Friday 8 May 2015

dhammapada/jaravagga/11.9/mahadhana

ಸೋಮಾರಿಯು ಪಶ್ಚಾತ್ತಾಪ ಪಡುತ್ತಾನೆ
ಯೌವ್ವನದಲ್ಲಿ ಬ್ರಹ್ಮಚರ್ಯೆಯ ಜೀವನವನ್ನು ಆಚರಿಸದವರು ಹಾಗು ಯೌವ್ವನದಲ್ಲೇ ಧನವನ್ನು ಸಂಪಾದಿಸದವನು, ಮೀನುಗಳಿಲ್ಲದ ಕೊಳದಲ್ಲಿರುವ ಮುದಿ ಕೊಕ್ಕರೆಗಳಂತೆ ಕೊರಗುತ್ತಾನೆ.’’            (155)
‘’ಯೌವ್ವನದಲ್ಲಿ ಬ್ರಹ್ಮಚರ್ಯೆಯುತ ಜೀವನವನ್ನು ಆಚರಿಸದವನು ಹಾಗು ಯೌವ್ವನದಲ್ಲಿ ಧನವನ್ನು ಸಂಪಾದಿಸದವನು, ಗುರಿ ತಲುಪದ ಬಾಣಗಳಂತೆ, ಅಪ್ರಯೋಜಕರಾಗಿ ಹಿಂದಿನದನ್ನು ನೆನೆಯುತ್ತ ಪಶ್ಚಾತ್ತಾಪದಿಂದ ಕೊರಗುವರು.’’ (156)
ಗಾಥ ಪ್ರಸಂಗ 11:9
ದೂರದೃಷ್ಟಿಯಿಲ್ಲದ ಮಹಾಧನನ ಅತಿ ಖಚರ್ು ದಾರಿದ್ರ್ಯಕ್ಕೆ ದಾರಿಯಾಯಿತು


