Friday 8 May 2015

dhammapada/jaravagga/11.4/proudbhikkhus

ಅಸ್ಥಿ ದೃಶ್ಯದಿಂದ ಆಸೆಯ ನಾಶ
ಈ ಪಾರಿವಾಳದ ವರ್ಣದ ಮೂಳೆಗಳು ಶರತ್ಕಾಲದಲ್ಲಿರುವಂತೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ, ಒಣಗಿದ ಸೋರೆ ಬುರುಡೆಗಳಂತಿರುವ ತಲೆಗಳು, ಇದನ್ನು ಸಾಕ್ಷಾತ್ ಗಮನಿಸಿಯು ಹೇಗೆತಾನೇ ಮುಖಗಳಲ್ಲಿ ಆನಂದಿಸಲು ಸಾಧ್ಯ?”           (149)
ಗಾಥ ಪ್ರಸಂಗ 11:4
ಅತಿ ಅಭಿಮಾನಿ ಭಿಕ್ಷುಗಳ ಜ್ಞಾನೋದಯ

                ಭಿಕ್ಷುಗಳ ಗುಂಪೊಂದು ಧ್ಯಾನಭ್ಯಾಸ ಮಾಡಲು ಕಾಡಿಗೆ ಹೊರಟರು. ಅಲ್ಲಿ ಅವರು ಪರಿಶ್ರಮಯುತರಾಗಿ ಸಾಧನೆ ಮಾಡಿ, ಧ್ಯಾನಾವಸ್ಥೆಗಳ ಶ್ರೇಣಿಗಳನ್ನು ಸಿದ್ಧಿಸಿದರು. ಆಳವಾದ ಸಮಾಧಿ ಸಿದ್ಧಿಸಿದ ನಂತರ ಅವರಲ್ಲಿ ರಾಗ, ದ್ವೇಷಗಳ ಯೋಚನೆಗಳು ಉಂಟಾಗದ ಕಾರಣ ಅವರು ತಮ್ಮನ್ನು ಅರಹಂತರೆಂದು ಭಾವಿಸಿದರು. ಆದರೆ ವಾಸ್ತವವಾಗಿ ಅವರಿನ್ನೂ ಅರಹತ್ವ ಸಾಧಿಸಿರಲಿಲ್ಲ. ಅವರು ಕೇವಲ ತಮ್ಮ ಅತಿ ಅಭಿಮಾನ ದಿಂದಾಗಿ ಅತಿಯಾಗಿ ಅಂದಾಜು ಮಾಡಿಬಿಟ್ಟಿದ್ದರು. ತಮ್ಮನ್ನು ತಾವು ಶ್ರೇಷ್ಠರೆಂದು ಪರಿಗಣಿಸಿ ಮಾಡಿಬಿಟ್ಟರು. ಹೀಗಾಗಿ ಅವರು ಬುದ್ಧರನ್ನು ಭೇಟಿಯಾಗಲು ಬರುತ್ತಿದ್ದರು.
                ಅವರಿನ್ನೂ ವಿಹಾರದ ಹೆಬ್ಬಾಗಿಲ ಬಳಿ ಬರುತ್ತಿದ್ದಂತೆ, ಭಗವಾನರು ಅವರಿಗೆ ಸರಿದಾರಿಗೆ ತರಲೆಂದು, ಆನಂದನಲ್ಲಿ ಹೀಗೆ ಆಜ್ಞಾಪಿಸಿದರು. ಆನಂದ, ಆ ಭಿಕ್ಷುಗಳು ಈಗಲೇ ನನಗೆ ಭೇಟಿಯಾದರೆ ಅವರಿಗೆ ಲಾಭವಾಗದು. ಆದ್ದರಿಂದಾಗಿ ಅವರಿಗೆ ಸ್ಮಶಾನಕ್ಕೆ ಹೋಗಿ ನಂತರ ನನ್ನನ್ನು ಕಾಣಲು ಹೇಳು. ಪೂಜ್ಯ ಆನಂದನು ಹಾಗೆಯೇ ಸಂದೇಶವನ್ನು ಅವರಿಗೆ ತಿಳಿಸಿದನು. ಅದನ್ನು ಆಲಿಸಿದ ಆ ಭಿಕ್ಷುಗಳು ಹೀಗೆ ಯೋಚಿಸಿದರು. ಭಗವಾನರು ಸರ್ವಜ್ಞ ಸಂಪನ್ನರು, ಅವರು ಹೀಗೆ ಆಜ್ಞಾಪಿಸಲು ಕಾರಣ ಇದ್ದೇ ಇರುತ್ತದೆ ಎಂದು ಚಿಂತಿಸಿ ಅವರು ಸ್ಮಶಾನಕ್ಕೆ ಹೊರಟರು. ಅಲ್ಲಿ ಅವರು ಶವಗಳ ವೀಕ್ಷಣ ಧ್ಯಾನ (ಅಶುಭ ಧ್ಯಾನ) ಮಾಡಿದರು. ಅಲ್ಲಿ ಅವರು ಕೊಳೆತು ನಾರುವ ಅಸ್ಥಿಪಂಜರದ ಶವಗಳನ್ನು ನೋಡಿ ಓಹ್, ಇದು ಕೇವಲ ಅಸ್ಥಿಗಳೇ, ಮೂಳೆಗಳೇ, ಅಸ್ಥಿಪಂಜರ ಮಾತ್ರವೇ ಎಂದು ಧ್ಯಾನಿಸಿದರು.
                ನಂತರ ಅವರು ಹೊಸ ಶವಗಳ ಧ್ಯಾನ ಮಾಡಲು ಹೋದರು. ಅಲ್ಲಿಯ ಸ್ತ್ರೀಯರ ಶವಗಳನ್ನು ಧ್ಯಾನಿಸಲು ಹೋದಾಗ ಅವರಲ್ಲಿ ಕಾಮವು ಜಾಗೃತವಾಯಿತು. ತಕ್ಷಣ ಅವರಿಗೆ ತಾವು ಅರಹಂತರಾಗಿಲ್ಲ, ತಮ್ಮಲ್ಲಿ ರಾಗವಿದೆ ಎಂಬ ಕಠೋರ ಸತ್ಯ ಅರಿವಾಯಿತು.
                ಭಗವಾನರು ಅವರನ್ನು ಗಂಧ ಕುಟೀರದಿಂದಲೇ ದಿವ್ಯದೃಷ್ಟಿಯಿಂದ ವೀಕ್ಷಿಸುತ್ತಿದ್ದರು. ಅವರು ಅಲ್ಲಿಂದ ತಮ್ಮ ಪ್ರತಿಬಿಂಬ ಸ್ವರೂಪದ ಕಿರಣವೊಂದನ್ನು ಕಳುಹಿಸಿ ಪ್ರತ್ಯಕ್ಷರಾದರು. ನಂತರ ಹೀಗೆ ಹೇಳಿದರು, ಭಿಕ್ಷುಗಳೇ, ಆ ಮೂಳೆಗಳನ್ನು ನೋಡಿಯೂ ಸಹಾ ನೀವು ಶವಗಳಲ್ಲಿ ಆಸೆಯ ಬಯಕೆಗಳು ಹೊಂದುವುದು ಯೋಗ್ಯವೇ? ಎಂದು ನುಡಿದು ಈ ಮೇಲಿನ ಗಾಥೆ ನುಡಿದರು. ಪೂರ್ಣ ಪ್ರವಚನದ ನಂತರ ಆ ಭಿಕ್ಷುಗಳೆಲ್ಲಾ ಅರಹಂತರಾದರು.

No comments:

Post a Comment