ಪಶ್ಚಾತ್ತಾಪ ತರುವ ಕರ್ಮ ಮಾಡಬೇಡಿ
ಅಂತಹ ಕಮ್ಮವನ್ನು
ಮಾಡುವುದು ಸಾಧುವಲ್ಲ, ಏಕೆಂದರೆ
ಅದರಿಂದಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಯಾವುದರಿಂದ ಅಶ್ರುಮುಖನಾಗಿ ರೋಧಿಸಬೇಕಾಗುತ್ತದೋ
ಅಂತಹ ವಿಪಾಕದ ಕಮ್ಮವನ್ನು ಮಾಡುವುದು ಒಳ್ಳೆಯದಲ್ಲ. (67)
ಗಾಥ ಪ್ರಸಂಗ 5:8
ಬುದ್ಧರು ಮುಗ್ಧ ರೈತನನ್ನು ಪಾರು ಮಾಡಿದರು
ಒಬ್ಬ ರೈತನು ಶ್ರಾವಸ್ತಿಯ ಹತ್ತಿರ ಕೃಷಿ
ಮಾಡುತ್ತಿದ್ದನು. ಒಮ್ಮೆ ಕೆಲವು ಕಳ್ಳರು ಶ್ರೀಮಂತನ ಮನೆಯಲ್ಲಿ ಕಳ್ಳತನ ಮಾಡಿದರು. ಆ ಕಳ್ಳರಲ್ಲಿ
ಒಬ್ಬ ತನ್ನ ಸಹಚರರಿಗೆ ವಂಚಿಸಿ 1000 ವರಹಗಳ ಚೀಲವನ್ನು
ತನ್ನ ಅಂಗಿಯಲ್ಲಿ ಅಡಗಿಸಿಕೊಂಡಿದ್ದನು. ಕಳ್ಳರೆಲ್ಲರು ತಮ್ಮ ಪಾಲನ್ನು ಹಂಚಿಕೊಂಡು ಹೋಗುವಾಗ
ವಂಚಕ ಕಳ್ಳನು ತನ್ನ ರಹಸ್ಯ ಚೀಲವನ್ನು ಅರಿವಿಲ್ಲದೆ ಬೀಳಿಸಿಕೊಂಡು ಹೊರಟನು.
ಪ್ರತಿದಿನದಂತೆ ಬುದ್ಧ ಭಗವಾನರು ಮುಂಜಾನೆ ತಮ್ಮ ಕರುಣಾ
ಸಮಾಪತ್ತಿಯಲ್ಲಿ ಯಾರಿಗೆ ಸಹಾಯ ಮಾಡಲಿ ಎಂದು ವೀಕ್ಷಿಸಿದಾಗ ರೈತನಿಗೆ ಸಂಭವಿಸಲಿರುವ ಅನರ್ಥ
ವೀಕ್ಷಿಸಿದರು, ಆತನಿಗೆ ಸಹಾಯ
ಮಾಡಲು ಆ ರೈತನ ಹೊಲಕ್ಕೆ ನಡೆದರು. ಬುದ್ಧರು ಭಂತೆ ಆನಂದನೊಡನೆ ಆ ಹೊಲದ ಹತ್ತಿರ ಬಂದಾಗ ಆ ರೈತನು
ಭಗವಾನರಿಗೆ ವಂದಿಸಿದನು. ನಂತರ ಹೊಲದಲ್ಲಿ ಮತ್ತೆ ಉಳುಮೆ ಮಾಡುತ್ತಿದ್ದನು. ಭಗವಾನರು ಆತನಿಗೆ
ಏನನ್ನೂ ಹೇಳದೆ ಆ ಹಣದ ಚೀಲದ ಹತ್ತಿರ ಹೋಗಿ ನಿಂತು ಆನಂದನಿಗೆ ಹೀಗೆ ಹೇಳಿದರು ನೋಡಿದೆಯಾ ಆನಂದ
ವಿಷಪೂರಿತ ಸರ್ಪ. ನಾನು ಕಾಣುತ್ತಿದ್ದೇನೆ ಭಂತೆ, ನಿಜಕ್ಕೂ ಅದು ವಿಷಪೂರಿತ ಸರ್ಪವೇ ಎಂದು ಆನಂದರು ಉತ್ತರಿಸಿದರು. ರೈತನು ಈ ಸಂಭಾಷಣೆಯನ್ನು
ಕೇಳಿದನು. ಗಾಬರಿಯಿಂದ ಆ ಹಾವನ್ನು ನಾನು ಸಂಹರಿಸುವೆ ಎಂದು ಆತನು ಚುಚ್ಚುಗೋಲನ್ನು ತೆಗೆದುಕೊಂಡು
ಆ ಸ್ಥಳದ ಹತ್ತಿರ ಬಂದನು. ಆಗ ಆತನಿಗೆ ಚೀಲದ ಹೊರತು ಬೇರೇನೂ ಕಾಣಲಿಲ್ಲ. ಓಹ್ ಭಗವಾನರು ಈ
ಚೀಲವನ್ನು ಕುರಿತೇ ಹೇಳಿರಬೇಕು ಎಂದುಕೊಂಡನು. ಆತನು ಆ ಚೀಲವನ್ನು ಪಕ್ಕದಲ್ಲಿಟ್ಟು ಮತ್ತೆ ಉಳುಮೆ
ಆರಂಭಿಸಿದನು.
