Saturday, 6 June 2015

dhammapada/buddhavagga/14.5/unsatisfiedbhikkhu

ಇಂದ್ರಿಯ ಸುಖಗಳು ಎಂದೆಂದಿಗೂ ಅತೃಪ್ತಿಕರ
ಕಹಾಪಣಗಳ (ಚಿನ್ನದ ನಾಣ್ಯಗಳ) ವರ್ಷವಾದರೂ (ಮಳೆಯದರೂ) ಸಹಾ ಇಂದ್ರೀಯ ಕಾಮನೆಗಳಿಗೆ ತೃಪ್ತಿಯೇ ಆಗುವುದಿಲ್ಲ, ಇಂದ್ರೀಯ ಸುಖಗಳು ಅಲ್ಪ ಸ್ವಾದದಿಂದ ಕೂಡಿವೆ. ಆದರೆ ಅಪಾರ ದುಃಖ ತರುತ್ತವೆ. ಇದನ್ನು ಪಂಡಿತರು ಹೀಗೆಯೇ ಅರ್ಥಮಾಡಿಕೊಂಡಿರುತ್ತಾರೆ.               (186)
ಆದ್ದರಿಂದ ಅವರು ದಿವ್ಯವಾದ ಕಾಮಗಳಲ್ಲಿಯೂ ಆನಂದಿಸುವುದಿಲ್ಲ. ಸಮ್ಮಾಸಂಬುದ್ಧರ ಶ್ರಾವಕರಾದ ಅವರು ಸದಾ ತೃಷ್ಣೆಯ ಕ್ಷಯದಲ್ಲೇ ಆನಂದಿಸುತ್ತಾರೆ.        (187)
ಗಾಥ ಪ್ರಸಂಗ 14:5
ಅತೃಪ್ತಿ ಹೊಂದಿದ ಭಿಕ್ಖು

                ಶ್ರಾವಸ್ತಿಯಲ್ಲಿ ಒಬ್ಬ ಯುವಕನು ಭಿಕ್ಷುವಾದನು. ಕೆಲದಿನಗಳ ನಂತರ ಆತನ ಹಿರಿಯ ಗುರು ಆತನಿಗೆ ಇನ್ನಷ್ಟು ವಿದ್ಯೆ ಕಲಿಯಲು ಇನ್ನೊಂದು ವಿಹಾರಕ್ಕೆ ಕಳುಹಿಸಿದನು. ಆ ವೇಳೆಯಲ್ಲೇ ಆ ಯುವ ಭಿಕ್ಷುವಿನ ತಂದೆಯು ಅತಿಯಾಗಿ ರೋಗಗ್ರಸ್ತನಾದನು. ಆಗ ತಂದೆಯು ತನ್ನ ಮಗನನ್ನು ಕಾಣಲು ಇಚ್ಛಿಸಿದನು. ಆದರೆ ಆತನನ್ನು ಕರೆತರಲಾಗಲಿಲ್ಲ. ಏಕೆಂದರೆ ಆತನು ಬೇರೊಂದು ವಿಹಾರದಲ್ಲಿದ್ದನು. ಆಗ ತಂದೆಯು ಮರಣಶಯ್ಯೆಯಲ್ಲಿದ್ದನು. ಆತನಿಗೆ ತಾನು ಉಳಿಯುವುದು ಸಂಶಯವಾಯಿತು. ಆದ್ದರಿಂದ ಆತನು ತನ್ನ ಕಿರಿಯ ಮಗನ ಕೈಯಲ್ಲಿ ನೂರು ಚಿನ್ನದ ನಾಣ್ಯಗಳನ್ನು ಇಟ್ಟು ಹೀಗೆ ಹೇಳಿದನು: ಈ ಹಣದಿಂದ ನನ್ನ ಮಗನಿಗೆ ಚೀವರ ಮತ್ತು ಪಿಂಡಪಾತ್ರೆ ತೆಗೆದುಕೊಟ್ಟುಬಿಡು ಎಂದು ಹೇಳುತ್ತಾ ಆತನು ಕಾಲವಾದನು.
