Friday 26 June 2015

dhammapada/piyavagga/16.3/visaaka

ಪ್ರೇಮದಿಂದ ಶೋಕ ಹುಟ್ಟುವುದು
"ಪ್ರೇಮದಿಂದ ಶೋಕ ಹುಟ್ಟುವುದು
ಪ್ರೇಮದಿಂದಲೇ ಭಯವು ಹುಟ್ಟುವುದು
ಯಾರು ಪ್ರೇಮದಿಂದ ಪೂರ್ಣವಾಗಿ ಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯ ಹೇಗೆ ತಾನೇ ಇರಬಲ್ಲದು?"          (213)


ಗಾಥ ಪ್ರಸಂಗ 16:3
ಬುದ್ಧರಿಂದ ವಿಶಾಖೆಗೆ ಸಾಂತ್ವನ


            ಒಮ್ಮೆ ಭಗವಾನರು ಶ್ರಾವಸ್ಥಿಯ ಜೇತವನದಲ್ಲಿದ್ದರು. ವಿಶಾಖೆಗೆ ಸುದತ್ತಳೆಂಬ ಮೊಮ್ಮಗಳು ಇದ್ದಳು. ವಿಶಾಖೆ ಇಲ್ಲದಿದ್ದಾಗ ಭಿಕ್ಷುಗಳಿಗೆ ಆಕೆಯೇ ದಾನ ಮಾಡುತ್ತಿದ್ದಳು. ಹೀಗಿರುವಾಗ ಒಮ್ಮೆ ಸುದತ್ತಳು ಸತ್ತುಹೋದಳು. ನಂತರ ಆಕೆಯ ಶವಸಂಸ್ಕಾರವೂ ಆಯಿತು. ಈ ಘಟನೆಯಿಂದಾಗಿ ವಿಶಾಖೆಯು ಅಪಾರ ಶೋಕಪಟ್ಟಳು. ತನ್ನ ದುಃಖ ನಿಯಂತ್ರಿಸಲಾಗದೆ ಆಕೆಯು ಬುದ್ಧ ಭಗವಾನರ ಬಳಿಗೆ ಬಂದಳು. ಗೌರವಯುತವಾಗಿ ವಂದಿಸಿ ಒಂದೆಡೆ ಕುಳಿತಳು. ಆಗ ಭಗವಾನರು ಆಕೆಗೆ ಹೀಗೆ ಪ್ರಶ್ನಿಸಿದರು: "ವಿಶಾಖಾ, ಏತಕ್ಕಾಗಿ ಹೀಗೆ ಶೋಕದಿಂದ ಕೂಡಿರುವೆ?"
            "ಭಂತೆ, ನನ್ನ ಪ್ರೀತಿಪಾತ್ರಳಾದ ಮೊಮ್ಮಗಳನ್ನು ನಾನು ಕಳೆದುಕೊಂಡುಬಿಟ್ಟೆನು. ಆಕೆಯು ನನಗೆ ಅತಿ ಪ್ರೀತಿಪಾತ್ರಳು, ನಿಷ್ಠಾವಂತಳು ಆಗಿದ್ದಳು. ನಾನು ಆಕೆಗೆ ಮತ್ತೆ ನೋಡಲಾರೆನಲ್ಲ?" ಎಂದು ಪುನಃ ಅತ್ತಳು. ಭಗವಾನರು ಆಕೆಗೆ ಸಮಾಧಾನಿಸಿ ಹೀಗೆ ಪ್ರಶ್ನಿಸಿದರು. "ವಿಶಾಖಾ, ಶ್ರಾವಸ್ಥಿಯಲ್ಲಿ ಎಷ್ಟು ನಿವಾಸಿಗಳಿದ್ದಾರೆ?"
            "ಭಗವಾನ್, ತಾವೇ ಹೇಳಿರುವಂತೆ 70 ದಶಲಕ್ಷ ಜನರಿದ್ದಾರೆ."
            "ವಿಶಾಖ, ಒಂದುವೇಳೆ ಸುದತ್ತಳಷ್ಟೇ ಪ್ರೀತಿಪಾತ್ರರಾಗಿ ಈ ಎಲ್ಲಾ ಜನರನ್ನು ನೀನು ಹೊಂದುವಂತಿದ್ದರೆ ಸ್ವೀಕರಿಸುತ್ತಿದ್ದೆಯೇ?"
            "ಖಂಡಿತ ಭಗವಾನ್."
            "ಓ ವಿಶಾಖೆ, ಶ್ರಾವಸ್ಥಿಯಲ್ಲಿ ಪ್ರತಿದಿನ ಎಷ್ಟು ಮಂದಿ ಸಾಯುವರು?"
            "ಬಹಳಷ್ಟು ಮಂದಿ ಭಗವಾನ್."
            "ಹಾಗಿರುವಂತಿದ್ದರೆ ನಿನಗೆ ಪ್ರತಿದಿನ ಶೋಕಪಡುವುದೇ ಆಗಿಬಿಡುತ್ತದೆ. ನಿನ್ನ ಸಮಯವೆಲ್ಲಾ ಶೋಕಾಚರಣೆಗೆ ಸೀಮಿತವಾಗುತ್ತದೆ. ನಿನ್ನ ಇಡೀ ಹಗಲು ಮತ್ತು ಪ್ರತಿ ರಾತ್ರಿ ಶೋಕವೇ ಪಡಬೇಕಾಗುತ್ತದೆ. ಇದು ನಿನಗೆ ಇಷ್ಟವೇ?"
            "ಇಲ್ಲ ಭಗವಾನ್, ನನಗೆ ಈಗ ಸ್ಪಷ್ಟವಾಗಿ ಮರಣದ ಬಗ್ಗೆ ಅರ್ಥವಾಗಿದೆ."

            "ಒಳ್ಳೆಯದು, ಶೋಕಪಡಬೇಡ. ಪ್ರೇಮದಿಂದ (ವಾತ್ಸಲ್ಯದಿಂದ) ಶೋಕವುಂಟಾಗುತ್ತದೆ. ಪ್ರೇಮ ವಾತ್ಸಲ್ಯದಿಂದ ವಿಮುಕ್ತಳಾದಾಗ ಶೋಕದಿಂದಲೂ ವಿಮುಕ್ತಳಾಗುವೆ" ಎಂದು ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment