Monday 18 May 2015

dhammapada/attavagga/12.9/culakaala

ತನ್ನಿಂದಲೇ ಶುದ್ಧಿ ಮತ್ತು ಅಶುದ್ಧಿಗಳಾಗುತ್ತವೆ
ತನ್ನಿಂದಲೇ ಪಾಪವಾಗುತ್ತದೆ, ತನ್ನಿಂದಲೇ ಕಲುಷಿತನಾಗುತ್ತಾನೆ, ತನ್ನಿಂದಲೇ ಪಾಪ ತಡೆದಾಗ, ತಾನಾಗಿಯೇ ವಿಶುದ್ಧನಾಗುತ್ತಾನೆ. ಶುದ್ಧಿಅಶುದ್ಧಿಗಳು ತನ್ನನ್ನು ಅವಲಂಬಿಸಿವೆ, ಅನ್ಯರಾರೂ ತನ್ನನ್ನು ಶುದ್ಧಿಗೊಳಿಸಲಾರರು.            (165)
ಗಾಥ ಪ್ರಸಂಗ 12:9
ಚೂಲಕಾಲ ಉಪಾಸಕನ ರಕ್ಷಣೆ
                ಚೂಲಕಾಲನೆಂಬ ಶ್ರದ್ಧಾಳು ಉಪಾಸಕನೊಬ್ಬನಿದ್ದನು. ಆತನು ಉಪೋಸಥ ದಿನದಂದು ಅಷ್ಠಾಂಗಶೀಲ ಪಾಲಿಸಿದನು. ಹಾಗು ರಾತ್ರಿಯೆಲ್ಲಾ ಧಮ್ಮೋಪದೇಶ ಆಲಿಸುತ್ತ, ಜೇತವನದ ವಿಹಾರದಲ್ಲೇ ಕಳೆದನು. ಮುಂಜಾನೆ ಆತನು ಮುಖ ತೊಳೆಯಲೆಂದು ವಿಹಾರದ ಕೊಳದ ಬಳಿಗೆ ಬಂದನು. ಅದೇವೇಳೆಯಲ್ಲಿ ಕಳ್ಳನೊಬ್ಬನನ್ನು ಅಟ್ಟಿಸಿಕೊಂಡು ಧನಿಕರು ಬೆನ್ನುಹತ್ತಿದ್ದರು. ಆ ಕಳ್ಳನು ಓಡುತ್ತಾ ಆ ಕಳುವು ವಸ್ತುಗಳನ್ನು ಚೂಲಕಾಲನ ಬಳಿಗೆ ಎಸೆದು ಓಡಿ ತಪ್ಪಿಸಿಕೊಂಡನು. ಚೂಲಕಾಲನು ಮುಗ್ಧತೆಯಿಂದ ಏನಿದು ಎಂದು ಪರೀಕ್ಷಿಸುತ್ತಿರುವಾಗ, ಆ ಧನಿಕರ ಕೈಗೆ ಸಿಕ್ಕಿಬಿದ್ದು, ಅವರ ಆಕ್ರೋಶಕ್ಕೆ ಬಲಿಯಾಗಿ ಥಳಿತಕ್ಕೆ ಗುರಿಯಾದನು.
                ಸೌಭಾಗ್ಯವಶಾತ್ ಕೆಲವು ದಾಸಿಯರು ನೀರು ಹಿಡಿಯಲೆಂದು ಅಲ್ಲಿಗೆ ಬಂದಿದ್ದರು. ಅವರು ಆ ಧನಿಕನಿಗೆ ಈತನ ಸುಶೀಲತೆಯ ಬಗ್ಗೆ ಹೇಳಿ ಚೂಲಕಾಲನನ್ನು ಬಿಡುಗಡೆ ಮಾಡಿಸಿದರು.
                ಈ ವಿಷಯವನ್ನು ಚೂಲಕಲನು ಭಗವಾನರ ಬಳಿಗೆ ಬಂದು ಹೇಳಿದಾಗ ಭಗವಾನರು ಹೀಗೆ ಹೇಳಿದರು: ಓ ಚೂಲಕಾಲ, ನೀನು ರಕ್ಷಿಸಲ್ಪಟ್ಟಿದ್ದು ಆ ಸೇವಕಿಯರ ಸಮರ್ಥನೆಯಿಂದಲೇ ಆಗಿದೆ. ಪಾಪಿಗಳು ನಿರಯಕ್ಕೆ ಗುರಿಯಾದರೆ, ಶೀಲವಂತರು ಸುಗತಿಗೆ ಹೋಗುವರು ಮತ್ತು ಪರಿಶುದ್ಧರು ನಿಬ್ಬಾಣ ಸಾಕ್ಷಾತ್ಕರಿಸುವರು ಎಂದು ಹೇಳಿ ಮೇಲಿನ ಗಾಥೆ ನುಡಿದರು. ಪ್ರವಚನದ ಅಂತ್ಯದಲ್ಲಿ ಚೂಲಕಾಲನು ಸೋತಾಪನ್ನನಾದನು

No comments:

Post a Comment