ನಂತರ ಭಟರೂ ಕಳ್ಳತನವನ್ನು ಕಂಡುಹಿಡಿದು, ಕಳ್ಳರು ಹಂಚಿಕೊಂಡ ಸ್ಥಳಕ್ಕೆ ಬಂದರು. ಅಲ್ಲಿ ರೈತನ
ಪಾದಚಿಹ್ನೆಯನ್ನು ಗುರುತಿಸಿ ಹಾಗೆಯೇ ಆ ಚೀಲವನ್ನು ಕಂಡುಹಿಡಿದರು. ನಂತರ ರೈತನಿಗೆ ಓಹ್ ನೀನು ಆ
ಮನೆಯನ್ನು ಕಳ್ಳತನ ಮಾಡಿರುವೆಯಾ ಮತ್ತು ಇಲ್ಲಿ ಉಳುಮೆ ಮಾಡಿಕೊಂಡು ಇರುವೆಯಾ? ನಂತರ ಆತನಿಗೆ ಹೊಡೆಯುತ್ತಾ ರಾಜನ ಬಳಿಗೆ ಕರೆತಂದರು.
ರಾಜನು ಆತನಿಗೆ ಮರಣದಂಡನೆ ವಿಧಿಸಿದನು.
ನಂತರ ಭಟರು ಆತನಿಗೆ ಚಾಟಿಯಲ್ಲಿ ಹೊಡೆಯುತ್ತಾ
ಹೋಗುತ್ತಿದ್ದಾಗ ಆತನು ಬುದ್ಧರ ಮತ್ತು ಆನಂದರ ಸಂಭಾಷಣೆಯನ್ನು ಜೋರಾಗಿ ಪುನರಾವರ್ತನೆ
ಮಾಡುತ್ತಿದ್ದನು. ನೋಡಿದೆಯಾ ಆನಂದ ವಿಷಪೂರಿತ ಸರ್ಪ, ನಾನು ಕಾಣುತ್ತಿದ್ದೇನೆ ಭಂತೆ, ನಿಜಕ್ಕೂ ಅದು ವಿಷಪೂರಿತ ಸರ್ಪವೇ? ಆಗ ಭಟರು ಹೀಗೆ ಏಕೆ ಹೇಳುತ್ತಿರುವೆ ಎಂದು ಪ್ರಶ್ನಿಸಿದಾಗ ನಾನು ರಾಜನ
ಮುಂದೆಯೇ ಹೇಳುತ್ತೇನೆ ಎಂದು ಉತ್ತರಿಸಿದನು.
ರಾಜನ ಹತ್ತಿರ ನಾನು ಕಳ್ಳನಲ್ಲ ಮಹಾರಾಜರೇ ಎಂದು ಪೂರ್ಣ
ವೃತ್ತಾಂತವನ್ನು ತಿಳಿಸಿದನು. ಆಗ ರಾಜನು ಆತನನ್ನು ಕರೆದುಕೊಂಡು ಬುದ್ಧರ ಹತ್ತಿರ ಬಂದು ಇದರ
ಬಗ್ಗೆ ವಿಚಾರಿಸಿದಾಗ ಬುದ್ಧರು ಹೌದು ಮಹಾರಾಜ, ನಾನು ಹಾಗೆ ಹೇಳುವಾಗ ಅಲ್ಲಿದ್ದೆ. ಪ್ರಜ್ಞಾವಂತನೊಬ್ಬ ಪಶ್ಚಾತ್ತಾಪಪಡುವಂತಹ ಪಾಪ ಮಾಡಬಾರದು
ಎಂದು ಹೇಳಿ ಮೇಲಿನ ಗಾಥೆ ಹೇಳಿದರು. ರಾಜನು ನಿರಪರಾಧಿಯಾದ ರೈತನಿಗೆ ಬಿಡುಗಡೆ ಮಾಡಿದನು.
No comments:
Post a Comment