Friday, 6 February 2015

dhammapada/puppavagga/4.2/meditation on mirage

ಈ ಕಾಯವು ಮರೀಚಿಕೆಯಂತೆ
ನೊರೆಯಂತೆಯೇ ಕಾಯವು ಇದೆ ಎಂದರಿತು, ಮರೀಚಿಕೆಯಂತಹ ಅದರ ಸ್ವಭಾವವನ್ನು ಗ್ರಹಿಸಿ, ಮಾರನ (ಇಂದ್ರೀಯಾಭಿಲಾಷೆಯ) ಪುಷ್ಪಬಾಣಗಳನ್ನು ಕತ್ತರಿಸಿ ಅದೃಷ್ಯನಾಗು, ನೀ ಮೃತ್ಯುರಾಜನ ಕಣ್ಣಿನಿಂದಾಗಿ.     (46)
ಗಾಥ ಪ್ರಸಂಗ 4:2
ಮರಿಚಿಕೆಯ ಧ್ಯಾನ
                ಒಮ್ಮೆ ಭಗವಾನರು ಶ್ರಾವಸ್ತಿಯ ಜೇತವನ ವಿಹಾರದಲ್ಲಿ ನೆಲಸಿದ್ದರು. ಆಗ ಒಬ್ಬ ಭಿಕ್ಷುವು ಬುದ್ಧರಿಂದ ಧ್ಯಾನದ ವಿಷಯ ಸ್ವೀಕರಿಸಿ ಧ್ಯಾನ ಮಾಡಲು ಕಾಡಿಗೆ ಹೊರಟನು.

                ಆತನು ಧ್ಯಾನದಲ್ಲಿ ತಲ್ಲೀನನಾದನು, ಅಪಾರವಾಗಿ ಪರಿಶ್ರಮಿಸಿದನು. ಆದರು ಸಹಾ ಆತನು ಏಳಿಗೆಯನ್ನು ಹೊಂದಲಿಲ್ಲ. ಆತನಿಗೆ ನಿರಾಸೆಯಾಯಿತು. ಆಗ ಆತನು ಈ ರೀತಿ ಯೋಚಿಸಿದನು ನಾನು ಜೇತವನಕ್ಕೆ ಹಿಂದಿರುಗಿ ಭಗವಾನರಲ್ಲಿ ನನ್ನ ವ್ಯಕ್ತಿತ್ವಕ್ಕೆ ತಕ್ಕಂತೆ ಬೇರೊಂದು ಧ್ಯಾನ ವಿಷಯವನ್ನು ಕೋರಿಕೊಂಡು ಆಯ್ಕೆ ಮಾಡಿಕೊಳ್ಳು ವೆನು ಈ ರೀತಿಯ ಯೋಚನೆಗಳಿಂದ ಆತನು ಜೇತವನಕ್ಕೆ ಹಿಂತಿರುಗುತ್ತಾ ಇದ್ದನು.
                ದಾರಿಯಲ್ಲಿ ಆತನು ಮರಿಚಿಕೆಯನ್ನು ಕಂಡನು. ತನ್ನಲ್ಲಿ ಜಾಗರೂಕತೆಯಿಂದ ವಿಶ್ಲೇಷಿಸಿಕೊಂಡು ಅದು ಕೇವಲ ಭ್ರಮೆ, ವಾತಾವರಣದಿಂದ ಆದುದು, ಹೊರತು ನೀರಲ್ಲ ಎಂದು ಸಮಾಧಾನಪಡುತ್ತಾ ಹಾಗೆಯೇ ಆತನಿಗೆ ಈ ಬಗೆಯ ಚಿಂತನೆ ಉದಯಿಸಿತು. ಈ ದೇಹವು ಸಹಾ ಭ್ರಮೆಯಾಗಿದೆ, ಅನಿಶ್ಚಿತತೆಯಿಂದ ಕೂಡಿದೆ, ಅಷ್ಟೇ ಅಲ್ಲದೆ ಜನ್ಮ ಜರಾಮರಣಕ್ಕೆ ಕಾರಣವಾಗಿದೆ... ಈ ರೀತಿಯಲ್ಲಿ ಮರಿಚಿಕೆಯ ದೇಹದ ಧ್ಯಾನ ಆರಂಭಿಸಿದನು. ನಂತರ ಆತನು ಅಚರಾವತಿ ನದಿಯ ಹತ್ತಿರ ಹೋಗಿ ಸ್ನಾನ ಮಾಡಿ ಹತ್ತಿರದಲ್ಲಿರುವ ಮರದ ಬುಡದಲ್ಲಿ ವಿಶ್ರಮಿಸಿದನು. ಆಗ ಆತನಿಗೆ ನದಿಯಲ್ಲಿ ನೊರೆಯನ್ನು ಕಂಡನು. ಆಗ ಆತನಿಗೆ ಮತ್ತೆ ಚಿಂತನೆ ಆರಂಭವಾಯಿತು ಓಹ್ ಈ ದೇಹವು ಸಹಾ ನೊರೆಯಂತೆ ಉದಯಿಸಿ ಅಳಿಯುತ್ತದೆ. ಓಹ್ ಈ ದೇಹವು ಅಶುಭವಾಗಿದೆ, ಅನಿತ್ಯವಾಗಿದೆ, ದುಃಖಕರವಾಗಿದೆ. ಸದಾ ಪರಿವರ್ತನೆ ಹೊಂದುತ್ತಲೆ ಇರುತ್ತದೆ. ಈ ಯೌವ್ವನ ನಶ್ವರ, ಈ ಅರೋಗ್ಯ ನಶ್ವರ ಈ ಜೀವನ ಅನಿಶ್ಚಿತವಾಗಿದೆ... ಇವೆಲ್ಲವೂ ಈ ಮರಿಚಿಕೆಯಂತೆ... ನೊರೆಯಂತೆ ಕ್ಷಣಿಕವಾಗಿದೆ, ಅನಿತ್ಯವಾಗಿದೆ...
                ಅದೇ ವೇಳೆಯಲ್ಲಿ ಬುದ್ಧ ಭಗವಾನರು ಜೇತವನದ ವಿಹಾರದಲ್ಲಿದ್ದರು. ಅವರಿಗೆ ಈ ಭಿಕ್ಷುವಿನ ಸಾಧನೆ ಗಮನಕ್ಕೆ ಬಂದಿತು. ಆಗ ಬುದ್ಧರು ಈತನಿಗೆ ಜ್ಞಾನೋದಯ ಸ್ಥಿರ ಮಾಡಲು ಇದು ಸಕಾಲ ಎಂದು ನಿರ್ಧರಿಸಿ ಆ ಭಿಕ್ಷುವಿನ ಮುಂದೆ ಪ್ರತ್ಯಕ್ಷರಾದರು ಹಾಗು ಹೀಗೆ ಹೇಳಿದರು : ಭಿಕ್ಷು, ನೀನು ಸರಿಯಾದ ದಾರಿಯಲ್ಲಿದ್ದೀಯೆ, ಅದನ್ನೇ ಮುಂದುವರಿಸು, ನಿಜಕ್ಕೂ ದೇಹವು ಮರಿಚಿಕೆಯಂತೆ ಹಾಗು ನೊರೆಯಂತೆ ಅನಿತ್ಯಕರವಾಗಿದೆ ಎಂದು ಹೇಳಿ ಈ ಗಾಥೆಯನ್ನು ನುಡಿದರು.

                ಈ ಗಾಥೆಯ ನಂತರ ಆ ಭಿಕ್ಷುವು ಅರಹಂತನಾದನು.

No comments:

Post a Comment