                ಕಾಶಿಯಲ್ಲಿದ್ದ ಅತಿ ಶ್ರೀಮಂತನೊಬ್ಬನಿಗೆ ಮಗನು ಜನಿಸಿದನು. ಆತನಿಗೆ ಮಹಾಧನನೆಂದು ಹೆಸರಿಟ್ಟರು. ಆ ಮಹಾಧನನು 80 ಲಕ್ಷ ಕೋಟಿಗೆ ವಾರಸುದಾರನಾಗಿದ್ದನು. ಆ ಶ್ರೀಮಂತ ದಂಪತಿಗಳು ಮಗನಿಗೆ ವಿದ್ಯಾಭ್ಯಾಸವೇಕೆ? ವೃತ್ತಿಯೇಕೆ? ಇರುವ ಧನವನ್ನು ಅನುಭವಿಸಿಕೊಂಡು ಸುಖಿಯಾಗಿರಲಿ ಎಂದು ಆತನಿಗೆ ವಿದ್ಯೆ ಕಲಿಯುವಂತಹ ಕಷ್ಟವನ್ನೇ ನೀಡಲಿಲ್ಲ.
                ಇದೇರೀತಿಯಲ್ಲಿ ಕಾಶಿಯಲ್ಲಿದ್ದ ಮತ್ತೊಬ್ಬ ಶ್ರೀಮಂತನಿಗೂ ಮಗಳಿದ್ದಳು. ಅಷ್ಟೇ ಧನಶಾಲಿಯಾಗಿದ್ದ ಆತನು ಸಹಾ ಈ ಹಿಂದಿನ ಶ್ರೀಮಂತನಂತೆಯೇ ಯೋಚಿಸಿ ಆತನ ಮಗಳಿಗೆ ಯಾವ ವಿದ್ಯಾಭ್ಯಾಸವೂ ಕಲಿಸಲಿಲ್ಲ. ಕೇವಲ ನೃತ್ಯಗೀತೆಗಳಷ್ಟೇ ಕಲಿಸಿದರು. ಆ ಶ್ರೀಮಂತನ ಕುಮಾರನಿಗೂ ಮತ್ತು ಈ ಶ್ರೀಮಂತನ ಕುಮಾರಿಗೂ ವಿವಾಹವನ್ನು ಮಾಡಿದರು. ಕೆಲ ವರ್ಷಗಳ ನಂತರ ಇಬ್ಬರ ತಂದೆ-ತಾಯಿಯರು ತೀರಿಹೋದರು. ಹೀಗಾಗಿ ಅವರು ಒಟ್ಟು 160 ಲಕ್ಷ ಕೋಟಿ ಅನುಭವಿಸುವವರಾದರು.
                ಈ ಯುವಕನನ್ನೇ ಗಮನಿಸುತ್ತಿದ್ದ ಕೆಲವು ದುರಾಚಾರಿಗಳು ಉಪಾಯಗಳನ್ನು ಮಾಡಿ ಆತನ ಸ್ನೇಹ ಬೆಳೆಸಿ ಹಾಗೆಯೇ ಉಪಾಯ ಮಾಡಿ ಆತನಿಗೆ ಕುಡಿತ ಕಲಿಸಿದರು. ಹಾಗೆಯೇ ಆತನಿಗೆ ಜೂಜನ್ನು ಕಲಿಸಿದರು. ಕೇವಲ ಈ ಎರಡು ಚಟಗಳಿಂದಲೇ ಆತನು ತನ್ನ ಎಲ್ಲಾ ಧನವನ್ನು ಕೆಲವರ್ಷಗಳಲ್ಲೇ ಕಳೆದುಕೊಂಡನು.
                ಆಗ ಆ ದುರಾಚಾರಿ ಮಿತ್ರರು ಆತನ ತಲೆಕೆಡಿಸಿ ಆತನ ಪತ್ನಿಯ ಧನವನ್ನು ಖಚರ್ು ಮಾಡುವಂತೆ ಪ್ರೇರೇಪಿಸಿ ಅದನ್ನು ಸಹಾ ಬರಿದು ಮಾಡಿದರು. ನಂತರ ಅಷ್ಟಕ್ಕೇ ಬಿಡದೆ ಆತನ ಸ್ಥಿರಾಸ್ತಿ, ಚರಾಸ್ತಿಗಳಲ್ಲಿ ಜೂಜು ಕುಡಿತಕ್ಕೆ ಬಳಸುವಂತೆ ಮಾಡಿ ಆತನನ್ನು ದರಿದ್ರನನ್ನಾಗಿ ಮಾಡಿದರು.
                ಎಲ್ಲವನ್ನೂ ಕಳೆದುಕೊಂಡ ಮೇಲೆ ಅವರ್ಯಾರೂ ಆತನ ಹತ್ತಿರ ಸುಳಿಯಲಿಲ್ಲ, ಆಗ ಆ ಯುವಕನಿಗೆ ಬುದ್ಧಿ ಬಂತು. ಆದರೆ ಕಾಲ ಮಿಂಚಿ ಹೋಗಿತ್ತು. ಮತ್ತೆ ಹಣವನ್ನು ಸಂಪಾದನೆ ಮಾಡೋಣವೆಂದರೆ ಆತನು ಯಾವುದೊಂದು ಉದ್ಯೋಗ ಕಲಿತಿರಲಿಲ್ಲ. ಹೀಗಾಗಿ ಆತನು ಮತ್ತು ಆತನ ಪತ್ನಿಯು ಮಡಿಕೆ ಎತ್ತಿಕೊಂಡು ಭಿಕ್ಷಾಟನೆಗೆ ಇಳಿದರು. ಹೀಗಾಗಿ ಕೊನೆಗೆ ಆತನು ಪರರ ಎಂಜಲಿನ ಆಹಾರ ಸೇವಿಸುವಂತಾಯಿತು.
