Thursday, 18 June 2015

dhammapada/sukhavagga/15.1/saakyas

           15.ಸುಖ ವಗ್ಗ
ದ್ವೇಷಿಗಳ ನಡುವೆ ಮಿತ್ರತ್ವದಿಂದ ಜೀವಿಸೋಣ
ಸುಖವಾಗಿ ನಿಜಕ್ಕೂ ಜೀವಿಸೋಣ, ವೈರಿಗಳ ನಡುವೆ ವೈರವಿಲ್ಲದವರಾಗಿಯೇ, ವೈರವುಳ್ಳ ಮನುಷ್ಯರ ನಡುವೆ ವೈರರಹಿತರಾಗಿ ವಿಹರಿಸೋಣ.        (197)
ಸುಖವಾಗಿ ನಿಜಕ್ಕೂ ಜೀವಿಸೋಣ, (ಚಿತ್ತ ಕಲ್ಮಶಗಳ) ರೋಗಿಗಳ ನಡುವೆ ಆರೋಗ್ಯವುಳ್ಳವರಾಗಿಯೇ, (ಆಸೆಯ) ರೋಗಿ ಮನುಷ್ಯರ ನಡುವೆ ನಾವು ರೋಗರಹಿತರಾಗಿ ವಿಹರಿಸೋಣ.            (198)
ಸುಖವಾಗಿ ನಿಜಕ್ಕೂ ಜೀವಿಸೋಣ, (ಸ್ವಾರ್ಥ) ಅಭಿಲಾಷೆವುಳ್ಳವರ ನಡುವೆ ಅನಾಸಕ್ತರಾಗಿಯೇ (ನಿಸ್ವಾರ್ಥರಾಗಿಯೇ) ಅಭಿಲಾಷೆ ಮನುಷ್ಯರ ನಡುವೆ ನಾವು ಅನಾಸಕ್ತರಾಗಿ ವಿಹರಿಸೋಣ.      (199)
ಗಾಥ ಪ್ರಸಂಗ 15:1
ನೀರಿಗಾಗಿ ರಕ್ತವನ್ನು ಹರಿಸಬೇಡಿ

                ಕಪಿಲವಸ್ತುವು ಶಾಕ್ಯರ ನಗರವಾಗಿತ್ತು ಹಾಗು ರಾಜಧಾನಿಯೂ ಆಗಿತ್ತು. ಹಾಗೆಯೇ ಕೋಲಿಯವು ಸಹಾ ಕೋಲಿಯರ ನಗರವಾಗಿತ್ತು. ಈ ಎರಡು ನಗರಗಳ ನಡುವೆ ರೋಹಿಣಿ ನದಿಯು ಹರಿಯುತ್ತಿತ್ತು. ಅಂದರೆ ರೋಹಿಣಿ ನದಿಯ ಎರಡು ಬದಿಗಳಲ್ಲಿ ಶಾಕ್ಯರ ಮತ್ತು ಕೋಲಿಯರ ನಗರಗಳಿದ್ದವು. ಒಮ್ಮೆ ಜೇಷ್ಟಮೂಲ ಮಾಸದಲ್ಲಿ  ಅನಾವೃಷ್ಟಿಯ ಕಾರಣದಿಂದಾಗಿ ನೀರಿಗೆ ಬರ ಉಂಟಾಯಿತು. ಬೆಳೆಗಳು ಹಾಳಾದವು. ಆಗ ಕೋಲಿಯ ಬದಿಯ ರೈತರು ಹೀಗೆ ಸ್ವಾರ್ಥದಿಂದ ಯೋಚಿಸತೊಡಗಿದರು: ನಮ್ಮ ಬೆಳೆಯು ಕೇವಲ ಒಂದು ನೀರಾವರಿಗೆ ಫಲವತ್ತಾಗುತ್ತದೆ. ಆದ್ದರಿಂದಾಗಿ ಇದನ್ನು ನಾವೇ ಬಳಸಿಕೊಳ್ಳೋಣ. ಆ ಬದಿಯವರಿಗೆ ನೀಡದಿರೋಣ. ಅದರಂತೆಯೇ ಶಾಕ್ಯರು ಸಹಾ ಹಾಗೇ ಯೋಚಿಸಿದರು. ಅವರು ಪರಸ್ಪರ ಸಂದೇಶ ನೀಡಿದರು: ನಾವು ನಿಮಗೆ ನೀರು ಬಿಡುವುದಿಲ್ಲ. ನಾವು ನಿಮಗೆ ನೀರು ಬಿಡಲಾರೆವು. ಹೀಗೆಯೇ ನೀರಿನ ಸ್ವಾರ್ಥದಿಂದಾಗಿ ಅವರು ಪರ ರಾಜ್ಯದವರ ಹಿತ ಯೋಚಿಸದಾದರು. ಕೇವಲ ತಾವೊಬ್ಬರೇ ಸುಖವಾಗಿ ಬಾಳಬೇಕೆಂದು ಇಚ್ಛಿಸಿದರು. ಹಂಚಿ ಪರಸ್ಪರ ತ್ಯಾಗ ಮತ್ತು ಸುಖದಿಂದ ಜೀವಿಸಬೇಕೆಂದು ಅವರಿಗೆ ಹೊಳೆಯಲಿಲ್ಲ. ಹೀಗಾಗಿ ಅವರು ಪರಸ್ಪರ ನೀರನ್ನು ತಮ್ಮ ಕಡೆಯೇ ಹರಿಯುವಂತೆಯೇ ಮಾಡಿಕೊಳ್ಳಲು ಬಯಸಿ, ಮಾತಿಗೆ ಮಾತು ಬೆಳೆದು, ಮೊದಲು ರೈತರ ಜಗಳವಾಗಿ ಆರಂಭವಾದ ಈ ಕಿತ್ತಾಟವು ಯುದ್ಧದವರೆಗೆ ಬಂದುನಿಂತಿತು. ಕೋಲಿಯರು ಹೀಗೆಂದರು: ಯಾರೆಲ್ಲಾ ಕಪಿಲವಸ್ತುವಿನಲ್ಲಿ ವಾಸಿಸುತ್ತಿದ್ದೀರೋ ಕೇಳಿ, ನಿಮ್ಮ ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಬೇಕೋ ಅಲ್ಲಿ ಹೋಗಿ ಜೀವಿಸಿ, ಇಲ್ಲದಿದ್ದರೆ ಯುದ್ಧಕ್ಕೆ ಸಿದ್ಧವಾಗಿ, ನಾವು ಆನೆಗಳಿಂದ, ರಥಗಳಿಂದ ಶಸ್ತ್ರಗಳಿಂದ ಇರಿಯಲು ಸಿದ್ಧ, ಹಾಗೆಯೇ ವೀರೋಚಿತವಾಗಿ ಸಾಯಲು ಸಿದ್ಧವಾಗಿದ್ದೇವೆ.
                ಶಾಕ್ಯರು ಸಹಾ ಇದೇರೀತಿಯಲ್ಲಿ ಘೋಷಣೆಗಳನ್ನು ಕೂಗಿದರು. ಮೊದಲು ರೈತರು, ನಂತರ ಅಧಿಕಾರಿಗಳು, ನಂತರ ಮಂತ್ರಿಗಳು, ನಂತರ ರಾಜಮನೆತನದವರು ಹೀಗೆ ಎಲ್ಲರೂ ತಮ್ಮ ಶಕ್ತಿ ಸಾಮಥ್ರ್ಯವನ್ನು ತೋರಿಸಲು ಮತ್ತು ವಿರೋಧದವರಿಗೆ ಶಕ್ತಿ ತೋರಿಸಿ ಎಂದು ಘೋಷಿಸಿದರು. ಎರಡೂ ಕಡೆಗಳಲ್ಲೂ ಯುದ್ಧಕ್ಕೆ ಸಿದ್ಧವಾದರು. ಭಗವಾನರು ಆ ದಿನ ಮುಂಜಾನೆ ಮಹಾಕರುಣಾ ಸಮಾಪತ್ತಿಯಲ್ಲಿ ಈ ಈರ್ವ ರಾಜ್ಯಗಳು ಯುದ್ಧಕ್ಕೆ ಸಿದ್ಧವಾಗಿ ನಿಂತಿರುವುದು ಕಂಡರು. ಆಗ ಹೀಗೆ ಯೋಚಿಸಿದರು: ನಾನು ಅವರನ್ನು ಇಂದು ತಡೆಯದಿದ್ದರೆ, ಈ ಎರಡು ರಾಜ್ಯದವರು ಪರಸ್ಪರ ಯುದ್ಧಮಾಡಿ ನಾಶವಾಗಿಬಿಡುತ್ತಾರೆ. ನಂತರ ಹೀಗೆ ನಿರ್ಧರಿಸುತ್ತಾರೆ. ನಾನು ಇಂದು ಅವರನ್ನು ಮೈತ್ರಿಯಲ್ಲಿ ಪ್ರತಿಷ್ಠಾಪಿಸುವೆ, ಅವರಲ್ಲಿ ಹೋಗುವುದು ಸ್ಪಷ್ಟವಾಗಿ ನನ್ನ ಕರ್ತವ್ಯವೇ ಆಗಿದೆ.
