Saturday, 6 June 2015

dhammapada/buddhavagga/14.3/naagakanye'squestions

ನಾಲ್ಕು ದುರ್ಲಭಗಳು
ಮಾನವ ಜನ್ಮ ದುರ್ಲಭ, ಮತ್ರ್ಯದ (ಮರಣಿಸುವವರ) ಜೀವನ ದುರ್ಲಭ (ಕಷ್ಟಕರ) ಸದ್ಧಮ್ಮ ಶ್ರವಣ ದುರ್ಲಭ, ಬುದ್ಧರ ಉದಯ ದುರ್ಲಭ. (182)
ಗಾಥ ಪ್ರಸಂಗ 14:3
ನಾಗಕನ್ಯೆಯ ನಾಲ್ಕು ಪ್ರಶ್ನೆಗಳು


                ದಿವ್ಯನಾಗಗಳ ರಾಜನ ಹೆಸರು ಎರಕಪತ್ತ. ಆತನು ಬಹುಜನ್ಮಗಳ ಹಿಂದೆ ಕಸ್ಸಪ ಬುದ್ಧರ ಕಾಲದಲ್ಲಿ ಭಿಕ್ಷುವಾಗಿದ್ದನು. ಆದರೆ ಆತನು ಮಾಡಿದ ತಪ್ಪಿಗೆ ಅತಿಯಾಗಿ ಪಶ್ಚಾತ್ತಾಪಪಟ್ಟು, ನಿರಂತರ ಕ್ಷೊಭೆಯಿಂದ ಕೂಡಿದ ಕಾರಣವಾಗಿ ಆತನು ನಾಗವಾಗಿ ಪುನರ್ಜನಿಸಿದನು. ಈ ನಾಗರಾಜನಿಗೆ ಸುಂದರವಾದ ಮಗಳಿದ್ದಳು. ಈ ದಿವ್ಯನಾಗಗಳು ಮಾನವ ರೂಪಧಾರಣೆ ಸುಲಭವಾಗಿ ಮಾಡಿಕೊಳ್ಳುವವರಾಗಿದ್ದರು. ಈ ನಾಗರಾಜನು ತನ್ನ ಮಗಳಿಗೆ ನಾಲ್ಕು ಪ್ರಶ್ನೆಗಳನ್ನು ಕಲಿಸಿದನು ಹಾಗು ಯಾರು ಈ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬಲ್ಲರೋ, ಆತನನ್ನೇ ವಿವಾಹವಾಗು ಎಂದು ಸಲಹೆ ನೀಡಿದ್ದನು. ಅದರಂತೆ ಆತನ ಮಗಳು ಪ್ರತಿ ಎರಡು ತಿಂಗಳಿಗೊಮ್ಮೆ ಮಾನವರೂಪ ಧರಿಸಿ ಗಾನನೃತ್ಯಗಳಿಂದ ತನ್ನ ನಾಲ್ಕು ಪ್ರಶ್ನೆಗಳನ್ನು ಜನರಲ್ಲಿ ಕೇಳುತ್ತಿದ್ದಳು. ಬಹಳಷ್ಟು ಮನವಿಕಾರರು ಆಕೆಯ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲು ವಿಫಲರಾದರು.
                ಒಂದುದಿನ ಮುಂಜಾನೆ ಭಗವಾನರಿಗೆ ಉತ್ತರನೆಂಬ ಯುವಕನು ನಾಗಕನ್ಯೆಯ ನಾಲ್ಕು ಪ್ರಶ್ನೆಗಳಿಂದಾಗಿಯೇ ಸೋತಪನ್ನನಾಗಬಲ್ಲ ಎಂದು ಮಹಾಕರುಣಾ ಸಮಾಪತ್ತಿಯಲ್ಲಿ ತಿಳಿಯಿತು. ಆ ಯುವಕನು ಆಕೆಯನ್ನು ನೋಡಲು ಹೋಗುತ್ತಿದ್ದನು. ದಾರಿಯಲ್ಲಿ ಭಗವಾನರು ಆತನನ್ನು ತಡೆದು ಆತನಿಗೆ ಉತ್ತರವನ್ನು ಕಲಿಸಿ, ಆಕೆಯ ಪ್ರಶ್ನೆಗಳಿಗೆ ಹೀಗೆಯೇ ಉತ್ತರಿಸು ಎಂದು ಹೇಳಿ ಕಳುಹಿಸಿದರು. ಆ ಯುವಕನು ಆಕೆಯನ್ನು ವಿವಾಹವಾಗುವ ಬಯಕೆಯಿಂದ ಆಕೆಯ ಬಳಿಗೆ ಬಂದಿದ್ದನು. ಆದರೆ ಭಗವಾನರ ಉತ್ತರದಿಂದಾಗಿ ಆತನು ಸೋತಪನ್ನನಾದನು. ಈಗ ಆಕೆಯ ಬಗ್ಗೆ ಆತನಿಗೆ ಬಯಕೆ ಅಳಿಸಿಹೋಯಿತು. ಆದರೂ ಪರಹಿತಕ್ಕಾಗಿ ಆಕೆಯಲ್ಲಿಗೆ ಹೋದನು. ಆಗ ಆಕೆಯು ಆತನಿಗೆ ಪರೀಕ್ಷಿಸಲು ಪ್ರಶ್ನೆಗಳನ್ನು ಪ್ರಾರಂಭಿಸಿದಳು.
