Friday, 6 February 2015

dhammapada/puppavagga/4.4/patipujika kumari

ಇಂದ್ರೀಯ ಭೋಗಿಯು ತೃಪ್ತಿತಾಳುವ ಮುನ್ನವೇ ಮರಣಿಸುತ್ತಾನೆ
ಇಂದ್ರೀಯ ಸುಖಗಳೆಂಬ ಪುಷ್ಪಗಳನ್ನು ಸಂಗ್ರಹಿಸುವವನಿಗೆ ಬಂಧಿತ ಮನಸ್ಸುಳ್ಳವಗೆ, ಇಂದ್ರೀಯ ಸುಖದಲ್ಲಿ ಅತೃಪ್ತನಾದವನನ್ನು ಹಂತಕನು ತನ್ನ ವಶ ಮಾಡಿಕೊಳ್ಳುವನು. (48)
ಗಾಥ ಪ್ರಸಂಗ 4:4
ಪತಿಪೂಜಿಕ ಕುಮಾರಿಯ ವೃತ್ತಾಂತ

                ಪತಿಪೂಜಿಕ ಕುಮಾರಿಯು ಶ್ರಾವಸ್ತಿಯ ಸ್ತ್ರೀಯಾಗಿದ್ದಳು. ಆಕೆಗೆ ಹದಿನಾರು ವಯಸ್ಸಿನಲ್ಲಿ ವಿವಾಹವಾಗಿ ನಾಲ್ಕು ಮಕ್ಕಳಾದವು. ಆಕೆ ಶೀಲವಂತೆ, ಹಾಗೆಯೇ ದಾನಿಯೂ ಆಗಿದ್ದಳು. ಆಕೆ ಭಿಕ್ಷುಗಳಿಗೆ ದಾನ ಮಾಡಲು ಸದಾ ಆನಂದಪಡುತ್ತಿದ್ದಳು. ಅಷ್ಟೇ ಅಲ್ಲ, ಆಕೆಯು ಆಗಾಗ್ಗೆ ವಿಹಾರದಲ್ಲಿ ಹೋಗಿ ಅಲ್ಲಿನ ಕಸಗಳನ್ನೆಲ್ಲಾ ಶುಚಿಗೊಳಿಸುತ್ತಿದ್ದಳು ಮತ್ತು ವಿಹಾರದಲ್ಲಿ ನೀರು ತುಂಬಿ ಬರುತ್ತಿದ್ದಳು. ಆಕೆಗೆ ವಿಶೇಷವಾದ ಜ್ಞಾನವಿತ್ತು, ಅದೆಂದರೆ ಜಾತಿಸ್ಸರ ಞ್ಞಾನ. ಅಂದರೆ ಹಿಂದಿನ ಜನ್ಮಗಳ ನೆನಪು. ಆಕೆ ಹಿಂದಿನ ಜನ್ಮದಲ್ಲಿ ತಾವತಿಂಸ ಲೋಕದಲ್ಲಿ ಮಾಲಾಭಾರಿ ಎಂಬುವವನಿಗೆ ಪತ್ನಿಯಾಗಿದ್ದಳು. ಆಕೆ ಆ ಹಿಂದಿನ ಜನ್ಮದಲ್ಲಿ ದೇವಲೋಕದ ಉದ್ಯಾನ ವನದಲ್ಲಿ ಹೂಗಳನ್ನು ಕೀಳುತ್ತಿರುವಾಗ ಅಲ್ಲಿಂದ ಮರೆಯಾಗಿ ಇಲ್ಲಿ ಹುಟ್ಟಿದಳು. ಆಕೆ ಒಂದು ಉಪಾಯ ಕೌಶಲ್ಯವನ್ನು ರೂಢಿಸಿಕೊಂಡಿದ್ದಳು. ಅದೇನೆಂದರೆ ಆಕೆ ಯಾವುದೇ ಪುಣ್ಯಕಾರ್ಯ ಮಾಡಲಿ ಅದರ ಫಲದಿಂದ ಆಕೆ ತಾವತಿಂಸದಲ್ಲಿ ಮತ್ತೆ ಮಾಲಾಭಾರಿಯ ಪತ್ನಿಯಾಗಲು ಇಚ್ಛಿಸುತ್ತಿದ್ದಳು.
                ಒಂದುದಿನ ಆಕೆಯು ಕಾಯಿಲೆ ಬಿದ್ದು ಸಂಜೆಯೇ ತೀರಿಹೋದಳು. ಆಕೆಯ ಇಚ್ಛೆಯಂತೆ ಆಕೆ ಮಾಲಾಭಾರಿಯ ಸಮೀಪ ಮತ್ತೆ ಕಾಣಿಸಿಕೊಂಡಳು. (ಇಲ್ಲಿನ ನೂರು ವರ್ಷ ತಾವಂಸಿಕ ಲೋಕದ ಒಂದು ದಿನಕ್ಕೆ ಸಮವಾಗಿತ್ತು). ಅಲ್ಲಿ ಅವರಿನ್ನು ಉದ್ಯಾನವನದಲ್ಲಿ ಆಟವಾಡುತ್ತಿದ್ದರು. ಮಾಲಾಭಾರಿಯು ಆಕೆಗೆ ಇಡೀ ಬೆಳಿಗ್ಗೆ ಎಲ್ಲಿ ಹೋಗಿದ್ದೆ ಎಂದು ಕೇಳಿದಾಗ ಆಕೆ ಇಡೀ ಘಟನೆ ತಿಳಿಸಿದಳು.

                ಆದರೆ ಶ್ರಾವಸ್ತಿಯಲ್ಲಿ ಆಕೆಯ ಮರಣದಿಂದ ಕೆಲವು ಭಿಕ್ಷುಗಳು ದುಃಖಿತರಾದರು. ಅವರು ಬುದ್ಧರಿಗೆ ಆಕೆ ಬೆಳಿಗ್ಗೆ ದಾನನೀಡಿ ಸಂಜೆಯೇ ತೀರಿಕೊಂಡಳು ಎಂದರು. ಆಗ ಭಗವಾನರು ಜೀವನದ ಕ್ಷಣಿಕತೆ ಹೇಳಿ ಅತೃಪ್ತಿಯಿಂದಲೇ ಅಂತ್ಯಗೊಳ್ಳುವ ಜೀವಿಗಳ ಬಗ್ಗೆ ಹೇಳಿ ಮೇಲಿನ ಗಾಥೆ ನುಡಿದರು. 

No comments:

Post a Comment