Saturday 7 March 2015

dhammapada/panditavagga/6.8/veranja

ಸುಖದುಃಖಗಳಿಂದ ಪಂಡಿತರು ಏರುಪೇರು ಆಗುವುದಿಲ್ಲ
ಸತ್ಪುರುಷರು ಸರ್ವವವನ್ನು ತ್ಯಾಗ ಮಾಡುತ್ತಾರೆ. ಸಂತರು ಕಾಮಬೋಗಗಳ ಮಾತುಗಳಲ್ಲಿ ತೊಡಗುವುದಿಲ್ಲ. ಪಂಡಿತರು ಸುಖ-ದುಃಖಗಳ ಸ್ಪರ್ಶಗಳಿಂದ ಸುಖವಾಗಲಿ, ದುಃಖವಾಗಲಿ ವ್ಯಕ್ತಪಡಿಸುವುದಿಲ್ಲ.          (83)
ಗಾಥ ಪ್ರಸಂಗ 6.8
ಸುಜ್ಞಾನಿಗಳು ಸಮಚಿತ್ತತೆಯಿಂದಿರುತ್ತಾರೆ


                ವೇರಂಜಾದ ಬ್ರಾಹ್ಮಣನ ಕೋರಿಕೆಯಂತೆ ಬುದ್ಧರು ವೇರಂಜಾದಲ್ಲಿ ತಂಗಿದ್ದರು. ಆದರೆ ಅವರು ಅಲ್ಲಿದ್ದಾಗ ಆ ಬ್ರಾಹ್ಮಣ ಅವರಿಗೆ ನೋಡಿಕೊಳ್ಳಲಿಲ್ಲ. ಅದೂ ಅಲ್ಲದೆ ವೇರಂಜ ಜನರು ಕ್ಷಾಮವನ್ನು ಎದುರಿಸುತ್ತಿದ್ದರು. ಆದ್ದರಿಂದ ಭಿಕ್ಷುಗಳಿಗೆ ಅತಿಅಲ್ಪವಾದ ಆಹಾರ ದೊರೆಯುತ್ತಿತ್ತು. ಪರಮಪೂಜ್ಯ ಮೊಗ್ಗಲಾನರವರು ತಮ್ಮ ಪವಾಡಶಕ್ತಿಯಿಂದ ಆಹಾರವನ್ನು ತಂದು ನೀಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಅಂದರೆ ಬುದ್ಧರು ಅದಕ್ಕೆ ಅನುಮತಿ ನೀಡಲಿಲ್ಲ. ಈ ಎಲ್ಲಾ ಕಷ್ಟಗಳಿದ್ದರು ಭಿಕ್ಷುಗಳು ಎದೆಗುಂದಲಿಲ್ಲ. ಅವರು ಸಿಕ್ಕಿರುವಷ್ಟರಲ್ಲಿ ಸಂತೃಪ್ತರಾಗಿ ಧ್ಯಾನಜೀವನ ನಡೆಸಿದರು. ಕುದುರೆಯ ವ್ಯಾಪಾರಿಗಳು ಆಗ ಅವರಿಗೆ ಅಲ್ಪಸ್ವಲ್ಪ ಧಾನ್ಯ ನೀಡುತ್ತಿದ್ದರು.
                ವರ್ಷವಾಸವು ಮುಗಿಯಿತು. ಆಗ ಬುದ್ಧರು ಮತ್ತು ಇತರ ಭಿಕ್ಷುಗಳು ಜೇತವನಕ್ಕೆ ಹಿಂತಿರುಗಿದರು. ಶ್ರಾವಸ್ತಿಯ ಜನರಂತು ಆನಂದದಿಂದ ಬುದ್ಧರಿಗೆ ಮತ್ತು ಭಿಕ್ಷುಗಳಿಗೆ ಆಹಾರೋಪಚಾರವನ್ನು ಮಾಡಿದರು.
                ಆ ಸಂದರ್ಭದಲ್ಲಿ ಭಿಕ್ಷುಗಳೊಡನೆ ವೇರಂಜಾದ ಕೆಲವು ಜನರು ಸಹಾ ವಿಹಾರದಲ್ಲಿ ಉಳಿದರು ಅವರಂತು ತಿಂದುತೇಗಿ ನಿದ್ದೆಹೋದರು. ನಂತರ ಎದ್ದ ಆ ಜನರು ನದಿಯ ದಂಡೆಗೆ ಹೋಗಿ ಈಜಾಡಿ, ಕೂಗಾಡುತ್ತಾ, ಕುಣಿದಾಡುತ್ತಾ, ಕುಸ್ತಿಯಾಡುತ್ತಾ, ಗದ್ದಲ ಎಬ್ಬಿಸುತ್ತಾ ಸಭ್ಯತೆ ಉಲ್ಲಂಘಿಸಿದರು.

                ಈ ವಿಷಯ ಭಗವಾನರ ಬಳಿಗೆ ಬಂದಿತು. ಆಗ ಭಗವಾನರು ಹೀಗೆಂದರು: ಇದು ಅಜ್ಞಾನಿ ಜನಗಳ ಸ್ವಭಾವವಾಗಿದೆ. ಅವರು ದುಃಖದಲ್ಲಿ ಕುಗ್ಗುವರು ಮತ್ತು ಸುಖದಲ್ಲಿ ಹಿಗ್ಗುವರು. ಆದರೆ ಜ್ಞಾನಿಗಳು ಸುಖ-ದುಃಖಗಳಲ್ಲೂ ಸ್ಥಿರವಾಗಿರುವರು ಎಂದು ಹೇಳಿ ನಂತರ ಮೇಲಿನ ಗಾಥೆಯನ್ನು ಹೇಳಿದರು. 

No comments:

Post a Comment