                ನಾಗಕನ್ಯೆ : ಪ್ರಭು ಯಾರು ?
                ಉತ್ತರ : ಯಾರು ಆರು ಇಂದ್ರೀಯಗಳನ್ನು ನಿಯಂತ್ರಣದಲ್ಲಿ ಇರಿಸಿಹನೋ ಆತನೇ ಪ್ರಭುವಾಗಿದ್ದಾನೆ.
                ನಾಗಕನ್ಯೆ : ನೈತಿಕತೆಯಲ್ಲಿ ಕಲುಷಿತನಾಗಿ ಮಬ್ಬಾಗಿ ಮಿತಿಮೀರಿದವರಲ್ಲಿ ಪ್ರಭುವು ಯಾರು ?
                ಉತ್ತರ : ನೈತಿಕತೆಯಲ್ಲಿ ಕಲುಷಿತನಾಗಿ ಮಬ್ಬಾಗಿ ಮಿತಿಮೀರಿದವರಿಗೆ ಪ್ರಭು ಎನ್ನಲಾಗದು, ಯಾರು ತನ್ಹಾ (ಸ್ವಾರ್ಥ) ದಿಂದ ಮುಕ್ತನೋ ಆತನೇ ಪ್ರಭುವಾಗಿರುತ್ತಾನೆ.
                ನಾಗಕನ್ಯೆ : ಯಾವ ಪ್ರಭುವು ನೈತಿಕ ಕಲುಷತೆಯಿಂದ ಮುಕ್ತನಾಗಿರುತ್ತಾನೆ?
                ಉತ್ತರ : ಯಾವ ಪ್ರಭುವು ತೃಷ್ಣೆಯಿಂದ (ಸ್ವಾರ್ಥದಿಂದ) ಮುಕ್ತನೋ ಆತನೇ ನೈತಿಕ ಕಲುಷತೆಯಿಂದ ಮುಕ್ತನಾಗಿರುತ್ತಾನೆ.
                ನಾಗಕನ್ಯೆ : ಯಾವ ವ್ಯಕ್ತಿಯು ಮೂರ್ಖನೆಂದು ಕರೆಯಲ್ಪಡುತ್ತಾನೆ?
                ಉತ್ತರ : ಯಾವ ವ್ಯಕ್ತಿಯು ಇಂದ್ರಿಯ ಸುಖಗಳ ಹಿಂದೆ ಬಿದ್ದಿರುವನೋ ಆತನೇ ಮೂರ್ಖ.
                ಹೀಗೆ ಅವುಗಳಿಗೆ ಉತ್ತರ ತಿಳಿಸಿದ ನಂತರ ನಾಗಕನ್ಯೆಯು ಕಾಮತನ್ಹಾ, ಭವತನ್ಹಾ, ಮಿಥ್ಯಾದೃಷ್ಟಿ ಮತ್ತು ಅವಿದ್ಯೆ ಇವುಗಳಿಂದ ದಾಟುವ ಬಗೆ ಕೇಳಿದಳು. ಉತ್ತರನು ಭಗವಾನರಿಂದ ತಿಳಿಸಲ್ಪಟ್ಟ ರೀತಿಯಲ್ಲೇ ಉತ್ತರಿಸಿದನು.
                ಯಾವಾಗ ಎರಕಪತ್ತ ಈ ಉತ್ತರಗಳನ್ನು ಕೇಳಿದನೋ ಆಗ ಆತನಿಗೆ ಬುದ್ಧರ ಉದಯವಾಗಿರುವುದು ಖಾತ್ರಿಯಾಯಿತು. ಆಗ ಎರಕಪತ್ತನು ಭಗವಾನರಿಗೆ ಭೇಟಿ ಮಾಡಿದನು. ಹಾಗು ತಾನು ಕಸ್ಸಪ ಬುದ್ಧರ ಕಾಲದಲ್ಲಿ ದೋಣಿಯಲ್ಲಿ ಹೋಗುತ್ತಿರುವಾಗ ಕೇವಲ ಹುಲ್ಲನ್ನು ಕತ್ತರಿಸಿದ್ದಕ್ಕಾಗಿ ಅತೀವ ಪಶ್ಚಾತ್ತಾಪಪಟ್ಟ ಕಾರಣದಿಂದಾಗಿ ಈ ನೀಚ ಜನ್ಮವೆತ್ತಬೇಕಾಯಿತು ಎಂದು ವಿವರಿಸಿದರು.

                ಆಗ ಭಗವಾನರು ಮಾನವ ಜನ್ಮದ ದುರ್ಲಭತೆ ವಿವರಿಸಿ ಈ ಮೇಲಿನ ಗಾಥೆ ತಿಳಿಸಿದರು. ಈ ಸುತ್ತದ ಅಂತ್ಯದಲ್ಲಿ ಸಾರಿಪುತ್ರರ ಶಿಷ್ಯರು ಅರಹಂತರಾದರು ಮತ್ತು ಬಹಳಷ್ಟು ಜನರು ಸೋತಪನ್ನರಾದರು.

No comments:

Post a Comment