Friday, 26 June 2015

dhammapada/piyavagga/16.2/thegreifofthefather

ಪ್ರಿಯವಾದುದರಿಂದಲೇ ಶೋಕ
"ಪ್ರಿಯವಾದುದರಿಂದಲೇ ಶೋಕವು ಹುಟ್ಟುವುದು
ಪ್ರಿಯವಾದುದರಿಂದಲೇ ಭಯವು ಹುಟ್ಟುವುದು
ಯಾರು ಪ್ರಿಯವಾದುದರಿಂದ ಪೂರ್ಣವಾಗಿ ಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯವು ಹೇಗೆ ತಾನೇ ಇರುವುದು?"       (212)


ಗಾಥ ಪ್ರಸಂಗ 16:2
ಪುತ್ರಶೋಕದ ತಂದೆಗೆ ಸಂತಾನ

            ಶ್ರಾವಸ್ಥಿಯ ಗೃಹಸ್ಥನೊಬ್ಬನು ತನ್ನ ಪುತ್ರನನ್ನು ಕಳೆದುಕೊಂಡನು. ಶೋಕ ತಡೆಯಲಾರದೆ ಆತನು ಪ್ರತಿದಿನ ಶವ ಸುಟ್ಟ ಸ್ಥಳಕ್ಕೆ ಹೋಗಿ ಅಳುತ್ತಿದ್ದನು. ಆತನಿಗೆ ದುಃಖ ತಡೆಯಲು ಆಗುತ್ತಲೇ ಇರಲಿಲ್ಲ.
            ಭಗವಾನರು ಎಂದಿನಂತೆ ಮುಂಜಾನೆ ಮಹಾಕರುಣಾ ಸಮಾಪತ್ತಿಯಲ್ಲಿ 'ಇಂದು ಯಾರಿಗೆ ಸಹಾಯ ಮಾಡಲಿ' ಎಂದು ವೀಕ್ಷಿಸಿದಾಗ, ಈ ಗೃಹಸ್ಥನು ಅವರಿಗೆ ಕಾಣಿಸಿದನು. ಹೀಗಾಗಿ ಅವರು ಆ ಗೃಹಸ್ಥನ ಮನೆಗೆ ಹೋಗಿ ಬಾಗಿಲಲ್ಲಿ ನಿಂತರು. ಆಗ ಗೃಹಸ್ಥನು ಅವರಿಗೆ ಆಹ್ವಾನಿಸಿದನು. ಅವರಿಗಾಗಿ ಪೀಠವನ್ನು ಒದಗಿಸಿದನು. ನಂತರ ಆತನು ಗೌರವದಿಂದ ನಮಸ್ಕರಿಸಿ ಒಂದೆಡೆ ಕುಳಿತನು. ನಂತರ ಭಗವಾನರು ಆತನಿಗೆ ಹೀಗೆ ಕೇಳಿದರು: "ಗೃಹಪತಿಯೇ, ಏತಕ್ಕಾಗಿ ದುಃಖಿತನಾಗಿರುವೆ?"
            "ಭಗವಾನ್, ನಾನು ನನ್ನ ಪುತ್ರನನ್ನು ಕಳೆದುಕೊಂಡಿರುವೆ, ಅದಕ್ಕಾಗಿಯೇ ನಾನು ದುಃಖಿತನಾಗಿರುವೆ."
