ಜ್ಞಾನಿಗಳು ಸದಾ ಧರ್ಮದಲ್ಲೇ ಆನಂದಿಸುವರು
ಯಾರು ಧಮ್ಮದ
ಆನಂದವನ್ನು ಸೇವಿಸಿರುವರೋ ಅವರು ಸುಖಿಯಾಗಿ ಜೀವಿಸುವರು. ಅವರ ಮನಸ್ಸು ಸ್ಪಷ್ಟ ಹಾಗು
ಪ್ರಶಾಂತವಾಗಿರುತ್ತದೆ. ಆದ್ದರಿಂದ ಪಂಡಿತರಾಗಿರುವವರು (ಜ್ಞಾನಿಗಳು) ಆರ್ಯರಿಂದ (ಬುದ್ಧರಿಂದ)
ಬೋಧಿತವಾದ ಧಮ್ಮದಲ್ಲೇ (ಸತ್ಯದಲ್ಲೆ) ಸದಾ ರಮಿಸುವರು. (79)
ಗಾಥ ಪ್ರಸಂಗ 6.4
ಮಹಾರಾಜರು ಭಿಕ್ಷುವಾದದ್ದು
ಕುಕ್ಕುಟವತಿ ಎಂಬ ರಾಜ್ಯಕ್ಕೆ ಮಹಾಕಪ್ಪಿಣ ಎಂಬ ರಾಜರು
ಆಳುತ್ತಿದ್ದರು. ಆತನ ರಾಣಿಯ ಹೆಸರು ಅನೊಜ. ಆತನಿಗೆ ಸಾವಿರ ಮಂತ್ರಿಗಳು ಇದ್ದರು. ಒಂದುದಿನ
ರಾಜನು ಮಂತ್ರಿಗಳೊಡನೆ ಉದ್ಯಾನವನಕ್ಕೆ ಹೊರಟಿರುವಾಗ ಅಲ್ಲಿ ಕೆಲವು ವರ್ತಕರೊಡನೆ ಭೇಟಿ ಮಾಡಿದರು.
ಆಗ ಅವರಿಗೆ ಬುದ್ಧರ ಬಗ್ಗೆ ಮಾಹಿತಿ ದೊರೆಯಿತು. ಬುದ್ಧರ ಮೌಲ್ಯ ಅರಿವಾಗಿ ಅವರು ತಕ್ಷಣ
ಶ್ರಾವತ್ತಿಯಕಡೆ ಹೊರಟರು.
ಆ ದಿನ ಭಗವಾನರು ಸಹಾ ತಮ್ಮ ಮಾನವಾತೀತವಾದ ಬುದ್ಧ
ಚಕ್ಷುವಿನಿಂದ ಇಂದು ಅರಹಂತ ಆಗಲು ಇರುವವರಲ್ಲಿ ಮಹಾಕಪ್ಪಿಣ ಮತ್ತು ಆತನ ಮಂತ್ರಿಗಳು ಕಂಡರು. ಆಗ
ಬುದ್ಧರು ಅವರು ಇದ್ದಕಡೆ ಸ್ವಲ್ಪದೂರದಲ್ಲಿರುವ ಆಲದ ಮರದ ಬುಡದಲ್ಲಿ ಪ್ರತ್ಯಕ್ಷರಾಗಿ ಅವರಿಗಾಗಿ
ಕಾಯುತ್ತ ಕುಳಿತರು. ಪಕ್ಕದಲ್ಲಿ ಚಂದಭಾಗ ನದಿಯು ಹರಿಯುತ್ತಿತ್ತು. ಅಲ್ಲಿಗೆ ಬಂದ ರಾಜ ಮತ್ತು
ಮಂತ್ರಿಗಳು ಬುದ್ಧರನ್ನು ಕಂಡರು. 32 ಮಹಾಪುರುಷ
ಲಕ್ಷಣಗಳಿಂದ ಆವೃತರಾಗಿ ಪರಮನಿತ್ಯ ತೇಜಸ್ಸಿನಿಂದ ಕೂಡಿ ಆರು ಬಗೆಯ ಕಿರಣಗಳನ್ನು ಹೊರಸೂಸುತ್ತ
ಕುಳಿತ ಭಗವಾನರನ್ನು ಕಂಡು ಅವರು ಮೈಮರೆತರು. ಅವರು ಬುದ್ಧರಲ್ಲಿ ಬಂದು ನಮಸ್ಕರಿಸಿದರು. ಆಗ
ಭಗವಾನರು ಅವರಿಗೆ ಸುತ್ತ ಪ್ರವಚನ ನೀಡಿದರು. ಅದನ್ನು ಆಲಿಸಿದ ಅವರು ತಕ್ಷಣ ಸೋತಪತ್ತಿ ಫಲ
ಪಡೆದರು. ಆಗ ಅವರು ಸಂಘಕ್ಕೆ ಸೇರಲು ಅನುಮತಿ ಕೇಳಿದರು. ಆಗ ಭಗವಾನರಿಗೆ ಈ ರಾಜಮಂತ್ರಿಗಳು
ಹಿಂದಿನ ಜನ್ಮದಲ್ಲಿ ಚೀವರಗಳನ್ನು ದಾನ ಮಾಡಿದ್ದು ನೆನಪಿಗೆ ಬಂತು. ಆಗ ಭಗವಾನರು ಅವರಿಗೆ ಏಹಿ
ಭಿಕ್ಖು (ಬನ್ನಿ ಭಿಕ್ಷುಗಳೇ) ಎಂದರು. ತಕ್ಷಣ ಅವರ ಈಗಿನ ರೂಪ, ವಸ್ತ್ರಗಳು ಮರೆಯಾಗಿ ಅವರಿಗೆಲ್ಲಾ ಭಿಕ್ಷುಗಳ ರೀತಿ ಮುಂಡನ ಮತ್ತು
ವಸ್ತ್ರ (ಚೀವರ)ಗಳು ಅವರ ದೇಹವನ್ನು ಅಲಂಕರಿಸಿತು.
