Friday 6 February 2015

dhammapada/puppavagga/4.5/kosia

ಮುನಿಗಳು ಯಾರಿಗೂ ಯಾವುದಕ್ಕೂ ಹಾನಿ ಮಾಡುವುದಿಲ್ಲ
ಹೇಗೆ ಭ್ರಮರವು ಪುಷ್ಪಕ್ಕೆ ಅಥವಾ ಅದರ ವರ್ಣಕ್ಕೆ ಅಥವಾ ಗಂಧಕ್ಕೆ ಹಾನಿಮಾಡದೆ ಕೇವಲ ರಸವನ್ನು ತೆಗೆದುಕೊಳ್ಳವ ಹಾಗೆ ಮುನಿಗಳು ಗ್ರಾಮಗಳಲ್ಲಿ
ಚಲಿಸುತ್ತಾರೆ.        (49)
ಗಾಥ ಪ್ರಸಂಗ 4:5
ಕೋಸಿಯಾ ಕೃಪಣನ ಕಸಿವಿಸಿ

                ರಾಜಗೃಹದ ಸಮೀಪ ಸಕ್ಕಾರವೆಂಬ ಹಳ್ಳಿಯಿತ್ತು. ಅಲ್ಲಿ ಕೋಸಿಯನೆಂಬ ಶ್ರೀಮಂತ ಕೃಪಣನಿದ್ದನು. ಆತನು ಯಾರಿಗೂ ಏನನ್ನೂ ಸ್ವಲ್ಪವೂ ದಾನ ನೀಡುತ್ತಿರಲಿಲ್ಲ. ಒಂದುದಿನ ಆತನಿಗೆ ಒಬ್ಬಟ್ಟಿನಂತಹ ತಿಂಡಿ ತಿನ್ನುವ ಬಯಕೆಯಾಯಿತು. ಆದರೆ ಪರರಲ್ಲಿ ಹಂಚಿ ತಿನ್ನುವ ಪ್ರವೃತ್ತಿ ಆತನಲ್ಲಿ ಇಲ್ಲದ ಕಾರಣ ಆತನು ತನ್ನ ಪತ್ನಿಯೊಂದಿಗೆ ಮಹಡಿಯ ಎತ್ತರದ ಅಂತಸ್ತಿನಲ್ಲಿ ಕುಳಿತು ಅಲ್ಲಿ ಯಾರೂ ಕಾಣಲಾರರು ಎಂಬ ನಿರಾಳ ಹೊಂದಿ ಇಬ್ಬರೂ ಒಬ್ಬಟ್ಟು ತಯಾರಿಸಲಾರಂಭಿಸಿದರು.
                ಅಂದು ಮುಂಜಾನೆಯೇ ಭಗವಾನರು ತಮ್ಮ ದಿವ್ಯದೃಷ್ಟಿಯಿಂದಾಗಿ ಈ ಇಬ್ಬರು ದಂಪತಿಗಳು ಸೋತಪನ್ನರಾಗುತ್ತಾರೆ ಎಂದು ತಿಳಿಸಿದರು. ಆದ್ದರಿಂದ ಅವರು ಋದ್ದಿಶಕ್ತಿ ಪ್ರವೀಣ ಮಹಾ ಮೊಗ್ಗಲಾನರನ್ನು ಕರೆಸಿ ಆ ಶ್ರೀಮಂತ ದಂಪತಿಯನ್ನು ಮಧ್ಯಾಹ್ನದ ಹೊತ್ತಿಗೆ ಕರೆತರಬೇಕೆಂದು ತಿಳಿಸಿದರು. ಇದ್ದಿಬಲಗಳನ್ನು ಹೊಂದಿದ್ದ ಮೊಗ್ಗಲಾನರು ತಕ್ಷಣ ಅಲ್ಲಿಂದ ಮರೆಯಾಗಿ ಕೋಸಿಯನ ಉಪ್ಪರಿಗೆಯ ಕಿಟಕಿ ಬಳಿ ನಿಂತರು.
                ಕೋಸಿಯ ಮೊಗ್ಗಲಾನರನ್ನು ನೋಡಿದ. ಅಲ್ಲಿಂದ ಹೊರಹೋಗುವಂತೆ ಕೂಗಾಡಿದ. ಆದರೆ ಮೊಗ್ಗಲಾನರು ಏನನ್ನು ನುಡಿಯದೆ ನಿಶ್ಶಬ್ದದಿಂದಿದ್ದರು. ಕೊನೆಗೆ ಕೋಸಿಯನೆ ಸೋತು ಹೆಂಡತಿಯೊಡನೆ ಹೀಗೆ ಹೇಳಿದನು ಚೂರು ಒಬ್ಬಟ್ಟು ಮಾಡಿ ಆ ಭಿಕ್ಷುವಿಗೆ ನೀಡು ಆಕೆ ಅದರಂತೆ ಮಾಡಿದಳು. ಆದರೆ ಆಶ್ಚರ್ಯ! ಅದು ಇಡೀ ಬಾಣಲಿಯನ್ನೇ ತುಂಬಿಸಿತು. ಕೋಸಿಯನಿಗೆ ಹೆಂಡತಿ ಹೆಚ್ಚು