                ಎರಡು ಕಡೆಯವರನ್ನು ಯುದ್ಧಕ್ಕೆ ಸಿದ್ಧರಾಗಿ, ಶಸ್ತ್ರಾಸ್ತ್ರಗಳ ಸಮೇತ ಯುದ್ಧವನ್ನು ಆರಂಭಿಸುವಷ್ಟರಲ್ಲಿ, ಭಗವಾನರು ರೋಹಿಣಿ ನದಿಯ ಮಧ್ಯದಲ್ಲಿ ಆಕಾಶದಲ್ಲಿ ಪ್ರತ್ಯಕ್ಷರಾದರು. ಭಗವಾನರನ್ನು ಕಂಡೊಡನೆಯೇ ಅವರ ಬಂಧುಗಳಾದ ಶಾಕ್ಯರು ಕೂಡಲೇ ಶಸ್ತ್ರಾಸ್ತ್ರಗಳನ್ನು ಎಸೆದುಬಿಟ್ಟರು. ಹಾಗು ತಕ್ಷಣ ವಂದಿಸಿದರು. ಆಗ ಭಗವಾನರು ತಮ್ಮ ಬಾಂಧವರಿಗೆ ಹೀಗೆ ಕೇಳಿದರು ಈ ಯುದ್ಧ ಏತಕ್ಕಾಗಿ ಮಹಾರಾಜ?
                ನಮಗೆ ಗೊತ್ತಿಲ್ಲ, ಸೇನಾ ನಾಯಕರಿಗೆ ಗೊತ್ತಿದೆ ಎಂದನು ರಾಜ.
                ಸೇನಾನಾಯಕನು ನನಗೂ ಗೊತ್ತಿಲ್ಲ, ಉನ್ನತ ಅಧಿಕಾರಿಗೆ ಗೊತ್ತಿದೆ
                ನನಗೂ ಗೊತ್ತಿಲ್ಲ. ಹಾಗೆಯೇ ಕೊನೆಗೆ ರೈತರು ಮತ್ತು ಕೆಲಸದವರು ಬಳಿ ಬಂದಾಗ ನೀರಿಗಾಗಿ ಯುದ್ಧ ಎಂದು ತಿಳಿಯಿತು.
                ಆಗ ಭಗವಾನರು ರಾಜನನ್ನು ಕೇಳಿದರು: ನೀರಿನ ಮೌಲ್ಯ ಎಷ್ಟು ಮಹಾರಾಜ?
                ಅತಿ ಅಲ್ಪ ಪೂಜ್ಯರೇ?
                ಶಾಕ್ಯರ ಮೌಲ್ಯವೆಷ್ಟು ಮಹಾರಾಜ?
                ಶಾಕ್ಯರ ಮೌಲ್ಯ ಬೆಲೆಕಟ್ಟಲಾಗದಂತಹುದು.