ಸ್ವಲ್ಪಕಾಲದ ನಂತರ ಅಲ್ಲಿಗೆ ರಾಣಿ ಅನೊಜ ಮತ್ತು
ಮಂತ್ರಿಗಳ ಪತ್ನಿಯರು ಸಹಾ ರಾಜ ಮತ್ತು ಮಂತ್ರಿಗಳನ್ನು ಅಲ್ಲಿ ಹುಡುಕುತ್ತಾ ಬಂದರು. ಅವರು
ಬುದ್ಧರ ಅದ್ವಿತೀಯ ತೇಜಸ್ಸು ಕಂಡು ಭಗವಾನರಿಗೆ ತಮ್ಮ ಪತಿಗಳ ಬಗ್ಗೆ ವಿಚಾರಿಸಿದಾಗ ಭಗವಾನರು
ಅವರಿಗೆ ಸ್ವಲ್ಪ ಸಮಯದಲ್ಲಿ ಅವರನ್ನು ಕಾಣುವಿರಿ ಎಂದರು. ಆಗ ಭಗವಾನರು ಅವರನ್ನು
ಅದೃಷ್ಯವನ್ನಾಗಿಸಿದ್ದರು. ಏಕೆಂದರೆ ರಾಣಿ ಮತ್ತು ಮಂತ್ರಿ ಪತ್ನಿಯರು ಅವರನ್ನು ಕಂಡಿದ್ದರೆ
ಸೋತಪತ್ತಿ ಫಲ ಪಡೆಯಲು ಆಗುತ್ತಿರಲಿಲ್ಲ. ನಂತರ ಭಗವಾನರು ಅವರಿಗೂ ಬೋಧನೆ ನೀಡಿದರು. ಅದನ್ನು
ಆಲಿಸಿದ ಅವರೆಲ್ಲರೂ ಸೋತಪತ್ತಿ ಫಲ ಪಡೆದರು. ಆಗ ಅವರು ತಮ್ಮ ಪತಿಯಂದಿರನ್ನು ಕಂಡರು. ಆಗ ಅವರು
ಸಹಾ ಭಿಕ್ಷುಣಿ ಸಂಘಕ್ಕೆ ಸೇರಲು ಅನುಮತಿ ಕೇಳಿದರು. ನಂತರ ಎಲ್ಲರೂ ಶ್ರಾವತ್ತಿಗೆ ಹೊರಟರು. ಬಹುಬೇಗನೆ
ಅವರೆಲ್ಲರೂ ಅರಹಂತರಾದರು.
ಆಗ ಜೇತವನದಲ್ಲಿದ್ದ ಮಹಾಕಪ್ಪಿಣ ಭಿಕ್ಷುವು ಅಹೋ ಸುಖಂ
ಎಂದು ಉದ್ಗಾರ ಮಾಡುತ್ತಿದ್ದರು. ಅಂದರೆ ಓಹ್ ಎಂತಹ ಸುಖ ಎಂದರ್ಥ. ಅದನ್ನು ಆಲಿಸಿದ ಸಹ
ಭಿಕ್ಷುಗಳು ಇದನ್ನು ಭಗವಾನರಿಗೆ ತಿಳಿಸಿದಾಗ ಭಗವಾನರು ನನ್ನ ಪುತ್ರ ಕಪ್ಪಿಣ ಧಮ್ಮದ ರುಚಿ
ಅನುಭವಿಸುತ್ತಿದ್ದಾನೆ, ಸುಖಿಯಾಗಿ ಪ್ರಶಾಂತ
ಮನಸ್ಸಿನಿಂದ ಜೀವಿಸುತ್ತಿದ್ದಾನೆ. ಆತನು ನಿಬ್ಬಾಣದ ಸುಖವನ್ನು ಉದ್ಗರಿಸುತ್ತಿದ್ದಾನೆ ಎಂದು
ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.
No comments:
Post a Comment