                ಒಂದುದಿನ ಆತನು ಭಿಕ್ಷೆಗೆ ನಿಂತಿರುವುದನ್ನು ಕಂಡು ಭಗವಾನರು ಕನಿಕರದಿಂದ, ವಿಷಾಧದಿಂದ ನಕ್ಕರು. ಕಾರಣವಿಲ್ಲದೆ ಭಗವಾನರು ಹೀಗೆ ನಗಲಾರರು ಎಂದು ಲೆಕ್ಕಚಾರ ಹಾಕಿದ ಆನಂದನು ಭಗವಾನರಲ್ಲಿ ನಗುವಿನ ಕಾಣ ಕೇಳಿದನು: ಆಗ ಭಗವಾನರು ಹೀಗೆ ಉತ್ತರಿಸಿದರು:
                ಆನಂದ, ಈ ಧನಿಕಪುತ್ರನು ತನ್ನ 160 ಲಕ್ಷ ಕೋಟಿಯನ್ನು ಸುಖಭೋಗಗಳಿಗೆ ದುಂದುವೆಚ್ಚ ಮಾಡಿ ಈಗ ಭಿಕಾರಿಯಾಗಿರುವನು. ಆತನು ತನ್ನ ಯೌವ್ವನದ ಆರಂಭದಲ್ಲಿ (33 ವರ್ಷದ ಹಿಂದೆ) ಪರಿಶ್ರಮದಲ್ಲಿ ತೊಡಗಿದ್ದೇ ಆಗಿದ್ದರೆ ಆತನು ಈ ನಗರದಲ್ಲಿಯೇ ಶ್ರೀಮಂತರಲ್ಲಿ ಅಗ್ರನಾಗಿರುತ್ತಿದ್ದನು. ಹಾಗಲ್ಲದೆ ಆ ಸಮಯದಲ್ಲಿ ಆತನೇನಾದರೂ ಭಿಕ್ಖುವಾಗಿದ್ದರೆ, ಆತನು ಅರಹಂತನಾಗಿರುತ್ತಿದ್ದನು ಹಾಗು ಆತನ ಪತ್ನಿಯು ಅನಾಗಾಮಿಯಾಗುತ್ತಿದ್ದಳು.
                ಹೀಗೂ ಆಗದೆ ಈ ಮಹಾಧನನು ಮಧ್ಯ ವಯಸ್ಸಿನಲ್ಲಿಯೇ (33 ರಿಂದ 66) ವರ್ಷ) ಪರಿಶ್ರಮದಲ್ಲಿ ತೊಡಗಿಸಿದ್ದೇ ಆಗಿದ್ದರೆ, ಆತನು ಈ ನಗರದಲ್ಲಿಯೇ 2ನೇಯ ಅತಿ ದೊಡ್ಡ ಶ್ರೀಮಂತನಾಗಿರುತ್ತಿದ್ದನು. ಹಾಗಲ್ಲದೆ ಆತನೇನಾದರೂ ಭಿಕ್ಷುವಾಗಿದ್ದರೆ, ಆತನು ಅನಾಗಾಮಿ ಸಿದ್ಧಿಸುತ್ತಿದ್ದನು ಮತ್ತು ಆತನ ಪತ್ನಿಯು ಸಕದಾಗಾಮಿಯಾಗುತ್ತಿದ್ದಳು.
                ಹೀಗೂ ಆಗದೆ ಈ ಮಹಾಧನನು ಮುಪ್ಪಿನಲ್ಲಿಯೇ (66 ರಿಂದ 99 ವರ್ಷ) ವೃತ್ತಿಯಲ್ಲಿ ಪರಿಶ್ರಮ ತೊಡಗಿಸಿದ್ದೇ ಆಗಿದ್ದರೆ, ಆಗಲೂ ಆತನು ಈ ನಗರದಲ್ಲಿಯೇ 3ನೇಯ ಅತಿದೊಡ್ಡ ಶ್ರೀಮಂತನಾಗಿರುತ್ತಿದ್ದನು. ಹಾಗಲ್ಲದೆ ಆತನೇನಾದರೂ ಭಿಕ್ಷುವಾಗಿದ್ದರೆ, ಆತನು ಸಕದಾಗಾಮಿ ಸಿದ್ಧಿಸುತ್ತಿದ್ದನು ಮತ್ತು ಆತನ ಪತ್ನಿಯು ಸೋತಾಪನ್ನಳಾಗುತ್ತಿದ್ದಳು.


                ಆದರೆ ಈಗ ಆತನು ದುಶ್ಚಟಗಳಿಗೆ ಗುರಿಯಾಗಿ, ಯಾವ ವೃತ್ತಿಯೂ ಕಲಿತಿರದ ಸೋಮಾರಿಯಾಗಿ, ಹೀಗೆ ಇಹಲೋಕದಲ್ಲಿ ಶ್ರೀಮಂತನಾಗದೆ ದರಿದ್ರನಾಗಿ, ಅದೇರೀತಿಯಲ್ಲಿ ಶ್ರೇಷ್ಠವಾದ ಬ್ರಹ್ಮಚರ್ಯೆಯುತ ಜೀವನದಲ್ಲೂ ವಂಚಿತನಾಗಿ, ಮೀನುಗಳಿಲ್ಲದ ಕೊಳದಲ್ಲಿ ಕಂಗಾಲಾದ ಕೊಕ್ಕರೆಯಂತೆ ಕೊರಗುತ್ತಿದ್ದಾನೆ ಎಂದು ನುಡಿದು ಈ ಮೇಲಿನ ಗಾಥೆಗಳನ್ನು ಹೇಳಿದರು.

No comments:

Post a Comment