            "ಓ ಗೃಹಪತಿ, ಶೋಕಿಸಬೇಡ. ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಗಾಗಿಯೇ ಸಾವಿಲ್ಲ, ಎಲ್ಲರಿಗೂ ಸಾವು ಬರುತ್ತದೆ. ಹಾಗೆಯೇ ಒಂದೇ ಸ್ಥಳದಲ್ಲಿಯೇ ಸಾವು ಸಂಭವಿಸದು, ಎಲ್ಲೆಡೆ ಸಾವು ಬರುವುದು. ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿ ಜೀವಿಗೂ ಸಾವಿದೆ, ಯಾವ ಧಾತುವೂ ಸಹಾ ನಿತ್ಯವಲ್ಲ. ಆದ್ದರಿಂದಾಗಿ ಶೋಕಪಡಬೇಡ, ಬದಲಾಗಿ ಮರಣದ ಬಗ್ಗೆ ಚಿಂತನೆ ನಡೆಸು. (ಮರಣಾನುಸ್ಸತಿ/ಮರಣಾನುಸ್ಮೃತಿ) 'ಬದುಕು ಅನಿಶ್ಚಿತ, ಸಾವು ನಿಶ್ಚಿತ'. ಪ್ರತಿಯೊಂದೂ ಭಂಗವಾಗುವುದು, ಸಾವಿಗೀಡಾಗುವುದು" ಎಂದು ನುಡಿದು ಮತ್ತೆ ಹೀಗೆ ಮುಂದುವರಿಸಿದರು: "ಓ ಗೃಹಪತಿಯೇ, ಹಿಂದೆ ಪಂಡಿತರು ಪುತ್ರ ಶೋಕಕ್ಕಾಗಿ ಶೋಕಪಡಲಿಲ್ಲ. ಬದಲಾಗಿ ಮರಣದ ಬಗ್ಗೆ ಯಥಾರ್ಥ ಚಿಂತನೆ ನಡೆಸಿದರು. 'ಮತ್ರ್ಯರಿಗೆ ಮೃತ್ತುವಿದ್ದೇ ಇದೆ' ಎಂದು ದೃಢಭಾವ ತಾಳುತ್ತಿದ್ದರು. ಆದರೆ ನೀವು ನಿನ್ನ ಆಹಾರ ಬಿಟ್ಟಿರುವೆ. ದೈನಂದಿನ ಕಾರ್ಯಗಳೆಲ್ಲ ಸ್ಥಗಿತಗೊಳಿಸಿರುವೆ, ಸಿಕ್ಕ ಕಾಲವೆಲ್ಲಾ ಶೋಕದಲ್ಲೇ ಕಳೆಯುತ್ತಿರುವೆ. ಆದರೆ ಹಿಂದಿನ ಪಂಡಿತರು ಹೀಗೆ ಮಾಡಲಿಲ್ಲ. ಬದಲಾಗಿ ಅವರು ಮರಣಾನುಸ್ಮೃತಿಯಲ್ಲಿ ತೊಡಗಿದರು. ಎಂದಿನಂತೆ ಆಹಾರವನ್ನು ಸ್ವೀಕರಿಸಿದರು ಹಾಗು ದೈನಂದಿನ ಕಾರ್ಯಗಳೆಲ್ಲ ಎಂದಿನಂತೆ ನಡೆಯುವಂತೆ ನೋಡಿಕೊಂಡರು. ಆದ್ದರಿಂದಾಗಿ ಪುತ್ರಶೋಕ ತ್ಯಜಿಸು. ಈ ಶೋಕ ಪುತ್ರನ ಸಾವಿನಿಂದ ಹುಟ್ಟಲಿಲ್ಲ, ಬದಲಾಗಿ ಪುತ್ರನನ್ನು ಪ್ರಿಯವಾಗಿ ಅಂಟಿದ್ದರಿಂದಾಗಿ ಉಂಟಾಗಿದೆ. ಈ ಪ್ರಿಯ ಭಾವನೆ ಯಿಂದ ಪೂರ್ಣವಾಗಿ ಮುಕ್ತನಾಗು. ಆಗ ಶೋಕದಿಂದ ಪಾರಾಗುವೆ" ಎಂದು ನುಡಿದು ಈ ಮೇಲಿನ ಗಾಥೆ ನುಡಿದರು. ಆಗ ಆ ಗೃಹಪತಿಯು ಸೋತಪತ್ತಿ ಫಲ ಪಡೆದನು.


No comments:

Post a Comment