                ವಿಷಯ ತಿಳಿದು ಯುವ ಭಿಕ್ಷುವು ಧಾವಿಸಿ ತಂದೆಯ ಶವ ನೋಡಲು ಬಂದನು. ಆಗ ತಮ್ಮನು ತನ್ನ ಅಣ್ಣನಿಗೆ ಹೀಗೆ ಹೇಳಿದನು: ಭಂತೆ, ತಂದೆಯು ತಮ್ಮನ್ನು ಹೊಗಳುತ್ತಿದ್ದರು. ತಮ್ಮನ್ನು ಪ್ರಶಂಸಿಸುತ್ತಲೇ ಈ ಹಣವನ್ನು ನನಗೆ ನೀಡಿದ್ದಾರೆ, ಇದನ್ನು ನಾನು ಏನು ಮಾಡಲಿ? ತಾವೇ ತೆಗೆದುಕೊಳ್ಳಿ ಎಂದು ಹಣವನ್ನು ನೀಡಲು ಬಂದನು.
                ನನಗೆ ಹಣದ ಅವಶ್ಯಕತೆಯಿಲ್ಲ ಎಂದು ಆ ಯುವ ಭಿಕ್ಷು ನಿರಾಕರಿಸಿದನು. ಆದರೆ ಅವನ ಅತೃಪ್ತ ಮನದಲ್ಲಿ ವಿಚಿತ್ರ ಆಲೋಚನೆ ಉಂಟಾಯಿತು. ಛೇ, ಆ ಹಣವನ್ನು ನಾನು ನಿರಾಕರಿಸಬಾರದಿತ್ತು. ಈಗಲೂ ಕಾಲ ಮಿಂಚಿಲ್ಲ, ನನ್ನ ತಮ್ಮನನ್ನು ಕೇಳಿದರೆ ಆತನು ಕೊಟ್ಟೇ ಕೊಡುತ್ತಾನೆ, ಛೇ, ಮನೆಯಿಂದ ಮನೆಗೆ ಭಿಕ್ಷಾಟನೆಯ ಜೀವನ, ಇಲ್ಲಿಗೆ ಸಾಕು, ನಾನು ಕೂಡಲೇ ಹೋಗಿ ಆ ಹಣದಿಂದಾಗಿ ಸುಂದರವಾದ ಲೌಕಿಕ ಜೀವನ ಆರಂಭಿಸುತ್ತೇನೆ.
                ಇದೇರೀತಿಯಾದ ಅತೃಪ್ತಿಯೊಂದಿಗೆ ಆತನು ತನ್ನ ಸುಖ-ಶಾಂತಿಯನ್ನೇ ಕಳೆದುಕೊಂಡನು. ಸುತ್ತಗಳ ಸ್ಮರಣೆ ಬಿಟ್ಟುಬಿಟ್ಟನು. ಅಷ್ಟೇ ಅಲ್ಲ, ಧ್ಯಾನವನ್ನು ಸಹಾ ನಿಲ್ಲಿಸಿಬಿಟ್ಟನು. ಆಹಾರವೂ ಸೇರದಂತಾಯಿತು. ಆತನು ಕೃಶನಾಗತೊಡಗಿದನು. ಆತನು ಪಾಂಡುರೋಗ ಪೀಡಿತನಂತೆ ಕಾಣಿಸಿದನು. ಏನು ವಿಷಯವೆಂದು ಭಿಕ್ಷುಗಳು ವಿಚಾರಿಸಿದರು. ನಾನು ಭಿಕ್ಖು ಜೀವನದಲ್ಲಿ ಅತೃಪ್ತನಾಗಿದ್ದೇನೆ. ಈ ವಿಷಯವು ಭಿಕ್ಷುಗಳಿಂದ, ಗುರುವಿಗೆ ಅಲ್ಲಿಂದ ಬುದ್ಧ ಭಗವಾನರೆಡೆಗೂ ತಲುಪಿತು.
