ಮೂರ್ಖರಿಗೆ ಪಾಂಡಿತ್ಯದಿಂದಲೂ ನಾಶವಿದೆ
ಏನೆಲ್ಲ
ಜ್ಞಾನವನ್ನು ಮೂರ್ಖನು ಗಳಿಸಿರುವನೋ, ಅದೆಲ್ಲಾ ಆತನ ಅನರ್ಥಕ್ಕಾಗಿಯೇ. ಅದು ಮೂರ್ಖನ ಪುಣ್ಯವನ್ನು, ತಲೆಯನ್ನು ಕತ್ತರಿಸಿ ಹಾಕುತ್ತದೆ. (72)
ಗಾಥ ಪ್ರಸಂಗ 5:13
ಹಿಂಸೆಯ ಪರಿಣಾಮ ಪ್ರೇತ
ಒಮ್ಮೆ ಪೂಜ್ಯ ಮಹಾ ಮೊಗ್ಗಲಾನರವರು ಪ್ರೇತವನ್ನು
ಕಂಡರು. ಅದರ ಬಗ್ಗೆ ಬುದ್ಧರಿಗೆ ವಿಚಾರಿಸಿದಾಗ ಭಗವಾನರು ಆ ಪ್ರೇತದ ಬಗ್ಗೆ ಹೀಗೆ ಹೇಳಿದರು.
ಸತ್ಥಿಕುಟ ಎಂಬುವವನು ಕಲ್ಲು ಎಸೆಯುವುದರಲ್ಲಿ
ಕುಶಲಿಯಾಗಿದ್ದನು. ಒಮ್ಮೆ ಆತನು ತನ್ನ ಗುರುವಿನಲ್ಲಿ ತನ್ನ ಕೌಶಲ್ಯವನ್ನು ಪ್ರಯತ್ನಿಸುವೆ ಎಂದಾಗ
ಆ ಗುರುವು ಆತನಿಗೆ ಹಸು ಅಥವಾ ಮನುಷ್ಯನಿಗೆ ಮಾತ್ರ ಕಲ್ಲಿನಿಂದ ಹೊಡೆಯಬೇಡ ಎಂದು ಎಚ್ಚರಿಕೆ
ನೀಡಿದನು.
ಒಂದುದಿನ ಪಚ್ಚೇಕ ಬುದ್ಧರು ಆಹಾರಕ್ಕಾಗಿ ದಾರಿಯಲ್ಲಿ
ಹೋಗುತ್ತಿದ್ದರು. ಆಗ ಆ ಮೂರ್ಖನು ಅವರನ್ನೇ ಗುರಿಯಾಗಿ ಆರಿಸಿದನು. ಏಕೆಂದರೆ ಅವರನ್ನು ಆತನು
ಭಿಕ್ಷುಕನೆಂದು ಭಾವಿಸಿ, ಇವರನ್ನು ಹೊಡೆದರೆ
ಅವರನ್ನು ಕೇಳಲು ಯಾವುದೇ ಬಂಧುವಾಗಲಿ, ಪೋಷಕರಾಗಲಿ ಮತ್ತು
ಅವರು ಪ್ರಾಣಿಯೂ ಅಲ್ಲ ಎಂದು ಭಾವಿಸಿ ಕಲ್ಲನ್ನು ಅವರತ್ತ ಎಸೆದನು. ಆತನು ಎಸೆದ ಕಲ್ಲಿನ ವೇಗಕ್ಕೆ
ಆ ಕಲ್ಲು ಪಚ್ಚೇಕ ಬುದ್ಧರ ಬಲಕಿವಿಯಿಂದ ತೂರಿ ಎಡಕಿವಿಯಲ್ಲಿ ಹೊರಗೆ ಬಂದಿತು. ಆ ನೋವಿನಿಂದ ಅವರು
ಪರಿನಿಬ್ಬಾಣ ಪ್ರಾಪ್ತಿಮಾಡಿದರು.
ಆಗ ಜನರಿಗೆ ಸತ್ಥಿಕೂಟನ ಮೇಲೆ ಅಪಾರ ಕೋಪ ಉಂಟಾಗಿ
ಆತನಿಗೆ ಹೊಡೆದು ಕೊಂದರು. ನಂತರ ಅವನು ಅವಿಚಿ ನರಕದಲ್ಲಿ ಹುಟ್ಟಿದನು. ನಂತರ ಅಲ್ಲಿಂದ ಮೃತನಾಗಿ
ಗೃದ್ಧಕೂಟದ ಪರ್ವತದ ಬಳಿ ಪ್ರೇತವಾಗಿ ಹುಟ್ಟಿದನು. ಆ ಪ್ರೇತಕ್ಕೆ ನಿರಂತರ ಕೆಂಪಗೆ ಕಾದ
ಸುತ್ತಿಗೆಯಿಂದ ಪೆಟ್ಟುಗಳು ಬೀಳುತ್ತಿದ್ದವು.
ಹೀಗೆ ಭಗವಾನರು ಆ ಪ್ರೇತದ ಬಗ್ಗೆ ಹೇಳಿ ಮೂರ್ಖರಿಗೆ ಯಾವ
ಜ್ಞಾನ, ವಿದ್ಯೆಯು
ಫಲನೀಡದೆ, ಅವರನ್ನು
ಬದಲಾಗಿ ಹಾನಿಯುಂಟುಮಾಡುತ್ತದೆ ಎಂದು ಹೇಳಿ ಮೇಲಿನ ಗಾಥೆ ನುಡಿದರು
No comments:
Post a Comment