Friday, 26 June 2015

dhammapada/piyavagga/16.6/brahmin

ತೃಷ್ಣೆಯಿಂದಲೇ ಶೋಕ ಉಂಟಾಗುತ್ತದೆ
"ತೃಷ್ಣೆಯಿಂದಲೇ ಶೋಕ ಉಂಟಾಗುತ್ತದೆ,
ತೃಷ್ಣೆಯಿಂದಲೇ ಭಯವು ಉಂಟಾಗುತ್ತದೆ.
ಯಾರು ತೃಷ್ಣೆಯಿಂದ ಪೂರ್ಣವಾಗಿ ಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯ ಹೇಗೆ ತಾನೇ ಇರಬಲ್ಲದು?"          (216)

ಗಾಥ ಪ್ರಸಂಗ 16:6
ಬ್ರಾಹ್ಮಣನಿಗೆ ವಾಗ್ದಾನದಿಂದ ಶೋಕ

            ಭಗವಾನರು ಆಗ ಶ್ರಾವಸ್ಥಿಯಲ್ಲಿದ್ದರು. ಅವರಿಗೆ ಮಹಾಕರುಣಾ ಸಮಾಪತ್ತಿಯಲ್ಲಿ ಬ್ರಾಹ್ಮಣ ರೈತನೊಬ್ಬನು ಸೋತಪತ್ತಿಯಾಗುವ ಬಗ್ಗೆ ಅರಿತುಕೊಂಡರು. ಆದರೆ ಆತನು ಜ್ಞಾನೋದಯ ಪಡೆಯಲು ದೀರ್ಘಕಾಲದ ಪರಿಚಯ ಮಾಡಿಕೊಳ್ಳಬೇಕು ಎಂದು ಅರಿವಾಗಿ ಆ ದಿನ ನದಿಯ ದಡದಲ್ಲಿದ್ದ ಆತನ ಭೂಮಿಯ ಬಳಿಗೆ ಬಂದರು. ಆದರೆ ಆ ಬ್ರಾಹ್ಮಣನು ಬುದ್ಧರನ್ನು ಕಂಡಾಗಲೂ ಯಾವುದೇ ಗೌರವ ನೀಡಲಿಲ್ಲ. ನಿಶ್ಶಬ್ಧವಾಗಿಯೇ ಇದ್ದನು. ಆಗ ಭಗವಾನರೇ ಆತನಿಗೆ ಮೊದಲು ಮಾತನ್ನು ಆರಂಭಿಸಿದರು.
            "ಬ್ರಾಹ್ಮಣ ಏನನ್ನು ಮಾಡುತ್ತಿರುವೆ?"
            "ನನ್ನ ಹೊಲವನ್ನು ಶುದ್ಧಗೊಳಿಸುತ್ತಿದ್ದೇನೆ ಭಂತೆ."
            ನಂತರ ಭಗವಾನರು ಏನನ್ನು ಮಾತನಾಡಲಿಲ್ಲ, ತಮ್ಮ ದಾರಿ ಹಿಡಿದರು. ಮಾರನೆಯ ದಿನ ಆ ಬ್ರಾಹ್ಮಣನ ಹೊಲದ ಬಳಿಗೆ ಹೋದಾಗ ಆ ಬ್ರಾಹ್ಮಣನು ನೇಗಿಲು ಹೊಡೆಯುತ್ತಿದ್ದನು. ಆಗ ಭಗವಾನರು ಹೀಗೆ ಪ್ರಶ್ನಿಸಿದರು.
            "ಬ್ರಾಹ್ಮಣನೇ ಏನನ್ನು ಮಾಡುತ್ತಿರುವೆ?"
            "ನನ್ನ ಹೊಲವನ್ನು ನೇಗಿಲಿನಿಂದ ಹುತ್ತುತ್ತಿರುವೆ."