                ಆಗ ಭಗವಾನರು ಆತನನ್ನು ಕರೆದು ಕೇಳಿದರು: ಓ ಭಿಕ್ಷು ಇದು ನಿಜವೇ, ನೀನು ಅತೃಪ್ತನಾಗಿಬಿಟ್ಟೆಯಾ?
                ಹೌದು ಭಂತೆ.
                ಏತಕ್ಕಾಗಿ ಹೀಗೆ ವತರ್ಿಸುತ್ತಿದ್ದೀಯೆ? ಜೀವನೋಪಾಯಕ್ಕಾಗಿ ಏನಾದರೂ ದಾರಿ ಹುಡುಕಿರುವೆಯಾ?
                ಹೌದು ಭಗವಾನ್.
                ನಿನ್ನಲ್ಲಿ ಎಷ್ಟು ಐಶ್ವರ್ಯವಿದೆ?
                ನೂರು ಚಿನ್ನದ ನಾಣ್ಯಗಳಿವೆ ಭಂತೆ.
                ಒಳ್ಳೆಯದು, ಹೋಗಿ ಕೆಲವು ಗಡಿಗೆಯ ಚೂರುಗಳು ಆರಿಸಿ ತಾ, ನಿನ್ನ ಜೀವನೋಪಾಯಕ್ಕೆ ಅವು ಸಾಕಾಗುವುದೋ ಇಲ್ಲವೋ ತಿಳಿಯೋಣ.
                ಆಗ ಆ ಭಿಕ್ಷುವು ಗಡಿಗೆಯ ನೂರು ಚೂರುಗಳನ್ನು ಆರಿಸಿ ತಂದನು. ಆಗ ಭಗವಾನರು ಅದನ್ನೆಲ್ಲಾ ಹೀಗೆ ವಿಂಗಡಿಸಿದರು. ಭಿಕ್ಷು ನೋಡಿಲ್ಲಿ, 50 ನಾಣ್ಯಗಳನ್ನು ನಿನ್ನ ಆಹಾರಕ್ಕಾಗಿ ಮೀಸಲಾಗಿಡೋಣ, 24 ಎತ್ತುಗಳಿಗಾಗಿ, 24 ಬೀಜಗಳಿಗಾಗಿ, ಮಿಕ್ಕವನ್ನು ಕೃಷಿ ಉಪಕರಣಕ್ಕಾಗಿ ಇಡೋಣ; ಅರೇ, ಇದೇನಿದು? ನಿನಗೆ 100 ಕಹಾಪಣ (ಚಿನ್ನದ ನಾಣ್ಯ) ಏತಕ್ಕೂ ಸಾಕಾಗುವುದಿಲ್ಲ?!
                ನಂತರ ಭಗವಾನರು ಹೀಗೆ ಮುಂದುವರೆಸಿದರು: ಭಿಕ್ಷು, ನೀನು ಹೊಂದಿರುವ ನೂರು ಕಹಾಪಣ ಅತ್ಯಲ್ಪವಾದುದು, ಇಷ್ಟರಿಂದಲೇ ನಿನ್ನ ಬಯಕೆಗಳೆಲ್ಲಾ ಹೇಗೆತಾನೇ ತೃಪ್ತಿಹೊಂದಲು ಸಾಧ್ಯ? ಹಿಂದೆ ಚಕ್ರವತಿಗಳು ಕೇವಲ ತಮ್ಮ ಕೈಯಾಡಿಸುವುದರಿಂದಲೇ ಚಿನ್ನದ ಮಳೆಗೆರೆಯುತ್ತಿದ್ದರು. ಆಗ ನೆಲದಲ್ಲಿ 12 ಯೋಜನದುದ್ದಕ್ಕೂ ಸೊಂಟದಷ್ಟು ಆಳದ ಸುವರ್ಣ ಹಾಗೂ ರತ್ನಗಳು ಆವರಿಸಿದರೂ ಸಹಾ ಅತೃಪ್ತಿಯಿಂದಲೇ ಇದ್ದರೇ ವಿನಃ ಅದರಿಂದ ಅವರಿಗೆ ತೃಪ್ತಿಯಾಗಲಿಲ್ಲ. ಉದಾಹರಿಸುವುದಾದರೆ: ಮಧಾತು (ಮಂದಾತು)ವಿನ ವಿಷಯವೇ ತೆಗೆದುಕೋ, ಆತನು ಸಾರ್ವತ್ರಿಕ ಚಕ್ರವತರ್ಿಯಾದನು. ಆತನು ತೃಪ್ತಿಯಾಗದೆ ಚತುಮಹಾರಾಜಿಕ ದೇವತೆಗಳ ಸುಖಗಳನ್ನು ಪಡೆದ, ಆಗಲೂ ತೃಪ್ತಿಯಾಗದೆ ತಾವತಿಂಸ ಲೋಕದ ಸುಖವನ್ನು ಅನುಭವಿಸಿದನು. ಆದರೂ ಅತೃಪ್ತನಾದ ಆತನು ಇಡೀ ತಾವತಿಂಸ ಲೋಕಕ್ಕೆ ಒಡೆಯನಾಗಲು ಬಯಸಿದನು. ಅಂದರೆ ಸಕ್ಕನಾಗಲು (ಇಂದ್ರತ್ವ) ಬಯಸಿದನು. ಸಕ್ಕನೊಡನೆ ಯಾಚಿಸಿದ್ದರೆ ಹಂಚಿಕೊಳ್ಳಬಹುದಾಗಿತ್ತು. ಆದರೆ ಹಾಗಾಗದೆ ಆತನು ಅತಿ ಲೋಭ ಪಟ್ಟಾಗ, ಆತನು ಕ್ಷಣದಲ್ಲಿ ವೃದ್ಧನಾದನು ಹಾಗೂ ಕ್ಷೀಣವಾಗಿ ಹಾಗೆಯೇ ಸತ್ತುಹೋದನು. ದೇವತೆಗಳ ಶರೀರವೇ ಹಾಗೆ ಬಹಳ ನಯವಾದುದು. ಅತಿಯಾಗಿ ಭಾವಾವೇಶವುಳ್ಳವರಾದರೆ, ಮಾನಸಿಕ ಕಲ್ಮಶಕ್ಕೆ ಗುರಿಯಾದರೆ, ತಮ್ಮ ದೈವತ್ವ ಕಳೆದುಕೊಳ್ಳುವರು. ಆದ್ದರಿಂದ ಇಂದ್ರೀಯ ತೃಪ್ತನಾಗಲು ಬಯಸಿದರೆ ಅದಕ್ಕೆ ವಿರಾಗವೇ ಹಾದಿ ಹೊರತು ಅನುಭವಿಸುವುದಿಲ್ಲ. ಹೊಸ ಭೋಗ ಮಾಡದೆ, ಹಳೆಯ ವಿಕಾರಗಳೆಲ್ಲಾ ಬೇರುಸಹಿತ ಕಿತ್ತುಹಾಕುವುದೇ ವಿಮುಕ್ತಿಯ ಹಾದಿಯಾಗಿದೆ ಎಂದು ಬೋಧಿಸಿದಾಗ, ಆ ಭಿಕ್ಷುವು ತಕ್ಷಣ ಆ ಚಿನ್ನದ ಮೋಹವನ್ನು ತ್ಯಜಿಸಿದನು. ಎಂದಿಗೂ ತೃಪ್ತವಾದ ಆಸೆಗೆ ಬಲಿಯಾಗದೆ, ಒಂದೇಬಾರಿ ಏನನ್ನು ಕೊರಗದೆಯೇ ಸಂತೃಪ್ತನಾದನು. ಲೋಕೋತ್ತರ ಸಾಧನೆಗೆ ಸಿದ್ಧನಾದನು.


No comments:

Post a Comment