Monday 18 May 2015

dhammapada/attavagga/12.1/bodhirajakumara

                 12. ಆತ್ತ ವಗ್ಗ

ಜಾಗರೂಕನಾಗು
ತನ್ನನ್ನೇ ಪ್ರಿಯನೆಂದು ತಿಳಿದಿರುವವನು, ತನ್ನನ್ನು ಸುರಕ್ಷಿತವಾಗಿ ರಕ್ಷಿಸಿಕೊಳ್ಳಬೇಕು, ಪಂಡಿತನಾಗಿರುವವನು ಜೀವನದ (ರಾತ್ರಿಯ) ಮೂರು ಯಾಮಗಳಲ್ಲಿ (ಹಂತಗಳಲ್ಲಿ) ಒಂದರಲ್ಲಿಯಾದರೂ ಜಾಗೃತಿ ಭಾವದಿಂದರಬೇಕು. (157)
ಗಾಥ ಪ್ರಸಂಗ 12:1
ಪ್ರಾಣಿಹತ್ಯೆಯ ಪರಿಣಾಮ


                ಬೋಧಿರಾಜಕುಮಾರನು ಭವ್ಯವಾದ ಅರಮನೆಯನ್ನು ಕಟ್ಟಿಸಿದನು. ಯಾವಾಗ ಅರಮನೆಯು ಪೂರ್ಣವಾಗುತ್ತದೋ, ಆಗ ಆತನು ಬುದ್ಧರನ್ನು ಹಾರೈಕೆಗಾಗಿ ಮತ್ತು ಔತಣಕ್ಕಾಗಿ ಆಹ್ವಾನಿಸಿದನು. ಈ ವಿಶೇಷ ಸಂದರ್ಭಕ್ಕಾಗಿ ಆತನು ಅರಮನೆಯಲ್ಲೆಲ್ಲಾ ಸುಗಂಧದ್ರವ್ಯಗಳಿಂದ ಹರಡಿಸಿಬಿಟ್ಟಿದ್ದನು. ಆದರೆ ಬೋಧಿರಾಜಕುಮಾರನಿಗೆ ಯಾವುದೇ ಮಕ್ಕಳಿರಲಿಲ್ಲ. ಆತನು ಮಕ್ಕಳಾಗಲೆಂದು ಬುದ್ಧರಿಗಾಗಿ ದೊಡ್ಡ ರತ್ನಗಂಬಳಿಯನ್ನು ಅರಮನೆಯ ಒಳದಾರಿಯುದ್ದಕ್ಕೂ ಹರಡಿಸಿದ್ದನು. ಭಗವಾನರು ಅಲ್ಲಿಗೆ ಬಂದರು. ಆಗ ಬೋಧಿರಾಜಕುಮಾರನು ಭಗವಾನರಲ್ಲಿ ಭಗವಾನ್ ದಯವಿಟ್ಟು ಅರಮನೆಯಲ್ಲಿ ಪ್ರವೇಶಿಸಬೇಕು ಎಂದು ವಿನಂತಿಸಿಕೊಂಡನು. ಆದರೆ ಭಗವಾನರು ಪ್ರವೇಶಿಸುವ ಬದಲು ಆನಂದನತ್ತ ಅರ್ಥಗಭರ್ಿತವಾಗಿ ದಿಟ್ಟಿಸಿದರು. ತಕ್ಷಣ ಅದನ್ನು ಅರ್ಥ ಮಾಡಿಕೊಂಡು ಆನಂದನು ರತ್ನಗಂಬಳಿಯನ್ನು ತೆಗೆದರೆ ಮಾತ್ರ ಭಗವಾನರು ಒಳಪ್ರವೇಶಿಸುವರು ಎಂದನು. ನಂತರ ಹಾಗೇ ಆಯಿತು. ಉತ್ತಮೋತ್ತಮ ಭೋಜನದ ನಂತರ ಬೋಧಿರಾಜಕುಮಾರನು ಹೀಗೆ ಪ್ರಶ್ನಿಸಿದರು:
                ಭಗವಾನ್, ತಾವು ರತ್ನಗಂಬಳಿಯ ಮೇಲೆ ಹೆಜ್ಜೆ ಯಾಕೆ ಇಡಲಿಲ್ಲ?
                ಅದರ ಮೇಲೆ ಹಾದು ಹೋದರೆ ಆ ಪುಣ್ಯಫಲದಿಂದಾಗಿ ಮಕ್ಕಳಾಗಲಿ ಎಂದು ಇಚ್ಛಿಸಿರಲಿಲ್ಲವೇ?
                ಹೌದು.
                ಓ ಬೋಧಿರಾಜಕುಮಾರನೇ, ನಿನ್ನ ಹಿಂದಿನ ಜನ್ಮದ ಪಾಪಕರ್ಮದಿಂದಾಗಿ ನಿನಗೆ ಯಾವುದೇ ಸಂತಾನವಾಗುವುದಿಲ್ಲ.
                ಭಗವಾನ್ ನಾನು ಆಗ ಏನು ಮಾಡಿದೆನು.
                ಓ ಬೋಧಿರಾಜಕುಮಾರನೇ, ಹಿಂದಿನ ಜನ್ಮವೊಂದರಲ್ಲಿ ಆಗಲೂ ಈಕೆಯೇ ನಿನ್ನ ಪತ್ನಿಯಾಗಿದ್ದಳು. ಒಂದು ಹಡಗಿನ ದುರಂತದಲ್ಲಿ ಕೇವಲ ನೀವಿಬ್ಬರೇ ಉಳಿದಿರಿ ಮತ್ತು ಸಮೀಪದ ದ್ವೀಪದಲ್ಲಿ ಉಳಿದುಕೊಂಡು ಪಕ್ಷಿಗಳ ಮೊಟ್ಟೆ ಮತ್ತು ಪಕ್ಷಿಗಳನ್ನು ತಿಂದುಹಾಕಿದಿರಿ. ಅದಕ್ಕಾಗಿ ಎಳ್ಳಷ್ಟು ವಿಷಾಧವಾಗಲಿ, ಪಶ್ಚಾತ್ತಾಪವಾಗಲಿ ಮಾಡಲೇ ಇಲ್ಲ. ನಿಮ್ಮ ಸ್ವಾರ್ಥಕ್ಕಾಗಿ ಬಡಜೀವಿಗಳನ್ನು ಹತ್ಯೆ ಮಾಡಿದಿರಿ. ಆ ಪಾಪದ ಫರಿಣಾಮದಿಂದಲೇ ಈ ಜನ್ಮದಲ್ಲಿ ನಿಮಗೆ ಯಾವುದೇ ಸಂತಾನವಾಗುವುದಿಲ್ಲ.

                ಆಗಿನ ಜನ್ಮದ ಮೂರು ಯಾಮಗಳಲ್ಲಿ ಒಂದರಲ್ಲಿ ಆದರೂ ಪಶ್ಚಾತ್ತಾಪಪಟ್ಟಿದ್ದರೆ ಈಗ ಮಕ್ಕಳಾಗುತ್ತಿತ್ತು ಎಂದು ಹೇಳಿ ಈ ಮೇಲಿನ ಗಾಥೆ ನುಡಿದರು.

No comments:

Post a Comment