ಹಾಕಿರಬಹುದೆಂದು ಆಕೆಯನ್ನು ಬಯ್ದು ತಾನೇ ಚೂರು ಒಬ್ಬಟ್ಟನ್ನು ಬಾಣಲಿಗೆ ಹಾಕಿದ. ಅದೂ ಸಹ ಇಡೀ ಬಾಣಲಿಯನ್ನು ತುಂಬಿಸಿತು. ಆತ ಎಷ್ಟೇ ಚಿಕ್ಕ ಚೂರು ಬಾಣಲಿಗೆ ಹಾಕಿದರೂ ಅದು ಇಡೀ ಬಾಣಲಿಯಷ್ಟು ದಪ್ಪವಾಗಿ ಉಬ್ಬುತ್ತಿತ್ತು. ಕೊನೆಗೆ ಕೋಸಿಯನು ಹೆಂಡತಿಗೆ ಒಂದು ಒಬ್ಬಟ್ಟನ್ನು ಮೊಗ್ಗಲಾನರಿಗೆ ಕೊಟ್ಟು ಕಳುಹಿಸು ಎಂದನು. ಆಕೆ ಹಾಗೇ ಮಾಡಲು ಹೋದಾಗ ಎಲ್ಲಾ ಒಬ್ಬಟ್ಟುಗಳು ಅಂಟಿಕೊಂಡಿದ್ದವು. ಆಕೆಗೆ ಒಂದನ್ನು ಪ್ರತ್ಯೇಕಿಸಲು ಆಗಲಿಲ್ಲ. ಕೊನೆಗೆ ಕೋಸಿಯನೇ ಬೇರ್ಪಡಿಸಲು ಪ್ರಯತ್ನಿಸಿದನು. ಆದರೆ ಅದು ಸಾಧ್ಯವಾಗದೆ ನಿರಾಶೆಯಾಗಿ ಆತನ ಅಭಿಲಾಶೆ ಮತ್ತು ಹಸಿವು ಕಳೆದುಕೊಂಡನು. ಎಲ್ಲವನ್ನೂ ಈ ಭಿಕ್ಷುವಿಗೆ ನೀಡು ಎಂದನು. ಅದನ್ನು ಸ್ವೀಕರಿಸಿದ ಮೊಗ್ಗಲಾನರು ದಾನದ ಬಗ್ಗೆ ಪ್ರವಚನವೊಂದನ್ನು ನುಡಿದರು. ನಂತರ ಅವರಿಗೆ ಅವರಿಗಾಗಿ ಬುದ್ಧರು ಮತ್ತು ಸಂಘವು ಕಾಯುತ್ತಿದೆ ಎಂದು ಹೇಳಿದರು. ಶ್ರಾವಸ್ತಿಯ ಜೇತವನವು ಅಲ್ಲಿ 45 ಯೋಜನ ದೂರವಿತ್ತು. ಆದರೆ ಮಹಾ ಮೊಗ್ಗಲಾನರವರ ತಮ್ಮ ಅತೀಂದ್ರೀಯ ಶಕ್ತಿಯಿಂದಾಗಿ ಕೋಸಿಯ, ಆತನ ಪತ್ನಿ ಮತ್ತು ಒಬ್ಬಟ್ಟುಗಳ ಬುಟ್ಟಿಯ ಸಮೇತ ಬುದ್ಧರ ಮುಂದೆ ಪ್ರತ್ಯಕ್ಷರಾದರು. ಆ ಒಬ್ಬಟ್ಟುಗಳನ್ನು 500 ಭಿಕ್ಷುಗಳಿಗೆ ದಾನ ನೀಡಿದರು. ಆ ಒಬ್ಬಟ್ಟಿನ ಬುಟ್ಟಿಯು ಸರಿಯಾಗಿ 500 ಭಿಕ್ಷುಗಳಿಗೆ ಸರಿಹೋಯಿತು. ನಂತರ ಭಗವಾನರು ನೀಡಿದ ಉಪದೇಶದಿಂದ ಅವರು ಸೋತಪತ್ತಿಫಲ ಪಡೆದರು.

                ಸಂಜೆ ಭಿಕ್ಷುಗಳು ಮಹಾಮೊಗ್ಗಲಾನರ ಪ್ರತಾಪವನ್ನು ಮೆಚ್ಚಿ ಆ ವಿಷಯವನ್ನು ಚಚರ್ಿಸುವಾಗ ಭಗವಾನರು ಅಲ್ಲಿ ಬಂದರು ಮತ್ತು ಹೀಗೆ ಹೇಳಿದರು ಭಿಕ್ಷುಗಳೇ, ನೀವು ಸಹಾ ಮೊಗ್ಗಲಾನರ ತರಹ ಜೀವಿಸಬೇಕು. ಗ್ರಾಮದವರಿಂದ ಆಹಾರ ಪಡೆಯುವಾಗ ಅವರ ಶ್ರದ್ಧೆಗೆ ಮತ್ತು ಐಶ್ವರ್ಯಕ್ಕೆ ಯಾವುದೇ ಹಾನಿಯಾಗದಂತೆ ಸಂಚರಿಸಬೇಕು ಎಂದು ನುಡಿದು ಮೇಲಿನ ಗಾಥೆ ನುಡಿದರು. 

No comments:

Post a Comment