ದಾನ,
ಶೀಲ,
ಧ್ಯಾನ ಇವೇ ಬುದ್ಧರ ಬೋಧನೆಯಾಗಿದೆ
ಸರ್ವರೀತಿಯ ಪಾಪವನ್ನು
ಮಾಡದಿರುವಿಕೆ, ಒಳ್ಳೆಯತನವನ್ನೇ (ಕುಶಲವನ್ನೇ)
ಮಾಡುವಿಕೆ (ಸಂಪಾದಿಸುವಿಕೆ, ವೃದ್ಧಿಸುವಿಕೆ)
ತನ್ನ ಚಿತ್ತವನ್ನು (ಸ್ವಚಿತ್ತವನ್ನು) ಪರಿಶುದ್ಧಗೊಳಿಸುವಿಕೆ - ಇದೇ ಬುದ್ಧರ ಶಾಸನವಾಗಿದೆ. (183)
ಕ್ಷಾಂತಿಯೇ (ಸಹನೆಯೆ) ಪರಮ
ತಪಸ್ಸಾಗಿದೆ (ತಪಸ್ಸುಗಳಲ್ಲಿ ಉತ್ತಮ), ನಿಬ್ಬಾಣವೇ
ಪರಮಶ್ರೇಷ್ಠಕರ ಎಂದು ಬುದ್ಧರು ಹೇಳುತ್ತಾರೆ. ಪರರನ್ನು ಹಿಂಸಿಸುವವನು ಪಬ್ಬಜಿತನಲ್ಲ, ಪರರನ್ನು ಹಾನಿಗೊಳಿಸುವವನು ಸಮಣನಲ್ಲ. (184)
ನಿಂದಿಸದಿರುವುದು, ಹಿಂಸಿಸದಿರುವುದು, ಪಾತಿಮೋಕ್ಖದಂತೆ ಸಂಯಮ ದಿಂದಿರುವುದು, ಆಹಾರದಲ್ಲಿ ಮಿತಿಯಿರುವುದು, ಏಕಾಂತವಾಸಿಯಾಗಿರುವುದು,
ಧ್ಯಾನದಂತಹ ಉನ್ನತ ಚಿತ್ತಾವಸ್ಥೆಯಲ್ಲಿ
ಸ್ಥಿರವಾಗಿರುವುದು - ಇವೇ ಬುದ್ಧರ ಶಾಸನವಾಗಿದೆ. (185)
ಗಾಥ ಪ್ರಸಂಗ 14:4
ಬುದ್ಧರ ಬೋಧನೆಯ ಸಾರಾಂಶ
ಒಮ್ಮೆ ಪೂಜ್ಯ ಆನಂದರವರಿಗೆ ಈ ಸಂದೇಹ ಉಂಟಾಯಿತು. ಅದೇನೆಂದರೆ:
ಭಗವಾನರು ಏಳು ಬುದ್ಧರ ಬಗ್ಗೆ ವಿವರಣೆ ನೀಡಿದ್ದಾರೆ. ಅವರ ತಂದೆ-ತಾಯಿಗಳ ಹೆಸರನ್ನು
ತಿಳಿಸಿದ್ದಾರೆ. ಅವರ ಆಯಸ್ಸನ್ನು ತಿಳಿಸಿದ್ದಾರೆ. ಬೋಧಿವೃಕ್ಷದ ವೈವಿಧ್ಯತೆ ತಿಳಿಸಿದ್ದಾರೆ,
ಶಿಷ್ಯರ ಬಗ್ಗೆಯೂ ತಿಳಿಸಿದ್ದಾರೆ, ಪ್ರಧಾನ ಪೋಷಕರ ಬಗ್ಗೆಯೂ ತಿಳಿಸಿದ್ದಾರೆ. ಇವೆಲ್ಲಾ ತಿಳಿಸಿದ ಭಗವಾನರು ಅವರ ಬೋಧನೆಯ ಬಗ್ಗೆ
ಸ್ಪಷ್ಟವಾಗಿ ತಿಳಿಸಿಲ್ಲವೇಕೆ? ಅವರ ಬೋಧನೆಯು
ಒಂದೆಯೇ? ಅಥವಾ ವಿವಿಧವೇ?... ಎಂದು ಗೊಂದಲದಲ್ಲಿ ಸಿಲುಕಿದನು. ಕೊನೆಗೆ ತಡೆಯಲಾರದೆ ಭಗವಾನರ ಬಳಿಗೆ ಬಂದು ತನ್ನ ಸಂದೇಹ
ಕೇಳಿದನು. ಆಗ ಭಗವಾನರು ಎಲ್ಲಾ ಬುದ್ಧರ ಬೋಧನೆಯೂ ಒಂದೇ, ವಿವಿಧವಲ್ಲ ಎಂದು ತಿಳಿಸಿದರು. ಹಾಗು ಹಿಂದಿನ ಬುದ್ಧರ ಗಾಥೆಗಳನ್ನೇ ಮರುನುಡಿದರು. ಅವೇ ಈ
ಮೇಲಿನ ಗಾಥೆಗಳಾಗಿವೆ. ಆದರೆ ಉಪೋಸಥದ ದಿನಗಳ ಅಂತರ ಬೇರೆ ಬೇರೆ ಎಂದು ತಿಳಿಸಿ ಅದಕ್ಕೆ ಕಾರಣ ಅವರ
ಕಾಲದಲ್ಲಿದ್ದ ಸರಾಸರಿ ಆಯಸ್ಸನ್ನು ಪರಿಗಣಿಸಿ ಬದಲಾವಣೆಯಾಗಿದೆ ಎಂದು ತಿಳಿಸಿ, ಧಮ್ಮದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು.
No comments:
Post a Comment