Friday 6 February 2015

dhammapada/puppavagga/4.6/paatika

ಪರರ ಕುಂದುಗಳನ್ನು ಕಾಣಬೇಡ, ನಿನ್ನ ಕೃತ್ಯಗಳನ್ನು ಕಾಣುವಂತಾಗು
ಪರರ ದೋಷಗಳನ್ನು ಹುಡುಕುವುದು ಬೇಡ, ಪರರ ಮಾಡಿರುವ ಮತ್ತು ಮಾಡಿಲ್ಲದ ಕುರಿತು ಯೋಚನೆ ಬೇಡ, ಬದಲಾಗಿ ಒಬ್ಬನು ತಾನು ಮಾಡಿದ ಮತ್ತು ಮಾಡಿಲ್ಲದ ಕುರಿತು ವಿಶ್ಲೇಷಿಸಲಿ.         (50)
ಗಾಥ ಪ್ರಸಂಗ 4:6
ಪರರ ನಿಂದೆಯ ಕಡೆ ಗಮನಬೇಡ

                ಶ್ರಾವಸ್ತಿಯ ಶ್ರೀಮಂತ ಮಹಿಳೆಯೊಬ್ಬಳು ಪಾತಿಕನೆಂಬ ನಗ್ನ ಸನ್ಯಾಸಿಗೆ ಶಿಷ್ಯೆಯಾಗಿದ್ದಳು. ಆಕೆಗೆ ಆತನ ಮೇಲೆ ಅಪಾರ ಗೌರವ ಮತ್ತು ಭಕ್ತಿಯಿತ್ತು. ತನ್ನ ಮಗನಂತೆ ಆತನನ್ನು ಸಲಹುತ್ತಿದ್ದಳು.
                ಆಕೆಗೆ ಹಲವಾರು ಮಿತ್ರರು ಮತ್ತು ನೆರೆಹೊರೆಯವರು ಇದ್ದರು. ಅವರೆಲ್ಲಾ ಬುದ್ಧರ ಶಿಷ್ಯರಾಗಿದ್ದರು. ಅವೆರೆಲ್ಲಾ ಆಗಾಗ್ಗೆ ಬುದ್ಧರನ್ನು ಕಂಡು ಧಮ್ಮವನ್ನು ಆಲಿಸಿ ಬುದ್ಧರನ್ನು, ಧಮ್ಮವನ್ನು ಮತ್ತು ಸಂಘವನ್ನು ಹೊಗಳುತ್ತಿದ್ದರು. ಇದನ್ನು ಆಲಿಸಿದ ಆಕೆಗೆ ಬುದ್ಧರನ್ನು ಕಾಣಲು ವಿಹಾರಕ್ಕೆ ಹೋಗುವ ಇಚ್ಛೆಯಾಯಿತು. ಅದನ್ನು ಆಕೆ ಪಾತಿಕನಿಗೆ ಹೇಳಿದಾಗ ಆತನು ಹಲವಾರುಬಾರಿ ತಡೆಯುತ್ತಿದ್ದನು.
                ಈಗ ಆಕೆ ವಿಹಾರಕ್ಕೆ ಹೋಗುವ ಬದಲು ತನ್ನ ಮನೆಯಲ್ಲೇ ಔತಣ ನೀಡಲು ಬುದ್ಧರಿಗೆ ತನ್ನ ಮಗನ ಮೂಲಕ ಆಹ್ವಾನಿಸಿದಳು. ಉತ್ತಮವಾದ ಆಹಾರವನ್ನು ಆಕೆಯು ಬುದ್ಧರಿಗೆ ನೀಡಿದಳು. ಭಗವಾನರು ಆಹಾರ ಸೇವನೆಯ ನಂತರ ಅನುಮೋದನಾ ಮಾಡಿದರು (ಅಭಿನಂದನೆ). ಬುದ್ಧರ ವೈಶಿಷ್ಯಪೂರ್ಣ ಧ್ವನಿ ಕೇಳಿ ಆಕೆಗೆ ಆನಂದವಾಯಿತು. ನಂತರ ಮೊದಲಬಾರಿ ಧಮ್ಮವನ್ನು ಕೇಳಿದ್ದರಿಂದ ಆಕೆ ಮನವೆಲ್ಲಾ ಆನಂದದಿಂದ ತುಂಬಿಹೋಯಿತು. ತುಂಬಾ ಚೆನ್ನಾಗಿ ಹೇಳಿದಿರಿ ಎಂದು ಆಕೆ ಉದ್ಗಾರ ಮಾಡಿದಳು.
                ಆ ಸಮಯದಲ್ಲಿ ಪಾತಿಕ ಪಕ್ಕದ ಕೋಣೆಯಲ್ಲಿದ್ದನು. ಆತನಿಗೆ ಆಕೆಯ ಉದ್ಗಾರ ಕೇಳಿ ಇನ್ನು ಈಕೆ ನನ್ನ ಶಿಷ್ಯಳಾಗಿ ಉಳಿಯುವುದಿಲ್ಲ ಎಂದು ಯೋಚಿಸುತ್ತಾ ಕೋಪದಿಂದ ಆಕೆಯಲ್ಲಿಗೆ ಬಂದು ಬುದ್ಧರಿಗೆ ಮತ್ತು ಆಕೆಗೂ ಬೈಯ್ದಾಡಿದನು ಮತ್ತು ಶಪಿಸಿದನು. ನಂತರ ಬೈಯುತ್ತಲೇ ಮನೆಯಿಂದ ಹೊರಹೋದನು.

                ಆಗ ಆಕೆಗೆ ಮನಸ್ಸು ವಿಚಲಿತವಾಯಿತು, ಚದುರಿತು. ಆಗ ಬುದ್ಧರು ಆಕೆಗೆ ಹೀಗೆ ಕೇಳಿದರು ಉಪಾಸಿಕೆ, ನೀನು ಧಮ್ಮವನ್ನು ಆಲಿಸಲು ಮನಸ್ಸನ್ನು ಕೇಂದ್ರೀಕೃತಗೊಳಿಸುತ್ತಿಲ್ಲ. ಭಂತೆ ನನಗೆ ಪಾತಿಕನ ಬೈಗುಳಗಳು ಕ್ಷೊಭೆಗೊಳಿಸುತ್ತಿವೆ. ಆಗ ಭಗವಾನರು ಮೇಲಿನ ಗಾಥೆಯನ್ನು ನುಡಿದರು. ಅದನ್ನು ಆಲಿಸಿದ ನಂತರ ಆಕೆ ಸೋತಪತ್ತಿ ಫಲ ಪಡೆದಳು. 

No comments:

Post a Comment