            ನಂತರ ಭಗವಾನರು ಮರುಮಾತನಾಡದೆ ತಮ್ಮ ದಾರಿ ಹಿಡಿದರು. ಹೀಗೆ ಹಲವು ದಿನಗಳವರೆಗೆ ಭಗವಾನ್ ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದರು ಮತ್ತು ಆತನು "ಭಂತೆ ನಾನು ಬೀಜ ಬಿತ್ತುತ್ತಿದ್ದೇನೆ, ಕಳೆ ಕೀಳುತ್ತಿದ್ದೇನೆ, ರಕ್ಷಿಸುತ್ತಿದ್ದೇನೆ" ಎಂದು ಉತ್ತರಿಸುತ್ತಿದ್ದನು. ಹಾಗು ಭಗವಾನರು ಸಹಾ ತಮ್ಮ ಹಾದಿ ಹಿಡಿಯುತ್ತಿದ್ದರು. ಒಂದು ದಿನವಂತೂ ಬ್ರಾಹ್ಮಣನು ಭಗವಾನರಿಗೆ ಹೀಗೆ ಹೇಳಿಯೇಬಿಟ್ಟನು. "ಭಂತೆ, ನಾನು ಹೊಲವನ್ನು ಶುಚಿಗೊಳಿಸಿದಾಗಿನಿಂದಲೂ ಬರುತ್ತಿರುವಿರಿ, ನನಗೆ ಒಳ್ಳೆಯ ಬೆಳೆ ಬಂದರೆ, ನಾನು ನಿಮ್ಮೊಂದಿಗೆ ಹಂಚಿಕೊಳ್ಳುವೆನು. ನಿಮಗೆ ದಾನ ನೀಡದೆ ಆಗ ನಾನು ತಿನ್ನುವುದಿಲ್ಲ. ಇಂದಿನಿಂದ ನೀವು ನನ್ನ ಸಹಭಾಗಿ" ಎಂದುಬಿಟ್ಟನು.
            ಕಾಲಕಳೆದಂತೆ ಆತನಿಗೆ ಒಳ್ಳೆಯ ಬೆಳೆಯು ಬಂತು. ಆತನು ತನ್ನಲೇ ಹೀಗೆ ಹೇಳಿಕೊಂಡನು: "ನನ್ನ ಬೆಳೆಯು ಹುಲುಸಾಗಿ ಬೆಳೆದಿದೆ, ನಾಳೆಯಿಂದ ನಾನು ಬೆಳೆ ಕೊಯ್ಯಲು ಆರಂಭಿಸುವೆ" ಹೀಗೆ ಆತನು ಸಿದ್ಧನಾದನು. ಆದರೆ ಅಂದು ರಾತ್ರಿ ಬಿರುಗಾಳಿ ಸಹಿತ ಭೀಕರ ಮಳೆಯು ಬಿದ್ದಿತು. ಪರಿಣಾಮವಾಗಿ ಆತನ ಬೆಳೆಯೆಲ್ಲ ಕೊಚ್ಚಿಕೊಂಡು ಹೋಯಿತು. ಈಗ ಆತನು ಹೊಲವು ಬಟ್ಟಬಯಲಾಗಿತ್ತು. ಭಗವಾನರಿಗೆ ಮೊದಲೇ ಈತನ ಬೆಳೆಯು ನಷ್ಟವಾಗುವುದೆಂದು ತಿಳಿದಿತ್ತು. ಆದರೆ ಆತನಿಗೆ ಆಗುವ ನಷ್ಟದಿಂದಲೇ ಆತನಿಗೆ ಗಂಭೀರ ಜ್ಞಾನೋದಯ (ಸೋತಪತ್ತಿ) ಆಗುವ ಸಾಧ್ಯತೆ ಇದ್ದುದರಿಂದಾಗಿಯೇ ಅವರು ಆತನಿಗೆ ಆಗುವ ಮುಂದಿನ ಮಹತ್ ಲಾಭ ಗಮನಿಸಿ ಅದರ ಬಗ್ಗೆ ಯಾವ ಮುನ್ನೆಚ್ಚರಿಕೆಯನ್ನು ನೀಡಲಿಲ್ಲ. ಹೀಗಾಗಿಯೇ ಅವರು ಆತನೊಂದಿಗೆ ಆರಂಭದಿಂದಲೂ ಸ್ನೇಹ ಆರಂಭಿಸಿದರು.