                ಹಾಗಾದರೆ ಅಲ್ಪವಾದ ನೀರಿನ ಮೌಲ್ಯಕ್ಕಾಗಿ ನಿಮ್ಮಗಳ ಜೀವದ ಅಪಾರ ಮೌಲ್ಯವನ್ನು ನಾಶಗೊಳಿಸುತ್ತಿರುವಿರಾ? ಇದು ಸರಿಯೇ, ವಿವೇಕಪೂರಿತವೇ?
                ಅವರೆಲ್ಲ ಮೌನ ವಹಿಸಿದರು. ಆಗ ಭಗವಾನರು ಎರಡೂ ಕಡೆಯವರಿಗೆ ಹೀಗೆ ಹೇಳಿದರು: ಮಹಾರಾಜರುಗಳೇ, ಏತಕ್ಕಾಗಿ ನೀವು ಈ ರೀತಿಯಾಗಿ ವತರ್ಿಸುತ್ತಿರುವಿರಿ? ನಾನಿಲ್ಲಿ ಬರುವುದು ಸ್ವಲ್ಪ ತಡವಾಗಿದ್ದರೂ ನೀವು ರಕ್ತದ ಹೊಳೆ ಹರಿಸುತ್ತಿದ್ದಿರಿ. ನೀರಿನ ಮೌಲ್ಯಕ್ಕಿಂತ ರಕ್ತದ ಮೌಲ್ಯ ಹೆಚ್ಚಿನದು. ನೀರಿಗಾಗಿ ರಕ್ತಪಾತ ಬೇಡ, ನಿಮ್ಮ ಜೀವಗಳ ಮೌಲ್ಯ ಅತ್ಯಮೂಲ್ಯವಾದುದು. ನೀವು ದ್ವೇಷದಿಂದ ಜೀವಿಸುತ್ತಿದ್ದೀರಿ. ಆದರೆ ನಾನು ದ್ವೇಷರಹಿತವಾಗಿ ಜೀವಿಸುತ್ತಿದ್ದೇನೆ. ನೀವು ಚಿತ್ತಕಶ್ಮಲಗಳಿಂದ ಕೂಡಿ ರೋಗಿಗಳಂತೆ ಜೀವಿಸುತ್ತಿದ್ದೀರಿ, ನಾನು ಈ ಬಗೆಯ ರೋಗರಹಿತನಾಗಿ ಜೀವಿಸುತ್ತಿದ್ದೇನೆ. ನೀವುಗಳು ಸ್ವಾರ್ಥ ಮತ್ತು ಶತ್ರುತ್ವವನ್ನು ಅಭಿವೃದ್ಧಿಗೊಳಿಸಲು ಶ್ರಮಿಸುತ್ತಿರುವಿರಿ, ಆದರೆ ನಾನು ಸ್ವಾರ್ಥಕ್ಕಾಗಿಯಾಗಲಿ ಶತ್ರುತ್ವಕ್ಕಾಗಿಯಾಗಲಿ ಶ್ರಮಿಸುವುದಿಲ್ಲ ಎಂದು ಹೇಳಿ ಈ ಮೇಲಿನ ಗಾಥೆಗಳನ್ನು ನುಡಿದರು.

                ಆಗ ಎರಡು ರಾಜ್ಯದವರಿಗೂ ತಮ್ಮ ತಪ್ಪು ಅರಿವಾಯಿತು. ತಮ್ಮ ಮೂರ್ಖತ್ವಕ್ಕಾಗಿ ನಾಚಿಕೆಪಟ್ಟರು. ಪರಸ್ಪರ ಮೈತ್ರಿಯಿಂದ ಕೂಡಿದವರಾಗಿ ಸಿಕ್ಕಷ್ಟರಲ್ಲೇ ಜೀವಿಸೋಣ, ಹೊರತು ದ್ವೇಷ ಬೇಡ ಎಂಬ ದೃಢನಿಧರ್ಾರಕ್ಕೆ ಬಂದರು. ಹೀಗೆ ಮುಂದೆ ನಡೆಯಬಹುದಾಗಿದ್ದ ಭೀಕರ ಯುದ್ಧವು ತಪ್ಪಿಹೋಯಿತು.

No comments:

Post a Comment