್ಕಾಗಿ ಹೊರಟಿದ್ದನು. ಆ ವೇಳೆಯಲ್ಲಿ ಪೂಜ್ಯ ಮಹಾಕಚ್ಚಾಯನರು ಆಹಾರಕ್ಕಾಗಿ ಹೋಗುವಾಗ ತಮ್ಮ ಚೀವರವನ್ನು ಸರಿಪಡಿಸಿಕೊಂಡು ಹೋಗುವಾಗ ಅವರ ಹೊಂಬಣ್ಣದ ಕಾಂತಿಯುತ ಚರ್ಮ ಕಾಣಿಸಿತು. ಆ ವರ್ಣವನ್ನು ಕಂಡ ಸೂರಯ್ಯ ಈ ರೀತಿ ಚಿಂತಿಸಿದನು.
                ಓಹ್! ಎಂಥ ವರ್ಣ, ಆ ಭಿಕ್ಷು ನನ್ನ ಪತ್ನಿಯಾಗಿದ್ದರೆ ಅಥವಾ ನನ್ನ ಪತ್ನಿಯ ಮೈಬಣ್ಣ ಆ ರೀತಿಯಿದ್ದರೆ ಎಷ್ಟು ಚೆನ್ನಾ ಎಂದು ಯೋಚಿಸಿದನು. ತಕ್ಷಣ ಆತನಿಗೆ ಕರ್ಮಫಲ ವಿಪಾಕ ನೀಡಿ ಆತನು ಸ್ತ್ರೀಯಾದನು. ಆತನಿಗೆ ವಿಪರೀತ ನಾಚಿಕೆಯಾಯಿತು. ಆತನು ಪಲ್ಲಕ್ಕಿಯಿಂದ ಇಳಿದು ಓಡಿಹೋದನು. ಆತನು ತಕ್ಷಶಿಲ ಕಡೆಗೆ ಹೊರಟನು. ಆತನ ಸಂಗಾತಿಗಳು ಆತನಿಗೆ ಹುಡುಕಿದರು, ಆದರೆ ವ್ಯರ್ಥವಾಯಿತು.
                ಸ್ತ್ರೀಯಾಗಿದ್ದ ಸೂರಯ್ಯ ಪ್ರಯಾಣಿಕರೊಂದಿಗೆ ತಕ್ಷಶಿಲೆಗೆ ಹೊರಟಳು. ಅಲ್ಲಿನ ಶ್ರೀಮಂತನೊಬ್ಬನು ಸ್ತ್ರೀ ಸೂರಯ್ಯಳನ್ನು ಮೆಚ್ಚಿ ಮದುವೆಯಾದನು. ಅಲ್ಲಿ ಆಕೆಗೆ ಎರಡು ಮಕ್ಕಳು ಜನಿಸಿದರು. ಹಿಂದೆ ಸೂರಯ್ಯ ಪುರುಷನಾಗಿರುವಾಗಲೂ ಸಹ ಎರಡು ಮಕ್ಕಳಿದ್ದವು.
                ಒಂದುದಿನ ಸೂರಯ್ಯನ ಮಿತ್ರನೊಬ್ಬನು ತನ್ನ 500 ಬಂಡಿಗಳೊಂದಿಗೆ ತಕ್ಷಶಿಲಕ್ಕೆ ಬಂದಿದ್ದನು. ಆತನನ್ನು ಗುರುತಿಸಿದ ಸೂರಯ್ಯ ಆತನಿಗೆ ಮನೆಗೆ ಆಹ್ವಾನಿಸಿದಳು. ಗಲಿಬಿಲಿಗೊಂಡ ಆತನಿಗೆ ತನ್ನ ವೃತ್ತಾಂತವನ್ನು ತಿಳಿಸಿದಳು. ಆಗ ಆತನಿಗೆ ತನ್ನ ಮಿತ್ರ ಸೂರಯ್ಯ ಸ್ತ್ರೀಯಾಗಿರುವುದು ತಿಳಿಯಿತು. ಆತನು ಸೂರಯ್ಯಗೆ ಮಹಾಕಚ್ಚಾಯನರೊಂದಿಗೆ ಕ್ಷಮೆಯಾಚಿಸಲು ಸಲಹೆ ನೀಡಿದನು. ಅದರಂತೆಯೇ ಮಹಾ ಕಚ್ಚಾಯನರನ್ನು ಔತಣಕ್ಕೆ ಆಹ್ವಾನಿಸಲಾಯಿತು. ಆಹಾರ ಸೇವನೆಯ ನಂತರ ಸೂರಯ್ಯ ತನ್ನ ವೃತ್ತಾಂತ ತಿಳಿಸಿ ಕ್ಷಮೆಯಾಚಿಸಿದಳು.
                ಆಗ ಪೂಜ್ಯ ಕಚ್ಚಾಯರವರು ಎದ್ದೇಳು ನಾನು ಕ್ಷಮಿಸಿರುವೆ ಎಂದರು. ತಕ್ಷಣ ಆಕೆ ಪುರುಷಳಾದಳು. ಈ ರೀತಿ ಒಂದೇ ಜನ್ಮದಲ್ಲಿ ಎರಡು ಬಾರಿ ಲಿಂಗ ಪರಿವರ್ತನೆಯಾಯಿತು. ಇದರಿಂದ ಆತನಿಗೆ ವೈರಾಗ್ಯ ಉಂಟಾಗಿ ಆತನು ಭಿಕ್ಷುವಾದನು.
                ಆತನು ಪುರುಷನಾಗಿರುವಾಗ ಎರಡು ಮಕ್ಕಳು, ಸ್ತ್ರೀಯಾಗಿದ್ದಾಗ ಎರಡು ಮಕ್ಕಳು ಇದ್ದವು. ಆದರೆ ಅತನು ಯಾರಿಗೆ ಹೆಚ್ಚು ಪ್ರೀತಿಸುತ್ತಿದ್ದ? ಎಂದು ಕೆಲವೊಮ್ಮೆ ಆತನಿಗೆ ಯಾರಾದರೂ ಪ್ರಶ್ನಿಸಿದಾಗ ಆತನು ಸ್ತ್ರೀಯಾಗಿದ್ದಾಗ ಹುಟ್ಟಿದ ಮಕ್ಕಳಲ್ಲಿ ಹೆಚ್ಚು ವಾತ್ಸಲ್ಯವಿತ್ತು ಎಂದು ಆತನು ಉತ್ತರಿಸುತ್ತಿದ್ದನು. ಇದು ಭಿಕ್ಷುಗಳಲ್ಲಿ ಹಾಸ್ಯ ಸಂಗತಿಯಾಗಿತ್ತು. ಇದರಿಂದಾಗಿ ನಾಚಿಕೆಗೊಂಡ ಸೂರಯ್ಯ ನಿಬ್ಬಾಣ ಸಾಕ್ಷಾತ್ಕಾರಕ್ಕೆ ಅಪಾರ ಶ್ರಮಿಸುತ್ತಿದ್ದನು. ನಂತರ ಅತನು ಅರಹಂತತ್ವ ಪ್ರಾಪ್ತಿಮಾಡಿದನು.
                ಈಗ ಆತನಿಗೆ ಕೆಲವು ಭಿಕ್ಷುಗಳು ಮತ್ತೆ ಅದೇ ಹಿಂದಿನ ಪ್ರಶ್ನೆ ಕೇಳಿದರು ಯಾರಿಗೆ ನೀನು ಹೆಚ್ಚು ಪ್ರೀತಿಸುತ್ತಿ, ನೀನು ತಂದೆಯಾಗಿರುವಾಗ ಜನಿಸಿದ ಮಕ್ಕಳಿಗೋ ಅಥವಾ ತಾಯಿಯಾದಾಗಿನ ಮಕ್ಕಳಿಗೋ?
                ನನಗೆ ಯಾರ ಮೇಲು ಯಾವುದೇ ಅಂಟುವಿಕೆಯಿಲ್ಲ.
                ಆದರೆ ಭಿಕ್ಷುಗಳನ್ನು ಇದನ್ನು ನಂಬಲಿಲ್ಲ. ಅವರು ಈ ಸಂಗತಿ ಭಗವಾನರ ಬಳಿಗೆ ತಂದರು. ಸೂರಯ್ಯ ಸುಳ್ಳು ಹೇಳುತ್ತಿದ್ದಾನೆ ಎಂದರು.

                ಆಗ ಭಗವಾನರು ನನ್ನ ಮಗ ಸುಳ್ಳು ಹೇಳುತ್ತಿಲ್ಲ, ಆತ ನಿಜವನ್ನೇ ನುಡಿಯುತ್ತಿದ್ದಾನೆ, ಆತನೀಗ ಅರಹಂತನಾಗಿದ್ದಾನೆ ಎಂದು ಹೇಳಿ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment