Friday, 19 June 2015

dhammapada/sukhavagga/15.7/tissasgreatdevotion

ಧಮ್ಮಾರಸ ಸೇವನೆಯಿಂದ ಭೀತಿಯಿಂದ ಮತ್ತು
ಪಾಪದಿಂದ ಮುಕ್ತನಾಗುತ್ತಾನೆ.
"ಯಾರು ಏಕಾಂತತೆಯ ಸವಿರಸವನ್ನು ಮತ್ತು
ನಿಬ್ಬಾಣದ ಪರಮಶಾಂತ ರಸವನ್ನೂ ಆಸ್ವಾಸಿಸಿದ್ದಾರೆಯೋ
ಹಾಗು ಧಮ್ಮದ ಮಧುರ ರಸವನ್ನು ಪಾನ ಮಾಡಿದ್ದಾರೋ
ಅಂತಹವರು ಧೈರ್ಯಶಾಲಿಗಳು ಮತ್ತು ನಿಷ್ಪಾಪಿಗಳಾಗುತ್ತಾರೆ."      (205)
ಗಾಥ ಪ್ರಸಂಗ 15:7
ತಿಸ್ಸ ಭಿಕ್ಖುವಿನ ಮಹಾ ಬುದ್ಧಪೂಜೆ

            ಬುದ್ಧ ಭಗವಾನರು ಒಮ್ಮೆ ತಾವು ಇನ್ನು ನಾಲ್ಕು ತಿಂಗಳಲ್ಲಿ ಮಹಾಪರಿನಿಬ್ಬಾಣ ಪಡೆಯುವುದಾಗಿ ಘೋಷಿಸಿದರು. ಆಗ ಅರಹಂತ ಮತ್ತು ಅನಾಗಾಮಿಗಳ ಹೊರತು ಎಲ್ಲಾ ಭಿಕ್ಷುಗಳು ದುಃಖಿತರಾದರು. ಅವರಿಗೆ ಏನು ಮಾಡಬೇಕೆಂಬುದೇ ಗೊತ್ತಾಗಲಿಲ್ಲ. ಹೀಗಾಗಿ ಅವರೆಲ್ಲ ಬುದ್ಧರಿಗೆ ಅತಿ ಹತ್ತಿರವಾದರು. ಏನು ಮಾಡಬೇಕೆಂಬುದೇ ಗೊತ್ತಾಗಲಿಲ್ಲ. ಹೀಗಾಗಿ ಅವರೆಲ್ಲ ಬುದ್ಧರಿಗೆ ಅತಿ ಹತ್ತಿರವಾದರು. ಆದರೆ ಭಿಕ್ಖು ತಿಸ್ಸ ಅತ್ಯಂತ ಶ್ರದ್ಧಾವಂತ ಭಿಕ್ಷುವಾಗಿದ್ದನು. ಆತನು ಬುದ್ಧನು ಇರುವಾಗಲೇ ಅರಹಂತನಾಗುವ ಸಂಕಲ್ಪ ಮಾಡಿದ್ದನು. ಆದ್ದರಿಂದಾಗಿ ಆತನೊಬ್ಬನು ಮಾತ್ರ ಬುದ್ಧರ ಸಾನಿಹ್ಯವೇ ಮಾಡಲಿಲ್ಲ. ಹೀಗಾಗಿ ಆತನು ಏಕಾಂತ ಪ್ರದೇಶದಲ್ಲಿ ಧ್ಯಾನವನ್ನು ಆರಂಭಿಸಿದನು. ಆದರೆ ಇತರ ಭಿಕ್ಷುಗಳಿಗೆ ಆತನ ಬಗ್ಗೆ ತಿಳಿದುಕೊಳ್ಳದೆಯೇ ಆತನನ್ನು ಬುದ್ಧರ ಬಳಿಗೆ ಕರೆದೊಯ್ದರು. ಮತ್ತು ಹೀಗೆ ದೂರು ನೀಡಿದರು. "ಭಗವಾನ್, ಈ ಭಿಕ್ಖುವಿಗೆ ತಮ್ಮ ಬಗ್ಗೆ ಗೌರವವಾಗಲಿ ಮತ್ತು ಭಕ್ತಿಯಾಗಲಿ ಇದ್ದಂತೆ ಕಾಣುತ್ತಿಲ್ಲ. ಆದ್ದರಿಂದಲೇ ಈತನು ತಮ್ಮ ಬಳಿಗೆ ಬರುವ ಬದಲು ಏಕಾಂತದಲ್ಲಿಯೇ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ." ಆಗ ತಿಸ್ಸ ಭಿಕ್ಷುವು ಹೀಗೆ ಬುದ್ಧ ಭಗವಾನರಲ್ಲಿ ನಿವೇದಿಸಿಕೊಂಡನು. "ಭಗವಾನ್ ಹಾಗೇನೂ ಇಲ್ಲ, ನಾನು ತಾವು ಇರುವಾಗಲೇ ಅರಹಂತನಾಗಲು ದೃಢಸಂಕಲ್ಪ ಮಾಡಿರುವೆನು. ಹೀಗಾಗಿ ಆ ಗುರಿಗೆ ಮುಟ್ಟಲು ದೃಢಪರಿಶ್ರಮಿಯಾಗಿದ್ದೇನೆ, ಆದ್ದರಿಂದಲೇ ನಾನು ಏಕಾಂಗಿಯಾಗಿ ಧ್ಯಾನಿಯಾಗಿದ್ದೇನೆ ಮತ್ತು ಈ ರೀತಿಯಲ್ಲೇ ತಮಗೆ ಗೌರವಿಸಿ, ಪೂಜಿಸಬೇಕೆಂದಿರುವೆನು."

            ಆಗ ಭಗವಾನರು ಆತನಿಗೆ ಪ್ರಶಂಸಿಸಿದರು ಹಾಗು ಭಿಕ್ಷುಗಳಿಗೆ ಹೀಗೆ ಹೇಳಿದರು. "ಭಿಕ್ಷುಗಳೇ, ನಿಮ್ಮಲ್ಲಿ ಯಾರಾದರೂ ನನಗೆ ಗೌರವಿಸಬೇಕೆಂದು ಅಥವಾ ಪೂಜಿಸಬೇಕೆಂದಿದ್ದರೆ ಈ ತಿಸ್ಸಾ ಭಿಕ್ಷುವಿನಂತೆ ಮಾಡಿರಿ. ನೀವು ನನಗೆ ಕೇವಲ ಗಂಧ ಪುಷ್ಪಗಳು ಇತ್ಯಾದಿಗಳಿಂದ ಪೂಜಿಸಬೇಕಿಲ್ಲ, ಬದಲಾಗಿ ಪನ್ಯಾ, ಧ್ಯಾನಗಳ ಲೋಕೋತ್ತರ ಧಮ್ಮನ್ನು ಸಾಧಿಸುತ್ತ ಈ ರೀತಿಯಲ್ಲಿ ಗೌರವಿಸಿ" ಎಂದು ಬೋಧಿಸುತ್ತ ಈ ಮೇಲಿನ ಗಾಥೆಯನ್ನು ನುಡಿದರು. ಆಗ ಭಿಕ್ಷು ತಿಸ್ಸಾ ಸೋತಪತ್ತಿಫಲ ಪಡೆದನು. 

No comments:

Post a Comment