Friday 6 February 2015

dhammapada/puppavagga/4.7/cattapaani

ಬೋಧನೆಗಿಂತ ಸಾಧನೆ ಮೇಲು
ಪುಷ್ಪವೊಂದು ಆಕರ್ಷಣೀಯವು, ಹೊಳಪುಳ್ಳ ವರ್ಣವುಳ್ಳದ್ದು ಆಗಿದ್ದರೂ ಸುಂಗಂಧ ವಿಲ್ಲದಿದ್ದರೆ ಹೇಗೊ, ಹಾಗೆಯೇ ಕಾರ್ಯಗತವಾಗದ ಸುಭಾಷಿತ ವಚನಗಳು ನಿಷ್ಫಲವಾಗುತ್ತದೆ.            (51)
ಪುಷ್ಪವೊಂದು ಆಕರ್ಷಣೀಯವು, ಹೊಳಪುಳ್ಳ ವರ್ಣವುಳ್ಳದ್ದು ಆಗಿ ಸುಗಂಧಮಯವಾಗಿದ್ದರೆ ಹೇಗೋ, ಹಾಗೆಯೇ ಕಾರ್ಯಗತವಾಗಿರುವ ಸುಭಾಷಿತ ವಚನಗಳು ಸಫಲವಾಗುತ್ತದೆ. (52)
ಗಾಥ ಪ್ರಸಂಗ 4:7
ಯಾರಿಗೆ ನಾವು ಗೌರವಿಸಬೇಕು ?

                ಚತ್ತಪಾನಿ ಎಂಬ ಉಪಾಸಕ ಶ್ರಾವಸ್ತಿಯಲ್ಲಿದ್ದನು. ಆತ ಸಕದಾಗಾಮಿ ಪ್ರಾಪ್ತಿಮಾಡಿದ್ದನು. ಒಮ್ಮೆ ಆತನು ಜೇತವನ ವಿಹಾರದಲ್ಲಿದ್ದನು. ಅಲ್ಲಿ ಆತನು ಬುದ್ಧರ ಬೋಧನೆ ಕೇಳುತ್ತಿದ್ದಾಗ ರಾಜ ಪಸೇನದಿಯು ಅಲ್ಲಿಗೆ ಬಂದನು. ಆದರೆ ಚತ್ತಪಾನಿಯು ರಾಜನನ್ನು ಕಂಡು ಮೇಲೆದ್ದು ಗೌರವಿಸಲಿಲ್ಲ. ಏಕೆಂದರೆ ಹಾಗೆ ಮಾಡಿದರೆ ಬುದ್ಧರಿಗೆ ಅಗೌರವ ಸೂಚಿಸಿದಂತೆ ಆಗುವುದು ಎಂದು ಆತನು ಭಾವಿಸಿದನು. ಆದರೆ ರಾಜನಿಗೆ ಇದು ಗೊತ್ತಾಗದೆ ಸ್ವಲ್ಪ ಒಳಗೊಳಗೆ ಕುಪಿತನಾದನು. ಬುದ್ಧರಿಗೆ ಇದು ಅರಿವಾಗಿ ಚತ್ತಪಾನಿಯ ಸದ್ಗುಣಗಳನ್ನು ತಿಳಿಸಿ ಹೊಗಳಿದರು. ಆತ ಧಮ್ಮದಲ್ಲಿ ಬಹುಶ್ರುತನೆಂದು ತಿಳಿಸಿದರು. ಇದನ್ನು ಅರಿತ ರಾಜ ಪೂರ್ಣ ಶಾಂತನಾದನು. ನಂತರ ರಾಜನು ಚತ್ತಪಾಣಿಗೆ ತನ್ನ ರಾಣಿಯರಿಗೆ ಬಂದು ಧಮ್ಮಬೋಧಿಸು ಎಂದು ಕೇಳಿಕೊಂಡನು. ಆತನು ನಯವಾಗಿ ನಿರಾಕರಿಸಿ ಈ ಕಾರ್ಯಕ್ಕೆ ಭಿಕ್ಷುಗಳೇ ಸೂಕ್ತವೆಂದು ತಿಳಿಸಿ, ಬುದ್ಧರಿಗೆ ಕೇಳಿಕೊಂಡರೆ ಅವರೇ ಭಿಕ್ಷುಗಳನ್ನು ಕಳುಹಿಸುವರು ಎಂದು ತಿಳಿಸಿದನು. ಆಗ ರಾಜನು ಭಗವಾನರಲ್ಲಿ ವಿನಂತಿಸಿಕೊಂಡಾಗ ಭಗವಾನರು ಆ ಕಾರ್ಯಕ್ಕೆ ಭಿಕ್ಷು ಆನಂದರವರನ್ನು ಕಳುಹಿಸಿದರು. ನಂತರ ಆನಂದರವರು ಪ್ರತಿದಿನ ರಾಣಿ ಮಲ್ಲಿಕಾ ಮತ್ತು ರಾಣಿ ವಾಸಭಖತ್ತಿಯಾರಿಗೆ ಬೋಧಿಸಿದರು. ಮಲ್ಲಿಕಾಳು ಧಮ್ಮವನ್ನು ಗಂಭೀರವಾಗಿ ಕಲಿತಳು. ಆದರೆ ವಾಸಭಖತ್ತಿಯ ಅಂತಹ ಗಮನ ನೀಡಲಿಲ್ಲ.
                ಭಗವಾನರು ಆನಂದರವರನ್ನು ಪ್ರಶ್ನಿಸಿದರು ಆನಂದ ಉಪಾಸಿಕೆಯರು ಧಮ್ಮವನ್ನು ಕಲಿಯುತ್ತಿದ್ದಾರೆಯೇ?
                ಹೌದು ಭಗವಾನ್.
                ಯಾರು ಚೆನ್ನಾಗಿ ಕಲಿಯುತ್ತಿದ್ದಾರೆ?
                ರಾಣಿ ಮಲ್ಲಿಕಾರವರು ಚೆನ್ನಾಗಿ ಕಲಿಯುತ್ತಿದ್ದಾರೆ. ಆಕೆ ಶ್ರದ್ಧೆಯಿಂದ ಮನನ ಮಾಡುತ್ತಾರೆ. ಅರ್ಥವನ್ನು ಚೆನ್ನಾಗಿ ಮಾಡಿಕೊಳ್ಳುತ್ತಾರೆ. ಹಾಗೆಯೇ ಅದರಂತೆ ಪಾಲನೆಯನ್ನೂ ಮಾಡುತ್ತಾರೆ. ಆದರೆ ವಾಸಭಖತ್ತಿಯ ಹಾಗೆ ಕಲಿಯುತ್ತಿಲ್ಲ. ಆಕೆಯಲ್ಲಿ ಶ್ರದ್ಧೆಯಾಗಲಿ, ನೆನಪಾಗಲಿ, ಅರ್ಥವಾಗಲಿ ಪಾಲನೆಯಾಗಲಿ ಇಲ್ಲ ಎಂದರು.

                ಆನಂದ ಧಮ್ಮವು ಕೇಳುವುದರಲ್ಲಿ ಶ್ರದ್ಧೆಯಿರುವವರಿಗೆ, ಕಲಿಯುವವರಿಗೆ, ಮನನ ಮಾಡುವವರಿಗೆ, ಹಾಗು ಪಾಲನೆ ಮಾಡುವವರಿಗಾಗಿಯಿದೆ ಎಂದು ನುಡಿದು ಮೇಲಿನ ಗಾಥೆ ನುಡಿದರು.

No comments:

Post a Comment