Friday, 19 June 2015

dhammapada/sukhavagga/15.4/bridegroom

ರಾಗಕ್ಕೆ ಸಮನಾದ ಬೆಂಕಿಯಿಲ್ಲ
"ರಾಗಕ್ಕೆ ಸಮನಾದ ಅಗ್ನಿಯಿಲ್ಲ,
ದ್ವೇಷಕ್ಕೆ ಸಮನಾದ ಅಪರಾಧವಿಲ್ಲ,
ಸ್ಕಂಧಗಳಿಗೆ (ದೇಹ ಮತ್ತು ಮನಸ್ಸಿಗೆ) ಸಮನಾದ ದುಃಖವಿಲ್ಲ,
ನಿಬ್ಬಾಣಕ್ಕೆ ಸಮನಾದ (ಪರಮಶಾಂತಿಯ) ಸುಖವಿಲ್ಲ."   (202)
ಗಾಥ ಪ್ರಸಂಗ 15:4
ರಾಗದಿಂದ ವಿರಾಗದೆಡೆಗೆ


            ತಮ್ಮ ಮಗಳ ವಿವಾಹ ದಿನದಂದು ಪೋಷಕರೊಬ್ಬರು ಭಗವಾನರಿಗೆ ಮತ್ತು 80 ಭಿಕ್ಷುಗಳಿಗೆ ಆಹ್ವಾನಿಸಿದ್ದರು. ಆಗ ವಧುವು ಸಹಾ ಭಿಕ್ಷುಗಳಿಗೆ ಆಹಾರ ಬಡಿಸಲು ಸಹಾಯ ಮಾಡುವುದಕ್ಕಾಗಿ ಮನೆಯಲ್ಲಿ ಓಡಾಡುತ್ತಿದ್ದರು. ಇದರಿಂದಾಗಿ ವರನು ಉದ್ವೇಗಕ್ಕೆ ಒಳಗಾದನು. ಹೀಗಾಗಿ ಆತನಿಗೆ ಬುದ್ಧರಿಗೆ ಹಾಗೂ ಭಿಕ್ಷುಗಳಿಗೆ ಗಮನ ನೀಡುವುದೇ ಕಷ್ಟವಾಯಿತು. ಆಗ ಭಗವಾನರು ವರ ಹಾಗು ವಧುವು ಸೋತಾಪತ್ತಿ ಫಲ ಪಡೆಯಲು ಇದೇ ಪಕ್ವ ಸಮಯವಾಗಿದೆ ಎಂದು ಸ್ಪಷ್ಟವಾಗಿ ತಿಳಿದರು. ವರನ ಲೌಕಿಕ ಆನಂದಕ್ಕಾಗಿ ಆತನನ್ನು ಹಾಗೆಯೇ ಬಿಟ್ಟುಬಿಟ್ಟರೆ ಆತನು ಮತ್ತೆ ಮತ್ತೆ ದುಃಖ ಸಾಗರದಲ್ಲಿ ಬಿದ್ದು ಒದ್ದಾಡುವುದು ತಪ್ಪುವುದಿಲ್ಲ. ಅದಕ್ಕೆ ಬದಲಾಗಿ ಈಗ ಆತನಲ್ಲಿ ಜ್ಞಾನೋದಯವನ್ನುಂಟು ಮಾಡಿದರೆ, ಆತನ ಇಹ ಮತ್ತು ಪರ ಎರಡೂ ಸುಖಮಯವಾಗುವುದೆಂದು ಭಗವಾನರು ಅರಿತರು. ಆಗ ವರನು ವಧುವಿಗಾಗಿ ಚಡಪಡಿಸುತ್ತಿದ್ದನು. ಆಕೆಯತ್ತಲೇ ಆತನು ಕಣ್ಣುಗಳು ನೆಟ್ಟಿದ್ದವು. ಆಗ ಭಗವಾನರು ತಮ್ಮ ಅತೀಂದ್ರಿಯ ಇದ್ಧಿಶಕ್ತಿಯಲ್ಲಿ ಒಂದಾದ ಛಂದ ಇದ್ದಿ (ಅಂದರೆ ಸಂಕಲ್ಪ ಮಾತ್ರದಿಂದಲೇ ಮಾಡುವ ಪವಾಡ) ಪ್ರಯೋಗ ಮಾಡಿದರು. ಅಂದರೆ ವರನಿಗೆ ವಧುವು ಕಾಣದಿರುವ ಹಾಗೆ ಸಂಕಲ್ಪಿಸಿದರು. ಯಾವಾಗ ವರನಿಗೆ ವಧುವು ಕಾಣಿಸಲಿಲ್ಲವೋ ಆಗ ಆತನು ಬಯಕೆ ಕ್ಷೀಣವಾಗತೊಡಗಿತು. ಹಾಗೆಯೇ ಬುದ್ಧ ಗೋಚರಿಸುವಿಕೆಯಿಂದಾಗಿ ಆತನಲ್ಲಿ ಭಕ್ತಿಯು ವೃದ್ಧಿಸುತ್ತಾ ಹೋಯಿತು. ಆಗ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು. ಈ ಸುತ್ತದ ನಂತರ ವಧು ಮತ್ತು ವರರಿಬ್ಬರೂ ಸೋತಾಪನ್ನ ಫಲ ಪಡೆದರು. ನಂತರ ಭಗವಾನರ ಮರು ಸಂಕಲ್ಪದಂತೆ ವಧು ಮತ್ತು ವರರು ಪರಸ್ಪರರಿಗೆ ಗೋಚರಿಸಿದರು. ಆದರೆ ಅವರಲ್ಲಿ ಲೌಕಿಕತೆ ಪ್ರಬಲವಾಗಿರಲಿಲ್ಲ. ಬದಲಾಗಿ ಜಗತ್ತಿನ ಸ್ವರೂಪ ಅರಿತು ಶ್ರೇಷ್ಠ ಧಮ್ಮ ದಂಪತಿಗಳಾದರು.

No comments:

Post a Comment