            ಮಾರನೆಯದಿನ ಆ ಬ್ರಾಹ್ಮಣನು ತನ್ನ ಹೊಲವನ್ನು ನೋಡಿ ಅಪಾರ ಶೋಕಕ್ಕೆ ಗುರಿಯಾದನು. "ಓಹ್, ನನ್ನ ಹೊಲ ನಾಶವಾಯಿತಲ್ಲ, ನಾನು ಭಗವಾನರಿಗೂ ನನ್ನ ಬೆಳೆಯಲ್ಲಿ ಅರ್ಧ ಭಾಗ ನೀಡುತ್ತೇನೆ ಎಂದಿದ್ದೆ. ಆ ಬಯಕೆಯೂ ನೆರವೇರಲಿಲ್ಲ!" ಎಂದು ಅಪಾರ ಶೋಕಪಟ್ಟನು. ಹೀಗಾಗಿ ಆತನು ಆಹಾರವನ್ನು ಸೇವಿಸದೆ, ಹಾಸಿಗೆ ಹಿಡಿದನು. ಆಗ ಭಗವಾನರು ಆತನ ಮನೆಯ ಬಾಗಿಲಿಗೆ ಬಂದರು. ಆ ಸುದ್ದಿ ತಿಳಿದ ಬ್ರಾಹ್ಮಣನು ತನ್ನ ಸೇವಕನೊಂದಿಗೆ "ನನ್ನ ಸಹಭಾಗಿಯಾದ ಭಗವಾನರನ್ನು ಇಲ್ಲಿ ಕರೆತನ್ನಿ ಮತ್ತು ಗೌರವಯುತವಾಗಿ ಕುಳ್ಳರಿಸಿ" ಎಂದನು. ಆತನ ಸೇವಕರು ಹಾಗೇ ಮಾಡಿದರು. ಭಗವಾನರು ಕುಳಿತುಕೊಂಡು ಹೀಗೆ ಕೇಳಿದರು: "ಬ್ರಾಹ್ಮಣನೇ ಏನು ಸಮಾಚಾರ?"
            "ಭಗವಾನರೇ, ನೀವು ನಾನು ಹೊಲವನ್ನು ಶುದ್ಧಿಗೊಳಿಸಿದಾಗಿನಿಂದ ಬಂದಿದ್ದೀರಿ, ಆಗ ನಾನು ನಿಮಗೆ ವಚನ ನೀಡಿದ್ದೆ, 'ನನಗೆ ಒಳ್ಳೆಯ ಬೆಳೆ ಬಂದರೆ ನಿಮಗೆ ಅರ್ಥ ನೀಡುತ್ತೇನೆ' ಎಂದು. ಆದರೆ ನನ್ನ ಆಸೆ ಪೂರೈಸಿಲ್ಲ. ಆದ್ದರಿಂದಲೇ ನಾನು ಶೋಕಪೀಡಿತನಾಗಿದ್ದೇನೆ. ನನಗೆ ಆಹಾರವೂ ಸೇರುತ್ತಿಲ್ಲ." ಆಗ ಭಗವಾನರು ಹೀಗೆ ಹೇಳಿದರು: "ಆದರೆ ಬ್ರಾಹ್ಮಣನೇ, ಈ ಶೋಕ ನಿನ್ನಲ್ಲಿ ಯಾವ ಕಾರಣದಿಂದ ಉಂಟಾಯಿತು ಎಂದು ತಿಳಿದಿದೆಯೇ?"
            "ಇಲ್ಲ ಭಂತೆ ತಿಳಿದಿಲ್ಲ."

            "ಬ್ರಾಹ್ಮಣನೇ, ಯಾವ ಶೋಕವೇ ಆಗಲಿ ಅಥವಾ ಭಯವೇ ಆಗಲಿ ತೀವ್ರ ಬಯಕೆಗಳಿಂದಲೇ ಉಂಟಾಗುತ್ತದೆ. ಯಾವಾಗ ನಿನ್ನಲ್ಲಿ ಯಾವುದೇ ರೀತಿಯ ಬಯಕೆಗಳು ಇಲ್ಲವಾಗುವುದೋ ಆಗ ಯಾವ ಶೋಕವೂ ನಿನ್ನಲ್ಲಿ ಇರಲಾರದು" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment